Homeಅಂಕಣಗಳು ಸಾಕು ನಿಲ್ಲಿಸಿ ಆಷಾಢಭೂತಿತನ (ಮಹಿಳೆ ಮತ್ತು ರಾಜಕಾರಣ)

 ಸಾಕು ನಿಲ್ಲಿಸಿ ಆಷಾಢಭೂತಿತನ (ಮಹಿಳೆ ಮತ್ತು ರಾಜಕಾರಣ)

- Advertisement -
- Advertisement -

ಮಹಿಳೆಯರ ರಾಜಕೀಯ ಪ್ರಾತಿನಿಧ್ಯವು ಬಹಳ ನಿರಾಶಾದಾಯಕವಾಗಿದ್ದ ಪರಿಸ್ಥಿತಿಯಲ್ಲಿ ದೊಡ್ಡ ಕ್ರಾಂತಿಕಾರಿ ಬದಲಾವಣೆ ಬಂದದ್ದು ಭಾರತದ ಸಂವಿಧಾನವು ಜಾರಿಗೆ ಬಂದ ನಂತರವೇ. ಅಪ್ರತಿಮ ದಾರ್ಶನಿಕ ಡಾ.ಅಂಬೇಡ್ಕರ್‍ರವರ ನಿಲುವುಗಳ ಕಾರಣಕ್ಕೆ ಭಾರತದ ಸಂವಿಧಾನವು ‘ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ’ಯನ್ನು ಜಾರಿಗೆ ತಂದದ್ದು ಮಾತ್ರವಲ್ಲ, ಶಾಸನಸಭೆಗಳಿಗೆ ಮಹಿಳೆಯರು ಸ್ಫರ್ಧಿಸುವುದಕ್ಕೂ ಅವಕಾಶ ಕಲ್ಪಿಸಿ, ಮುಖ್ಯವಾಹಿನಿ ರಾಜಕಾರಣದೊಳಕ್ಕೆ ಮಹಿಳೆಯರು ರಾಜಮಾರ್ಗದಲ್ಲಿ ನಡೆದು ಬರಲು ತಳಪಾಯ ನಿರ್ಮಿಸಿದರು.
ಆದರೆ, ಆಗಿನ ಸಂದರ್ಭದ ಎಲ್ಲಾ ಸಂಕೀರ್ಣತೆಗಳನ್ನೂ ಎದುರು ಹಾಕಿಕೊಂಡು ಅಂಬೇಡ್ಕರ್‍ರವರು ಪ್ರದರ್ಶಿಸಿದ ರಾಜಕೀಯ ಬದ್ಧತೆಯನ್ನು ನಂತರ ಆಳಿದ ಯಾರೂ ತೋರಲಿಲ್ಲ; ಕನಿಷ್ಠ ತಮ್ಮ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರಕ್ಕಾಗಿಯಾದರೂ! 1994ರಲ್ಲಿ ಲೋಕಸಭೆಯಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಮಸೂದೆ ದೇಶದ ಎಲ್ಲಾ ಶಾಸನಸಭೆಗಳು ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ, ಇದನ್ನು ಹಲವು ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ವಿರೋಧ ಪಕ್ಷವಾಗಿದ್ದ ಬಿಜೆಪಿ ಪ್ರಬಲವಾಗಿ ವಿರೋಧಿಸಿದವು. ಮಸೂದೆಯಲ್ಲಿ ಶೋಷಿತ ಮತ್ತು ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ ಪ್ರತ್ಯೇಕ ಮೀಸಲು ನೀಡುವ ವಿಚಾರವು ಪ್ರಸ್ತಾಪವಾಗಿರಲಿಲ್ಲ. ಅದನ್ನು ಸೂಕ್ತವಾದ ರೀತಿಯಲ್ಲಿ ಮಸೂದೆಯಲ್ಲಿ ತಂದುಕೊಂಡು, ಅದನ್ನು ಜಾರಿಗೊಳಿಸಲು ಸಾಧ್ಯವಿತ್ತು. ಆದರೆ, ಅದನ್ನು ಇಲ್ಲಿಯವರೆಗೂ ಕೋಲ್ಡ್ ಸ್ಟೋರೇಜ್‍ಗೆ ತಳ್ಳಿರುವುದಕ್ಕೆ ಅದೇ ಕಾರಣವೇ? ಅಥವಾ ನೂರಾರು ಸಂಖ್ಯೆಯಲ್ಲಿ ಪುರುಷ ಅಧಿಕಾರದ ಕೇಂದ್ರಗಳನ್ನು ಮಹಿಳೆಯರಿಗೆ ಸಾರಾಸಗಟಾಗಿ ಬಿಟ್ಟುಕೊಡಲು ಸಿದ್ಧವಿಲ್ಲದ ಭಾರತದ ಬ್ರಾಹ್ಮಣೀಯ ಪಿತೃಪ್ರಧಾನತೆ ಕಾರಣವೇ? ಬಿಡಿಸಿ ಹೇಳುವ ಅಗತ್ಯವಿಲ್ಲ.
ಸಾಪೇಕ್ಷವಾಗಿ ಪ್ರಗತಿಪರವಾದ ಎಷ್ಟೋ ಮೊದಲುಗಳಿಗೆ ಕಾರಣವಾದ ಕರ್ನಾಟಕದಂತಹ ರಾಜ್ಯದಲ್ಲೂ, ರಾಜಕಾರಣದಲ್ಲಿ ಬೆರಳೆಣಿಕೆಯಷ್ಟೇ ಮಹಿಳೆಯರಿರುವ ಶೋಚನೀಯ ಸ್ಥಿತಿ ಇದೆ. ಇಡೀ ದೇಶದಲ್ಲಿ ಮೊದಮೊದಲು ಅಧಿಕಾರ ವಿಕೇಂದ್ರೀಕರಣದ ಚಿಂತನೆಗೆ ಚಾಲನೆ ಕೊಟ್ಟು, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಕರ್ನಾಟಕ. ನಂತರ ಅದನ್ನು ಶೇ.50ಕ್ಕೆ ಏರಿಕೆ ಮಾಡಿದ ರಾಜ್ಯವೂ ಹೌದು. ಈ ಬಗ್ಗೆ ಚರ್ಚೆ ಬಂದಾಗೆಲ್ಲ, ಈ ಮೀಸಲಾತಿಯನ್ನು ಆ ಪಂಚಾಯ್ತಿಗಳಲ್ಲಿ ಆಯ್ಕೆಯಾಗುವ ಮಹಿಳೆಯರ ಕುಟುಂಬದ ಪುರುಷರು ಅಥವಾ ಗ್ರಾಮದ ಬಲಾಢ್ಯರು ದುರುಪಯೋಗ ಮಾಡಿಕೊಳ್ಳುತ್ತಾರೆಂಬ ಸಂಗತಿಯೂ ಪ್ರಸ್ತಾಪವಾಗುತ್ತದೆ. ಇದು ನಿಜವೇ ಆದರೂ, ಸಮಯ ಕಳೆದಂತೆ ಕೆಲವು ಎಚ್ಚೆತ್ತ ಮಹಿಳೆಯರು ಅಧಿಕಾರ ಕೈಗೆತ್ತಿಕೊಂಡು, ಬಳಸುತ್ತಿದ್ದು, ಕ್ರಮೇಣ ಮಹಿಳೆಯರ ರಾಜಕೀಯ ಪ್ರಜ್ಞೆ ಏರುಗತಿಯಲ್ಲಿದೆ.
ಮಹಿಳಾವಾದಿ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರ ಪ್ರಕಾರ ಇದನ್ನು ಹೀಗೆ ಹೇಳಬಹುದು- “ನಮಗೆ ಮಹಿಳಾ ಕಾನ್ಸ್‍ಟೇಬಲ್ ಬೇಕು, ಮಹಿಳಾ ಕಮಿಷನರ್ ಬೇಡ. ಮಹಿಳಾ ವರದಿಗಾರ್ತಿಯರು ಬೇಕು, ಮಹಿಳಾ ಎಡಿಟರ್ ಬೇಡ. ಚಂದದ ಗೊಂಬೆಯಂಥ ವಾಚಕಿಯರು ಬೇಕು, ಮಾಧ್ಯಮ ಒಡೆತನ ಮಹಿಳೆಗೆ ಕೊಡಲು ಸಾಧ್ಯವಿಲ್ಲ. ಸಂಘಟನೆಗೆ ಕಾರ್ಯಕರ್ತೆಯರು ಬೇಕು, ಮಹಿಳಾ ಅಧ್ಯಕ್ಷರು ಬೇಡ. ಸ್ವಾಗತ, ವಂದನಾರ್ಪಣೆಗೆ ಮಹಿಳೆಯರು ಸಾಕು, ಬೌದ್ಧಿಕ ವಿಚಾರ ಮಂಡನೆಗೆ ಬೇಡ. ಒಟ್ಟಾರೆ ಅಧಿಕಾರ ಕೇಂದ್ರಗಳತ್ತ ಬರದೆ ವ್ಯವಸ್ಥೆಯ ರಕ್ಷಕಳಾಗಿ, ಬೇಲಿಚೌಕಟ್ಟುಗಳ ಭದ್ರಗೊಳಿಸುವ ಶಿಸ್ತುಗಾರಳಾಗಿ ಇರುವ ಮಹಿಳೆಗೆ ಅವಕಾಶ, ಮನ್ನಣೆ, ಸ್ವಾಗತವಿದೆ. ಜನರನ್ನು ಆಕರ್ಷಿಸುವ ಬಿಂದುಗಳಾಗಿ, ನಿಶಾನೆ ಹಿಡಿದವರಾಗಿ ಅಧಿಕಾರದ ಬಯಲಿಗೆ ಸ್ವಾಗತಿಸಲ್ಪಡುವ ಮಹಿಳೆಯರು ಒಂದುವೇಳೆ ಅಧಿಕಾರದಲ್ಲಿ ಪಾಲು ಕೇಳಿದರೆ ಅವರ ಭವಿಷ್ಯ ಮಸುಕಾಗತೊಡಗುತ್ತದೆ”.
ಹಾಗಾದರೆ ಸಮಸ್ಯೆಯ ಮೂಲ ಎಲ್ಲಿದೆ?
ಕರ್ನಾಟಕದ ಹಿರಿಯ ಮತ್ತು ಶೋಷಿತ ಸಮುದಾಯಕ್ಕೆ ಸೇರಿದ ಮಹಿಳಾ ರಾಜಕಾರಣಿ ಮೋಟಮ್ಮನವರು ಮಹಿಳೆಯರು ಈ ಕ್ಷೇತ್ರದಲ್ಲಿ ಎದುರಿಸಬೇಕಾಗುವ ಸವಾಲುಗಳ ಬಗ್ಗೆ ಹೇಳಿಕೊಂಡಿದ್ದರು. ಈ ಕುರಿತ ನಮ್ಮ ಅಧ್ಯಯನಗಳ ಸಂದರ್ಭದಲ್ಲಿ ಮಾತನಾಡಿರುವ ಇನ್ನಿತರ ಮಹಿಳೆಯರೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವೆಲ್ಲವನ್ನೂ ಕ್ರೋಢೀಕರಿಸಿ ವಿವರಿಸಬಹುದಾದರೆ, ಬಹುಮುಖ್ಯವಾದ ಅಡೆತಡೆಗಳು ಹೀಗಿವೆ:
1. ಮಹಿಳೆಯರ ಇನ್ನಿತರ ಕ್ಷೇತ್ರಗಳ ನಾಯಕತ್ವ ಪಾತ್ರಗಳಿಗೂ ಒಳಗೊಂಡಂತೆ ಎಲ್ಲದಕ್ಕೂ ತಡೆಯಾಗಿರುವುದು ಇಲ್ಲಿನ ಸಾಮಾಜಿಕ ಸಾಂಸ್ಕøತಿಕ ರಾಜಕೀಯಾರ್ಥಿಕ ರಚನೆಗಳ ಅಡಿಪಾಯದಲ್ಲೇ ಬೇರೂರಿರುವ ಪಿತೃಪ್ರಧಾನ ಮನಸ್ಥಿತಿ. ಈ ಮನಸ್ಥಿತಿಯಿಂದ ಮಹಿಳೆಯರು ಹೊರತಾದವರೆಂದಲ್ಲ. ಈ ಮನಸ್ಥಿತಿ ಜನರ ‘ಕಾಮನ್‍ಸೆನ್ಸ್’ ಆಗಿಹೋಗಿದ್ದು ಬಂಡೆಗಲ್ಲಂತಾಗಿದೆ.
2. ಇಡೀ ಚುನಾವಣಾ ವ್ಯವಸ್ಥೆ ‘ಗೆಲ್ಲಬಲ್ಲ ಸಾಮಥ್ರ್ಯ’ (ವಿನ್ನಬಿಲಿಟಿ)ಯ ಸುತ್ತ ಕೇಂದ್ರೀಕರಣವಾಗಿರುವುದು. ಇಲ್ಲಿ ಪ್ರಜಾತಾಂತ್ರಿಕ ಪ್ರತಿನಿಧೀಕರಣದ ಬದಲಿಗೆ ಈ ಗೆಲ್ಲುವ ಸಾಮಥ್ರ್ಯವೆಂಬ ಮಾನದಂಡದಿಂದಾಗಿ ಮಹಿಳೆಗೆ ಜಟಿಲ ಸವಾಲುಗಳು ಎದುರಾಗುತ್ತಿವೆ.
3. ಆರ್ಥಿಕ ಪ್ರಾಬಲ್ಯ: ಇಂದಿಗೂ ಮಹಿಳೆಯರಿಗೆ ವಂಶಪಾರಂಪರ್ಯವಾಗಿ ಬರುವ ಆಸ್ತಿಯ ಮೇಲೆ ಪೂರ್ಣ ನಿಯಂತ್ರಣವಿಲ್ಲ. ಆಸ್ತಿಯ ಹಕ್ಕು ಸಮಾನವಾಗಿದೆ ಎಂದಾಗಲೂ ಅದು ವಾಸ್ತವದಲ್ಲಿ ಇರುವುದಿಲ್ಲ. ಒಂದುವೇಳೆ ಆರ್ಥಿಕ ಸುಸ್ಥಿತಿ ಇದ್ದಾಗಲೂ ಅದನ್ನು ಚುನಾವಣಾ ರಾಜಕಾರಣಕ್ಕೆ ಬಂಡವಾಳವಾಗಿ ಬಳಸಬಲ್ಲ ಅನುಭವ/ಚಾಕಚಕ್ಯತೆ ಇರುವುದಿಲ್ಲ.
4. ಸಾಂಪ್ರದಾಯಿಕ ಪಾತ್ರನಿರ್ವಹಣೆಯ ಒತ್ತಡ: ನಾಯಕನೊಬ್ಬನ ಮಡದಿ/ಮಗಳಾಗಿ ಮಹಿಳೆಯನ್ನು ರಾಜಕಾರಣಿಯಾಗಿ ಒಪ್ಪಿಕೊಂಡಷ್ಟು ಸಲೀಸಾಗಿ ನಮ್ಮ ಸಮಾಜ ಇತರ ಮಹಿಳೆಯರನ್ನು ಒಪ್ಪುವುದಿಲ್ಲ. ಜೊತೆಗೆ, ತಾಯಿ, ಸೊಸೆ, ಪತ್ನಿ ಮೊದಲಾಗಿ ಮಹಿಳೆಗೆಂದೇ ‘ಮೀಸಲಾಗಿರುವ’ ಸಾಂಪ್ರದಾಯಿಕ ಪಾತ್ರಗಳನ್ನು ಒಡೆದು ಹೊಸ ವರ್ಚಸ್ಸು ಗಳಿಸುವುದು ಖಂಡಿತ ಸುಲಭವಲ್ಲ. ನೂರಕ್ಕೆ ತೊಂಬತ್ತರಷ್ಟು ಕುಟುಂಬಗಳು ರಾಜಕೀಯವಾಗಿ ತಮ್ಮ ಕರಿಯರ್ ರೂಪಿಸಿಕೊಳ್ಳಬಯಸುವ ಮಹಿಳೆಗೆ ‘ನೀನು ಅದನ್ನು ನೋಡಿಕೋ, ಕುಟುಂಬದ ಹೊಣೆ ನಮಗಿರಲಿ’ ಎಂಬ ಭದ್ರತೆಯ ಭಾವ ಮೂಡಿಸುವುದಿಲ್ಲ. ಎಷ್ಟೋ ಭಾರಿ ಹಾಗೆ ಮಾಡಿದ ಮಹಿಳೆಯರೇ ಅಭದ್ರತೆಯ ಭಾವವನ್ನು ಅನುಭವಿಸುವುದೂ ಇದೆ. ಈ ‘ಪಾತ್ರಗಳ ನಡುವಿನ ವೈರುಧ್ಯ’ವು ಗಾಧವಾದ ಹಾನಿಯನ್ನು ಅವರ ರಾಜಕೀಯ ಭವಿಷ್ಯಕ್ಕೆ ಉಂಟುಮಾಡುತ್ತದೆ.
5. ಲೈಂಗಿಕ ಹಿಂಸೆ: ಇದಂತೂ ದೊಡ್ಡ ತಡೆಗೋಡೆಯೇ ಆಗಿದೆ. ಒಂದೋ ಅಂತಹ ಲೈಂಗಿಕ ಕಿರುಕುಳ, ಒತ್ತಾಯಕ್ಕೆ ಬಲಿಯಾಗುವುದು ಅಥವಾ ರಾಜಕಾರಣಿಯಾಗಬೇಕಾದ ಅಗತ್ಯವಿರುವ ಬೆಂಬಲಕ್ಕಾಗಿಯೋ ಇನ್ನೇನಕ್ಕೋ ತಾವು ಮಾಡಿಕೊಳ್ಳುವ ಆಯ್ಕೆಗಳಿಂದಾಗಿ ನಿರಂತರವಾಗಿ ನೋಯುವುದು-ಇದು ರಾಜಕಾರಣದಲ್ಲಿ ಮಹಿಳೆಗೆ ಅನಿವಾರ್ಯ ಎಂಬಂತಾಗಿಬಿಟ್ಟಿದೆ. ಎಷ್ಟೋ ಮಹಿಳೆಯರು ಈ ಒಂದು ಕಾರಣಕ್ಕಾಗಿಯೇ ಸಕ್ರಿಯ ರಾಜಕಾರಣದಿಂದ ದೂರವಾಗಿರುವ ಉದಾಹರಣೆಗಳಿವೆ.
6. ಶೋಷಿತ ಜಾತಿ/ಸಮುದಾಯಗಳ ಮಹಿಳೆಯರ ಮೇಲೆ ದುಪ್ಪಟ್ಟು ಹೊರೆ: ಒಂದೆಡೆ ಮಹಿಳೆಯೂ ಆಗಿ, ಮತ್ತೊಂದೆಡೆ ಶೋಷಿತ ಸಮುದಾಯಕ್ಕೂ ಸೇರಿದ್ದರೆ ಕೇಳಬೇಕೆ? ಈ ಮೇಲಿನ ಎಲ್ಲಾ ಸಮಸ್ಯೆಗಳೂ ಎರಡು ಪಟ್ಟು ದೊಡ್ಡದಾಗಿ ಬೆಳೆಯುತ್ತವೆ. ಯಾವ ಸಾಮಾಜಿಕ/ ಆರ್ಥಿಕ ಬೆಂಬಲವೂ ಇಲ್ಲದ ನಿರ್ವಾತದಲ್ಲಿ ಅವರು ಬೆಳೆಯಬೇಕಾಗುತ್ತದೆ.
ಪಟ್ಟಿ ಮಾಡಿದರೆ ಬೆಳೆಯುತ್ತಲೇ ಹೋಗುವ ಈ ಎಲ್ಲಾ ಅಡಚಣೆಗಳನ್ನು ದಾಟಿ ಮುಂದೆ ಸಾಗುವುದು ಮಹಿಳೆಯರ ಪಾಲಿಗೆ ಅತಿ ದೊಡ್ಡ ಸವಾಲಿನ ಸಂಗತಿಯೇ ಆಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮೀಸಲಾತಿಯ ಕೂಗು ಮಸೂದೆಯ ರೂಪದಲ್ಲಿ ಸಂಸತ್ತಿನ ಮುಂದೆ ಬಂದರೂ ಇಲ್ಲಿಯವರೆಗೂ ಅದು ನೆನೆಗುದಿಗೆ ಬಿದ್ದಿದೆ. ಕೆಳಹಂತಗಳಲ್ಲಿ ಎಲ್ಲ ಒಳಮೀಸಲಾತಿಗಳನ್ನೊಳಗೊಂಡ ಮಹಿಳಾ ಮೀಸಲು ವ್ಯವಸ್ಥೆಯಿದ್ದು, ಮೇಲಿನ ಹಂತಗಳಲ್ಲಿ ಜಾರಿಗೊಳಿಸುವುದು ಕಷ್ಟವೇನಲ್ಲ. ಆದರೆ ಪುರುಷ ಪ್ರಧಾನವಾಗಿರುವ ರಾಜಕಾರಣ ಮಹಿಳಾ ಮೀಸಲಾತಿಗೆ ಅವಕಾಶ ಕೊಡುತ್ತಿಲ್ಲ.
ಮಹಿಳಾ ಪ್ರಾತಿನಿಧ್ಯವಲ್ಲ; ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆ!
ರಾಜಕಾರಣದಲ್ಲಿ ಮಹಿಳೆ ನಗಣ್ಯಳಾಗಿರುವ, ಅತಿ ಪ್ರಬಲ ಮಹಿಳಾ ನಾಯಕಿಯರಿದ್ದಾಗಲೂ ಮಹಿಳೆಯರ ಸಾಮಾನ್ಯ ಹಿತಾಸಕ್ತಿ ಮೂಲೆಗೊತ್ತಲ್ಪಟ್ಟಿರುವ, ಮಹಿಳೆ ಎಂಬ ಒಂದು ಛಾವಣಿಯ ಕೆಳಗಿರುವ ಅಸಂಖ್ಯಾತ ಭಿನ್ನತೆಗಳಿಗೂ ಸೂಕ್ತ ಅವಕಾಶ ಒದಗಿಸಬೇಕಿರುವ ಎಲ್ಲ ಅಂಶಗಳನ್ನೂ ಸಮಗ್ರವಾಗಿ ಪರಿಗಣಿಸುತ್ತದೆ. ಅಂದರೆ, ರಾಜಕೀಯ ಅಧಿಕಾರದಲ್ಲಿ ಮಹಿಳೆಯರು ಸೂಕ್ತ ಪ್ರಾತಿನಿಧ್ಯ ಗಳಿಸುವುದು ಮತ್ತು ಗಳಿಸಿದ ಆ ಅಧಿಕಾರವನ್ನು ಮಹಿಳಾಪರವಾಗಿ ಬಳಸುವುದು- ಈ ಎಲ್ಲವನ್ನೂ ಖಾತ್ರಿಗೊಳಿಸುವುದು ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆ ಎಂಬುದರ ಉದ್ದೇಶ. ಮಹಿಳೆಯರ ಒಟ್ಟಾರೆ ಪ್ರಾತಿನಿಧ್ಯ ಹೆಚ್ಚಿಸಲು ಮೀಸಲಾತಿಯಂತಹ ನೀತಿಗಳನ್ನು ಜಾರಿಗೊಳಿಸಲು ಒತ್ತಡ ಹೇರುವುದು, ಮಹಿಳಾ ರಾಜಕಾರಣಿಗಳು ಹಾಗೂ ಮತದಾರರಿಬ್ಬರಿಗೂ ಸೂಕ್ತ ಎಚ್ಚರ ಇರಬೇಕಾದ ಕಾರಣ ಅಂತಹ ರಾಜಕೀಯ ಪ್ರಜ್ಞೆಯನ್ನು ಮೂಡಿಸುವುದು, ಮಹಿಳಾ ರಾಜಕಾರಣಿಗಳು ಸಮರ್ಥವಾಗಿ ಕೆಲಸ ನಿರ್ವಹಿಸಬಹುದಾದ ವಾತಾವರಣ ರೂಪಿಸುವುದು, ಅವರಿಗೆ ಅಗತ್ಯವಿರುವ ತಾಂತ್ರಿಕ ತರಬೇತಿ ಮತ್ತು ಕೌಶಲ್ಯಗಳನ್ನು ದೊರಕಿಸುವುದು, ಒಟ್ಟಾರೆ ಮಹಿಳೆಯರ ಸಾಮಾಜಿಕ ಸ್ಥಿತಿಯಲ್ಲಿ ಬದಲಾವಣೆ ತರುವಂತಹ ಆಂದೋಲನಗಳನ್ನು ಹೆಚ್ಚಿಸುವ ಮತ್ತು ಅವುಗಳನ್ನು ಮಹಿಳೆಯರ ರಾಜಕೀಯ ಆಂದೋಲನಗಳ ಜೊತೆ ಬೆಸೆಯುವ ಪ್ರಯತ್ನ ಮಾಡುವುದು- ಇದೆಲ್ಲವೂ ಸೇರಿದೆ. ಅಂದರೆ, ಈ ಪರಿಸ್ಥಿತಿಯಲ್ಲಿ ಸುಧಾರಣೆ ಬರುವುದಕ್ಕಾಗಿ ಇಡೀ ಸಮಾಜದಲ್ಲಿ ಒಂದು ಹೊಸ ವಾತಾವರಣವೇ ಮೂಡಬೇಕು ಮತ್ತು ಅದಕ್ಕಾಗಿ ಎಲ್ಲಾ ನಿಟ್ಟಿನಿಂದಲೂ ಸಮಗ್ರ ಪ್ರಯತ್ನ ನಡೆಯಬೇಕು ಎಂಬುದು ಇದರ ಸಾರ.
ಇಡೀ ಮಹಿಳಾ ಸಮುದಾಯ ಒಂದೇ ಅಲ್ಲ; ಎಲ್ಲ ಮಹಿಳೆಯರ ಆಸಕ್ತಿ, ಅಗತ್ಯ ಮತ್ತು ಸಂಕಟಗಳು ಒಂದೇ ಆಗಿಲ್ಲ. ಮಹಿಳೆ ಎಂಬುದು ಅನೇಕಾನೇಕ ಐಡೆಂಟಿಟಿಗಳ ಒಂದು ದೊಡ್ಡ ಗುಚ್ಛವೇ ಹೊರತು ಒಂದೇ ಬಗೆಯ ಏಕಶಿಲಾಫಲಕವಲ್ಲ. ಮಹಿಳೆ ಎಂಬ ಒಂದು ಐಡೆಂಟಿಟಿ (ಅಸ್ಮಿತೆ)ಯ ಒಳಗೆ ಹಲವು ವರ್ಗಗಳಿವೆ, ನೂರಾರು ಜಾತಿಗಳು, ಪಂಗಡಗಳು, ಉಪಪಂಗಡಗಳಿವೆ, ಧರ್ಮಗಳಿವೆ, ಭಾಷೆಗಳಿವೆ, ಪ್ರದೇಶಗಳಿವೆ ಮತ್ತು ಇನ್ನೂ ಎಷ್ಟೋ ಬಗೆಯ ವ್ಯತ್ಯಾಸಗಳಿವೆ. ಮಹಿಳಾ ರಾಜಕಾರಣಿ ಅಥವ ಪ್ರತಿನಿಧಿಗಳು ತಮ್ಮಷ್ಟಕ್ಕೆ ತಾವು ಮಹಿಳೆಯರ ಹಿತಾಸಕ್ತಿಯನ್ನು ಸಮಗ್ರವಾಗಿ ಪ್ರತಿನಿಧಿಸುತ್ತಾರೆಂಬ ಯಾವ ಗ್ಯಾರಂಟಿಯೂ ಇಲ್ಲ.
ಜಡಗಟ್ಟಿದಂತಿರುವ ಈ ಸ್ಥಿತಿಯಲ್ಲಿ ಬದಲಾವಣೆ ಬರಬೇಕಾದರೆ ಎಚ್ಚೆತ್ತ ಮಹಿಳೆಯರು ಮತ್ತು ಮಹಿಳಾಪರರ ರಾಜಕೀಯ ಆಂದೋಲನದಿಂದ ಮಾತ್ರ ಸಾಧ್ಯ. ಇತಿಹಾಸದಲ್ಲಿ ಉಂಟಾದ ಸಣ್ಣವೋ ದೊಡ್ಡವೋ ಬದಲಾವಣೆಗಳು, ಆಳುವವರ ಮೇಲೆ ಚಳವಳಿಗಳು ಹೇರಿದ ಒತ್ತಡದ ಫಲ ಎಂಬುದನ್ನು ನೆನೆಯಬೇಕು. ಅದೇ ರೀತಿ, ಸಮಾಜ ಮತ್ತು ಆಳ್ವಿಕೆಯಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಸಿಗಬೇಕಾದರೂ ಕೂಡಾ ಅದು ಇಂತಹ ಒಂದು ರಾಜಕೀಯ ಆಂದೋಲನದಿಂದಲೇ ಸಾಧ್ಯ. ಅದಿಲ್ಲದೆ, ಮೇಲ್ನೋಟಕ್ಕೆ ತರಲ್ಪಡುವ ಬದಲಾವಣೆಗಳು ಮಹಿಳೆಯರ ಪಾಲಿಗೆ ಗಾಜಿನ ಛಾವಣಿಗಳಂತಿರುತ್ತವೆ. ‘ಮೇಲೆ ವಿಶಾಲ ಆಗಸವಿದೆ, ರೆಕ್ಕೆ ಬಿಚ್ಚಿದರೆ ಸಾಕು ನೀವು ಹಾರಬಹುದು’ ಎಂದು ನಮಗೆ ಹೇಳಿ ಒಪ್ಪಿಸಲಾಗುತ್ತದೆ, ಆದರೆ ಹಾರಲು ಹೊರಟರೆ ಗಾಜಿನ ಛಾವಣಿಗೆ ಬಡಿದು ಕೆಳಬೀಳಬೇಕಾಗುತ್ತದೆ. ಗಾಜಿನ ಛಾವಣಿಯನ್ನು ಒಡೆದು ನಿಜದ ಆಗಸಕ್ಕೆ ಮಹಿಳೆಯರನ್ನಾಗಲೀ ಯಾವುದೇ ಅಂಚಿಗೆ ತಳ್ಳಲ್ಪಟ್ಟ ಸಮುದಾಯವನ್ನಾಗಲೀ ಹಾರಬಿಡುವ ಶಕ್ತಿ ಪ್ರಜ್ಞಾವಂತ ಆಂದೋಲನಕ್ಕಷ್ಟೆ ಇದೆ.

– ಮಲ್ಲಿಗೆ ಸಿರಿಮನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಸಂವಿಧಾನ ಬದಲಾಯಿಸುವ ಬಯಕೆ ಹೊಂದಿದೆ: ಜೈರಾಮ್‌ ರಮೇಶ್‌

0
ಬಿಜೆಪಿಯ 'ಅಬ್‌ ಕಿ ಬಾರ್‌ 400 ಪಾರ್‌' ರ್ಯಾಲಿಯು ಸಂವಿಧಾನವನ್ನು ಬದಲಾಯಿಸುವ ಬಯಕೆಯನ್ನು ಸೂಚಿಸುತ್ತದೆ.  ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಯವರ ಪರಂಪರೆ ಮತ್ತು ಅವರ ಮೌಲ್ಯಗಳನ್ನು ನಿಜವಾಗಿಯೂ ಗೌರವಿಸುತ್ತಾರೆಯೇ ಎಂದು...