Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಯುದ್ಧ ಮತ್ತು ಸಾಮ್ರಾಟ್ ಅಶೋಕನ ಆ ಮಾತುಗಳು...

ಯುದ್ಧ ಮತ್ತು ಸಾಮ್ರಾಟ್ ಅಶೋಕನ ಆ ಮಾತುಗಳು…

- Advertisement -
- Advertisement -

ಗಿರೀಶ್ ತಾಳಿಕಟ್ಟೆ |

ಓದು ನನ್ನ ನೆಚ್ಚಿನ ಸಂಗಾತಿ. ಆದರೆ ಬಿಡುವಿಲ್ಲದ ಒತ್ತಡ, ಅದಕ್ಕಿರುವ ದೊಡ್ಡ ದುಷ್ಮನ್. ಮಗದೊಮ್ಮೆ ಓದಬೇಕೆಂದು ಕೈಗೆತ್ತಿಕೊಂಡ ’ಹುಣಿಸೆ ಮರದ ಕಥೆ’ ಕಾದಂಬರಿಯನ್ನು ಮೂವತ್ತು ದಿನಗಳು ಸರಿದರೂ ಪೂರೈಸಲಾಗಿಲ್ಲ. ಮೂಲತಃ ಇದು ತಮಿಳು ಕಾದಂಬರಿ. ಸುಂದರ ರಾಮಸ್ವಾಮಿಯವರು ಬರೆದದ್ದು. ಅದನ್ನು ನಲ್ಲತಂಬಿಯವರು ಕನ್ನಡೀಕರಿಸಿರುವ ಪರಿ ಇದೆಯಲ್ಲ, ಅದು ಇಡೀ ಕೃತಿಯನ್ನೇ ಕನ್ನಡದ ಸ್ವಂತಿಕೆಗೆ ಒಗ್ಗಿಸಿಬಿಟ್ಟಿದೆ. ಅನುವಾದಕರ ಬಗ್ಗೆ ನನಗೆ ಅಪಾರ ಅಭಿಮಾನ ಹುಟ್ಟುವುದೇ ಈ ಕಾರಣಕ್ಕೆ. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ. ಒಂದು ಸಮುದಾಯದ ಜೀವಂತಿಕೆಯೇ ಅದರಲ್ಲಿರುತ್ತೆ. ಆಚರಣೆ, ನುಡಿಗಟ್ಟು, ಆಹಾರ ಪದ್ಧತಿ, ಬದುಕಿನ ವೈಪರೀತ್ಯ, ಇತಿಹಾಸದ ಪ್ರೇರಣೆ ಇಂತವೆಲ್ಲವೂ ಮೇಳೈಸಿಯೇ ಒಂದು ಭಾಷೆ ರೂಪುಗೊಂಡಿರುತ್ತೆ. ಭಾಷೆಗೆ ಉಚ್ಚರಣೆ ಮತ್ತು ಲಿಪಿಯಿಂದ ಮಾತ್ರವಲ್ಲದೆ ಸ್ಪಷ್ಟ ಅನನ್ಯತೆ ದಕ್ಕುವುದು ಈ ಸಂರಚನೆಗಳಿಂದಾಗಿ. ಸಾಹಿತ್ಯ ಕೃತಿಗಳ ತರ್ಜುಮೆ ಕೈಗೆತ್ತಿಕೊಂಡಾಗ ಭಾಷೆಯನ್ನು ಕೇವಲ ಲಿಪಿಯಾಗಿ ಪರಿಗಣಿಸಿಬಿಟ್ಟರೆ ಆ ಸಾಹಿತ್ಯದಲ್ಲಿರುವ ಸಮಸ್ತ ಸಂವೇದನೆಯೇ ಕಳೆದುಹೋಗಿ ಶುಷ್ಕ ಪದಗುಚ್ಛವಾಗುವ ಅಪಾಯವಿರುತ್ತೆ. ಭಾಷೆಯ ರೂಪದಲ್ಲಿ ಆ ಕೃತಿ ಚಲಿಸುತ್ತಿರುವ ದೇಶ-ಕಾಲಗಳ ಜೀವಂತಿಕೆಯನ್ನು ಗ್ರಹಿಸಿದಾಗ ಮಾತ್ರ ಆ ಸಂವೇದನೆಯನ್ನು ಈ ದೇಶ-ಕಾಲಕ್ಕೆ ಸಮಾಂತರಿಸಬಹುದು. ಹಾಗಾಗಿ ಅನುವಾದಕರಿಗೆ ಭಾಷಾಜ್ಞಾನಕ್ಕಿಂತಲೂ ಹೆಚ್ಚಾಗಿ ಭಾಷಾ ಸಂವೇದನೆ ಮುಖ್ಯವೆನಿಸುತ್ತದೆ. ಕನ್ನಡದ ಹೆಮ್ಮೆ ಪೂರ್ಣಚಂದ್ರ ತೇಜಸ್ವಿಯವರು ಅಂತಹ ಒಬ್ಬ ಪರಿಪೂರ್ಣ ಅನುವಾದಕರು. ಅವರ ಯಾವ ಅನುವಾದಗಳೂ ನಮ್ಮಲ್ಲಿ ತರ್ಜುಮೆಯ ಭಾವ ಮೂಡಿಸುವುದಿಲ್ಲ, ಪರದೇಶಿ ಕಥಾನಕ ಎನಿಸುವುದಿಲ್ಲ.

ಸೊಂದಲಗೆರೆ ಲಕ್ಷ್ಮೀಪತಿ

ಅನುವಾದದ ಸವಾಲುಗಳನ್ನು ಹೀಗೆ ಅದರ ಆಳದಿಂದಲೇ ಅರ್ಥ ಮಾಡಿಕೊಂಡು ತರ್ಜುಮೆಯನ್ನು ಹೆಚ್ಚೂಕಮ್ಮಿ ಒಂದು ಧ್ಯಾನದಂತೆ ಸ್ವೀಕರಿಸಿರುವ ಹಿರಿಯ ಮಿತ್ರರಾದ ಸೊಂದಲಗೆರೆ ಲಕ್ಷ್ಮೀಪತಿಯವರು ನನ್ನ ನೆಚ್ಚಿನ ಅನುವಾದಕರಲ್ಲೊಬ್ಬರು. ಈ ಮಾತು ಅತಿಶಯೋಕ್ತಿಯಂತೆ ಕಾಣಬಹುದು. ಆದರೆ ಅವರ ‘ಸಿದ್ಧಾರ್ಥ’, ‘ಮೃಗಪ್ರಭುತ್ವ’, ‘ಭಾರತದ ಶ್ರೇಷ್ಠ ಪ್ರಾತಿನಿಧಿಕ ಕಥೆಗಳು’ ‘ದೇವದಾಸ’ ಅನುವಾದಗಳನ್ನು ಓದಿರುವ ನನಗೆ ಅವರ ತರ್ಜುಮೆಯನ್ನು ಧ್ಯಾನ ಎಂದು ಕರೆಯಲು ಯಾವ ಮುಜುಗರವೂ ಇಲ್ಲ. ಈಗ್ಗೆ ಅಜಮಾಸು ಎರಡೂವರೆ ವರ್ಷಗಳ ಹಿಂದೆ ಮಾತಾಡುತ್ತಾ ಸಾಮ್ರಾಟ್ ಅಶೋಕನ ಕುರಿತು ಒಂದು ಐತಿಹಾಸಿಕ ಕಾದಂಬರಿ ಅನುವಾದ ಮಾಡ್ತಿದೀನಿ ಎಂದಿದ್ದರು. ಮೊನ್ನೆ ಮುಖಾಮುಖಿಯಾದಾಗ ನಾನು ಅವತ್ತು ಹೇಳಿದ್ನಲ್ವಾ, ಅಶೋಕನ ಕೃತಿ. ಅದರ ಅನುವಾದ ಇವತ್ತಿಗೆ ಮುಗಿಯಿತು. ಡಿಟಿಪಿ ಕೆಲಸ ಮುಗಿಸಿ, ಒಂದು ಪ್ರತಿ ಕೊಡ್ತೀನಿ. ಓದಿ ನಿಮ್ಮ ಅಭಿಪ್ರಾಯ ಹೇಳ್ಬೇಕು ಅಂದಾಗಲೇ ನನಗೆ ಎರಡೂವರೆ ವರ್ಷದ ಹಿಂದಿನ ಮಾತು ನೆನಪಾದದ್ದು. ಈ ಹಿಂದಿನ ಅವರ ತರ್ಜುಮೆಯ ತಜ್ಞತೆ ತಿಳಿದಿದ್ದರೂ ’ಒಂದು ಪುಸ್ತಕವನ್ನು ಅನುವಾದ ಮಾಡಲು ಇಷ್ಟು ಸುದೀರ್ಘ ಸಮಯ ಬೇಕಾ?’ ಅನ್ನೋ ಸಣ್ಣ ಅನುಮಾನ ನನ್ನಲ್ಲಿ ಮೂಡಿತ್ತು. ಆದರೆ ಮೊನ್ನೆ ಅವರು ತಂದಿತ್ತ ಆ ಬೃಹತ್ ಕೃತಿಯ ಮುದ್ರಣಪೂರ್ವ ಕರಡನ್ನು ತಿರುವಿಹಾಕಿದ ಮೇಲೆಯೇ ಅನುವಾದವನ್ನು ಅವರೆಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಪುನರ್ ಮನದಟ್ಟಾದದ್ದು.

ವಾಸ್ತವದಲ್ಲಿ ವೈಟ್ಝೆ ಕ್ಯುನಿಂಗ್ ಎಂಬ ಡಚ್ ಸಂಶೋಧಕ-ಸಾಹಿತಿ ಅಶೋಕನ ಜೀವನಚರಿತ್ರೆಯನ್ನು ಅಧ್ಯಯನ ಮಾಡಿ ಮೂರು ಸಂಪುಟಗಳಲ್ಲಿ ಕಟ್ಟಿಕೊಟ್ಟ ಡಚ್ ಕಾದಂಬರಿ ಅದು. ಜೆ.ಇ.ಸ್ಟ್ಯೂರ್ ಎಂಬ ಇಂಗ್ಲಿಷ್ ಅನುವಾದಕ ಅದನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ‘ಅಶೋಕ – ದಿ ಗ್ರೇಟ್’ ಎಂಬ ಸಮಗ್ರ ಕೃತಿಯಾಗಿ ನೀಡಿದ್ದಾನೆ. ಸಾವಿರ ಪುಟಗಳಿಗೂ ಮಿಗಿಲಾದ ಇದು ನಿಜವಾಗಲೂ ಒಬ್ಬ ಅನುವಾದಕನಿಗೆ ದೊಡ್ಡ ಸವಾಲೇ ಸರಿ, ಕೇವಲ ಗಾತ್ರದ ಕಾರಣಕ್ಕಲ್ಲ; ಕಥಾವಸ್ತು, ನಿರೂಪಣಾ ಶೈಲಿ ಮತ್ತು ಕಥೆ ಜರುಗಿಹೋದ ಕಾಲಘಟ್ಟಗಳ ಕಾರಣಕ್ಕೆ. ಯಾವುದೇ ಭಾರತೀಯ ಅನುವಾದಕನಿಗೆ ಈ ನಿರ್ದಿಷ್ಟ ಕೃತಿಯಲ್ಲಿ ಎದುರಾಗುವ ಮತ್ತೊಂದು ಸವಾಲೆಂದರೆ, ಈ ನೆಲದ ಕಥೆಯನ್ನು ವಿದೇಶಿ ಸಾಹಿತಿಯ ಗ್ರಹಿಕೆಯಿಂದ ಮರಳಿ ಈ ನೆಲಕ್ಕೇ ತರಬೇಕಾಗಿರುವುದು. ಬಹುಶಃ ಇಂಗ್ಲಿಷ್ ಕೃತಿಯನ್ನು ಓದಿದವರಿಗೆ ‘ಕೇವಲ ಅಶೋಕನ ಸಾಮ್ರಾಟುತನದ ಸುತ್ತ ಗಿರಕಿಹೊಡೆಯದೆ ಆ ಕಾಲಘಟ್ಟದ ಜನಸಾಮಾನ್ಯರ ಬದುಕು, ಸಾಮಾಜಿಕ ತಲ್ಲಣಗಳು, ಧಾರ್ಮಿಕತೆಯ ಹೆಸರಲ್ಲಿ ನಡೆಯುತ್ತಿದ್ದ ವರ್ಗ ವ್ಯವಸ್ಥೆಯ ವಂಚನೆಗಳನ್ನೂ ತರ್ಕಿಸುವ ಹಾಗೂ ಕಳಿಂಗ ಯುದ್ಧದ ನಂತರ ಅಶೋಕನ ರೂಪಾಂತರವನ್ನೂ ಪಾತ್ರಗಳ ಮೂಲಕ ಅಭಿವ್ಯಕ್ತಿಸುವ, ಸಮರ್ಥಿಸುವ’ ಸಾಹಿತ್ಯ ಪ್ರಕಾರದ ಕೃತಿಯ ಕ್ಲಿಷ್ಟತೆ ಚೆನ್ನಾಗಿ ಅರ್ಥವಾಗಿರುತ್ತೆ. ಇತಿಹಾಸದ ಜೊತೆಜೊತೆಗೇ ಆಧ್ಯಾತ್ಮ, ಆಧ್ಯಾತ್ಮಕ್ಕೆ ಅಂಟಿಕೊಂಡಂತೆಯೇ ಅಹಿಂಸೆಯ ಸಾಕ್ಷಾತ್ಕಾರ ಸಾಗುವ ಈ ಕಾದಂಬರಿಯಲ್ಲಿ ಪ್ರೇಮ, ಕಾಮ, ಹಾದರ, ಸಣ್ಣತನ, ಜನರ ಜಗಳಗಂಟುತನ, ಕೃಷಿ, ಕಸುಬು, ಹುನ್ನಾರ….. ಹೀಗೆ ಬದುಕಿನ ಎಲ್ಲಾ ಮಗ್ಗುಲುಗಳೂ ಬಂದುಹೋಗುತ್ತವೆ, ಕೇವಲ ನಿರೂಪಣೆಯಾಗಿ ಅಲ್ಲ; ಅವುಗಳನ್ನೇ ಕೇಂದ್ರವಾಗಿಸಿಕೊಂಡು ಹಿಗ್ಗುವ ಚರ್ಚೆಯಾಗಿ. ಬುದ್ಧನ ಪ್ರಭೆ ಹಿನ್ನೆಲೆ ಸಂಗೀತದಂತೆ ಉದ್ದಕ್ಕೂ ಕಥಾದಾಟಿಗೆ ತಲೆದೂಗುವಂತೆ ಮಾಡುತ್ತೆ.

ಯಥಾಪ್ರಕಾರ ನನ್ನ ಕೆಲಸಗಳ ಒತ್ತಡದ ಕಾರಣಕ್ಕೆ ಅದನ್ನಿನ್ನೂ ಗಂಭೀರವಾಗಿ ಓದಲು ಶುರು ಮಾಡಿಲ್ಲ. ಹೀಗೇ ತಿರುವಿಹಾಕುತ್ತಿದ್ದಾಗ ಅಲ್ಲಲ್ಲಿ ಕಣ್ಣಿಗೆ ಬಿದ್ದ ಕೆಲ ಸನ್ನಿವೇಶಗಳು, ಸಂಭಾಷಣೆಗಳು ‘ಓದು ಮುಗಿಸದ ಹೊರದು ಮುಂದಕ್ಕೆ ಬಿಡಲಾರೆವೆನ್ನುವ’ ಹಠದಲ್ಲಿ ನನ್ನನ್ನು ತಡೆದು ನಿಲ್ಲಿಸಿದವು. ಅವುಗಳಲ್ಲಿ ಯುದ್ಧದ ಕುರಿತಂತೆ ಅಶೋಕ ತನ್ನ ಮಗ ಕುನಾಲನಿಗೆ ಹೇಳುವ ಮಾತು ಇವತ್ತಿನ ಸಂದರ್ಭಕ್ಕೆ ಹೆಚ್ಚು ಪ್ರಸ್ತುತವೆನಿಸಿ ಕಾಡಿದ್ದರಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

“ಯುದ್ಧವನ್ನು ಬುದ್ಧಿವಂತಿಕೆಯಿಂದ ತಡೆಗಟ್ಟಬಹುದಾದ ಅವಕಾಶವಿರುವಾಗ ಕೈಗೆ ಆಯುಧಗಳನ್ನು ಎತ್ತಿಕೊಳ್ಳುವುದು ಇದೆಯಲ್ಲ ಅದೇ ದೌರ್ಬಲ್ಯ! ಯುದ್ಧವೇ ಖುದ್ದು ಒಂದು ದೌರ್ಬಲ್ಯ. ಬುದ್ಧಿಯ ಕೊರತೆ ಅದು. ಮನಸ್ಸಿನ ಒರಟುತನ ಅದು. ಮಾನವತೆಯನ್ನೇ ನಿರ್ದಯಿಗಳ ಕೈಗೆ ಒಪ್ಪಿಸುವ ಕ್ರೂರತ್ವ ಅದು. ಯಾವಾಗ ನೀನು ನಿನ್ನ ಶತ್ರುಗಳನ್ನು ನಿನ್ನ ಖುದ್ದು ಪರೋಪಕಾರದ ಮನೋಧರ್ಮದಲಿ ಬಂಧಿಸುವೆಯೋ ಆಗ ನೀನು ಶಕ್ತಿಶಾಲಿಯಾಗಿ ಹೊರಹೊಮ್ಮುವೆ. ನನಗಾದ ಕಹಿ ಅನುಭವಗಳೇ ಯುದ್ಧದ ಹುಚ್ಚಾಟಿಕೆಯಿಂದ ಮನುಕುಲವನ್ನು ರಕ್ಷಿಸಲು ನನ್ನನ್ನು ಒತ್ತಾಯಿಸುತ್ತಿವೆ. ಯುದ್ಧಕ್ಕೆ ಕಟ್ಟುಬಿದ್ದ ನಾನು ಅದಕ್ಕಾಗಿ ದೊಡ್ಡ ಬೆಲೆಯನ್ನೇ ತೆರಬೇಕಾಯ್ತು.”

ಭಾರತದ ಸಮಾಜವನ್ನು ಯುದ್ಧೋನ್ಮಾದಕ್ಕೆ ತಳ್ಳಿ ತಮಾಷೆ ನೋಡಲು ಕೆಲವರು ಹವಣಿಸುತ್ತಿರುವ ಈ ಹೊತ್ತಿನಲ್ಲಿ ಆಶೋಕನ ಮಾತುಗಳು ಕಾಡದೇ ಇರಲಾರವು. ನಮಗೆಲ್ಲಾ ಗೊತ್ತು, ಕಳಿಂಗ ಯುದ್ಧದ ಸಾವುನೋವುಗಳನ್ನು ಕಂಡ ಅಶೋಕ ಅಹಿಂಸಾವಾದಿಯಾದ ಎಂದು. ಆದರೆ ಆ ಇತಿಹಾಸದಿಂದ ನಾವು ಪಾಠ ಕಲಿಯದೇ ಹೋದರೆ, ಇತಿಹಾಸವನ್ನು ಗೊತ್ತುಮಾಡಿಕೊಂಡು ಆದ ಪ್ರಯೋಜನವಾದರೂ ಏನು?

ಮೊನ್ನೆ ಟೀವಿ ನಿರೂಪಕರೊಬ್ಬರು “ಸಣ್ಣಪುಟ್ಟ ದಾಳಿಗಳೆಲ್ಲ ಚಾಕ್ಲೇಟ್, ಪೆಪ್ಪರ್‌ಮೆಂಟ್ ಇದ್ದಂತೆ. ಅವೆಲ್ಲಾ ಬೇಡ. ನಮಗೆ ಫುಲ್‌ಮೀಲ್ಸ್ ಕೊಡಿ. ಯುದ್ಧ ಘೋಷಿಸಿ” ಎಂಬ ಬಡಬಡಿಸುತ್ತಿದ್ದನ್ನು ಕಂಡಮೇಲೆ ನಮ್ಮ ಸಮಾಜ ಸಂಕುಚಿತಗೊಂಡಿರುವ ಪರಿ ಆತಂಕ ಉಂಟುಮಾಡಿತು. ಚರಿತ್ರೆಯ ಪುಟಗಳಲ್ಲಿ ಒಬ್ಬ ಅಶೋಕನಿಗೆ ತನ್ನ ಸಾಮ್ರಾಟುತನದ ಬಗ್ಗೆಯೇ ಜುಗುಪ್ಸೆ ಹುಟ್ಟುವಂತೆ ಮಾಡಿದ ಯುದ್ಧ, ವರ್ತಮಾನದ ದಿನಗಳಲ್ಲಿ ದೇಶಗಳ ಆರ್ಥಿಕ ಬಲವನ್ನೇ ದಿವಾಳಿಯೆಬ್ಬಿಸಿ ದಾರಿದ್ರ್ಯಕ್ಕೆ ನೂಕುತ್ತಿರುವ ಯುದ್ಧ, ಲಕ್ಷಾಂತರ ಹೆಣ್ಮಕ್ಕಳನ್ನು ವಿಧವೆಯಾಗಿಸುತ್ತಿರುವ ಯುದ್ಧ, ಕೋಟ್ಯಂತರ ಮಕ್ಕಳನ್ನು ಅಪ್ಪನಿಲ್ಲದ ಅನಾಥರನ್ನಾಗಿಸುತ್ತಿರುವ ಯುದ್ಧ…… ಪತ್ರಕರ್ತರೆನಿಸಿಕೊಂಡ ವ್ಯಕ್ತಿಗೇ ಫುಲ್‌ಮೀಲ್ಸ್ ರೂಪದಲ್ಲಿ ಕಾಣಿಸುತ್ತದೆಯೆಂದರೆ ಇದಕ್ಕಿಂತ ದುರಂತ ಮತ್ತೊಂದುಂಟೇ?

ಆಗಿಹೋದ ಚರಿತ್ರೆಯೊಳಗೆ ಮತ್ತೆ ಸುತ್ತಾಡಿಸಿಕೊಂಡು ಬರುವ, ವರ್ತಮಾನದ ಹಲವು ಪ್ರಶ್ನೆಗಳಿಗೆ ಉತ್ತರವನ್ನು ತಡಕಾಡಿಸುವ ಇಂಥಾ ಕೃತಿಯನ್ನು ಕನ್ನಡಕ್ಕೆ ತಂದಿರುವ ಸೊಂದಲಗೆರೆ ಲಕ್ಷ್ಮೀಪತಿಯವರಿಗೆ ಕನ್ನಡ ಓದುಗರ ಪರವಾಗಿ ನಾನು ಧನ್ಯವಾದ ಹೇಳುತ್ತೇನೆ. ಅವರದೇ ಕಾವ್ಯಕಲಾ ಪ್ರಕಾಶನದ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಈ ಕೃತಿಗಾಗಿ ಕಾಯುತ್ತಿದ್ದೇನೆ, ಪ್ರಿಂಟ್‌ಔಟ್ ರೂಪದಲ್ಲಿ ಓದುವುದಕ್ಕಿಂತ ಪುಸ್ತಕ ಕೈಯಲ್ಲಿ ಹಿಡಿದು ಓದುವ ಖುಷಿಯೇ ಬೇರೆ! ನೀವೂ ಓದಿ, ಖಂಡಿತ ನಿಮಗೂ ಇಷ್ಟವಾಗುತ್ತೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಢಿಕ್ಕಿ: ಇಬ್ಬರು ಮೃತ್ಯು

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಪುತ್ರ ಕೈಸರ್‌ಗಂಜ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಣ್‌ ಭೂಷಣ್‌ ಸಿಂಗ್‌ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ...