Homeಮುಖಪುಟಕಮ್ಯುನಿಸ್ಟ್ ಪಕ್ಷಗಳ ವಿಲೀನ ಅಗತ್ಯ. ಆದರೆ, ಅವಸರದ ಹೆರಿಗೆ ಆಗಬಾರದು

ಕಮ್ಯುನಿಸ್ಟ್ ಪಕ್ಷಗಳ ವಿಲೀನ ಅಗತ್ಯ. ಆದರೆ, ಅವಸರದ ಹೆರಿಗೆ ಆಗಬಾರದು

- Advertisement -
- Advertisement -

| ಡಾ. ಬಿ.ಆರ್.ಮಂಜುನಾಥ್ |(ಲೇಖಕರು, ಸುದೀರ್ಘ ಕಾಲ ಎಡಪಕ್ಷದ ಮುಂಚೂಣಿ ಸ್ಥಾನದಲ್ಲಿದ್ದವರು)

ಮತ್ತೊಮ್ಮೆ ಕಮ್ಯುನಿಸ್ಟ್ ಪಕ್ಷಗಳ ವಿಲೀನದ ಪ್ರಶ್ನೆ ಗಾಳಿಯಲ್ಲಿದೆ. ಸಿಪಿಐ ಪಕ್ಷವು ಇದನ್ನು ಮೂವತ್ತು ವರ್ಷಗಳಿಂದಲೂ ಪ್ರಸ್ತಾಪಿಸುತ್ತಲೇ ಬಂದಿದೆ. ಆದಕ್ಕೆ ಇನ್ನೊಂದು ದೊಡ್ಡ ಪಕ್ಷವಾದ ಸಿಪಿಐ ಎಮ್ ಸ್ಪಂದಿಸಿರಲಿಲ್ಲ. 2015ರಲ್ಲಿ ಆ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಂ ಯಚೂರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ವಿಲೀನದ ಪ್ರಕ್ರಿಯೆಯೇನೂ ಚುರುಕಾಗಿರಲಿಲ್ಲ. ಈ ಬಾರಿ ಚುನಾವಣೆ ಮುಗಿದ ಮೇಲೆ ಸಿಪಿಐ ಮಗದೊಮ್ಮೆ ಪ್ರಸ್ತಾಪಿಸಿದೆ. ಹಾಗಾಗಿ ವಿಷಯ ಮುನ್ನೆಲೆಗೆ ಬಂದಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಡ ಪಕ್ಷಗಳು ವಿಪರೀತ ಪೆಟ್ಟು ತಿಂದಿವೆ. ಅವುಗಳ ಮೂಲ ನೆಲೆಗಳೇ ಧ್ವಂಸವಾಗಿವೆ. ಈ ಬೆಳವಣಿಗೆಯು ಕಾರ್ಯಕರ್ತರಲ್ಲೂ, ಪಕ್ಷದ ಬೆಂಬಲಿಗರಲ್ಲೂ ತೀವ್ರವಾದ ನಿರಾಶೆ, ನೋವುಗಳನ್ನು ಉಂಟು ಮಾಡುವಂಥದ್ದು. ಈ ಹಿನ್ನೆಲೆಯಲ್ಲಿ ಎಲ್ಲರಲ್ಲೂ ಒಂದು ಹೊಸ ಉತ್ಸಾಹ, ಆಶಾವಾದವನ್ನು ಸೃಷ್ಟಿಸಲು ತೆಗೆದುಕೊಳ್ಳಬಹುದಾದ ಅನೇಕ ಕ್ರಮಗಳಲ್ಲಿ ವಿವಿಧ ಪಕ್ಷಗಳನ್ನು ಒಂದುಗೂಡಿಸುವುದೂ ಒಂದು ಎಂಬ ಭಾವನೆ ಮೂಡಿದೆ.

ಸಿಪಿಐ ಪಕ್ಷವು ಅನೇಕ ಬಾರಿ ವಿಲೀನಕ್ಕೆ ಅಡ್ಡಿಯಾಗುವಂಥ ಯಾವ ಸೈದ್ಧಾಂತಿಕ ಪ್ರಶ್ನೆಗಳೂ ಉಳಿದಿಲ್ಲ ಎಂದು ಸಾರುತ್ತಾ ಬಂದಿದೆ. ಈ ಮಾತು ಈಗ ಅನೇಕರಿಗೆ ಒಪ್ಪಿಗೆಯಾಗಬಹುದು. ಸೋವಿಯತ್ ಕಮ್ಯುನಿಸ್ಟ್ ಪಕ್ಷದ ಇಪ್ಪತ್ತನೆಯ ಮಹಾಧಿವೇಶನದ ನಂತರ ಉದ್ಭವಿಸಿದ್ದ ಪರಿಷ್ಕರಣವಾದಿ ತೀರ್ಮಾನಗಳ ಕುರಿತಾದ ಚರ್ಚೆ ಈಗ ಹಿಂದಕ್ಕೆ ಸರಿದಿದೆ. ಇನ್ನೊಂದು ಕಡೆ ಚೀನಾ ಕಮ್ಯುನಿಸ್ಟ್ ಪಕ್ಷ ಸಂಪೂರ್ಣವಾಗಿ ಮಾರುಕಟ್ಟೆ ಆರ್ಥಿಕತೆಗೆ ಒಲಿದು, ತನ್ನ ಸದಸ್ಯತ್ವವನ್ನು ಬಂಡವಾಳಗಾರರಿಗೂ ತೆರೆದನಂತರ ಆ ಪಕ್ಷದ ನಿಲುವಿನೊಂದಿಗೆ ಚರ್ಚೆಗಿಳಿಯುವ ಉತ್ಸಾಹವೂ ಯಾವ ಕಮ್ಯುನಿಸ್ಟರಲ್ಲೂ ಉಳಿದಿರಲಿಕ್ಕಿಲ್ಲ!

ಇನ್ನು ದೇಶದ ಎಡ ವಲಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹೇಗೆ ಗ್ರಹಿಸಬೇಕು ಎಂಬುದನ್ನು ಕುರಿತಂತೆ ವಿಭಿನ್ನ ಅಭಿಪ್ರಾಯಗಳಿವೆ. ಕೇರಳದಲ್ಲಿ ಕಾಂಗ್ರೆಸ್‍ಅನ್ನೇ ಮುಖ್ಯ ಪ್ರತಿಸ್ಪರ್ಧಿಯಾಗಿ ಎದುರಿಸಬೇಕಾದ ಅನಿವಾರ್ಯತೆ ಇರುವುದು ಆ ಪಕ್ಷದೊಂದಿಗಿನ ಮೈತ್ರಿಗೆ ತೊಡಕಾಗುವ ಅಂಶ. ಕಾಂಗ್ರೆಸ್ ಜೊತೆ ಸೇರಿದರೆ ಮುಂದೆ ಅಲ್ಲಿ ಬಿಜೆಪಿ ಬಲವಾಗಬಹುದು ಎಂಬ ಆತಂಕ ಕಾಡುತ್ತದೆ. ಬಂಗಾಳದಲ್ಲಿ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಎಡ ಪಕ್ಷಗಳು ಬದುಕುಳಿಯುವುದೇ ಇಂದು ದೊಡ್ಡ ಸವಾಲು.

ಅರವತ್ತು- ಎಪ್ಪತ್ತರ ದಶಕದಲ್ಲಿ ಎಡಪಕ್ಷಗಳ ಮಧ್ಯದ ಚರ್ಚೆ, ಪಾಲೆಮಿಕ್ಸ್ ಅನವಶ್ಯಕವಾಗಿ ತಾರಕಕ್ಕೆ ಹೋಗುತ್ತಿತ್ತು. ಆಗ “ನೀನು ಟ್ರಾಟ್ಸ್ಕಿ, ನೀನು ಬುಖಾರಿನ್” ಎಂದು, “ನೀನು ಲಿನ್ ಪಿಯಾವೊನಂತಹ ಎಡ ದುಸ್ಸಾಹಸವಾದಿ”, ನೀನು ಲಿಯು ಶಾವೊ ಕಿ ಯಂತಹ ಬಲ ಪರಿಷ್ಕರಣವಾದಿ” ಎಂದು ಬಯ್ಯುವುದು, ಅದನ್ನು ನಂಬುವುದು ಸಾಮಾನ್ಯವಾಗಿತ್ತು! ಈಗ ಆ ಚಾಳಿ ಕೆಲವೊಂದು ತೀವ್ರಪಂಥೀಯವಾದಿಗಳಾದ ಚಿಕ್ಕ ಪುಟ್ಟ ಪಕ್ಷಗಳಲ್ಲಿ ಉಳಿದಿದೆ. ಈ ಪಕ್ಷಗಳು ನಮ್ಮ ಪಕ್ಷ ಮಾತ್ರ ಭಾರತದ ಕಾರ್ಮಿಕ ವರ್ಗದ ಪಕ್ಷ, ಉಳಿದವು ಪೆಟಿ ಬೂಶ್ರ್ವಾ ಪಕ್ಷಗಳು ಎಂಬ ನಿಲುವನ್ನು ತಾಳುತ್ತವೆ. ಅದು ಅವುಗಳ ಅಸ್ತಿತ್ವದ ಕಾರಣ ಮಾತ್ರವಲ್ಲ, ಅವರವರ ಪ್ರಾಮಾಣಿಕ ನಂಬುಗೆ ಸಹ. ಇನ್ನು ಸಶಸ್ತ್ರ ಹೋರಾಟದಲ್ಲಿರುವ ಸಂಘಟನೆಗಳು ಸಹ ಹೀಗೇ ಭಾವಿಸುತ್ತವೆ. ಅಲ್ಲದೆ ಅವರ ಸಂಘಟನಾತ್ಮಕ ವಿಧಾನಗಳೂ ಯಾರೊಡನೆಯೂ ಹೊಂದಿಕೆಯಾಗದಿರುವುದರಿಂದ ಅವರು ಚರ್ಚೆಯ ಪರಿಧಿಯಿಂದ ಹೊರಗೇ ಉಳಿಯುತ್ತಾರೆ.

ಹೀಗಾಗಿ ವಿವಿಧ ಕಮ್ಯುನಿಸ್ಟ್ ಪಕ್ಷಗಳ ವಿಲೀನ ಎಂಬುದು ಅಂತಿಮ ಲೆಕ್ಕಾಚಾರದಲ್ಲಿ ಸಿಪಿಐ ಮತ್ತು ಸಿಪಿಎಮ್ ಪಕ್ಷಗಳ ವಿಲೀನದ ಪ್ರಶ್ನೆಯಾಗಿ ಉಳಿಯುತ್ತದೆ. ಆದರೆ ಅದೂ ಸುಲಭವಲ್ಲ. ದಶಕಗಳಿಂದ ಬೆಳೆದು ಬಂದಿರುವ ನಿರಾಶೆ, ಅಪನಂಬುಗೆ, ತಳಮಟ್ಟದಲ್ಲಿ -ವಿಶೇಷವಾಗಿ ಯೂನಿಯನ್‍ಗಳಲ್ಲಿ – ತಲೆದೋರುವ ನಾಯಕತ್ವದ ಪ್ರಶ್ನೆ ಇವೆಲ್ಲ ಮೇಲೆ ಒಗ್ಗಟ್ಟು ಬಂದೊಡನೆ ಸ್ವಯಂಚಾಲಿತವಾಗಿ ಪರಿಹಾರ ಕಂಡುಕೊಳ್ಳುವ ಸಮಸ್ಯೆಗಳಲ್ಲ. ಇದಲ್ಲದೆ ದೃಷ್ಟಿಕೋನಗಳಲ್ಲೂ, ಕಾರ್ಯಶೈಲಿಯಲ್ಲೂ ಭಿನ್ನತೆಗಳಿರುತ್ತವೆ. ಒಬ್ಬರಿಗೆ ಇನ್ನೊಬ್ಬರ ನಿಲುವು ಗಡುಸು ಎನಿಸಿದರೆ, ಇನ್ನೊಬ್ಬರಿಗೆ ಮೊದಲಿನವರು ಸಡಿಲ ಎನಿಸಬಹುದು! “ಆಶೆಗಳೇ ಸವಾರಿಗೆ ಅಶ್ವಗಳಾಗುವುದಿಲ್ಲ”!!

ಹಾಗಿದ್ದರೆ ಕಾರ್ಯಸಾಧುವಾದ ಹೆಜ್ಜೆ ಯಾವುದು? ಎರಡೂ ಪಕ್ಷಗಳೂ ಎಲ್ಲ ಕಾರ್ಯಕ್ರಮ, ತೀರ್ಮಾನ ನೀತಿ ನಿರೂಪಣೆಗಳನ್ನು ಒಟ್ಟಾಗಿ ತೆಗೆದುಕೊಳ್ಳುವ ನಿರ್ಧಾರ ಮಾಡಬಹುದು. ಅದು ಗಟ್ಟಿಯಾಗುತ್ತಿದ್ದಂತೆ ಮುಂದೆ ವಿಲೀನಕ್ಕೆ ಭೂಮಿಕೆ ಸಿದ್ಧವಾಗುತ್ತದೆ. ಅದು ಅನೇಕ ವರ್ಷಗಳ ಪ್ರಕ್ರಿಯೆಯಾಗಬಹುದು. ಆದರೆ ಸಂಬಂಧಪಟ್ಟ ಪಕ್ಷಗಳ ದೃಷ್ಟಿಯಿಂದ ಅದು ಅತ್ಯಂತ ಮಹತ್ವದ ಹೆಜ್ಜೆ ಆಗುವುದರಲ್ಲಿ ಸಂದೇಹವಿಲ್ಲ.

ಅದೇನೇ ಇರಲಿ ಪ್ರತಿಗಾಮಿ ಪಕ್ಷಗಳು ವಿಜೃಂಭಿಸುತ್ತಿರುವ ಇಂದಿನ ಸಂದರ್ಭದಲ್ಲಿ ಎಡ ಪಕ್ಷಗಳು ಪರಸ್ಪರ ಹತ್ತಿರವಾಗಬೇಕಾದದ್ದು ಎಲ್ಲರಿಗೂ ಜೀವನ್ಮರಣದ ಪ್ರಶ್ನೆಯೇ. ಶೋಷಿತ ಸಮುದಾಯಗಳು ಇದಕ್ಕಾಗಿ ಹಂಬಲಿಸುತ್ತಾರೆ ಎಂಬುದನ್ನು ಮರೆಯಬಾರದು.

ಇದಕ್ಕಾಗಿ ಅನೇಕ ಸಣ್ಣ ಪುಟ್ಟ ಹೆಜ್ಜೆಗಳನ್ನು ಎಲ್ಲರೂ ತೆಗೆದುಕೊಳ್ಳಬೇಕು. ಏನೇ ಭಿನ್ನಾಭಿಪ್ರಾಯಗಳಿರಲಿ ಅದನ್ನು ಸೂಕ್ತವಾದ ವೇದಿಕೆಗಳಲ್ಲಿ ಬಗೆಹರಿಸಿಕೊಳ್ಳುವುದು, ಟೀಕೆ ಅನಗತ್ಯವಾಗಿ ಕಟುವಾಗದಂತೆ ಎಚ್ಚರವಹಿಸುವುದು ಅಗತ್ಯ. ಒಬ್ಬರು ಇನ್ನೊಬ್ಬರ ತ್ಯಾಗ- ಬಲಿದಾನಗಳನ್ನು ಗೌರವಿಸುವುದು, ಪ್ರಯತ್ನಗಳನ್ನು ಮೆಚ್ವಿಕೊಳ್ಳುವುದು, ತಾತ್ವಿಕ ಸಹನೆಯನ್ನು ಹೊಂದಿರುವುದೂ ಸಹ ಅತ್ಯಗತ್ಯ. ಸ್ನೇಹ ವಿಶ್ವಾಸಗಳನ್ನು ಬೆಳೆಸಿಕೊಳ್ಳುತ್ತಾ, ಪರಸ್ಪರ ವಿನಯದಿಂದ ಕಲಿಯುತ್ತಾ ಮುಂದೆ ಸಾಗಬೇಕು. ಇದರ ಅರ್ಥ ಸೈದ್ಧಾಂತಿಕವಾಗಿ ರಾಜಿಯಾಗಬೇಕು ಎಂದಲ್ಲ. ಯಾವ ಭಿನ್ನಾಭಿಪ್ರಾಯವನ್ನು ಎಷ್ಡು ದೂರ ಒಯ್ಯಬೇಕು, ಎಲ್ಲಿಗೆ ನಿಲ್ಲಿಸಬೇಕು ಎಂಬ ಯುಕ್ತಾಯುಕ್ತ ಪರಿಜ್ಞಾನ ಅಷ್ಟೇ. ಸ್ಟಾಲಿನ್ ಅವರು ಲೆನಿನ್ ವ್ಯಕ್ತಿತ್ವವನ್ನು ಮೆಚ್ಚಿಕೊಳ್ಳುತ್ತಾ ಹೇಳಿದ ಮಾತು ಸ್ಮರಣಾರ್ಹ: “ತಾತ್ವಿಕತೆಯಲ್ಲಿ ನಿಷ್ಠೆ, ಅನುಷ್ಠಾನದಲ್ಲಿ ಬಾಗಿ ಬಳುಕುವ ಆಸ್ಥೆ”!

ಒಟ್ಟಿನಲ್ಲಿ ಕ್ರಾಂತಿಕಾರಿ ರಾಜಕೀಯದಲ್ಲಿ ಆದರ್ಶವನ್ನು ಧ್ರುವ ನಕ್ಷತ್ರದಂತೆ ಪರಿಭಾವಿಸುತ್ತಲೇ ದೈನಂದಿನ ಹೋರಾಟದಲ್ಲಿ ಸತತವಾಗಿ ಕಾರ್ಯಕ್ಷಮತೆಗೆ, ಸಾಧ್ಯಾಸಾಧ್ಯತೆಗೆ ಗಮನಕೊಡುತ್ತಾ ಮುನ್ನಡೆಯಬೇಕು. ಬೂಶ್ರ್ವಾ ಪಕ್ಷಗಳೊಂದಿಗೆ ಸಹ ಹೋರಾಟಗಳಲ್ಲಿ ಹೆಜ್ಜೆ ಹಾಕಬೇಕಾಗಬಹುದು. ಗಯಟೆ ಮಹಾ ಕವಿಯ ಈ ಸಾಲುಗಳು ಮಾಕ್ರ್ಸ್‍ಗೆ ತುಂಬಾ ಪ್ರಿಯವಾಗಿತ್ತು:
“ಒಣ ಸಿದ್ಧಾಂತ ಬರಡು ಗೆಳೆಯ! ಬದುಕು ಮಾತ್ರ ನಿತ್ಯ ಹರಿದ್ವರ್ಣ”.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...