Homeರಾಜಕೀಯಕಾಂಗ್ರೆಸ್‍ಗೆ ತಟ್ಟುತ್ತಿದೆ ಜೆಡಿಎಸ್ ಪೈಪೋಟಿಯ ಬಿಸಿ

ಕಾಂಗ್ರೆಸ್‍ಗೆ ತಟ್ಟುತ್ತಿದೆ ಜೆಡಿಎಸ್ ಪೈಪೋಟಿಯ ಬಿಸಿ

- Advertisement -
  • ಟೀಮ್ ಗೌರಿ |
- Advertisement -

ಎಚ್.ಡಿ.ಕುಮಾರಸ್ವಾಮಿಯವರ ಸ್ಪರ್ಧೆಯಿಂದ ರಾಮನಗರ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಇಲ್ಲಿ ಕಾಂಗ್ರೆಸ್‍ನಿಂದ ಡಿ.ಕೆ.ಶಿಯ ಬೆಂಬಲಿಗ ಎಚ್.ಎ.ಇಕ್ಬಲ್ ಹುಸೇನ್, ಬಿಜೆಪಿಯಿಂದ ಲೀಲಾವತಿ ಕಣದಲ್ಲಿದ್ದಾರೆ. ಕುಮಾರಸ್ವಾಮಿ ಕ್ಷೇತ್ರ ಕಡೆಗಣಿಸುತ್ತಾದ್ದಾರೆಂಬ ಅಸಮಾಧಾನ ಬೆಳೆಯುತ್ತಿದ್ದರು ಸಹಾ ಅವರನ್ನು ಸರಿಗಟ್ಟುವ ಅಭ್ಯರ್ಥಿ ಇಲ್ಲದಿರುವ ಕಾರಣ ಇಲ್ಲಿನ ಜನರಿಗೆ ಕುಮಾರಸ್ವಾಮಿಯೇ ಅನಿವಾರ್ಯ. ಬೊಂಬೆ ನಗರಿ ಚನ್ನಪಟ್ಟಣದಲ್ಲೂ ಕುಮಾರಸ್ವಾಮಿ ಸ್ಪರ್ಧಿಸಿದ್ದು, ಕಾಂಗ್ರೆಸ್‍ನ ಎಚ್.ಎಂ.ರೇವಣ್ಣ, ಬಿಜೆಪಿಯ ಸಿ.ಪಿ.ಯೋಗೇಶ್ವರ್ ಜೊತೆ ತ್ರಿಕೋಣ ಪೈಪೋಟಿ ನಡೆಸಿದ್ದಾರೆ.

ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಡಿ.ಕೆ.ಶಿವಕುಮಾರ್‍ಗೆ ಪೈಪೋಟಿಯೇ ಇಲ್ಲ. ಜೆಡಿಎಸ್‍ನಿಂದ ನಾರಾಯಣಗೌಡ, ಬಿಜೆಪಿಯಿಂದ ನಂದಿನಿಗೌಡ ಕಣದಲ್ಲಿದ್ದರೂ ಲೆಕ್ಕಕ್ಕಿಲ್ಲ. ಮಾಗಡಿಯಲ್ಲಿ ಕಾಂಗ್ರೆಸ್‍ನಿಂದ ಜೆಡಿಎಸ್ ಹೊಕ್ಕಿರುವ ಎ.ಮಂಜು ಮತ್ತು ಜೆಡಿಎಸ್‍ನಿಂದ ಕಾಂಗ್ರೆಸ್ ಹೊಕ್ಕಿರುವ ಎಚ್.ಸಿ.ಬಾಲಕೃಷ್ಣ ನಡುವೆ ಪ್ರಬಲ ಪೈಪೋಟಿ ಇದೆ. ಗೌಡರ ಕುಟುಂಬ ಅಷ್ಟ ಬಂಡಾಯಗಾರರ ಕ್ಷೇತ್ರಗಳನ್ನು ಸೀರಿಯಸ್ಸಾಗಿ ಪರಿಗಣಿಸಿರುವುದರಿಂದ ಬಾಲಕೃಷ್ಣ ಗೆಲ್ಲುವುದು ಬಹಳ ಕಠಿಣ.

ಚಿಕ್ಕಬಳ್ಳಾಪುರ ಜಿಲ್ಲೆ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಎದುರು ಜೆಡಿಎಸ್‍ನಿಂದ ಮಾಜಿ ಶಾಸಕ ಬಚ್ಚೇಗೌಡ, ಬಿಜೆಪಿಯಿಂದ ಡಾ.ಜಿ.ವಿ.ಮಂಜುನಾಥ್ ಅಭ್ಯರ್ಥಿಯಾಗಿದ್ದಾರೆ. ದುಡ್ಡು ಸುರಿಯುವುದರಲ್ಲಿ ನಿಷ್ಣಾತರಾದ ಕಾಂಗ್ರೆಸ್‍ನ ಡಾ.ಕೆ.ಸುಧಾಕರ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಶ್ರೀರಾಮರೆಡ್ಡಿ

ಗೌರಿಬಿದನೂರು ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಶಿವಶಂಕರ್ ರೆಡ್ಡಿ, ಜೆಡಿಎಸ್‍ನಿಂದ ನರಸಿಂಹಮೂರ್ತಿ, ಬಿಜೆಪಿಯಿಂದ ಜೈಪಾಲ್ ರೆಡ್ಡಿ ಕಣದಲ್ಲಿದ್ದಾರೆ. ಕಳೆದಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಜೈಪಾಲ್‍ರೆಡ್ಡಿ ಕಡಿಮೆ ಅಂತರದಿಂದ ಸೋತಿದ್ದರು. ಆದರೆ ಈ ಬಾರಿ ಬಿಜೆಪಿ ಪಕ್ಷದಿಂದ ನಿಂತಿದ್ದು ಅವರ ಬಲವನ್ನೇನೂ ಹೆಚ್ಚಿಸಿಲ್ಲ. ಜೆಡಿಎಸ್‍ನ ನರಸಿಂಹಮೂರ್ತಿ ಪ್ರಬಲ ಪೈಪೋಟಿ ಕೊಡುತ್ತಿದ್ದರೂ ಶಿವಶಂಕರರೆಡ್ಡಿ ಪುನರಾಯ್ಕೆಯಾಗಲಿದ್ದಾರೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಮ್ ಪಕ್ಷದ ಶ್ರೀರಾಮರೆಡ್ಡಿ ಅವರಿಗೆ ಸ್ವಪಕ್ಷೀಯರೆಲ್ಲರೂ ಒಮ್ಮನಸ್ಸಿನಿಂದ ಬೆಂಬಲಿಸಿದರೆ ಈ ಸಾರಿ ಗೆಲ್ಲುವ ಸಾಧ್ಯತೆ ಇದೆ. ಅವರ ಪೈಪೋಟಿ ಏನಿದ್ದರೂ ಕಾಂಗ್ರೆಸ್‍ನ ಹಾಲಿ ಶಾಸಕ ಸುಬ್ಬಾರೆಡ್ಡಿ ಜೊತೆ. ಬಿಜೆಪಿಯ ನಟ ಸಾಯಿಕುಮಾರ್‍ಗೆ ಮೂರನೇ ಸ್ಥಾನವೇ ಗಟ್ಟಿ. ರಾಜಕೀಯ ಪಟ್ಟುಗಳನ್ನು ಬಲ್ಲ ಸುಬ್ಬಾರೆಡ್ಡಿ ಎದುರು ಶ್ರೀರಾಮರೆಡ್ಡಿ ಗೆದ್ದರೆ ಅದೊಂದು ಪವಾಡವೇ ಸೈ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್‍ನ ಬಂಡಾಯವೇ ಗಮನ ಸೆಳೆಯುವಂತಿದೆ. ಇಲ್ಲಿ ಆಪ್ತ ಸ್ನೇಹಿತರಾದ ಎಂ.ರಾಜಣ್ಣ ಮತ್ತು ರವಿಕುಮಾರ್ ನಡುವೆ ಟಿಕೇಟ್ ಪೈಪೋಟಿ ನಡೆದು ಕೊನೆಗೆ ರವಿಕುಮಾರ್ ಬಿ ಫಾರಂ ಪಡೆದಿದ್ದಾರೆ. ಹಾಲಿ ಶಾಸಕ ಎಂ.ರಾಜಣ್ಣ ಪಕ್ಷೇತರ ಅಭ್ಯರ್ಥಿಯಾಗಿದ್ದು ಇವರ ಜಗಳದಿಂದ ಮಾಜಿ ಸಚಿವ ಕಾಂಗ್ರೆಸ್‍ನ ಮುನಿಯಪ್ಪ ಅವರಿಗೆ ಲಾಭವಾಗಲಿದೆ.

ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ವಾಣಿ ಕೃಷ್ಣಾರೆಡ್ಡಿ, ಜೆ.ಡಿ.ಎಸ್‍ನಿಂದ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಬಿಜೆಪಿಯಿಂದ ಎನ್.ಶಂಕರಪ್ಪ, ಭಾರತೀಯ ಪ್ರಜಾ ಪಕ್ಷದ ಅಭ್ಯರ್ಥಿಯಾಗಿ ಡಾ.ಎಂ.ಸಿ.ಸುಧಾಕರ್ ಕಣದಲ್ಲಿದ್ದಾರೆ. ಜೆ.ಕೆ.ಕೃಷ್ಣಾರೆಡ್ಡಿ ಮತ್ತು ಸುಧಾಕರ್ ನಡುವೆ ಪ್ರಬಲ ಪೈಪೋಟಿ ಇದ್ದು ಈ ಸಾರಿ ಸುಧಾಕರ್ ಗೆಲ್ಲುವ ಸಾಧ್ಯತೆ ಹೆಚ್ಚು.

ತುಮಕೂರು ಜಿಲ್ಲೆ

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹಾಲಿ ಶಾಸಕ ರಫೀಕ್ ಅಹಮದ್ ಮತ್ತು ಬಿಜೆಪಿಯ ಜ್ಯೋತಿಗಣೇಶ್ ನಡುವೆ ಬಿರುಸಿನ ಪೈಪೋಟಿಯಿದೆ. ಜೆಡಿಎಸ್‍ನ ಗೋವಿಂದರಾಜು ಸ್ಪರ್ಧೆಯಲ್ಲಿ ಅಂತದ್ದೇನೂ ವಿಶೇಷತೆಯಿಲ್ಲ. ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣ ಟಿಕೆಟ್ ಸಿಗದ ಸಿಟ್ಟಿಗೆ ಜ್ಯೋತಿಗಣೇಶ್ ವಿರುದ್ಧ ಕಾಂಗ್ರೆಸ್‍ನ ರಫೀಕ್ ಜೊತೆ ಕೈಜೋಡಿಸಿರುವುದರಿಂದ ಕಾಂಗ್ರೆಸ್ ಮತ್ತೊಮ್ಮೆ ಗೆಲ್ಲುವ ಸಾಧ್ಯತೆಯಿದೆ.

ಕೆ.ಎನ್. ರಾಜಣ್ಣ

ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿಯಿರುವ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ಸುರೇಶ್‍ಗೌಡ, ಜೆಡಿಎಸ್‍ನಿಂದ ಗೌರಿಶಂಕರ್ ಸ್ಪರ್ಧೆಯಲ್ಲಿದ್ದಾರೆ, ಹಾಲಿ ಶಾಸಕರಾಗಿ ಸುರೇಶ್ ಗೌಡ ಒಂದಷ್ಟು ಕೆಲಸ ಮಾಡಿದ್ದರೂ ಜೆಡಿಎಸ್‍ನ ಗೌರಿಶಂಕರ್ ಅಬ್ಬರ ಜೋರಾಗಿಯೇ ಇದೆ. ಫೊಟೋ ಫಿನಿಷ್ ಫಲಿತಾಂಶ ಬರಬಹುದು.

ಮಧುಗಿರಿಯಲ್ಲಿ ಕಾಂಗ್ರೆಸ್‍ನ ಕೆ.ಎನ್.ರಾಜಣ್ಣನೇ ಸ್ಟ್ರಾಂಗು. ಆದರೆ ಜೆಡಿಎಸ್‍ನ ವೀರಭದ್ರಯ್ಯ ಒಕ್ಕಲಿಗ ಸಮುದಾಯ ಮತಗಳ ಮೇಲೆ ಕಣ್ಣಿಟ್ಟು ರಾಜಣ್ಣ ವಿರೋಧಿ ಪಡೆಯ ಜೊತೆ ಹೊಸ ತಂತ್ರ ಹೆಣೆಯುತ್ತಿರೋದು ಪೈಪೋಟಿಯನ್ನು ರೋಚಕವಾಗಿಸುತ್ತಿದೆ. ಅಭಿವೃದ್ಧಿ ಕೆಲಸ ಮಾಡಿರುವ, ಜನಸಂಪರ್ಕವಿರುವ ಆದರೆ ಕೆ.ಎನ್.ಆರ್. ಗೆಲ್ಲುವ ಛಾನ್ಸ್ ತುಸು ಜಾಸ್ತಿಯಿದೆ.

ಕೊರಟಗೆರೆಯಲ್ಲಿ ಅನಿರೀಕ್ಷಿತ ಸೋಲುಕಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಈ ಸಲ ಸಖತ್ ತಾಲೀಮು ನಡೆಸಿದ್ದರು. ಆದರೆ ಅವರ ಬೆಂಬಲಿಗರು ದಲಿತ ಕವಿ ಕೆ.ಬಿ.ಸಿದ್ದಯ್ಯನವರ ಮೇಲೆ ಪುಂಡಾಟಿಕೆ ಮಾಡಿದ್ದು, ಮಾದಿಗ ಮತಗಳು ಬೀಳುವುದನ್ನು ಡೌಟಾಗಿಸಿಕೊಂಡಿದ್ದಾರೆ. ಆದಾಗ್ಯೂ ಪರಮೇಶ್ವರ್ ಬೆಂಬಲಕ್ಕೆ ಸಿದ್ದರಾಮಯ್ಯ ಮತ್ತು ಕೆ.ಎನ್.ರಾಜಣ್ಣ ನಿಂತಿರುವುದರಿಂದ ಪರಮೇಶ್ವರ್ ಅದೃಷ್ಟ ಖುಲಾಯಿಸಬಹುದು. ಜೆಡಿಎಸ್‍ನ ಹಾಲಿ ಶಾಸಕ ಸುಧಾಕರ್ ಲಾಲ್ ಭರ್ತಿ ಪೈಪೋಟಿಯನ್ನು ನೀಡುತ್ತಿದ್ದಾರೆ. ಬಿಜೆಪಿಗೆ ಇಲ್ಲಿ ಬೇಸ್ ಇಲ್ಲ. ಹಾಗಾಗಿ ಆ ಪಕ್ಷದ ವೈ.ಎಚ್.ಹುಚ್ಚಯ್ಯ ನೆಪ ಮಾತ್ರಕ್ಕೆ ಕಣದಲ್ಲಿದ್ದಾರೆ.

ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಟಿಕೆಟ್ ಗೊಂದಲ ಈಗಲೂ ತಣ್ಣಗಾಗಿಲ್ಲ. ಕೈ ಟಿಕೆಟ್‍ಗೆ ಸಾಸಲು ಸತೀಶ್ ಪ್ರಯತ್ನಿಸಿದ್ದರು. ಆದರೆ ಟಿ.ಬಿ.ಜಯಚಂದ್ರ ತಮ್ಮ ಮಗ ಸಂತೋಷ್‍ನನ್ನು ಅಭ್ಯರ್ಥಿಯಾಗಿಸಿದ್ದಾರೆ. ಇದು ಸತೀಶ್ ಬೆಂಬಲಿಗರಿಗೆ ಸಿಟ್ಟು ತರಿಸಿದೆ. ಬಿಜೆಪಿಯಿಂದ ಮಾಧುಸ್ವಾಮಿ ಕಣದಲ್ಲಿದ್ದರೂ ಟಿಕೆಟ್‍ಗೆ ಪ್ರಯತ್ನಪಟ್ಟವರ ಕೊರಗು ಅವರನ್ನೂ ಕಾಡುತ್ತಿದೆ. ಇದರ ಲಾಭ ಹಾಲಿ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬುಗೆ ದಕ್ಕಬಹುದು. ಅವರು ಶಾಸಕರಾಗುವ ಸಾಧ್ಯತೆಯೇ ಹೆಚ್ಚು.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಸಚಿವ ಟಿ.ಬಿ.ಜಯಚಂದ್ರ ವಿರುದ್ಧದ ಅಲೆ ಇದ್ದರೂ ಪ್ರಬಲ ಎದುರಾಳಿಗಳ ಕೊರತೆಯಿಂದ ಅವರು ಸೋಲುವ ಸಾಧ್ಯತೆ ಕ್ಷೀಣ. ಬಿಜೆಪಿಯಿಂದ ಎಸ್.ಆರ್.ಗೌಡ, ಜೆಡಿಎಸ್‍ನಿಂದ ಸತ್ಯನಾರಾಯಣ ಎಲೆಕ್ಷನ್ ಎದುರಿಸುತ್ತಿದ್ದಾರೆ.

ಜೆಡಿಎಸ್‍ನ ಭದ್ರಕೋಟೆ ಗುಬ್ಬಿಯಲ್ಲಿ ಕಾಂಗ್ರೆಸ್‍ನ ಕುಮಾರ್ ಮತ್ತು ಬಿಜೆಪಿಯ ಬೆಟ್ಟಸ್ವಾಮಿಯ ಪೈಪೋಟಿಯ ನಡುವೆಯೂ ಜೆಡಿಎಸ್ ಶಾಸಕ ಶ್ರೀನಿವಾಸ್ ಮುಂಚೂಣಿಯಲ್ಲಿದ್ದಾರೆ.

ತಿಪಟೂರಿನ ಟಿಕೆಟ್ ಗಲಿಬಿಲಿ ಕಾಂಗ್ರೆಸ್‍ಗೆ ಇಕ್ಕಟ್ಟು ತಂದಿಟ್ಟಿದೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿ ಮತ್ತೆ ಪಡೆದುಕೊಂಡ ಷಡಕ್ಷರಿ ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ಬಿಜೆಪಿಯ ಬಿ.ಸಿ.ನಾಗೇಶ್, ಜೆಡಿಎಸ್‍ನ ಲೋಕೇಶ್ವರ್ ಪ್ರಬಲರಾಗಿ ನಿಂತಿದ್ದಾರೆ. ತ್ರಿಕೋನ ಸ್ಫರ್ಧೆಯಿರುವ ಇಲ್ಲಿ ಪ್ರಬಲ ಅಭ್ಯರ್ಥಿಗಳ ಕಾಲೆಳೆಯಲು ಪಕ್ಷೇತರ ಅಭ್ಯರ್ಥಿಗಳು ಇರುವುದರಿಂದ ಗೆಲುವು ಯಾರಿಗೆಂದು ಊಹಿಸುವುದೇ ಕಷ್ಟ.

ತುರುವೇಕೆರೆಯಲ್ಲಿ ಕಾಂಗ್ರೆಸ್‍ನ ರಂಗಪ್ಪ ಟಿ ಚೌದ್ರಿ, ಬಿಜೆಪಿಯ ಮಸಾಲೆ ಜಯರಾಮ್, ಜೆಡಿಎಸ್‍ನ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ನಡುವೆ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳೇ ಹೆಚ್ಚಿರುವಂತೆ ಕಾಣುತ್ತಿದೆ. ಪಾವಗಡದಲ್ಲಿ ಮತ್ತೆ ಜೆಡಿಎಸ್‍ನ ಹಾಲಿ ಶಾಸಕ ತಿಮ್ಮರಾಯಪ್ಪನೇ ಮತ್ತೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್‍ನ ವೆಂಕಟರಮಣಪ್ಪ, ಬಿಜೆಪಿಯ ಜಿ.ವಿ.ಬಲರಾಮ್ ಸ್ಪರ್ಧೆ ಅವರಿಗೆ ಹೆಚ್ಚಿಗೆ ತ್ರಾಸು ಕೊಡಲಾರದು.

ಕುಣಿಗಲ್ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್‍ರ ಸಂಬಂಧಿ ಡಾ.ಎಚ್.ಡಿ.ರಂಗನಾಥ್ ಸ್ಪರ್ಧೆಯಿಂದ ರೋಚಕತೆ ಬಂದಿದೆ. ಬಿಜೆಪಿಯಿಂದ ಡಿ.ಕೃಷ್ಣಕುಮಾರ್, ಜೆಡಿಎಸ್‍ನಿಂದ ಡಿ.ನಾಗರಾಜಯ್ಯ ಕಣದಲ್ಲಿದ್ದಾರಾದರೂ ರಂಗನಾಥ್ ಗೆಲ್ಲುವ ಸಕಲ ತಂತ್ರಗಳನ್ನೂ ಹೆಣೆದಿದ್ದಾರೆಂಬ ಸುದ್ದಿಯಿದೆ.

ಕೋಲಾರ

ವರ್ತೂರು ಪ್ರಕಾಶ್

ಕೋಲಾರ ಕ್ಷೇತ್ರದಲ್ಲಿ `ನಮ್ಮ ಕಾಂಗ್ರೆಸ್’ ಪಾರ್ಟಿಯ ವರ್ತೂರು ಪ್ರಕಾಶ್ ಮತ್ತು ಜೆಡಿಎಸ್‍ನ ಶ್ರೀನಿವಾಸ್ ಗೌಡ ನಡುವೆ ನೇರ ಹಣಾಹಣಿಯಿದೆ. ಕಾಂಗ್ರೆಸ್‍ನ ಜಮೀರ್ ಪಾಷಾಗೆ ಒಳಜಗಳದ್ದೇ ತಲೆನೋವು. ಬಿಜೆಪಿಯ ಓಂಶಕ್ತಿ ಚಲಪತಿ ಆಟಕ್ಕಿದ್ದಾರೆ, ಆದರೆ ಕೌಂಟಿಗೆ ನಗಣ್ಯ.

ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಕೆ.ವೈ.ನಂಜುಂಡೇಗೌಡ ಜೆಡಿಎಸ್‍ನ ಹಾಲಿ ಶಾಸಕ ಮಂಜುನಾಥಗೌಡರ ನಡುವೆ ಪ್ರಬಲ ಪೈಪೋಟಿ. ಬಿಜೆಪಿಯಿಂದ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಪ್ರಬಲ ಅಭ್ಯರ್ಥಿ ಎನಿಸಿದರೂ ಅವರೀಗ ಮೂರನೇ ಸ್ಥಾನದಲ್ಲಿ ತೆವಳಾಡುತ್ತಿದ್ದಾರೆ. ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ತುಸು ಹೆಚ್ಚಿದೆ.

ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ನಾಮಪತ್ರ ತಿರಸ್ಕಾರಗೊಂಡಿರುವುದರಿಂದ ಜೆಡಿಎಸ್‍ನ ಸಮೃದ್ಧಿ ಮಂಜುನಾಥ್, ಬಿಜೆಪಿಯ ಮಾಜಿ ಶಾಸಕ ಅಮರೇಶ್ ನಡುವೆ ನೇರ ಪೈಪೋಟಿ. ಜೆಡಿಎಸ್ ಮುಂಚೂಣಿಯಲ್ಲಿದೆ.

ಶ್ರೀನಿವಾಸಪುರ ಕ್ಷೇತ್ರದಲ್ಲಿ 3 ದಶಕಗಳಿಂದ ಕಾಂಗ್ರೆಸ್‍ನ ರಮೇಶ್ ಕುಮಾರ್, ಜೆಡಿಎಸ್‍ನ ಜಿ.ಕೆ.ವೆಂಕಟ ಶಿವಾರೆಡ್ಡಿ ಒಮ್ಮೆ ಇವರು ಮತ್ತೊಮ್ಮೆ ಅವರು ಎನ್ನುವಂತೆ ಗೆಲ್ಲುತ್ತಾ ಬಂದಿದ್ದಾರೆ. ಆದರೆ ಈ ಬಾರಿ ರಮೇಶ್ ಕುಮಾರ್ ಮರುಆಯ್ಕೆಯಾಗಲು ಅವರು ಮಾಡಿದ ಕೆಲಸಗಳೇ ಕಾರಣವಾಗಲಿವೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಬಂಗಾರಪೇಟೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪೈಪೋಟಿ ನಡೆಸುತ್ತಿವೆ. ಕೈ ಪಾರ್ಟಿಯ ಎಸ್.ಎನ್.ನಾರಾಯಣಸ್ವಾಮಿ, ಜೆಡಿಎಸ್‍ನ ಮಲ್ಲೇಶ್ ಬಾಬು ಎಲೆಕ್ಷನ್‍ನಲ್ಲಿ ಕಾದಾಡುತ್ತಿದ್ದರೆ ಬಿಜೆಪಿಯ ಬಿ.ಪಿ.ವೆಂಕಟಮುನಿಯಪ್ಪ ಆಂತರಿಕ ಗೊಂದಲಗಳ ನಡುವೆಯೇ ಹೈರಾಣಾಗಿದ್ದಾರೆ. ದಿನದಿಂದ ದಿನಕ್ಕೆ ಕಾಂಗ್ರೆಸ್ ಗೆಲುವಿನತ್ತ ತೆವಳುತ್ತಿದೆ.

ಕೆ.ಜಿ.ಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸಂಸದ ಕೆ.ಎಚ್.ಮುನಿಯಪ್ಪರ ಮಗಳು ರೂಪ ಶಶಿಧರ್, ಬಿಜೆಪಿಯಿಂದ ಹಾಲಿ ಶಾಸಕಿ ವೈ.ರಾಮಕ್ಕರ ಮೊಮ್ಮಗಳು ಅಶ್ವಿನಿ, ಜೆಡಿಎಸ್‍ನಿಂದ ಭಕ್ತವತ್ಸಲಂ ನಡುವೆ ತ್ರಿಕೋನ ಸ್ಪರ್ಧೆಯಿದ್ದು ಫಲಿತಾಂಶದ ಅಂದಾಜು ಸಿಗದಷ್ಟು ಸಮಬಲ ಪೈಪೋಟಿ ನಡೆಯುತ್ತಿದೆ.

ಒಟ್ಟಾರೆ ಈ ನಾಲ್ಕು ಜಿಲ್ಲೆಗಳ 26 ಕ್ಷೇತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಸದ್ಯದ ಅಂದಾಜಿನ ಪರಿಸ್ಥಿತಿಯನ್ನು ಲೆಕ್ಕಹಾಕಿದರೆ ಜೆಡಿಎಸ್ 8, ಕಾಂಗ್ರೆಸ್ 14, ಬಿಜೆಪಿ 3 ಹಾಗೂ ಇತರರು ಒಂದು ಸ್ಥಾನ ಗಳಿಸಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷವನ್ನು ಸೋಲಿಸುವ ಮೂಲಕ ‘ಮೊಹಬ್ಬತ್ ಕಿ ದುಕಾನ್’ ತೆರೆಯಿರಿ: ರಾಹುಲ್ ಗಾಂಧಿ

0
ಇಂದಿನಿಂದಆರಂಭವಾಗುತ್ತಿರುವ 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ದ್ವೇಷವನ್ನು ಸೋಲಿಸುವ ಮೂಲಕ ದೇಶದ ಮೂಲೆಮೂಲೆಗಳಲ್ಲಿ 'ಪ್ರೀತಿಯ ಅಂಗಡಿ' (ಮೊಹಬ್ಬತ್...