Homeಅಂಕಣಗಳುಧರ್ಮದ ನರಕ ಕೂಪದೊಳಗೆ ಬೃಂದಾವನದ ವಿಧವೆಯರು

ಧರ್ಮದ ನರಕ ಕೂಪದೊಳಗೆ ಬೃಂದಾವನದ ವಿಧವೆಯರು

- Advertisement -
- Advertisement -

ಪರಿಮಳಾ ವಾರಿಯರ್ |

hema malini

“ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಃ” ಎಂದು ಮಹಿಳೆಯನ್ನು ದೇವರಿಗೆ ಹೋಲಿಸುವ ಈ ದೇಶದ ಪ್ರಧಾನ ವಿದೂಷಕನೊಬ್ಬ ವಿರೋಧ ಪಕ್ಷದ ನಾಯಕಿಯನ್ನು ವಿಧವೆಯೆಂದು ಹಂಗಿಸಿ ದೇಶಾದ್ಯಂತ ಛೀ ಥೂ ಎಂದು ಹೀನಾಯವಾಗಿ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾನೆ. ದೇಶವನ್ನಾಳುವ ಅತಿಮುಖ್ಯ ಸ್ಥಾನದಲ್ಲಿ ಕುಳಿತವರೇ ಇಷ್ಟು ನೀಚ ಮನಸ್ಥಿತಿಗೆ ಇಳಿದಿದ್ದಾರೆಂದು ಎಲ್ಲೆಡೆ ವಿದೂಷಕನಿಗೆ ಮಂಗಳಾರತಿ ಎತ್ತಲಾಗುತ್ತಿದೆ. ಇದು ಆಶ್ಚರ್ಯಪಡಬೇಕಾದ, ಅಪರೂಪದ ವಿದ್ಯಮಾನವೇನೂ ಅಲ್ಲ. ಏಕೆಂದರೆ ಭಾರತದ ಸಮಾಜ ವಿಧವೆಯರನ್ನು ಸಾವಿರಾರು ವರ್ಷಗಳಿಂದ ಇವತ್ತಿನವರೆಗೂ ನಿಕೃಷ್ಟವಾಗಿ ಪ್ರಾಣಿಗಳಂತೆ ನೋಡಿಕೊಂಡು ಬಂದ ಇತಿಹಾಸವನ್ನೇ ಹೊಂದಿದೆ. ಮತ್ತದು ಇವತ್ತಿನವರೆಗೂ ಮುಂದುವರೆಯುತ್ತಲೇ ಇದೆ. ಆ ತುಚ್ಛ ಮನಸ್ಥಿತಿಯ ಪುಟ್ಟ ಕನ್ನಡಿ ರೂಪವೇ ವಿದೂಷಕನ ವಿಧವೆಯರ ವ್ಯಂಗ್ಯ. ತೀರಾ ಪುರಾತನ ಕಾಲಕ್ಕೇನೂ ಹೋಗುವುದು ಬೇಡ, ಇವತ್ತಿನ ಕಾಲಘಟ್ಟದಲ್ಲಿಯೇ ಈ ದೇಶ ವಿಧವೆಯರೊಂದಿಗೆ ಹೇಗೆ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಕಣ್ಣೆದುರೇ ಸಾಕ್ಷಿಗಳಿವೆ. ಈ ಬಾರಿ ಆ ಸಾಕ್ಷಿಗಳಿಗೊಮ್ಮೆ ಮುಖಾಮುಖಿಯಾಗೋಣ.
ಮಂಗಳಗ್ರಹಕ್ಕೆ ರಾಕೆಟ್ ಹಾರಿಸುತ್ತಿರುವ ಅತ್ಯಾಧುನಿಕ ಕಾಲಘಟ್ಟದಲ್ಲೂ ದೇವಭೂಮಿಯೆಂದೇ ಹೆಸರಾದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಗಂಡನನ್ನು ಕಳೆದುಕೊಂಡ ವಿಧವೆಯರ ಪರಿಸ್ಥಿತಿ ಜೀವಚ್ಛವಕ್ಕಿಂತ ಕಡೆ. ಈ ವಿಧವೆಯರಿಗೆಂದೇ ಒಂದಷ್ಟು ಊರುಗಳನ್ನು ಕಟ್ಟಿ ಆ ಪಂಜರದೊಳಗೆ ವಿಧವೆಯರನ್ನು ಕೂಡಿಹಾಕಿ ಧರ್ಮದ ಪಂಜರದೊಳಗಿರಿಸಿ ನರಕಕೂಪಗಳನ್ನೇ ಸೃಷ್ಟಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದುದು ಸನ್ಯಾಸಿಯೊಬ್ಬ ರಾಜ್ಯವಾಳುತ್ತಿರುವ ಉತ್ತರಪ್ರದೇಶದ ಮಥುರಾ ಜಿಲ್ಲೆಯಿಂದ 10 ಕಿಲೋಮೀಟರ್ ದೂರವಿರುವ ‘ಬೃಂದಾವನ’ ಎಂಬ ಧಾರ್ಮಿಕ ಸ್ಥಳವೂ ಒಂದು. ಮಥುರ ಮತ್ತು ಬೃಂದಾವನಕ್ಕೆ ಮಹಾಭಾರತದ ಹಿನ್ನೆಲೆಯಿದೆ. ಈ ಮಹಾಪುರಾಣದ ನಾಯಕರಲ್ಲೊಬ್ಬನಾದ ಶ್ರೀಕೃಷ್ಣ ಜನಿಸಿದ ಮತ್ತು ಮತ್ತವನ ಯೌವನದ ಸಮಯದಲ್ಲಿ ರಾಧೆಯೊಡನೆ ಪ್ರೇಮಾಂಕುರವಾಗಿ ಅಮರಪ್ರೇಮವೆಂದು ಕರೆಯಲ್ಪಡುವ ಪ್ರೇಮಕಥೆಯೊಂದು ನಡೆದ ಸ್ಥಳಗಳೆಂದು ಮಥುರಾ ಮತ್ತು ಬೃಂದಾವನ ಹೆಸರಾಗಿವೆ. ಯಮುನಾ ನದಿಯ ತೀರದಲ್ಲಿರುವ ಬೃಂದಾವನವೆಂಬ ಈ ಊರೀಗ 40-50 ಸಾವಿರಕ್ಕೂ ಹೆಚ್ಚು ವಿಧವೆಯರಿಂದ ಕಿಕ್ಕಿರಿದು ತುಂಬಿರುವ ವಿಧವೆಯರ ನಗರಿಯೆಂದೇ ಕರೆಸಿಕೊಳ್ಳುತ್ತಿದೆ. ಶ್ರೀಕೃಷ್ಣನಿಗೆ ಸಂಬಂಧಿಸಿದ ಒಟ್ಟು 82 ದೇವಾಲಯಗಳು ಕಿಕ್ಕಿರಿದು ತುಂಬಿರುವ ಈ ಊರಿನಲ್ಲಿ ಎಲ್ಲಿ ನೋಡಿದರೂ ಬಿಳಿ ಸೀರೆಯುಟ್ಟ ಎಲ್ಲ ವಯೋಮಾನದ ವಿಧವೆಯರು ನಿಮಗೆ ಕಾಣಸಿಗುತ್ತಾರೆ. ಯಾರಿವರು? ದೇಶಾದ್ಯಂತ ಯಾವ ಯಾವುದೋ ಹಳ್ಳಿ-ಕುಗ್ರಾಮ, ನಗರ-ಪಟ್ಟಣಗಳಿಂದ ಈ ವಿಧವೆಯರೇಕೆ ಈ ಊರಿನಲ್ಲಿ ಹೀಗೆ ಕಿಕ್ಕಿರಿದು ತುಂಬಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಧರ್ಮದ ಹಿನ್ನೆಲೆಯ ಕಥೆಗಳೇ ಉತ್ತರವನ್ನು ಒದಗಿಸುತ್ತವೆ.
ಪುರಾಣ ಶಾಸ್ತ್ರಗಳ ಪ್ರಕಾರ ಗಂಡ ಸತ್ತ ವಿಧವೆಯರನ್ನು ಅಪಶಕುನ, ಅಪವಿತ್ರವೆಂದು ಪರಿಗಣಿಸಲಾಗಿದೆ. ಆಕೆಯನ್ನು ಶುಭ ಸಂದರ್ಭಗಳಿಂದ ಹೊರಗಿಡಬೇಕು, ಆಕೆಯನ್ನು ಮತ್ತೋರ್ವ ಪುರುಷ ಕಣ್ಣೆತ್ತಿ ನೋಡದಂತೆ ಆಕೆಯ ಕೇಶಮುಂಡನ ಮಾಡಬೇಕು.. ಮತ್ತೂ ಮುಂದುವರಿದು ಸತ್ತ ಗಂಡನ ಜೊತೆ ಚಿತೆಯೇರಿ ಪ್ರಾಣ ಬಿಡಬೇಕೆಂಬ ಸತಿಪದ್ಧತಿಯಂಥ ಕ್ರೂರ ಉಲ್ಲೇಖಗಳು ಸಿಗುತ್ತವೆ. 1829ರಲ್ಲಿ ಬ್ರಿಟಿಶರು ಸತಿಪದ್ಧತಿಯನ್ನು ನಿಷೇಧಿಸುವರೆಗೂ ವಿಧವೆಯರನ್ನು ಚಿತೆಗೆ ನೂಕಿ ಕೊಲ್ಲುವ ಕ್ರೂರ ಆಚರಣೆಗಳಿಗೆ ಈ ದೇಶ ಪುರಾಣಶಾಸ್ತ್ರಗಳ ಗುಲಾಮತನದಲ್ಲೇ ಬದುಕುತ್ತಿತ್ತು. 1950ರಲ್ಲಿ ಸ್ವತಂತ್ರ ಭಾರತದ ಸಂವಿಧಾನವು ಮಹಿಳೆಯರಿಗೆ ಪುರುಷನಷ್ಟೇ ಸಮಾನ ಹಕ್ಕು ದೊರಕಿಸಿಕೊಡುವರೆಗೂ ವಿಧವೆಯರನ್ನು ಜೀವಂತವಾಗಿ ಕೊಲ್ಲುವ ಸತಿಪದ್ಧತಿಯಂತಹ ಕ್ರೂರ ಆಚರಣೆ ಕದ್ದುಮುಚ್ಚಿ ನಡೆಯುತ್ತಲೇ ಇತ್ತು. ಆ ನಂತರ ಕಾನೂನು ಮತ್ತು ಶಿಕ್ಷೆಗೆ ಬೆದರಿದ ಸಂಪ್ರದಾಯವಾದಿಗಳು ವಿಧವೆಯರನ್ನು ಕುಟುಂಬದಿಂದ ಹೊರಹಾಕುವ ಹೊಸ ಹೊಸ ಆಚರಣೆಗಳನ್ನು ಪಿತೂರಿಗಳನ್ನು ಕಂಡುಕೊಂಡರು. ಗಂಡ ಸತ್ತ ನಂತರ ಆಸ್ತಿಪಾಲಿನಲ್ಲಿ ವಿಧವೆಗೂ ಪಾಲು ಕೊಡಬೇಕೆನ್ನುವ ಕಾನೂನುಗಳಿಂದ ತಪ್ಪಿಸಿಕೊಳ್ಳಲು ವಿಧವೆಯರನ್ನೇ ಮನೆಯಿಂದ ಹೊರಹಾಕುವ ನೀಚತನಕ್ಕಿಳಿದ ಪುರುಷಪ್ರಧಾನ ಸಮಾಜ ಅದಕ್ಕೆ ಕೃಷ್ಣಸೇವೆಯೆಂಬ ಹೆಸರಿಟ್ಟು ವಿಧವೆಯರನ್ನು ಮಥುರಾ-ಬೃಂದಾವನಗಳಿಗೆ ತಂದು ಪ್ರಾಣಿಗಳಂತೆ ಬಿಟ್ಟುಹೋಗುವ ಕೃತ್ಯಕ್ಕಿಳಿದ ಪರಿಣಾಮವೇ ಇವೆರಡು ಊರುಗಳಲ್ಲಿ ತುಂಬಿತುಳುಕುವ ವಿಧವೆಯರ ಪರಿತಾಪಗಳಿಗೆ ಕಾರಣವಾಯಿತು.
ಪಶ್ಚಿಮ ಬಂಗಾಲದ ಭಕ್ತಿಪಂಥದ ‘ಚೈತನ್ಯ ಮಹಾಪ್ರಭು’ ಎಂಬ ಸಂತರು ಸ್ಥಾಪಿಸಿದ ಧಾರ್ಮಿಕ ಕ್ಷೇತ್ರವಾದ ಮಥುರಾ ಮತ್ತು ಬೃಂದಾವನದಲ್ಲಿಂದು ಹೆಜ್ಜೆಗೊಂದರಂತೆ ತೊಡರುವುದು ಒಂದೋ ಲೆಕ್ಕಕ್ಕಿಲ್ಲದಷ್ಟು ದೇವಾಲಯಗಳು ಮತ್ತು ಮನೆಯಿಂದ ಹೊರಹಾಕಿಸಿಕೊಂಡ ವಿಧವೆಯರು. ಬೃಂದಾವನದಲ್ಲಿ ಸರ್ಕಾರವೇ ನಡೆಸುವ ವಿಧವೆಯರ ಆಶ್ರಮಗಳಲ್ಲಿ ಅರ್ಧದಷ್ಟು ವಿಧವೆಯರಿದ್ದರೆ ಇನ್ನರ್ಧ ವಿಧವೆಯರಿಗೆ ಇರಲೊಂದೂ ಸೂರೂ ಇಲ್ಲದೆ ಬೀದಿಗಳಲ್ಲೇ ಬದುಕುವ ಪರಿಸ್ಥಿತಿಯಿದೆ. ಆಶ್ರಮಗಳಲ್ಲಿ ಬದುಕುವ ವಿಧವೆಯರು ದೇವಾಲಯಗಳಲ್ಲಿ ನಡೆಯುವ ಕೃಷ್ಣಭಜನೆಯಲ್ಲಿ ಹಾಡು ಹೇಳುವ, ದೇವಳ ಶುಚಿಗೊಳಿಸುವ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದಕ್ಕೆಂದು ದೇವಾಲಯಗಳಿಂದ ದಿನಕ್ಕೆ 18 ರುಪಾಯಿ ಕೂಲಿಯಷ್ಟೇ ಪಡೆಯುವ ಇವರು ಅದರಲ್ಲೇ ತಮ್ಮ ಹೊಟ್ಟೆಪಾಡು ನೀಗಿಕೊಳ್ಳಬೇಕು. ನಂತರದ ದಿನಗಳಲ್ಲಿ ಸರ್ಕಾರದಿಂದ ಪಿಂಚಣಿಯ ವ್ಯವಸ್ಥೆಯಾದರೂ ಅದು ಆರುತಿಂಗಳಿಗೋ, ಏಳು ತಿಂಗಳಿಗೋ ಸಿಗುವ ಬಾಬತ್ತಾಗಿದೆ. ಇಲ್ಲಿ ಇನ್ನೊಂದು ವ್ಯವಸ್ಥಿತ ಪಿತೂರಿಯೂ ಇದೆ. ಈ ಧಾರ್ಮಿಕ ಕ್ಷೇತ್ರಕ್ಕೆ ದೇಶ-ವಿದೇಶಗಳಿಂದ ಬರುವ ಭಕ್ತರಿಂದ ಇಲ್ಲಿನ ದೇವಾಲಯಗಳ ಗೈಡ್‍ಗಳು ಮತ್ತು ಅರ್ಚಕರು ವಿಧವೆಯರ ಹೆಸರಿನಲ್ಲಿ ಹಣ ಪೀಕುವ ಸಂಪ್ರದಾಯವನ್ನೂ ಬೆಳೆಸಿಕೊಂಡಿವೆ. ಬೃಂದಾವನಕ್ಕೆ ಹೋಗಿ ಬಂದ ಪ್ರವಾಸಿಗರು ಹೇಳುವ ಈ ವಿವರಗಳನ್ನು ನೋಡಿದರೆ ಮೈಯುರಿಯುತ್ತದೆ. ದೇವಸ್ಥಾನಗಳಲ್ಲಿ ದೇವರಿಗೆ ಪರದೆ ಹಾಕುವ ಅರ್ಚಕರು ವಿಧವೆಯರ ಕ್ಷೇಮದ ಹೆಸರಿನಲ್ಲಿ ಭಕ್ತರು ಕಾಸು ಕೊಟ್ಟರಷ್ಟೇ ಪರದೆ ಸರಿಸಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. 1 ಸಾವಿರದಿಂದ 5 ಸಾವಿರದವರೆಗೆ ಭಕ್ತರಿಂದ ವಸೂಲು ಮಾಡುವ ಗೈಡ್‍ಗಳು ಮತ್ತು ಅರ್ಚಕರು ಅದಕ್ಕೊಂದು ನಕಲಿ ರಶೀತಿಯನ್ನೂ ಕೊಡುತ್ತಾರಂತೆ. ಹೀಗೆ ಭಕ್ತರಿಂದ ಅನಧಿಕೃತವಾಗಿ ಸಂಗ್ರಹಿಸಿದ ಹಣದಲ್ಲಿ ಇವರು ಬೆಳಿಗ್ಗೆ 4ಕ್ಕೆ ಎದ್ದು ಬಂದು ದೇವಾಲಯಗಳಲ್ಲಿ ದೇವರ ಭಜನೆ ಹಾಡುವ ವಿಧವೆಯರಿಗೆ ದಿನಕ್ಕೆ 18 ರುಪಾಯಿ, ಒಂದಿಷ್ಟು ಅಕ್ಕಿ, ಮುಷ್ಟಿ ಬೇಳೆಯನ್ನು ಕೊಡುತ್ತಾರೆ. ಮಿಕ್ಕಿದ್ದು ಎಲ್ಲಿ ಹೋಗುತ್ತದೆಂದು ಆ ಪರಮಾತ್ಮನಿಗೇ ಗೊತ್ತು. ಇಂತಹ ಪರಿಸ್ಥಿತಿಯಲ್ಲಿ ಮಥುರಾ ಬೃಂದಾವನದ ಮುಕ್ಕಾಲುಪಾಲು ವಿಧವೆಯರು ಭಿಕ್ಷೆ ಬೇಡುತ್ತ ಹೊಟ್ಟೆ ಹೊರೆಯುತ್ತ ಬದುಕು ನಡೆಸುತ್ತಿದ್ದಾರೆ.
ಮಥುರಾ ಬೃಂದಾವನದ ವಿಧವೆಯರ ಈ ಘೋರ ಬದುಕಿನ ಬಗ್ಗೆ ಪದೇ ಪದೇ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ 2008ರಲ್ಲಿ ರವೀಂದ್ರ ಬಾನ ಎಂಬ ವಕೀಲರೊಬ್ಬರು ಸುಪ್ರೀಂಕೋರ್ಟ್‍ಗೆ ಪಿಐಎಲ್ ಸಲ್ಲಿಸುವ ಮೂಲಕ ಉಚ್ಛ ನ್ಯಾಯಾಲಯದ ಗಮನ ಸೆಳೆಯುತ್ತಾರೆ. ಆ ನಂತರ ನ್ಯಾಯಾಲಯದ ಆದೇಶದಂತೆ ಸ್ಥಳೀಯ ಲೀಗಲ್ ಸರ್ವೀಸ್ ಅಥಾರಿಟಿಯ ಸಪ್ನಾ ತ್ರಿಪಾಠಿ ಮತ್ತು ಮಥುರಾದ ಜಿಲ್ಲಾ ನ್ಯಾಯಾಧೀಶ ವಿಜಯ್ ಬಹದ್ದೂರ್ ಯಾದವ್‍ರ ನೇತೃತ್ವದಲ್ಲಿ ಮಥುರಾ ಮತ್ತು ಬೃಂದಾವನದ ವಿಧವೆಯರ ಬಗ್ಗೆ ವ್ಯಾಪಕವಾದ ಸರ್ವೇಯೊಂದನ್ನು ನಡೆಸುತ್ತಾರೆ. ಈ ಸರ್ವೇ ಹೊರಹಾಕಿದ ಭೀಭತ್ಸ ಸಂಗತಿಗಳು ನ್ಯಾಯಾಲಯಗಳನ್ನೇ ಗಾಬರಿಗೊಳಿಸುತ್ತವೆ. ಸರ್ವೇ ಹೇಳಿದಂತೆ ಉತ್ತರಪ್ರದೇಶ, ಬೆಂಗಾಲ ಮತ್ತು ಬಿಹಾರದ ವಿಧವೆಯರೇ ಇಲ್ಲಿ 80 ಪ್ರತಿಶತದಷ್ಟಿದ್ದಾರೆ. ಆಸ್ತಿಪಾಲಿನಲ್ಲಿ ಮಹಿಳೆಯರ ಹಕ್ಕನ್ನು ಎತ್ತಿ ಹಿಡಿಯುವ ‘ಹಿಂದೂ ಸಕ್ಸೆಷನ್ ಆಕ್ಟ್ 2007 ಮತ್ತು ಮೈಂಟೆನೆನ್ಸ್ ಅಂಡ್ ವೆಲ್‍ಫೇರ್ ಆಫ್ ಪೇರೆಂಟ್ಸ್; ಸೀನಿಯರ್ ಸಿಟಿಜನ್ಸ್ ಆಕ್ಟ್’ ಕಾನೂನುಗಳ ಪ್ರಕಾರ ಮಹಿಳೆಯರಿಗೆ ಸಮಾನ ಆದ್ಯತೆ ಮತ್ತು ಆಸ್ತಿಹಂಚಿಕೆಯಲ್ಲಿ ಸಮಪಾಲು ದೊರಕಬೇಕು. ಈ ಕಾನೂನಿಂದ ತಪ್ಪಿಸಿಕೊಳ್ಳಲು ಗಂಡ ಸತ್ತ ಕೂಡಲೇ ವಿಧವೆಯರನ್ನು ಬೃಂದಾವನಕ್ಕೆ ತಂದು ಬಿಟ್ಟು, ಅವರು ಸತ್ತಿದ್ದಾರೆಂದು ದಾಖಲೆ ಸೃಷ್ಟಿಸಿ ವಿಧವೆಯರ ಪಾಲಿನ ಆಸ್ತಿಯನ್ನೂ ಲಪಟಾಯಿಸುವ ದೊಡ್ಡ ಸಂಚೊಂದು ಬಹುಪಾಲು ವಿಧವೆಯರ ಹಿನ್ನೆಲೆ ಕಥೆಗಳಲ್ಲಿ ಕೇಳಿ ಬಂತು. ಇದರೊಡನೆ ಇಲ್ಲಿನ ವಿಧವೆಯರಿಗೆ ಸೂಕ್ತ ವಸತಿಯಿಲ್ಲದೆ ಬೀದಿಗಳಲ್ಲಿ ಬದುಕುತ್ತಿರುವ ವಿಧವೆಯರಿಗೆ ಕನಿಷ್ಟ ಮೂಲಸೌಕರ್ಯಗಳೂ ಇಲ್ಲದೆ ಬಯಲು ಶೌಚಾಲಯ ನಂಬಿಕೊಂಡು ಬದುಕುತ್ತಿರುವ ವಿಧವೆಯರ ಪರಿಸ್ಥಿತಿ ಬೆಳಕಿಗೆ ಬಂತು. ಸರ್ವೇ ಹೇಳುವಂತೆ ಇಲ್ಲಿನ ವಿಧವೆಯರಲ್ಲಿ 80 ಪ್ರತಿಶತದಷ್ಟು ವಿಧವೆಯರು ಅನಕ್ಷರಸ್ಥರಾಗಿದ್ದು ನಾನಾ ವಿಧದ ಕಾಯಿಲೆ ಕಸಾಲೆಗಳಿಂದ ನರಳುತ್ತಿದ್ದರು. ಆಶ್ರಮಗಳಲ್ಲಿ ಸ್ನಾನಕ್ಕೆಂದು ಸೋಪು ಸಹ ಇಲ್ಲದೆ ಮಣ್ಣು ಮತ್ತು ಬೂದಿಯನ್ನು ಕಲೆಸಿ ಅದರಲ್ಲೇ ಸ್ನಾನ ಮಾಡುವ ಪರಿಸ್ಥಿತಿಗೆ ವಿಧವೆಯರು ತಳ್ಳಲ್ಪಟ್ಟಿದ್ದರು. (ಈ ಬಗ್ಗೆ ವಿವರವಾಗಿ ದೇಶದ ಗಮನ ಸೆಳೆದ ಪತ್ರಕರ್ತೆ ರೀನಾ ಮುಖರ್ಜಿ ಈ ಬಗ್ಗೆ ಸಾಲು ಸಾಲು ಲೇಖನಗಳನ್ನು ಬರೆದು ಬೃಂದಾವನದ ವಿಧವೆಯರ ನರಕಕೂಪದ ಬಗ್ಗೆ ದೇಶದ ಗಮನ ಸೆಳೆದಿದ್ದಾರೆ.)

hema malini,
bjp mp

ಇದೆಲ್ಲದರ ಜೊತೆಗೆ ಸರ್ಕಾರಿ ಸರ್ವೇಯು ಚಿಕ್ಕ ವಯಸ್ಸಿನಲ್ಲೇ ವಿಧವೆಯರಾದ ಯುವತಿಯರನ್ನು ಲೈಂಗಿಕವಾಗಿ ಶೋಷಿಸುತ್ತಿರುವ ಪ್ರಕರಣಗಳನ್ನೂ ಪತ್ತೆ ಹಚ್ಚಿದೆ. ಮಥುರಾ ಮತ್ತು ಬೃಂದಾವನದಲ್ಲಿನ ವಿಧವೆಯರ ಆಶ್ರಮಗಳು, ಭಜನಾ ಆಶ್ರಮ, ಧರ್ಮಶಾಲೆಗಳ ಮೇಲ್ಜಾತಿಯ ಮುಖ್ಯಸ್ಥರು ‘ಸೇವಾದಾಸಿ’ಯೆಂದು ಧಾರ್ಮಿಕ ಸಂಪ್ರದಾಯದ ಹಿನ್ನೆಲೆಯ ಲೈಂಗಿಕ ಶೋಷಣೆಯನ್ನು ಗುಟ್ಟಾಗಿ ನಡೆಸುತ್ತಿರುವುದು ಬಟಾಬಯಲಾಯಿತು. ಈ ‘ಸೇವಾದಾಸಿ’ ಸಂಪ್ರದಾಯವು ದಕ್ಷಿಣ ಭಾರತದ ದೇವದಾಸಿ ಪದ್ಧತಿಯಂತಹದೇ ಒಂದು ಪದ್ಧತಿ. ಆಶ್ರಮ ಮತ್ತು ಧರ್ಮಶಾಲೆಗಳ ಮೇಲ್ಜಾತಿಯ ಮುಖ್ಯಸ್ಥರನ್ನು ಎಳೆಯ ವಯಸ್ಸಿನ ವಿಧವೆಯರು ಲೈಂಗಿಕವಾಗಿ ತೃಪ್ತಿಪಡಿಸುವುದರಿಂದ ಭಗವಂತನ ಅನುಗ್ರಹ ದೊರೆಯುತ್ತದೆಂದು ನಂಬಿಸಿ ವಿಧವೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ಈ ಮುಗ್ಧ ವಿಧವೆಯರನ್ನು ಶ್ರೀಮಂತ ದೈವಭಕ್ತರ ‘ಖಾಸಗಿಸೇವೆ’ಗೂ ಬಳಸಿಕೊಳ್ಳಲಾಗುತ್ತಿತ್ತು. ಇವೆಲ್ಲ ಅಕ್ರಮಗಳನ್ನು ಸರ್ಕಾರದ ಸರ್ವೇ ಸಮಯದಲ್ಲಿ ವಿಧವೆಯರು ನೋವಿನಿಂದಲೇ ಹಂಚಿಕೊಂಡಿದ್ದರು. ಈ ಜಾಲದಲ್ಲಿ ಹೆಣ್ಣುಗಳನ್ನು ವಿಟಪರುಷರಿಗೆ ಪೂರೈಸುವ ಪಿಂಪ್‍ಗಳೂ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿರುವುದು ಬೆಳಕಿಗೆ ಬಂತು. ಇಂತಹ ಅಮಾನುಷ ಸಂಪ್ರದಾಯಕ್ಕೆ ತಲೆಕೊಟ್ಟ ವಿಧವೆಯರು ಮಥುರಾದ ಬೃಂದಾವನ, ರಾಧಾಕುಂಡ್, ಗೋವರ್ಧನ್, ಬರ್ಸಾನ, ನಂದಗಾಂವ್ ಭಾಗಗಳಲ್ಲಿ ಕಂಡುಬಂದರು. ಇವರಲ್ಲಿ ಬಹಳಷ್ಟು ಮಂದಿ ಗರ್ಭವತಿಯರಾಗಿ ಅಸಂಪ್ರದಾಯಿಕ ಗರ್ಭಪಾತಕ್ಕೆ ಯತ್ನಿಸಿ ಪ್ರಾಣ ಬಿಟ್ಟಿರುವ ಪ್ರಕರಣಗಳನ್ನೂ ಸ್ಥಳೀಯ ಗೈನಕಾಲಜಿಸ್ಟ್ ಕ್ಲಿನಿಕ್‍ಗಳ ವೈದ್ಯರು ಖಚಿತಪಡಿಸಿದರು. ಗರ್ಭಪಾತವೂ ಸಾಧ್ಯವಾಗದೆ ಮಕ್ಕಳನ್ನು ಹೆತ್ತ ವಿಧವೆಯರು ಮಕ್ಕಳೊಡನೆಯೇ ಬೀದಿಯಲ್ಲಿ ಭಿಕ್ಷೆ ಬೇಡುತ್ತ ಬದುಕುತ್ತಿರುವುದನ್ನೂ ಸರ್ಕಾರಿ ಸರ್ವೇ ಹೊರಹಾಕಿತು. ಇದೇ ತರಹದ 400 ಪ್ರಕರಣಗಳು ಮಥುರಾ ಬೃಂದಾವನದಲ್ಲಿ ಪತ್ತೆಯಾದವು. ಇವೆಲ್ಲಕ್ಕಿಂತ ಭೀಕರವಾದದ್ದೇನೆಂದರೆ ಈ ಆಶ್ರಮಗಳಲ್ಲಿ ಮೃತಪಟ್ಟ ವಿಧವೆಯರನ್ನು ಸಮರ್ಪಕವಾಗಿ ಅಂತ್ಯಸಂಸ್ಕಾರ ಮಾಡುವ ವ್ಯವಸ್ಥೆಯೊಂದೂ ಇರಲಿಲ್ಲ. ಮೃತಪಟ್ಟ ವಿಧವೆಯರ ದೇಹವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಅದನ್ನು ಅಲ್ಲಿನ ಪೌರಕಾರ್ಮಿಕರು ಯಮುನಾನದಿಗೆ ಎಸೆದು ಬರುತ್ತಿದ್ದರು. ಇವೆಲ್ಲ ರಣಭೀಕರ ಮಾಹಿತಿಗಳನ್ನು ತಿಳಿದ ನಂತರ ಕೆಂಡಾಮಂಡಲವಾದ ಸುಪ್ರೀಂಕೋರ್ಟ್ ಬೀಸಿದ ಚಾಟಿಗೆ ಬೆದರಿದ ಸರ್ಕಾರಗಳು ಒಂದಷ್ಟು ತೇಪೆ ಹಾಕುವ ಕೆಲಸವನ್ನೇನೋ ಮಾಡಿದವು. ಆದರೆ ಇವತ್ತು ನಿಜಕ್ಕೂ ಈ ವಿಧವೆಯರ ಜೊತೆಗೆ ನಿಂತಿರುವುದು ಮಹಿಳಾ ಸಬಲೀಕರಣದ ಎನ್.ಜಿ.ಓಗಳು ಮತ್ತು ಸುಲಭ್ ಶೌಚಾಲಯದಂತ ಕಾರ್ಪೊರೇಟ್ ಸಂಸ್ಥೆಗಳು.
ಇದಕ್ಕೆ ರಾಜಕೀಯ ಪಕ್ಷವಾಗಿ ಬಿಜೆಪಿಯನ್ನಷ್ಟೇ ದೂರುವುದು ಸಾಧ್ಯವಿಲ್ಲ. ಏಕೆಂದರೆ ಉತ್ತರಪ್ರದೇಶವನ್ನು ಆಳಿದ ಎಲ್ಲಾ ಸರ್ಕಾರಗಳಿಗೂ ಇದು ಗಮನಕ್ಕೆ ಬಾರದಿರುವ ಸಂಗತಿಯಲ್ಲ. ಆದರೆ, ಇಂದು ಹಿಂದೂ ಧರ್ಮದ ಭವ್ಯ ಪರಂಪರೆಯ ವಾರಸುದಾ ರರೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವವರು ಈ ತಮ್ಮ ಪರಂಪರೆಯ ಹುಳುಕುಗಳ ಕನಿಷ್ಠ ಸುಧಾರಣೆಗೂ ಪ್ರಯತ್ನಿಸದೇ ಇರುವ ಹಿನ್ನೆಲೆಯಲ್ಲಿ ಮತ್ತು ಈಗ ರಾಜ್ಯ ಮತ್ತು ಕೇಂದ್ರಗಳೆರಡರಲ್ಲೂ ಅಧಿಕಾರ ಹಿಡಿದು ಎಲ್ಲಾ ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಪ್ರಶ್ನಿಸಬೇಕಿದೆ.
ಮಥುರಾದ ಬಿಜೆಪಿ ಸಂಸದೆಯಾಗಿದ್ದ ಬಾಲಿವುಡ್ ನಟಿ ಹೇಮಮಾಲಿನಿಯನ್ನು ಪತ್ರಿಕಾಗೋಷ್ಟಿಯೊಂದರಲ್ಲಿ ಪತ್ರಕರ್ತರೊಬ್ಬರು ವಿಧವೆಯರು ಭಿಕ್ಷೆ ಬೇಡುತ್ತ ಬದುಕುತ್ತಿರುವ ಬಗ್ಗೆ ಗಮನ ಸೆಳೆದಾಗ ಆ ಬಾಲಿವುಡ್ ನಟೀಮಣಿ “ಈ ವಿಧವೆಯರಿಗೆ ಹಾಸಿಗೆ ಕೊಟ್ಟಿದ್ದೇವೆ, ಹೊದೆಯಲು ಹೊದಿಕೆ ಕೊಟ್ಟಿದ್ದೇವೆ, ಆದರೂ ಅವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಭಿಕ್ಷೆ ಬೇಡುತ್ತಿದ್ದಾರೆ, ಇದು ಅವರದ್ದೇ ತಪ್ಪೆಂದು” ವಿಧವೆಯರ ಮೇಲೆ ಕೂಗಾಡಿತ್ತು. ಆ ನಂತರ ದೇಶಾದ್ಯಂತ ಈ ಬಗ್ಗೆ ಹೇಮಮಾಲಿನಿಗೆ ಛೀಮಾರಿ ಹಾಕಲಾಯಿತು. ಮಹಿಳಾ ವಿರೋಧಿ ಧೋರಣೆಯ ಬಿಜೆಪಿಯಲ್ಲಿದ್ದು, ಒಬ್ಬ ಹೆಣ್ಣುಮಗಳಾಗಿ ವಿಧವೆಯರನ್ನೇ ಹೀಗಳೆದ ಹೇಮಮಾಲಿನಿಗೆ ಯಾವ ಬಿಜೆಪಿ ನಾಯಕನೂ ಒಂದು ಬುದ್ಧಿ ಮಾತು ಹೇಳಲಿಲ್ಲ. ಇದೇ ಮಥುರಾ ಬೃಂದಾವನದ ವಿಧವೆಯರು ದೇಶದ ಪ್ರಧಾನ ವಿದೂಷಕನಿಗೆ ರಾಖಿ ಕಟ್ಟಿ ತಮ್ಮ ಬದುಕು ಹಸನಾಗಿಸಲು ಮನವಿ ಮಾಡಿಕೊಂಡಿದ್ದರು. ಆದರೆ ಈ ಮನುಷ್ಯ ವಿಧವೆಯರ ಮನವಿಯತ್ತ ಗಮನ ಕೊಡದೇ ಇವತ್ತು ವಿಧವೆಯರನ್ನೇ ಹಂಗಿಸಿ ಅಪಮಾನಿಸಿ ತಾನೆಂತಹ ಅಸಹ್ಯದ ವ್ಯಕ್ತಿತ್ವವೆಂದು ಜಗತ್ತಿಗೆ ತೋರಿಸಿಬಿಟ್ಟ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...