ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್ನಲ್ಲಿ ನಿಗದಿಪಡಿಸಿದ ಶೇಕಡ 20ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ ಮಟ್ಟವು ಶೇಕಡ 31.2 ರಷ್ಟು ಹೆಚ್ಚಿರುವುದು ದಾಖಲಾಗಿದೆ ಎಂದು ಹೇಳಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಶುಕ್ರವಾರ (ನ.6) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಸಂಶೋಧನೆಯ ವರದಿಯನ್ನು ಬಿಡುಗಡೆ ಮಾಡಿ, ರಾಜ್ಯ ಸರ್ಕಾರ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಸಂಗ್ರಹಿಸಿದ 63 ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಿದೆ ಎಂದು ತಿಳಿಸಿದ್ದಾರೆ.
ಇಲಾಖೆಯು ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ನಯಾರಾ ಎನರ್ಜಿ, ಶೆಲ್ ಮತ್ತು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಗಳ ಪೆಟ್ರೋಲ್ ಮಾದರಿಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಎಥೆನಾಲ್ ಪ್ರಮಾಣವು ಶೇಕಡ 20ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ.
ಐಒಸಿಎಲ್ ಪೆಟ್ರೋಲ್ ಮಾದರಿಯಲ್ಲಿ ಗರಿಷ್ಠ ಶೇಕಡ 31.2ರಷ್ಟು ಎಥೆನಾಲ್ ಅಂಶ ದಾಖಲಾಗಿದ್ದು, ಎಚ್ಪಿಸಿಎಲ್ ಪವರ್ ಮಾದರಿಯಲ್ಲಿ ಶೇಕಡ 30.5ರಷ್ಟು ಕಂಡುಬಂದಿದೆ. ಇತರ ಮಾದರಿಗಳಲ್ಲಿ ಶೇಕಡ 27, 26.5, 26.1, 25.5, 24.2, 22.6, 22.4, 20.8 ಮತ್ತು 20.6ರಷ್ಟು ಮಟ್ಟಗಳು ದಾಖಲಾಗಿವೆ. ಇನ್ನು ಅತ್ಯಂತ ಕನಿಷ್ಠ ಮಟ್ಟವು ಶೇಕಡ 13.5 ರಷ್ಟಿರುವುದು ಪತ್ತೆಯಾಗಿದೆ.
ವಾಹನ ಸವಾರರಿಂದ ಮೈಲೇಜ್ ಕೊರತೆ ಮತ್ತು ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರವು ಈ ತಪಾಸಣೆಯನ್ನು ಪ್ರಾರಂಭಿಸಿದೆ ಎಂದು ಸಚಿವ ಅರ್ಷದ್ ತಿಳಿಸಿದ್ದಾರೆ.
ಮಾದರಿಗಳನ್ನು ಆರಂಭದಲ್ಲಿ ಐಒಸಿಎಲ್ ಮತ್ತು ಬಿಪಿಸಿಎಲ್ ಸಂಸ್ಥೆಗಳ ಆಂತರಿಕ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಆದರೆ, ನಿಗದಿಪಡಿಸಿದ ಪರೀಕ್ಷಾ ನಿಯತಾಂಕಗಳಲ್ಲಿ ಎಥೆನಾಲ್ ಅಂಶವೂ ಒಂದಾಗಿದ್ದರೂ ಸಹ, ಆ ವರದಿಗಳಲ್ಲಿ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸಿರಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ತೈಲ ಮಾರುಕಟ್ಟೆ ಕಂಪನಿಗಳ ಪ್ರಯೋಗಾಲಯಗಳಿಗೆ ಪ್ರಶ್ನಾವಳಿಯೊಂದನ್ನು ಕಳುಹಿಸಲಾಗಿತ್ತು. ಅದರಲ್ಲಿ ಒಂದು ಪ್ರಶ್ನೆಯು ಆಯಾ ಉತ್ಪನ್ನಗಳಲ್ಲಿನ ಎಥೆನಾಲ್ ಅಂಶದ ಕುರಿತಾಗಿತ್ತು. ಆದರೆ ಯಾವುದೇ ಕಂಪನಿಯು ಈ 63 ಮಾದರಿಗಳ ಪೈಕಿ ಒಂದಕ್ಕೂ ಆ ಪ್ರಶ್ನೆಗೆ ಉತ್ತರಿಸಿಲ್ಲ. ಇದು ನಮಗೆ ಅನುಮಾನ ಮೂಡಿಸಿತು, ಆದ್ದರಿಂದ ನಾವು ಮಾದರಿಗಳನ್ನು ಖಾಸಗಿ ಎನ್ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ಕಳುಹಿಸಲು ನಿರ್ಧರಿಸಿದೆವು ಎಂದು ವಿವರಿಸಿದ್ದಾರೆ.
ಪರೀಕ್ಷಾ ಫಲಿತಾಂಶಗಳ ಆಧಾರದ ಮೇಲೆ ತಪಾಸಣೆಗೊಳಪಡಿಸಿದ ಪ್ರತಿ ಐದು ಮಾದರಿಗಳಲ್ಲಿ ಸುಮಾರು ನಾಲ್ಕು ಮಾದರಿಗಳು ಶೇಕಡ 20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣವನ್ನು ಹೊಂದಿರುವುದು ಕಂಡುಬಂದಿದೆ. ಅಲ್ಲದೆ, ಇಂತಹ ತಪಾಸಣೆಯನ್ನು ನಡೆಸಿ ಅದರ ಸಂಶೋಧನಾ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಿದ್ದಾರೆ.
ವಿಶೇಷವಾಗಿ E20ಗಿಂತ ಹೆಚ್ಚಿನ ಮಿಶ್ರಣದ ಇಂಧನದಲ್ಲಿ ಚಲಿಸಲು ವಿನ್ಯಾಸಗೊಳಿಸದ ವಾಹನಗಳ ಕಾರ್ಯಕ್ಷಮತೆಯ ಮೇಲೆ ಈ ಹೆಚ್ಚಿನ ಎಥೆನಾಲ್ ಅಂಶವು ಪರಿಣಾಮ ಬೀರಬಹುದು ಎಂದು ಸಚಿವರು ಹೇಳಿದ್ದಾರೆ. ಭಾರತದ 35 ಕೋಟಿ ವಾಹನಗಳಲ್ಲಿ ಸುಮಾರು ಶೇಕಡ 99ರಷ್ಟು ವಾಹನಗಳು ಶೇಕಡ 20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವನ್ನು ತಡೆದುಕೊಳ್ಳುವಂತೆ ನಿರ್ಮಾಣಗೊಂಡಿಲ್ಲ ಮತ್ತು ಏಪ್ರಿಲ್ 2023ರ ನಂತರ ತಯಾರಿಸಲಾದ ವಾಹನಗಳು ಸಹ E20 ಇಂಧನಕ್ಕೆ ಮಾತ್ರ ಪ್ರಮಾಣೀಕರಿಸಲ್ಪಟ್ಟಿವೆ ಎಂದಿದ್ದಾರೆ.
ಇಂಧನ ವಿತರಣಾ ಮೂಲಸೌಕರ್ಯಗಳ (ಡಿಸ್ಪೆನ್ಸಿಂಗ್ ಯೂನಿಟ್ಗಳು) ಬಗ್ಗೆಯೂ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಪೆಟ್ರೋಲ್ ಬಂಕ್ಗಳಲ್ಲಿ ಅಳವಡಿಸಲಾಗಿರುವ ಹಲವಾರು ವಿತರಣಾ ಯಂತ್ರಗಳನ್ನು ಕೇವಲ ಶೇಕಡ 15ರವರೆಗಿನ ಎಥೆನಾಲ್ ಮಿಶ್ರಣವನ್ನು ನಿರ್ವಹಿಸಲು ಮಾತ್ರ ವಿನ್ಯಾಸಗೊಳಿಸಲಾಗಿದೆ ಎಂದು ಸಚಿವ ಅರ್ಷದ್ ತಿಳಿಸಿದ್ದಾರೆ. ಇಂಧನ ವಿತರಣಾ ಉಪಕರಣಗಳ ಪ್ರಸಿದ್ಧ ತಯಾರಕ ಕಂಪನಿಯಾದ ‘ಮಿಟ್ಕೊ’ವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಅದರ ಯಂತ್ರಗಳು E15ವರೆಗಿನ ಮಿಶ್ರಣಕ್ಕೆ ಮಾತ್ರ ಪ್ರಮಾಣೀಕರಿಸಲ್ಪಟ್ಟಿವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಹಸ್ತಕ್ಷೇಪದ ನಂತರ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಎಥೆನಾಲ್ ಹೊಂದಾಣಿಕೆಯ (ಇಂಧನ ಸಾಮರ್ಥ್ಯದ) ಕುರಿತು ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ. ಅಲ್ಲದೆ, ವಿಮಾ ಪಾಲಿಸಿಗಳಿಂದ ಇಂಧನ ಸಂಬಂಧಿತ ಹಾನಿಯ ಕ್ಲೈಮ್ಗಳ ನಿಯಮಗಳನ್ನು ತೆಗೆದುಹಾಕಿರುವುದನ್ನು ಅವರು ಪ್ರಶ್ನಿಸಿದ್ದು, ಇದರಿಂದಾಗಿ ಗ್ರಾಹಕರು ದುರಸ್ತಿ ವೆಚ್ಚವನ್ನು ತಾವೇ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಕಡಿಮೆಯಾದ ಮೈಲೇಜ್ ಮತ್ತು ವಾಹನ ದುರಸ್ತಿಯ ಕಾರಣದಿಂದಾಗಿ ಗ್ರಾಹಕರು ವಾರ್ಷಿಕ ಸುಮಾರು 1.01 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಹೊರೆಯನ್ನು ಎದುರಿಸುತ್ತಿರಬಹುದು ಎಂದು ಕರ್ನಾಟಕ ಸರ್ಕಾರವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಅಂದಾಜಿಸಿದೆ. ಮೈಲೇಜ್ನಲ್ಲಿ ಶೇಕಡ 10ರಷ್ಟು ಇಳಿಕೆಯಾಗುವುದರಿಂದ ವಾರ್ಷಿಕ 62,000 ಕೋಟಿ ರೂಪಾಯಿಗಳ ಸಂಭಾವ್ಯ ನಷ್ಟ ಮತ್ತು ವಾಹನ ದುರಸ್ತಿ ವೆಚ್ಚಕ್ಕಾಗಿ ಮತ್ತೊಂದು 39,000 ಕೋಟಿ ರೂಪಾಯಿಗಳನ್ನು ಲೆಕ್ಕಹಾಕುವ ಮೂಲಕ ಸರ್ಕಾರವು ಈ ಅಂದಾಜಿಗೆ ಬಂದಿದೆ.
ಆಧುನಿಕ ಬಿಎಸ್ 6 ವಾಹನಗಳನ್ನು E20 ಇಂಧನದಲ್ಲಿ ಚಲಿಸುವಂತೆ ಮರು-ವಿನ್ಯಾಸಗೊಳಿಸಲಾಗಿದ್ದು, ತಯಾರಕರು ಇಂಜಿನ್ ಘಟಕಗಳನ್ನು ಮತ್ತು ಸಾಫ್ಟ್ವೇರ್ ಅನ್ನು ಅವುಗಳಿಗೆ ಹೊಂದಿಕೊಳ್ಳುವಂತೆ ನವೀಕರಿಸಿದ್ದಾರೆ. ಆದಾಗ್ಯೂ, ಈ ಬದಲಾವಣೆಯು ಇನ್ನೂ ಮೈಲೇಜ್ ಕೊರತೆಗೆ ಕಾರಣವಾಗಬಹುದು.
2021ರ ನೀತಿ ಆಯೋಗದ ವರದಿಯ ಪ್ರಕಾರ, E20 ಇಂಧನಕ್ಕಾಗಿಯೇ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ವಾಹನಗಳಲ್ಲಿ ಮೈಲೇಜ್ ಶೇಕಡ 1-2ರಷ್ಟು ಕಡಿಮೆಯಾಗಬಹುದು. ಆದರೆ ಹಳೆಯ ಕಾರುಗಳಲ್ಲಿ ಶೇಕಡ 6-7ರಷ್ಟು ಮತ್ತು ಹಳೆಯ ದ್ವಿಚಕ್ರ ವಾಹನಗಳಲ್ಲಿ ಶೇಕಡ 3-4ರಷ್ಟು ಮೈಲೇಜ್ ಕುಸಿತವನ್ನು ಕಾಣಬಹುದು. ಇದು ಬಿಎಸ್ BS6 ಯುಗಕ್ಕಿಂತ ಮುಂಚೆ ತಯಾರಾದ ವಾಹನಗಳ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ, ಏಕೆಂದರೆ ಇವುಗಳಲ್ಲಿ ಹಲವು ವಾಹನಗಳು ಹೆಚ್ಚಿನ ಎಥೆನಾಲ್ ಮಿಶ್ರಣಕ್ಕೆ ಹೊಂದಿಕೊಳ್ಳುವಂತೆ ವಿನ್ಯಾಸಗೊಂಡಿಲ್ಲ.
ಒಂದು ವಾಹನವು ಕಾನೂನುಬದ್ಧವಾಗಿ ಕನಿಷ್ಠ 15 ವರ್ಷಗಳ ಜೀವಿತಾವಧಿಯನ್ನು ಹೊಂದಿರಬೇಕು ಎಂದು ನಿರೀಕ್ಷಿಸಲಾಗುತ್ತದೆ. ಆದರೆ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣಕ್ಕೆ ಒಡ್ಡಿಕೊಳ್ಳುವುದರಿಂದ ವಯಸ್ಸಾಗುತ್ತಿರುವ (ಹಳೆಯ) ಇಂಜಿನ್ಗಳಿಗೆ ಹೆಚ್ಚುವರಿ ಸವಾಲುಗಳು ಎದುರಾಗಬಹುದು. ಸ್ವಚ್ಛಗೊಳಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸುವ ಎಥೆನಾಲ್, ಹಳೆಯ ಇಂಜಿನ್ಗಳ ಒಳಗಿರುವ ತ್ಯಾಜ್ಯದ ಪದರಗಳನ್ನು ಸಡಿಲಗೊಳಿಸಬಹುದು; ಇದು ಇಂಧನ ಫಿಲ್ಟರ್ಗಳು ಮತ್ತು ಇಂಧನ ವ್ಯವಸ್ಥೆಯ ಇತರ ಘಟಕಗಳನ್ನು ನಿರ್ಬಂಧಿಸಬಹುದಾದ (ಬ್ಲಾಕ್ ಮಾಡಬಹುದಾದ) ಕೆಸರನ್ನು ಹೊರಹಾಕುವ ಸಾಧ್ಯತೆಯನ್ನು ಹೊಂದಿರುತ್ತದೆ.
ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವ ಮೂಲಕ ವಿದೇಶಿ ವಿನಿಮಯವನ್ನು ಉಳಿಸಲು ಈ ನೀತಿಯು ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರವು ಪ್ರತಿಪಾದಿಸುತ್ತಿದ್ದರೂ, ವಾಹನ ಸವಾರರಿಗೆ ಇದರಿಂದ ಯಾವುದೇ ರೀತಿಯ ಅನುಕೂಲಗಳು ಸಿಕ್ಕಿಲ್ಲ ಎಂದು ವಾದಿಸಿದ ಅರ್ಷದ್ ಅವರು, ಗ್ರಾಹಕರಿಗೆ ಎಥೆನಾಲ್ ಮಿಶ್ರಣದಿಂದ ಆಗುತ್ತಿರುವ ಪ್ರಯೋಜನಗಳೇನು ಎಂದು ಪ್ರಶ್ನಿಸಿದ್ದಾರೆ.
2025-26ರ ಹಣಕಾಸು ವರ್ಷದಲ್ಲಿ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಕಂಪನಿಗಳ ಒಟ್ಟು ಲಾಭವು 77,821ಕೋಟಿ ರೂಪಾಯಿಗಳಷ್ಟಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ. ಅಲ್ಲದೆ, ನಿಯಮ ಮೀರಿ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡುವುದರಿಂದ ಉಂಟಾಗುವ ನಷ್ಟದ ವೆಚ್ಚವನ್ನು ಗ್ರಾಹಕರು ಏಕೆ ಭರಿಸಬೇಕು ಎಂದು ಕೇಳಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಗ್ರಾಹಕರಿಗೆ ಶೇಕಡ 20ಕ್ಕಿಂತ ಹೆಚ್ಚು ಎಥೆನಾಲ್ ಅಂಶವಿರುವ ಪೆಟ್ರೋಲ್ ಹೇಗೆ ಪೂರೈಕೆಯಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.
E20 ಇಂಧನದ ಪರಿಚಯದ ನಂತರ ಪೆಟ್ರೋಲ್ ಬೆಲೆಗಳು ಅಂತಿಮವಾಗಿ ಪ್ರತಿ ಲೀಟರ್ಗೆ 55 ರೂಪಾಯಿಗಳಿಗೆ ಇಳಿಯಲಿವೆ ಎಂಬ ಗಡ್ಕರಿ ಅವರ 2018ರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಆ ಭರವಸೆಯು ಈಡೇರಿದೆಯೇ ಎಂದು ಪ್ರಶ್ನಿಸಿದ್ದಾರೆ.
ನಾವು ಇದನ್ನು ಸದ್ಭಾವನೆಯಿಂದ ಮಾಡಿದ್ದೇವೆ. ಆದರೆ ಈ ಅತಿಯಾದ ಮಿಶ್ರಣಕ್ಕೆ (ಓವರ್-ಬ್ಲೆಂಡಿಂಗ್) ಯಾರು ಜವಾಬ್ದಾರರು ಮತ್ತು ಇದರಲ್ಲಿ ನಿತಿನ್ ಗಡ್ಕರಿ ಅವರ ಹಿತಾಸಕ್ತಿ ಏನಿದೆ ಎಂಬುದನ್ನು ಕೇಂದ್ರ ಸರ್ಕಾರ ಮತ್ತು ಸಚಿವ ಹರ್ದೀಪ್ ಪುರಿ ಅವರು ಸ್ಪಷ್ಟಪಡಿಸಬೇಕು ಸಚಿವ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.
ಭಾರತದ ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಅಡಿಯಲ್ಲಿ, ಇಂಧನವನ್ನು ಪೆಟ್ರೋಲ್ ಬಂಕ್ಗಳಿಗೆ ಸಾಗಿಸುವ ಮೊದಲು, ತೈಲ ಮಾರುಕಟ್ಟೆ ಕಂಪನಿಗಳು ನಿಗದಿತ ಸರಬರಾಜು ಮತ್ತು ಟರ್ಮಿನಲ್ ಸೌಲಭ್ಯಗಳಲ್ಲಿ (ಸರಬರಾಜು ಕೇಂದ್ರಗಳಲ್ಲಿ) ಪೆಟ್ರೋಲ್ನೊಂದಿಗೆ ಎಥೆನಾಲ್ ಅನ್ನು ಮಿಶ್ರಣ ಮಾಡುತ್ತವೆ.
ಶೇಕಡ 20ಕ್ಕಿಂತ ಹೆಚ್ಚು ಎಥೆನಾಲ್ ಅಂಶವಿರುವ ಪೆಟ್ರೋಲ್ ಪೂರೈಸುತ್ತಿರುವುದು ಕಂಡುಬಂದಿರುವ ತೈಲ ಮಾರುಕಟ್ಟೆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅತಿಯಾದ ಮಿಶ್ರಣದಿಂದ ವಾಹನಗಳು ಹಾನಿಗೊಳಗಾಗಿವೆ ಎಂದು ಆರೋಪಿಸುತ್ತಿರುವ ಗ್ರಾಹಕರಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಮತ್ತು ಇಂಧನ ಕೇಂದ್ರಗಳಲ್ಲಿ ಎಥೆನಾಲ್ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಅರ್ಷದ್ ಒತ್ತಾಯಿಸಿದ್ದಾರೆ. ಇದರೊಂದಿಗೆ, ಗ್ರಾಹಕರಿಗೆ ವಿಭಿನ್ನ ಇಂಧನ ಮಿಶ್ರಣಗಳ ನಡುವೆ ತಮಗೆ ಬೇಕಾದುದನ್ನು ಆರಿಸಿಕೊಳ್ಳುವ ಮುಕ್ತ ಅವಕಾಶವನ್ನು ನೀಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಭಾರತದ ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಸಂಶೋಧನಾ ವರದಿಯು ಹೊರಬಿದ್ದಿದೆ. ಕಚ್ಚಾ ತೈಲ ಆಮದು, ಇಂಧನ ಹೊರಸೂಸುವಿಕೆ ಮತ್ತು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರವು E20 ಪೆಟ್ರೋಲ್ ಪರಿಚಯಿಸುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ಪ್ರಸ್ತುತ ಇರುವ ಶೇಕಡ 20ಕ್ಕಿಂತ ಹೆಚ್ಚಿಸುವ ಯಾವುದೇ ತಕ್ಷಣದ ಯೋಜನೆಗಳನ್ನು ಕೇಂದ್ರ ಸರ್ಕಾರವು ಈ ಹಿಂದೆ ತಳ್ಳಿಹಾಕಿತ್ತು. ಅಕ್ಟೋಬರ್ನಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು E20 ಇಂಧನದ ಸುತ್ತಲಿನ ಕಳವಳಗಳನ್ನು ‘ಕಟ್ಟುಕಥೆ’ ಎಂದಿದ್ದರು. ಅಲ್ಲದೆ ಶೇಕಡ 20ರಷ್ಟು ಮಿಶ್ರಣವೇ ಸರ್ಕಾರದ ಗುರಿಯಾಗಿದೆ ಮತ್ತು ಈ ಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಯಾವುದೇ ಯೋಜನೆಗಳಿಲ್ಲ ಎಂದು ಪುನರುಚ್ಚರಿಸಿದ್ದರು.
Courtesy : thenewsminute.com


