Homeಕರ್ನಾಟಕ10 ಕೆ.ಜಿ. ಅಕ್ಕಿ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್: ಬಿಜೆಪಿಯ ನಿದ್ದೆಗೆಡಿಸಿದೆಯೇ ‘ಅನ್ನಭಾಗ್ಯ?’

10 ಕೆ.ಜಿ. ಅಕ್ಕಿ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್: ಬಿಜೆಪಿಯ ನಿದ್ದೆಗೆಡಿಸಿದೆಯೇ ‘ಅನ್ನಭಾಗ್ಯ?’

“ಅಕ್ಕಿಕೊಟ್ಟು ಜನರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ” ಎಂದೆಲ್ಲ ಟೀಕೆ ಮಾಡಿದವರೂ ‘ಅನ್ನಭಾಗ್ಯ’ದ ಪ್ರಭಾವ ಕಂಡು ಮಾತಿನ ವರಸೆ ಬದಲಿಸಿಕೊಂಡಿದ್ದುಂಟು.

- Advertisement -
- Advertisement -

ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಕಾಂಗ್ರೆಸ್‌ ಈ ಭಾರಿ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಘೋಷಿಸಿದ್ದು, ‘ಅನ್ನಭಾಗ್ಯ’ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3,000 ರೂಪಾಯಿ ನಿರುದ್ಯೋಗ ಭತ್ಯೆ (ಯುವನಿಧಿ), ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಓರ್ವ ಮಹಿಳೆಗೆ ಮಾಸಿಕ 2000 ರೂ. (ಗೃಹಲಕ್ಷ್ಮಿ) ಮತ್ತು ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ (ಅನ್ನಭಾಗ್ಯ ಮುಂದುವರಿಕೆ) ಎಂಬ ಘೋಷಣೆಗಳನ್ನು ಕಾಂಗ್ರೆಸ್ ಮಾಡಿದೆ. ಉಳಿದೆಲ್ಲ ಗ್ಯಾರಂಟಿಗಳಿಗಿಂತ ‘ಅನ್ನಭಾಗ್ಯ’ ಯೋಜನೆಯ ಪ್ರಸ್ತಾಪ ಬಿಜೆಪಿಯ ನಿದ್ದೆಗೆಡಿಸಿರುವಂತೆ ಕಾಣುತ್ತಿದೆ. ‘ಅನ್ನಭಾಗ್ಯ’ದ ಅಕ್ಕಿಯನ್ನು ಮೋದಿ ಸರ್ಕಾರ ಕೊಡುತ್ತಿದೆ ಎಂದು ಪ್ರತಿಪಾದಿಸಲು ಬಿಜೆಪಿ ಮುಂದಾಗಿದೆ.

ಮೇ 13, 2013ರಂದು ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯನವರು, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಭವರಸೆಯಂತೆ ಅನ್ನಭಾಗ್ಯ ಯೋಜನೆಯನ್ನು ಅಂದೇ ಘೋಷಣೆ ಮಾಡಿದರು. ಹಸಿವು ಮುಕ್ತ ರಾಜ್ಯ ಮಾಡುವ ಕನಸಿನ ಕುರಿತು ಸಿದ್ದರಾಮಯ್ಯನವರು ಅನೇಕ ಸಲ ಹೇಳಿಕೊಂಡಿದ್ದಾರೆ.

ಹಸಿರು ಕಾಂತ್ರಿಯ ಹರಿಕಾರರೆಂದೇ ಪ್ರಖ್ಯಾತರಾಗಿರುವ ಬಾಬು ಜಗಜೀವನರಾಮ್‌ ಅವರು ಕೃಷಿ ಮತ್ತು ಆಹಾರ ಸಚಿವರಾಗಿದ್ದ ಸಮಯದಲ್ಲಿ, “ನನ್ನ ಆಡಳಿತದಲ್ಲಿ ಅನ್ನಕ್ಕಾಗಿ ಕಳ್ಳತನ ನಡೆಸಿದರೆ ಶಿಕ್ಷೆ ಇಲ್ಲ. ಯಾಕೆಂದರೆ ಅನ್ನ ಕೊಡಲು ಸರ್ಕಾರ ವಿಫಲವಾಗಿದೆ ಎಂದರೆ ಅನ್ನಕ್ಕಾಗಿ ಕಳ್ಳತನ ನಡೆಸಿದವರಿಗೆ ಶಿಕ್ಷೆ ನೀಡುವ ಅಧಿಕಾರ ಸರ್ಕಾರಕ್ಕೆ ಇರುವುದಿಲ್ಲ” ಎಂದಿದ್ದರು. ಹಸಿವು ಮನುಷ್ಯನ ಮೂಲಭೂತ ಸಮಸ್ಯೆ. ಹೀಗಾಗಿ ಸಿದ್ದರಾಮಯ್ಯನವರ ಜಾರಿಗೆ ತಂದ ‘ಅನ್ನಭಾಗ್ಯ’ ಭಾರೀ ಜನಪ್ರಿಯತೆಯನ್ನು ಗಳಿಸಿತು.

ಜುಲೈ 2013 ರಿಂದ ‘ಅನ್ನಭಾಗ್ಯ’ ಯೋಜನೆ ಚಾಲ್ತಿಗೆ ಬಂದು. ಈ ಯೋಜನೆಯ ಜಾರಿಯಿಂದಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪ್ರತಿ ಬಿಪಿಎಲ್ ಕುಟುಂಬಗಳಿಗೆ ವಿತರಿಸಲಾಗುವ ಪಡಿತರ ಪ್ರಮಾಣವನ್ನು ಹೆಚ್ಚಿಸಲಾಯಿತು. ಈ ಮೊದಲು ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ ಕನಿಷ್ಟ 4 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಗೋಧಿಯಂತೆ ಒಂದು ಕುಟುಂಬಕ್ಕೆ ಗರಿಷ್ಟ 20 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿಯನ್ನು ವಿತರಿಸಲಾಗುತಿತ್ತು. ಹೊಸ ಯೋಜನೆಯಡಿ ಅರ್ಹ ಬಿಪಿಎಲ್ ಏಕ ಸದಸ್ಯ ಕುಟುಂಬಗಳಿಗೆ 10 ಕೆ.ಜಿ, ದ್ವಿ ಸದಸ್ಯ ಕುಟುಂಬಗಳಿಗೆ 20 ಕೆ.ಜಿ, 3 ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 30 ಕೆ.ಜಿ ಆಹಾರಧಾನ್ಯವನ್ನು ಪ್ರತಿ ಕೆ.ಜಿ.ಗೆ ರೂ. 1 ದರದಲ್ಲಿ ಹಂಚಿಕೆ ಮಾಡಲಾಯಿತು. 7 ಮತ್ತು ಹೆಚ್ಚಿನ ಸದಸ್ಯರಿರುವ ಕುಟುಂಬಗಳಿಗೆ ಅನ್ವಯವಾಗುವಂತೆ ಪ್ರತಿ ಹೆಚ್ಚುವರಿ ಸದಸ್ಯರಿಗೆ 05 ಕೆ.ಜಿ ಆಹಾರಧಾನ್ಯವನ್ನು ನವೆಂಬರ್-1, 2013 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಯಿತು.

ಒಂದು ಮಾಹಿತಿಯ ಪ್ರಕಾರ, “ಬಡತನರೇಖೆಗಿಂತ ಕೆಳಗಿರುವ 1.08 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭ ಪಡೆದಿವೆ. ಈ ಯೋಜನೆಯನ್ನು ಎಪಿಎಲ್ ಪಡಿತರ ಚೀಟಿದಾರರಿಗೂ ವಿಸ್ತರಿಸಿದ್ದರಿಂದ ಒಟ್ಟು 3.85 ಮಂದಿ ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ”.

ಈಗ ಅನ್ನಭಾಗ್ಯ ಮತ್ತೆ ಸುದ್ದಿಯಲ್ಲಿದೆ. ಆಡಳಿತರೂಢ ಬಿಜೆಪಿ ಸರ್ಕಾರ ಪಡಿತರ ಅಕ್ಕಿಯನ್ನು ಕಡಿತ ಮಾಡಿದೆ ಎಂಬ ಆರೋಪಗಳು ಬಂದಿವೆ. ಹತ್ತು ಕೆ.ಜಿ. ಅಕ್ಕಿಯ ಬದಲಿಗೆ 5 ಕೆ.ಜಿ.ಯನ್ನು ನೀಡುತ್ತಿದ್ದಾರೆಂದು ಬಡ ಜನರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಗ್ಯಾರಂಟಿಯಲ್ಲಿ ಪ್ರತಿ ವ್ಯಕ್ತಿಗೆ 10 ಅಕ್ಕಿ ನೀಡುವುದಾಗಿ ಘೋಷಿಸಿರುವುದು ಮಹತ್ವ ಪಡೆದಿದೆ.

ಆರೋಗ್ಯ ಸಚಿವರಾಗಿದ್ದ ದಿವಂಗತ ಉಮೇಶ್ ಕತ್ತಿಯವರು ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವುದಾಗಿ ಹೇಳಿದ್ದರು. ಅಂದು ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯನವರು, “ರೂ.2,65,000 ಕೋಟಿ ಗಾತ್ರದ ಬಜೆಟ್‌ನಲ್ಲಿ 2022-23ರ ಸಾಲಿನ ಅನ್ನಭಾಗ್ಯ ಯೋಜನೆಗೆ ಮೀಸಲಿಟ್ಟಿರುವುದು ರೂ.2,800 ಕೋಟಿ ಮಾತ್ರ. ಇಷ್ಟು ಹಣವನ್ನು ಉಳಿತಾಯ ಮಾಡಲು ನೆಪಗಳನ್ನು ಹುಡುಕುತ್ತಿರುವ  ರಾಜ್ಯ ಬಿಜೆಪಿ ಸರ್ಕಾರ ಮತ್ತು ಸಚಿವರ ಮನಸ್ಸಿನಲ್ಲಿ ಬಡವರ ಬಗ್ಗೆ ಎಷ್ಟೊಂದು ದ್ವೇಷ-ಅಸಹನೆ ಇರಬಹುದು?” ಎಂದು ಪ್ರಶ್ನಿಸಿದ್ದರು.

ಆದರೆ ಅನ್ನಭಾಗ್ಯದ ಜನಪ್ರಿಯತೆ ಮಾತ್ರ ಕುಂದಿಲ್ಲ. “ಅಕ್ಕಿಕೊಟ್ಟು ಜನರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ” ಎಂದೆಲ್ಲ ಟೀಕೆ ಮಾಡಿದವರೂ ಆನಂತರದಲ್ಲಿ ‘ಅನ್ನಭಾಗ್ಯ’ದ ಪ್ರಭಾವವನ್ನು ಕಂಡು ತಮ್ಮ ಮಾತಿನ ವರಸೆ ಬದಲಿಸಿಕೊಂಡಿದ್ದುಂಟು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಇತ್ತೀಚಿಗೆ ಮಾಡಿರುವ ಟ್ವೀಟ್‌ ಈ ಹಿನ್ನೆಲೆಯಲ್ಲಿ ಗಮನಿಸಬಹುದು.

“ಪ್ರಧಾನಿ ನರೇಂದ್ರಮೋದಿಯವರ ಸರ್ಕಾರ ನೀಡಿದ ಅಕ್ಕಿಯನ್ನು ಕಾಂಗ್ರೆಸ್ ತನ್ನ ಹೆಸರನ್ನು ಹಾಕಿ ನಾನು ಅಕ್ಕಿ ಕೊಟ್ಟೆ ಅಂತ ಎಲ್ಲಾ ಕಡೆ ಪ್ರಚಾರ ಮಾಡಿ ತಿರುಗಾಡಿತು. ಆದರೆ ಕರುನಾಡ ಜನತೆ ಅನ್ನ ಕೊಟ್ಟವರನ್ನು ಎಂದಿಗೂ ಮರೆಯುವುದಿಲ್ಲ. ಅನ್ನ ಕೊಟ್ಟ ಡಬಲ್ ಎಂಜಿನ್ ಬಿಜೆಪಿ ಸರ್ಕಾರವನ್ನು ಮತ್ತೆ ಗೆಲ್ಲಿಸಲು ಜನರು ಕಟಿಬ‌ದ್ಧರಾಗಿದ್ದಾರೆ” ಎಂಬ ಟಿಪ್ಪಣಿಯೊಂದಿಗೆ ಬಿಜೆಪಿಯ ಜಾಹೀರಾತನ್ನು ಟ್ವಿಟರ್‌ನಲ್ಲಿ ಸಿ.ಟಿ.ರವಿ ಹಂಚಿಕೊಂಡಿದ್ದಾರೆ. ಇವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅನೇಕ ಜನರು ಕಟುವಾದ ಪದಗಳಿಂದ ಟೀಕಿಸಿದ್ದಾರೆ.

ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಅವರು ಸಿ.ಟಿ.ರವಿ ಅವರಿಗೆ ವಿಡಿಯೊ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ದಿನ ಬೆಳಗಾದರೆ ಇನ್ನೊಬ್ಬರ ಬಗ್ಗೆ ಕೀಳಾಗಿ ಮತ್ತು ಪ್ರಚೋದನಾತ್ಮಕವಾಗಿ ಮಾತನಾಡುವ ಪ್ರವೃತ್ತಿ ಇರುವ ಸಿ.ಟಿ.ರವಿಯವರು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಆದರೆ 2013ರಲ್ಲಿ ಮನಮೋಹನ್‌ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನ್ಯಾಷನಲ್ ಫುಡ್‌ ಸೆಕ್ಯುರಿಟಿ ಆಕ್ಟ್ ಜಾರಿಗೆ ತಂದಿತು. ಸೋನಿಯಾ ಗಾಂಧಿಯವರು ಹಠ ಹಿಡಿದು ಈ ಕಾಯ್ದೆ ಜಾರಿಗೊಳಿಸಿದ್ದರು. ಇದರ ಅಡಿಯಲ್ಲಿ ಅಕ್ಕಿ ಹಂಚಿಕೆಯಾಗುತ್ತಿದ್ದು, ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜಾರಿಗೊಳಿಸಿತು. ಅನ್ನಭಾಗ್ಯದ ಮೂಲಕ ಜನರನ್ನು ಆಲಸಿಗಳನ್ನಾಗಿ ಮಾಡುತ್ತಿದ್ದೀರಿ ಎಂದು ಬಿಜೆಪಿಯವರು ಹೇಳುತ್ತಿದ್ದರು. ಈಗ ನಾವೇ ಅನ್ನಭಾಗ್ಯ ತಂದಿದ್ದು ಎನ್ನುತ್ತಿದ್ದಾರೆ. ಸಮಯ ಸಂದರ್ಭಕ್ಕೆ ತಕ್ಕಂತೆ ಸುಳ್ಳುಗಳನ್ನು ಹೇಳುತ್ತಿದ್ದಾರೆ” ಎಂದು ಕುಟುಕಿದ್ದಾರೆ.

ಒಟ್ಟಾರೆಯಾಗಿ ಅನ್ನಭಾಗ್ಯ ಯೋಜನೆ ಕಾಂಗ್ರೆಸ್ ಜಾರಿಗೊಳಿಸಿದ ಜನಪ್ರಿಯ ಕಾರ್ಯಕ್ರಮ ಎಂಬುದನ್ನು ನಾಡಿನ ಪ್ರಜ್ಞಾವಂತರೆಲ್ಲರೂ ಒಪ್ಪುತ್ತಾರೆ. ಹೀಗಾಗಿ ಹತ್ತು ಕೆ.ಜಿ. ಅಕ್ಕಿ ಗ್ಯಾರಂಟಿಯು ಮತ್ತೆ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುತ್ತದೆಯೇ ಎಂಬ ಕುತೂಹಲ ಹೆಚ್ಚಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...