Homeಮುಖಪುಟರಾಹುಲ್ ಗಾಂಧಿಯವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ಪ್ರಕರಣ; ಹತ್ತು ಗಂಭೀರ ಪ್ರಶ್ನೆಗಳು

ರಾಹುಲ್ ಗಾಂಧಿಯವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ಪ್ರಕರಣ; ಹತ್ತು ಗಂಭೀರ ಪ್ರಶ್ನೆಗಳು

- Advertisement -
- Advertisement -

’ನೀವು ಸುಖಾಸುಮ್ಮನೇ ವಿಷಯಗಳನ್ನು ದೊಡ್ಡದಾಗಿ ಮಾಡ್ತೀರಿ, ವಿಷಯ ತುಂಬಾ ಸರಳವಾಗಿದೆ. ರಾಹುಲ್ ಗಾಂಧಿ ಯಾರಿಗೋ ಅಪಮಾನ ಮಾಡಿದರು. ಅವರ ಮೇಲೆ ಕೇಸ್ ಹಾಕಲಾಯಿತು. ನ್ಯಾಯಾಧೀಶರು ರಾಹುಲ್ ಗಾಂಧಿ ತಪ್ಪಿತಸ್ಥ ಎಂದು ಘೋಷಿಸಿದರು ಹಾಗೂ 2 ವರ್ಷಗಳ ಶಿಕ್ಷೆ ವಿಧಿಸಿದರು. ಇಂತಹ ಶಿಕ್ಷೆ ಸಿಕ್ಕಾಗ ಸಂಸತ್ತಿನ ಸದಸ್ಯತ್ವ ರದ್ದಾಗುತ್ತದೆ, ಹಾಗಾಗಿ ಅನರ್ಹಗೊಳಿಸಲಾಯಿತು. ಇದರಲ್ಲಿ ಮೋದಿ ಸರಕಾರವನ್ನು ದೂಷಿಸುವಂತಹ ಯಾವ ವಿಷಯವಿದೆ? ಅದಾನಿಗೂ ಇದಕ್ಕೂ ಏನು ಸಂಬಂಧ? ನೀವು ಕಾರಣವಿಲ್ಲದೇ ಎಲ್ಲಾ ವಿಷಯಗಳಲ್ಲೂ ಪಿತೂರಿ ಹುಡುಕುತ್ತೀರಿ.’

ಪಾರ್ಕಿನಲ್ಲಿ ನಡೆಯುತ್ತಿದ್ದಾಗ ನನಗೆ ಒಬ್ಬ ವಯಸ್ಕರು ಈ ಪ್ರಶ್ನೆಗಳನ್ನು ಹಾಕಿದರು. ಅವರು ಒಳ್ಳೆಯ ವ್ಯಕ್ತಿ ಅನಿಸಿದರು ಮತ್ತು ಯಾವುದೇ ಪಕ್ಷದ ಕಾರ್ಯಕರ್ತ ಅಥವಾ ಸಮರ್ಥಕರಾಗಿರಲಿಲ್ಲ. ಪ್ರಶ್ನೆಗಳೂ ಸರಳವಾಗಿದ್ದವು, ಸೂಕ್ತವೂ ಆಗಿದ್ದವು. ಕಾರಣವಿಲ್ಲದೇ ಪಿತೂರಿ ಹುಡುಕಬಾರದು ಎಂಬ ನಿಮ್ಮ ಅಭಿಪ್ರಾಯ ಒಪ್ಪಿಕೊಳ್ಳುತ್ತೇನೆ ಎಂದು ನಾನು ಹೇಳಿದೆ. ಪ್ರತಿಯೊಂದು ಸಣ್ಣಪುಟ್ಟ ವಿಷಯಗಳಲ್ಲೂ ಆಳವಾದ ಪಿತೂರಿಯ ಆರೋಪ ಮಾಡುವುದು ರಾಜಕೀಯದ ರೋಗವಾಗಿದೆ. ನಾವಿದನ್ನು ಮಾಡಬಾರದು. ಆದರೆ ರಾಹುಲ್ ಗಾಂಧಿಯವರನ್ನು ಸಂಸತ್ತಿನಿಂದ ಅನರ್ಹಗೊಳಿಸುವ ವಿಷಯದಲ್ಲಿ ಒಂದು ಆಳವಾದ ತಂತ್ರದ ಕಡೆಗೆ ಬೊಟ್ಟು ತೋರಿಸುವ ಹತ್ತು ವಿಚಿತ್ರ ವಿಷಯಗಳಿವೆ.

ಮೊದಲ ವಿಚಿತ್ರ, ರಾಹುಲ್ ಗಾಂಧಿ ಈ ಭಾಷಣ ಮಾಡಿದ್ದು ಕರ್ನಾಟಕದ ಕೋಲಾರದಲ್ಲಿ ಆದರೆ ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿದ್ದು ಗುಜರಾತಿನ ಸೂರತ್ ನಗರದಲ್ಲಿ. ಹೌದು, ಪ್ರಕರಣ ಎಲ್ಲಿ ದಾಖಲಾಗಬೇಕು ಎಂಬುದು ಪ್ರಕರಣ ದಾಖಲಿಸುವವನ ಇಚ್ಛೆ ಎಂದು ನೀವು ಹೇಳಬಹುದು. ಆದರೆ ನೆನಪಿಡಿ, ಪ್ರಕರಣ ದಾಖಲಿಸಿದವರು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಅವರು ಬಿಜೆಪಿಯ ಶಾಸಕ ಪೂರ್ಣೇಶ ಮೋದಿ. ಇದರ ಹಿಂದೆ ಏನೋ ಅಡಗಿದೆ ಎಂದು ನಿಮಗೆ ಅನಿಸುತ್ತಿಲ್ಲವಾ?

ಎರಡನೆಯ ವಿಚಿತ್ರವೇನೆಂದರೆ, ಪ್ರಕರಣ ಶುರುವಾದ ನಂತರ ಆಗಿನ ನ್ಯಾಯಾಧೀಶರಾಗಿದ್ದ ಕಪಾಡಿಯಾ, ಎಲ್ಲಾ ವಿಚಾರಣೆಗಳ ಸಂದರ್ಭಗಳಲ್ಲಿ ರಾಹುಲ್ ಗಾಂಧಿ ಹಾಜರಿರಬೇಕು ಎಂಬ ಆದೇಶ ನೀಡಲು ನಿರಾಕರಿಸಿದಾಗ, ದೂರು ದಾಖಲಿಸಿದವರೇ ಹೈಕೋರ್ಟಿಗೆ ಹೋಗಿ, ತಮ್ಮ ಪ್ರಕರಣ ನಿಲ್ಲಿಸಿದರು; ಸಾಮಾನ್ಯವಾಗಿ ಆರೋಪಿ ತನ್ನ ವಿರುದ್ಧದ ಪ್ರಕರಣ ನಿಲ್ಲಿಸುವ ಪ್ರಯತ್ನ ಮಾಡುತ್ತಾಳೆ/ನೆ, ದೂರು ದಾಖಲಿಸಿದ ವ್ಯಕ್ತಿ ಈ ರೀತಿ ಮಾಡುವುದಿಲ್ಲ. ಇದರ ಹಿಂದೆ ನ್ಯಾಯಾಧೀಶರ ವರ್ಗಾವಣೆಗೆ ಕಾಯುವ ಇರಾದೆ ಇದ್ದಿರಬಹುದಲ್ಲವೇ?

ಮೂರನೆಯ ವಿಚಿತ್ರ, ಅದಾನಿ ವಿಷಯದಲ್ಲಿ ರಾಹುಲ್ ಗಾಂಧಿಯ ಭಾಷಣ ಮಾಡಿದ ಒಂದು ವಾರದೊಳಗೇ ಅಷ್ಟು ತರಾತುರಿಯಲ್ಲಿ ಬಿಜೆಪಿಯ ಶಾಸಕರು ವರ್ಷಗಳಿಂದ ತಣ್ಣಗೇ ಕುಳಿತಿದ್ದ ಪ್ರಕರಣವನ್ನು ಮತ್ತೊಮ್ಮೆ ಶುರು ಮಾಡುವ ಪ್ರಕ್ರಿಯೆ ಆರಂಭಿಸಿದರು. ಇದರ ಹಿಂದೆ ಯಾವುದೇ ರಾಜಕೀಯ ನಡೆ ಕಾಣುತ್ತಿಲ್ಲವೇ?

ನಾಲ್ಕನೆಯ ವಿಚಿತ್ರ: ಇದು ಎಂಥ ಕಾಕತಾಳೀಯ ನೋಡಿ, ದೂರುದಾರ ತನ್ನ ಪ್ರಕರಣ ನಿಲ್ಲಿಸಲು ಬಯಸಿದಾಗ ಹೈಕೋರ್ಟ್ ನಿಲ್ಲಿಸುತ್ತೆ, ಯಾವಾಗ ಮತ್ತೆ ಶುರು ಮಾಡಲು ಬಯಸುತ್ತಾರೋ ಆಗ ಹೈಕೋರ್ಟ್ ಮರು ಪ್ರಾರಂಭಿಸುತ್ತದೆ. ಸಾಮಾನ್ಯ ಪ್ರಕರಣಗಳಲ್ಲಿಯೂ ಹೈಕೋರ್ಟ್ ಇಷ್ಟು ಉದಾರವಾಗಿರುತ್ತದೆಯೇ?

ಪೂರ್ಣೇಶ್ ಮೋದಿ

ಐದನೆಯ ವಿಚಿತ್ರ, ನ್ಯಾಯಾಧೀಶ ಹಸ್‌ಮುಖ್‌ಭಾಯಿ ವರ್ಮಗೆ ಸಂಬಂಧಿಸಿದೆ. ಮತ್ತೆ ಪ್ರಕರಣ ಶುರುವಾದಾಗ ನ್ಯಾಯಾಧೀಶರು ಬದಲಾಗುತ್ತಾರೆ ಹಾಗೂ ಕಳೆದ ಆರು ತಿಂಗಳಲ್ಲಿ ವರ್ಮಾಸಾಹೇಬರಿಗೆ ಒಂದಲ್ಲ ಎರಡು ಬಡ್ತಿ ಸಿಕ್ಕಿವೆ. ನಿಮಗೆ ಇದು ಅನುಮಾನಾಸ್ಪದವಾಗಿ ಕಾಣಿಸುತ್ತಿಲ್ಲವೇ?

ಈಗ ಆರನೆಯ ವಿಚಿತ್ರ ನೋಡಿ. ಪ್ರಕರಣ ಎರಡನೆಯ ಸಲ ಶುರುವಾದ ಒಂದು ತಿಂಗಳೊಳಗೆ ವಿಚಾರಣೆ ಪೂರ್ಣಗೊಳ್ಳುತ್ತದೆ ಹಾಗೂ ತೀರ್ಪನ್ನೂ ಪ್ರಕಟಿಸಲಾಗುತ್ತದೆ. ಈ ದೇಶದ ನ್ಯಾಯಾಲಯಗಳು ಇಷ್ಟು ತ್ವರಿತವಾಗಿ ಬೇರೆ ಯಾವುದೇ ಪ್ರಕರಣಗಳಲ್ಲಿ ವಿಚಾರಣೆ ನಡೆಸುತ್ತವೆಯೇ? ಅಥವಾ ಯಾವುದೋ ಒಂದು ಡೆಡ್‌ಲೈನ್‌ಗಿಂತ ಮುನ್ನ ತೀರ್ಪು ಪ್ರಕಟಿಸುವ ತರಾತರಿಯಲ್ಲಿದ್ದರೆ?

ಆಯ್ತು, ತೀರ್ಪು ಬೇಗನೇ ಬಂತು ಆದರೆ ಬಂದ ತೀರ್ಪಿಗೆ ಸಂಬಂಧಿಸಿದ ಏಳನೆಯ ವಿಚಿತ್ರ ನೋಡಿ. ರಾಹುಲ್ ಗಾಂಧಿ ಕೆಲವು ಕಳ್ಳರನ್ನು ಹೆಸರಿಸಿ, ಏನು ಎಲ್ಲಾ ಕಳ್ಳರ ಉಪನಾಮ ಮೋದಿ ಏಕೆ ಎಂದು ಕೇಳಿದ್ದರು. ಆದರೆ ಯಾರ ಹೆಸರಲ್ಲಿ ಮೋದಿ ಅಂತಿದೆಯೋ, ಅವರು ಕಳ್ಳರಾಗಿರುವುದು ಏಕೆ ಎಂದು ಹೇಳಿದ್ದಿಲ್ಲ. ಹಾಗೂ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದ್ದೇನೆಂದರೆ, ಯಾವುದೇ ವರ್ಗ ಅಥವಾ ಸಮುದಾಯದ ಅಪಮಾನ ಆಗಿದೆ ಎಂದ ಮಾತ್ರಕ್ಕೆ ನೀವು ನಿಮ್ಮ ಮಾನನಷ್ಟ ಆಗಿದೆ ಎಂದು ಪ್ರಕರಣ ದಾಖಲಿಸುವಂತಿಲ್ಲ ಎಂದು; ಅಂದರೆ, ಹೇಳಿಕೆಯೊಂದು ನೇರಾನೇರವಾಗಿ ನಿಮ್ಮ ಕಡೆಗೆ ಸೂಚಿಸುತ್ತಿಲ್ಲ ಎಂದರೆ ಪ್ರಕರಣ ದಾಖಲಿಸುವಂತಿಲ್ಲ. ರಾಹುಲ್ ಗಾಂಧಿಯವರು ಪೂರ್ಣೇಶ್ ಮೋದಿಯ ಹೆಸರನ್ನೂ ಹೇಳಿಲ್ಲ ಹಾಗೂ ಅವರ ಕಡೆ ಬೊಟ್ಟು ಮಾಡಿ ತೋರಿಸಲೂ ಇಲ್ಲ. ಇಂತಹದ್ದರಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಕಡೆಗಣಿಸುತ್ತ ಅವರನ್ನು ತಪ್ಪಿತಸ್ಥ ಎಂದು ಹೇಗೆ ತೀರ್ಮಾನಿಸಲಾಗುತ್ತದೆ?

ಇದನ್ನೂ ಓದಿ: ‘ಗಾಂಧಿ ತತ್ವಗಳಿಗೆ ಎಸಗಿದ ದೊಡ್ಡ ದ್ರೋಹ’: ರಾಹುಲ್ ಅಮಾನತ್ತಿಗೆ ಅಮೆರಿಕ ಸಂಸದರಿಂದ ಖಂಡನೆ

ಎಂಟನೆಯ ವಿಚಿತ್ರದ ಕಾಕತಾಳೀಯ ನೋಡಿ; ಈ ಪ್ರಕರಣದ ಶಿಕ್ಷೆಯ ಅವಧಿಗೆ ಸಂಬಂಧಿಸಿದ್ದು. ಮಾನನಷ್ಟ ಮೊಕದ್ದಮೆಯಲ್ಲಿ ಯಾರೊಬ್ಬ ದೋಷಿಗೂ 2 ವರ್ಷದ ಸೆರೆವಾಸ ಸಿಕ್ಕಿದ್ದರ ಬಗ್ಗೆ ದೇಶದ ಯಾವ ದೊಡ್ಡ ವಕೀಲರೂ ಒಂದು ಉದಾಹರಣೆ ನೀಡಲು ಸಾಧ್ಯವಾಗಿಲ್ಲ. ಇಂತಹ ಹಿಂದೆಂದೂ ಕಾಣದಂತಹ ಗರಿಷ್ಠ ಸಂಭಾವ್ಯ ಶಿಕ್ಷೆ ರಾಹುಲ್ ಗಾಂಧಿಗೆ ಏಕೆ ವಿಧಿಸಲಾಯಿತು? 2 ವರ್ಷದ ಶಿಕ್ಷೆಯಿಲ್ಲದೇ ಯಾರನ್ನೂ ಸಂಸತ್ತಿನಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂಬುದೂ ಕೇವಲ ಕಾಕತಾಳೀಯವೇ?

ಒಂಬತ್ತನೆಯ ಕಾಕತಾಳೀಯ, ಸೂರತ್‌ನ ನ್ಯಾಯಾಧೀಶರು ತೀರ್ಪು ನೀಡಿದ 24 ಗಂಟೆಗಳಲ್ಲಿ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಅನರ್ಹ ಎಂದು ಘೋಷಿಸುವ ಅಧಿಸೂಚನೆಯನ್ನು ಜಾರಿಗೊಳಿಸಲಾಯಿತು. ಇಲ್ಲಿಯವರೆಗೆ ಆದ ಇಂತಹ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲು ಕನಿಷ್ಠ ಒಂದು ತಿಂಗಳು ಬೇಕಾಗಿದೆ. ಈ ಬಾರಿ ಮಿಂಚಿನ ವೇಗ ಏಕೆ? ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹೋಗಿ ಈ ತೀರ್ಪಿನ ವಿರುದ್ಧ ಸ್ಟೇ ತೆಗೆದುಕೊಂಡು ಬರಬಾರದು ಎಂಬ ಕಾರಣಕ್ಕೆ ಈ ತರಾತುರಿಯೇ? ಅಂದರೆ ಯಾರೋ ಎಲ್ಲೋ ಮುಂಚೆಯಿಂದಲೇ ಈ ಯೋಜನೆ ಮಾಡಿಟ್ಟಿದ್ದರೆ?

10ನೆಯ ವಿಚಿತ್ರ ಸಂವಿಧಾನಕ್ಕೆ ಸಂಬಂಧಿಸಿದೆ; ಏಕೆಂದರೆ ಸಂವಿಧಾನದ 103ನೆಯ ಅನುಚ್ಛೇದದ ಅನುಗುಣವಾಗಿ ಯಾವುದೇ ಸಂಸದರನ್ನು ಅನರ್ಹ ಎಂದು ಘೋಷಿಸುವ ಮುನ್ನ ರಾಷ್ಟ್ರಪತಿಯವರ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಈ ವಿಷಯದಲ್ಲಿ ರಾಷ್ಟ್ರಪತಿಯವರ ಅಭಿಪ್ರಾಯ ಏಕೆ ತೆಗೆದುಕೊಳ್ಳಲಿಲ್ಲ? ರಾಷ್ಟ್ರಪತಿ ತಮ್ಮ ಅಭಿಪ್ರಾಯ ತೆಗೆದುಕೊಳ್ಳಲು ಚುನಾವಣಾ ಆಯೋಗದ ಅಭಿಪ್ರಾಯ ತೆಗೆದುಕೊಳ್ಳಬೇಕಾಗುತ್ತಿತ್ತು ಹಾಗೂ ಅದರಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸುವಲ್ಲಿ ತಡವಾಗುತ್ತಿತ್ತು ಎಂಬ ಕಾರಣಕ್ಕೆ ರಾಷ್ಟ್ರಪತಿಯವರ ಅನುಮತಿ ತೆಗೆದುಕೊಳ್ಳಲು ಮುಂದಾಗಲಿಲ್ಲವೇ?

ನನ್ನ ಎಲ್ಲ ಪ್ರಶ್ನೆಗಳನ್ನು ಕೇಳಿಸಿಕೊಂಡು ಆ ಸಾಹೇಬರು ಹ್ಮೂ ಅಂದು ಸುಮ್ಮನಾದರು. ಈಗ ನೀವೇ ಹೇಳಿ, ಇದು ಒಂದು ಸಾಮಾನ್ಯ ನ್ಯಾಯದ ಪ್ರಕ್ರಿಯೆಯೇ? ಅಥವಾ ಇನ್ನುಮುಂದೆ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮಾತನಾಡಲು ಬಿಡಬಾರದು ಎಂದು ಯಾರೋ ಮೊದಲೇ ತೀರ್ಮಾನಿಸಿದ್ದರೆ? ಅದಾನಿ ವಿರುದ್ಧ ಅವರು ಮಾತನಾಡಿದ್ದಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ? ತೀರ್ಮಾನ ಓದುಗರಿಗೆ ಬಿಟ್ಟಿದ್ದು.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...