Homeಕರ್ನಾಟಕಕನ್ನಡ ಪ್ರಶ್ನೆಪತ್ರಿಕೆಯಲ್ಲಿ ತಪ್ಪುಗಳ ಸರಮಾಲೆ: 5 ಎಡವಟ್ಟುಗಳಿಗೆ ಮಾತ್ರ ಕೆಇಎ ಸಮಜಾಯಿಷಿ!

ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ತಪ್ಪುಗಳ ಸರಮಾಲೆ: 5 ಎಡವಟ್ಟುಗಳಿಗೆ ಮಾತ್ರ ಕೆಇಎ ಸಮಜಾಯಿಷಿ!

ಪ್ರಕರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕದವನ್ನು ತಟ್ಟಿದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪ್ರತಿಕ್ರಿಯೆ ನೀಡಿದ್ದು, ಅಲ್ಲಿಯೂ ಎಡವಟ್ಟು ಮಾಡಿದೆ.

- Advertisement -
- Advertisement -

ಏಳು ವರ್ಷಗಳ ಬಳಿಕ ನಡೆಸಲಾದ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಪರೀಕ್ಷೆಯಲ್ಲಿ ಕನ್ನಡ ಐಚ್ಛಿಕ ಪ್ರಶ್ನೆ ಪತ್ರಿಕೆಯಲ್ಲಾಗಿರುವ ದೋಷಗಳ ವಿರುದ್ಧ ಹುದ್ದೆಯ ಆಕಾಂಕ್ಷಿಗಳು ಧ್ವನಿ ಎತ್ತಿದ್ದರು. ಜೊತೆಗೆ ಪ್ರಶ್ನೆ ಪತ್ರಿಕೆಯಲ್ಲಾಗಿರುವ 25ಕ್ಕೂ ಹೆಚ್ಚು ತಪ್ಪುಗಳನ್ನು ಗುರುತಿಸಿದ್ದರು. ಪ್ರಕರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕದವನ್ನು ತಟ್ಟಿದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪ್ರತಿಕ್ರಿಯೆ ನೀಡಿದ್ದು, ಅಲ್ಲಿಯೂ ಎಡವಟ್ಟು ಮಾಡಿದೆ.

ದಿನಾಂಕ 12 ಮಾರ್ಚ್ 2022ರಿಂದ 16 ಮಾರ್ಚ್ 2022ವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ ಕನ್ನಡ ಐಚ್ಛಿಕ ಪ್ರಶ್ನೆಪತ್ರಿಕೆಯಲ್ಲಾದ ಎಡವಟ್ಟುಗಳ ಕುರಿತು ಚರ್ಚೆಯಾಗಿತ್ತು.

ತಪ್ಪುಗಳನ್ನು ನಮೂದಿಸಿ ಅಭ್ಯರ್ಥಿ ಡಾ.ಎಂ.ರವಿ ಬರೆದಿದ್ದ ಪತ್ರದ ಕಾರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆಇಎ ಕೇವಲ ಐದು ಅಂಶಗಳಿಗೆ ಮಾತ್ರ ಪ್ರತಿಕ್ರಿಯೆ ನೀಡಿ ಇನ್ನುಳಿದ ವಿಚಾರಗಳಿಗೆ ಮೌನ ತಾಳಿದೆ. ಪ್ರಶ್ನೆ ಪತ್ರಿಕೆಯಲ್ಲಿದ್ದ ಹಲವು ಗೊಂದಲಕಾರಿ ಅಂಶಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೆಇಎ ಪ್ರತಿಕ್ರಿಯೆ ನೀಡಿದ್ದು ಇಷ್ಟಕ್ಕೆ ಮಾತ್ರ

ಆಕ್ಷೇಪ 1: ಪ್ರಶ್ನೆಸಂಖ್ಯೆ 2ರಲ್ಲಿ ಎಚ್.ಎಲ್. ನಾಗೇಗೌಡರ ‘ಪದವವೆ ನಮ್ಮ ಎದೆಯಲ್ಲಿ’ ಕೃತಿಯ ಹೆಸರನ್ನು ’ಪದವಿವೆ ನನ್ನ ಎದೆಯಲ್ಲಿ’ ಎಂದು ಮಾಡಲಾಗಿದೆ. ಕೆಇಎ ಸ್ಪಷ್ಟನೆ: ‘ಪದವವೆ’ ‘ಪದವಿವೆ’ ಎರಡರ ನಡುವೆ ಸಣ್ಣದಾದ ಕಾಗುಣಿತದ ವ್ಯತ್ಯಾಸವಿದೆ.

ಆಕ್ಷೇಪ 2:  ಪ್ರಶ್ನೆಸಂಖ್ಯೆ 45ರಲ್ಲಿ ವಚನಕಾರ ಅಲ್ಲಮ ಪ್ರಭು ಅವರ ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವಾ ಎಂಬ ವಚನವನ್ನು ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡ ನೋಡವ್ವಾ ಎಂದು ಕೊಡಲಾಗಿದೆ. ಬಿ.ವಿ. ಮಲ್ಲಾಪುರರ ಸಂಪಾದಕತ್ವದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಅಲ್ಲಮ ಪ್ರಭುದೇವರ ವಚನ ಸಂಪುಟ-2ರಲ್ಲಿ ಮತ್ತು ಇದೇ ಪ್ರಾಧಿಕಾರವು ಎಂ.ಎಂ. ಕಲಬುರ್ಗಿಯವರು ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧಪಡಿಸಿದ ಸಂಪುಟಗಳಲ್ಲಿಯೂ ’ಗಂಡನವ್ವಾ’ ಎಂದೇ ಇದೆ. ಪ್ರಶ್ನೆಗಾಗಿ ವಚನದ ಸಾಲನ್ನು ತೆಗೆದ ಮಹಾಶಯರು ಯಾವ ಪುಸ್ತಕವನ್ನು ಆಕಾರವಾಗಿ ಇಟ್ಟುಕೊಂಡಿದ್ದಾರೋ ತಿಳಿಯದು. ಕೆಇಎ:  ವಚನಗಳು ಮೌಖಿಕ ಪರಂಪರೆ ಬಂದಂತ ಸಾಹಿತ್ಯ ಪ್ರಕಾರವಾಗಿದ್ದು, ಭಾವಾರ್ಥ ಒಂದೇ ಇರುತ್ತದೆ. ಗಂಡನವ್ವಾ ಹಾಗೂ ಗಂಡ ನೋಡವ್ವಾ ಎರಡರ ನಡುವೆ ಅರ್ಥದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ಆಕ್ಷೇಪ 3: ಪ್ರಶ್ನೆಸಂಖ್ಯೆ 53ರಲ್ಲಿ ’ಚಾಮುಂಡರಾಯ ಪುರಾಣ’ ಎಂದು ಬರೆಯಲಾಗಿದೆ. ಈ ಕೃತಿಯನ್ನು ನಮಗೆ ’ಚಾವುಂಡರಾಯ ಪುರಾಣ’ವೆಂದು ಓದಿಸಿದ್ದು ಮತ್ತು ನಾವು ಓದಿದ್ದು. ಹೀಗೆಲ್ಲಾ ನಮಗೆ ಅಕ್ಷರ ದೋಷಗಳ ಮೂಲಕ ‘ಮುಂಡಾ’ಯಿಸಲಾಗಿದೆ. ಕೆಇಎ: ‘ಚಾಮುಂಡರಾಯ’ ಮತ್ತು ‘ಚಾವುಂಡರಾಯ’ ಎರಡು ಚಾಲ್ತಿಯಲ್ಲಿರುವ ಪದಗಳಾಗಿವೆ.

ಆಕ್ಷೇಪ 4, 5:  ಪ್ರಶ್ನೆಸಂಖ್ಯೆ 74ರ ಸರಿಯಾದ ಹೊಂದಾಣಿಕೆಯನ್ನು ಗುರುತಿಸಲು ಸೂಚಿಸಿದ್ದಾರೆ. ದುರಂತ ಅಂದರೆ ಸರಿ ಉತ್ತರದ ಆಯ್ಕೆಯಲ್ಲಿನ ಲೇಖಕರೆ ಹೆಸರೇ ತಪ್ಪಾಗಿದೆ. ನಮಗೆ ಲೇಖಕ ರಾಘವೇಂದ್ರ ಖಾಸನೀಸ ಗೊತ್ತಿತ್ತು. ’ನಾಘವೇಂದ್ರ ಖಾಸನೀಸ’ ಗೊತ್ತಿರಲಿಲ್ಲ. ಪ್ರಶ್ನೆ ಸಂಖ್ಯೆ 121ರಲ್ಲಿ ಜೀ.ಶಂ.ಪರಮಶಿವಯ್ಯನವರ ಹೆಸರನ್ನು ’ಜೀ.ಕಂ.ಪರಮಶಿವಯ್ಯ’ ಎಂದು ಬರೆದಿದ್ದಾರೆ. ಕೆಇಎ: ಪ್ರಶ್ನೆ ಪತ್ರಿಕೆಯಲ್ಲಿ ಒಂದೆರಡು ಕಡೆ ಕಾಗುಣಿತ ದೋಷಗಳಿದ್ದು ಮೌಲ್ಯಮಾಪನದ ಸಮಯದಲ್ಲಿ ತಜ್ಞರ ವರದಿಯಂತೆ ಕ್ರಮ ವಹಿಸಲಾಗುವುದು.

ಹೀಗೆ ಐದು ಅಂಶಗಳಿಗೆ ಮಾತ್ರ ಕೆಇಎ ಪ್ರತಿಕ್ರಿಯೆ ನೀಡಿದೆ. ಇನ್ನುಳಿದ ಅಂಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೆಇಎ ಮೌನ ತಾಳಿದ ಅಂಶಗಳು

*ಪ್ರಶ್ನೆಸಂಖ್ಯೆ 9ರಲ್ಲಿ ಷ. ಶೆಟ್ಟರ್ ಅವರ “Memorial stones : a study of their origin, significance, and variety” ಎಂಬ ಸಂಪಾದಿತ ಕೃತಿಯ ಹೆಸರನ್ನು ‘Memorial stones in South India’ಎಂದು ಬದಲಾಯಿಸಿ, ಇದನ್ನೇ ಸರಿಯಾದ ಆಯ್ಕೆಯನ್ನಾಗಿ ಗುರುತಿಸಲು ಹೇಳಲಾಗಿದೆ! ‘South Indian ‘Memorial stones’ ಕೆ. ರಾಜನ್ ಅವರ ಕೃತಿ. ಇದನ್ನೆ ಉಲ್ಟಾಪಲ್ಟಾ ಮಾಡಿದಂತಿದೆ.

*ಪ್ರಶ್ನೆಸಂಖ್ಯೆ 12ರಲ್ಲಿ ಯಾವುದು ಹೊಂದಾಣಿಕೆ ಆಗುತ್ತದೆ? ಒಂದನ್ನು ಮಾತ್ರ ಗುರುತಿಸಬೇಕು. ಆದರೆ ಕೊಟ್ಟಿರುವ ಎರಡು ಆಯ್ಕೆಗಳೂ ಸರಿಯಾಗಿವೆ. ಅವು ಜಿ.ಎಸ್. ಆಮೂರರ ’ಸೀಮೋಲ್ಲಂಘನ’, ಓ.ಎಲ್.ನಾಗಭೂಷಣ ಸ್ವಾಮಿ ಅವರ ’ಇಂದಿನ ಹೆಜ್ಜೆ’. ಇಂತಹ ಪ್ರಶ್ನೆಗಳಿಗೆ ’ಗ್ರೇಸ್’ ಅಂಕಗಳನ್ನು ಕೊಡುವುದಾದರೆ ಪರೀಕ್ಷೆ ಏಕೆ ಮಾಡಬೇಕು?

ಇದನ್ನೂ ಓದಿರಿ: ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು: ‘ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ’ಎಂದು ಎಚ್‌ಡಿಕೆ ಆಕ್ರೋಶ

*ಪ್ರಶ್ನೆಸಂಖ್ಯೆ 13ರಲ್ಲಿ ಯಾವ ಸೂಚನೆಯೇ ಕೊಡದೆ ಪ್ರಶ್ನೆಗೆ ಉತ್ತರವನ್ನು ಗುರುತಿಸುವಂತೆ ಮಾಡಲಾಗಿದೆ. ಇನ್ನೊಂದು ವಿಶೇಷವೆಂದರೆ ಈ ಪ್ರಶ್ನೆಯ ಉತ್ತರದ ರೋಮನ್ ಸಂಖ್ಯೆಯ ಸ್ವರೂಪ, ಉಳಿದ 3 ರೋಮನ್ ಸಂಖ್ಯೆಯ ಸ್ವರೂಪಗಳಿಂದ ಭಿನ್ನವಾಗಿದೆ. ಭಿನ್ನವಾಗಿರುವುದೇ ಉತ್ತರವಾಗಿದೆ. ಇದು ಪರೀಕ್ಷಾ ಆಕ್ರಮದ ಸೂಚನೆಯಾಗಿರುವುದರಲ್ಲಿ ಸಂಶಯವೇ ಇಲ್ಲ.

*ಪ್ರಶ್ನೆಸಂಖ್ಯೆ 18ರ ಆಯ್ಕೆಗಳಲ್ಲಿ ಕೊಟ್ಟಿರುವ ಕೃತಿಯ ಹೆಸರಾದ ’ವಿಮರ್ಶೆಯ ನರಿಭಾಷೆ’ಯ ಕರ್ತೃ ಯಾರೆಂಬುದನ್ನು ಕಲಿಸದ ಕನ್ನಡ ಸಾಹಿತ್ಯ ಮೇಷ್ಟ್ರುಗಳು ವಿದ್ಯಾರ್ಥಿಗಳಿಗೆ ಮೋಸಮಾಡಿದ್ದಾರೆ! ’ನರಿಭಾಷೆ’ಯ ಶೀರ್ಷಿಕೆಯುಳ್ಳ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಪ್ರಾಧಿಕಾರಕ್ಕೆ ಧನ್ಯವಾದಗಳು. ಪ್ರಾಧಿಕಾರವು ಈ ’ನರಿಭಾಷೆ’ ಕೃತಿಯನ್ನು ಆದಷ್ಟು ಬೇಗ ಪ್ರಕಟಿಸಬೇಕು. ಇಂತಹ ಕೃತಿಯನ್ನು ಪ್ರಶ್ನೆಯಾಗಿಸಿದ ಗುಳ್ಳೆನರಿಗಳ ಗೂಳಿನೊಳಗೆ ನಮ್ಮಂತವರ ಆರ್ತನಾದ ಪ್ರಾಧಿಕಾರಕ್ಕೆ ಕೇಳುವುದೆ?

*ಪ್ರಶ್ನೆಸಂಖ್ಯೆ 19ರಲ್ಲಿ ಕೆ.ವಿ. ತಿರುಮಲೇಶರ ವಿಮರ್ಶಾ ಕೃತಿ ’ಸಮ್ಮುಖ’ವನ್ನು ’ಸರ್ಮುಖ’ಗೊಳಿಸಿ, ಲೇಖಕರ ಮುಖಕ್ಕೆ ಹೊಡೆಯಲಾಗಿದೆ.

*ಪ್ರಶ್ನೆಸಂಖ್ಯೆ 19ರಲ್ಲಿರುವ ’ಬುದ್ಧಡ್ಡಿ ಹಿಂಗಮಿರೆ’ ಇವರು ಯಾರು ಎಂಬುದು ತಿಳಿದಿಲ್ಲ. ನಮಗೆ ಬುದ್ಧಣ್ಣ ಹಿಂಗಮಿರೆ ಗೊತ್ತಿದೆ.

*ಪ್ರಶ್ನೆಸಂಖ್ಯೆ 19ರಲ್ಲಿರುವ ’ರಸೀದು ಟಿಕೆಟ್ಟು’ ಅಲ್ಲ. ’ರಸೀದಿ ತಿಕೀಟು’

*ಪ್ರಶ್ನೆಸಂಖ್ಯೆ 35ರಲ್ಲಿ ಹಲ್ಮಿಡಿ ಶಾಸನದಲ್ಲಿ ಕಂಡುಬರುವ ಸ್ಥಳನಾಮ ’ನರಿದಾವಿಳೆ ನಾಡು’ ಎಂಬುದು. ಪ್ರಶ್ನೆ ಪತ್ರಿಕೆಯಲ್ಲಿ ’ನಂದಾವಿಳೆ ನಾಡು’ ಎಂದು ಕೊಟ್ಟಿದ್ದಾರೆ. ಪ್ರಶ್ನೆ ಪತ್ರಿಕೆ ಮಾಡಿದವರು ಶಾಸನದೊಳಗಿರುವ ಹೊಸ ಸ್ಥಳನಾಮವನ್ನು ಶೋಧಿಸಿದ್ದಾರೆ. ಈ ಮಹಾನ್ ಸಂಶೋಧನೆಗೆ ಅಭಿನಂದನೆಗಳನ್ನು ಹೇಳಲೇಬೇಕು.

ಇದನ್ನೂ ಓದಿರಿ: ‘BIFFes’ ಎಂಬ ಅಂತಾರಾಷ್ಟ್ರೀಯ, Sorry ‘ಕನ್ನಡ ಅಂತಾರಾಷ್ಟ್ರೀಯ ಸಿನಿಮೋತ್ಸವ!’

* ಪ್ರಶ್ನೆಸಂಖ್ಯೆ 52ರ ಹೊಂದಾಣಿಕೆಯಲ್ಲಿ ನೀಡಲಾದ ವಚನಕಾರ್ತಿಯರು ಮತ್ತವರ ವಚನಗಳಲ್ಲಿ ಅಕ್ಕಮಹಾದೇವಿಯ ವಚನದ ಬದಲಿಗೆ ಅಕ್ಕಮ್ಮಳ ವಚನವನ್ನು ಕೊಡಲಾಗಿದೆ. ಅಕ್ಕಮಹಾದೇವಿಯ ಹೆಸರಿನೊಂದಿಗೆ ಬೇರೆಯಾವ ಆಯ್ಕೆಯೂ ಹೊಂದಾಣಿಕೆ ಆಗುವುದಿಲ್ಲ. ಇದಕ್ಕೆ ಪ್ರಾಧಿಕಾರ ಯಾವ ಉತ್ತರಕೊಡುತ್ತದೆಯೋ ಕಾಯಬೇಕು. ಆದರೆ ತಪ್ಪಾಗಿ ಕೊಟ್ಟಿರುವುದರ ಬಗ್ಗೆ ಆಕ್ಷೇಪಣೆ ಎತ್ತಲೇ ಬೇಕು. ಏಕೆಂದರೆ ಈ ಥರದ ಸಣ್ಣಪುಟ್ಟ ಗೊಂದಲಗಳು ಅಭ್ಯರ್ಥಿ ಪ್ರಶ್ನೆಯನ್ನು ಅಟೆಂಡ್ ಮಾಡದಂತೆ ತಡೆಯುತ್ತವೆ. ಮಾಡಿದರೆ ಅಂಕಗಳನ್ನು ಕಳೆದುಕೊಳ್ಳುವ ಆತಂಕ ಬೇರೆ!

*ಪ್ರಶ್ನೆಸಂಖ್ಯೆ 54 ಮತ್ತು 55ರಲ್ಲಿ ವಚನ ಮತ್ತು ಕೀರ್ತನೆಕಾರರ ಸಾಲುಗಳನ್ನು ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ’ಲಿಂಗಾರ್ಪಿತ’, ಇದು ’ಲಿಂಗಾರ್ಪಿತವ’ ಆಗಬೇಕು. ’ಮನಸು’ ಇದು ’ಮನವ’ ಆಗಬೇಕು.

*ಪ್ರಶ್ನೆಸಂಖ್ಯೆ 57 ’ನೆಪೋಲಿಯನ್ ಮತ್ತು ನಾಯಿ’ ಇದು ಇವರ ಕವನ ಎಂದು ಕೇಳಲಾಗಿದೆ. ಇದಕ್ಕೆ ಉತ್ತರದ ಆಯ್ಕೆ ಕುವೆಂಪು. ಈ ಕವಿತೆಯ ಶೀರ್ಷಿಕೆ ಪ್ರಶ್ನೆಪತ್ರಿಕೆಯಲ್ಲಿರುವಂತೆ ಇಲ್ಲ. ’ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಕವನ ಸಂಕಲನದಲ್ಲಿ ’ವೀರನ ಕನಿಕರ (ನಾಯಿ-ನೆಪೋಲಿಯನ್)’ ಎಂದಿದೆ. ಪ್ರಶ್ನೆ ಮಾಡಿದವರು ಶೀರ್ಷಿಕೆಯನ್ನೇ ಬದಲಾಯಿಸಿದ್ದಾರೆ. ಇಂತಹ ’ಮತ್ತು’ಗಳನ್ನು ಪ್ರಶ್ನೆಯಲ್ಲಿ ಸೇರಿಸಿ, ಓದಿದವರನ್ನು ವಂಚಿಸುವ ಹುನ್ನಾರ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದವರಿಗೆ ಇದ್ದಂತಿದೆ.

*ಪ್ರಶ್ನೆಸಂಖ್ಯೆ 63ರ ಹೊಂದಿಸಿ ಬರೆಯಿರಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಕವಿಯೊಬ್ಬರನ್ನು ಪರಿಚಯಿಸಿದ್ದಾರೆ. ಆ ಕವಿಯ ಹೆಸರೇ ’ಕೆ.ಎಸ್. ನರಸಿಂಹವರ್ಮ’! ಇಲ್ಲಿಯವರೆಗೂ ಇಂಥ ಪ್ರಸಿದ್ಧ ಕವಿಯೊಬ್ಬರ ಹೆಸರನ್ನು ಅಲಕ್ಷಿಸಿದ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ಕಮಿಟಿಗಳಿಗೆ, ವಿಮರ್ಶಕರಿಗೆ ಧಿಕ್ಕಾರಗಳು. ಇತಿಹಾಸದಲ್ಲಿ ’ಶರ್ಮ’ ’ವರ್ಮ’ ಆಗಿದ್ದನ್ನು ಓದಿದ್ದೆವು. ’ಸ್ವಾಮಿ’ ’ವರ್ಮ’ ಆಗಿ ಬದಲಾಗಿದ್ದನ್ನು ಕಂಡು ದಿಗಿಲುಗೊಂಡಿದ್ದೇವೆ! ಇದೇ ಪ್ರಶ್ನೆಯಲ್ಲಿ ಕೆ.ಎಸ್. ನಿಸಾರ್ ಅಹಮ್ಮದ್ ಅವರ ಹೆಸರನ್ನು ’ಕೆ.ಸ್.’ ಎಂದು ಬರೆಯಲಾಗಿದೆ. ಪ್ರಶ್ನೆಪತ್ರಿಕೆಯನ್ನು ಸರಿಯಾಗಿ ಬರೆದುಕೊಡದೇ ಇರುವವರಿಗೆ ಮೊದಲು ಪರೀಕ್ಷೆ ನಡೆಸಬೇಕಿದೆ.

ಇದನ್ನೂ ಓದಿರಿ: ‘ಹೆಬ್ಬೆಟ್ಟು ಗಿರಾಕಿಗಳು’ ಮತ್ತು ಕನ್ನಡದ ಪರಂಪರೆಯು

* ಪ್ರಶ್ನೆಸಂಖ್ಯೆ 80ನ್ನು ಹೇಗೆ ಗ್ರಹಿಸಿ, ಉತ್ತರಿಸಬೇಕು. ಯಾವ ಸೂಚನೆಯೂ ಇಲ್ಲ.

* ಪ್ರಶ್ನೆಸಂಖ್ಯೆ 81ನ್ನು ಹೇಗೆ ಗ್ರಹಿಸಿ, ಉತ್ತರಿಸಬೇಕು. ಯಾವ ಸೂಚನೆಯೂ ಇಲ್ಲ.

* ಪ್ರಶ್ನೆಸಂಖ್ಯೆಗಳಾದ 113, 119ಕ್ಕೆ ಹೇಗೆ ಗ್ರಹಿಸಿ, ಉತ್ತರಿಸಬೇಕು. ಯಾವ ಸೂಚನೆಯೂ ಇಲ್ಲ.

* ಪ್ರಶ್ನೆಸಂಖ್ಯೆ 100ರಲ್ಲಿ ಆರ್.ಎಸ್.ಕಿಟಿಲ್ ಎಂದು ಕೊಡಲಾಗಿದೆ. ಇದು ಸರಿಯೆ? ಇದು ಪ್ರಸಿದ್ಧ ಸಂಶೋಧಕರ ಹೆಸರಿಗೆ ಮಾಡುವ ಅಪಚಾರವಲ್ಲವೆ?

* ಪ್ರಶ್ನೆಸಂಖ್ಯೆ 102ರಲ್ಲಿ ಕೊಟ್ಟಿರುವ ಬಹುಆಯ್ಕೆ ಇಂಗ್ಲೀಷ್ ಸೂಚಕಗಳು ಸಿ ಮತ್ತು ಡಿ ಆಗಬೇಕಿತ್ತು. ಆದರೆ ಎರಡೂ ಸಿ,ಸಿ. ಆಗಿವೆ. ಉತ್ತರ ಸಿ.ಡಿ. ಗುರುತಿಸಬೇಕು. ಕೊಟ್ಟಿರುವ ಆಯ್ಕೆಗಳಲ್ಲಿಯೆ ಸಿ,ಸಿ ಇದ್ದು, ಸರಿಯಾದ ಉತ್ತರದಲ್ಲಿ ಸಿ ಮತ್ತು ಡಿ ಅಂತ ಕೊಟ್ಟರೆ ಹೇಗೆ?

ಇದನ್ನೂ ಓದಿರಿ: ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಸಾಲು ಸಾಲು ತಪ್ಪುಗಳು!

*ಪ್ರಶ್ನೆಸಂಖ್ಯೆ 106ರಲ್ಲಿ ನಾಗವರ್ಮನ ಛಂದೋಂಬುಧಿಯ ಛಂದಮನರಿಯದೆ ಕವಿತೆಯ ದುಂದುಗದೊಳ್ ತೊಳಲಿ ಸುಳಿವ ಕುಕವಿಯೆ ಕುರುಡಂ ಎಂಬ ವಾಕ್ಯವನ್ನು ಛಂದಮನರಿಯದೆ ಕವಿತೆಯ ದುಂದುಗದೊಳ್ ನುಡಿವ ಕುಕವಿಯೆ ಕುರುಡಂ ಎಂದು ಬದಲಾಯಿಸಲಾಗಿದೆ. ಇದು ತಮಗೆ ಬೇಕಾದಂತೆ ಬರೆದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ವಿದ್ವಾಂಸರ ಸಾಹಿತ್ಯಿಕ ಜ್ಞಾನ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

* ಪ್ರಶ್ನೆಸಂಖ್ಯೆಗಳಾದ 106, 110, 111, 117 ಇವುಗಳು ಕಾಲಾನುಕ್ರಮಣಿಗೆ ಸಂಬಂಧಿಸಿವೆ. ಇದನ್ನು ಯಾವ ಕಾಲದಲ್ಲಿ ಜೋಡಿಸಬೇಕು? ರಚಿತವಾದ ಕಾಲವೋ, ಸಂಪಾದನೆಯಾದ ಕಾಲವೋ ಅಥವಾ ಕೊನೆಯಲ್ಲಿ ರಚಿತವಾದ ಕಾಲವೋ? ಹೇಗೆ?

ಪ್ರಶ್ನೆ ಪತ್ರಿಕೆ ರೂಪಿಸಿದವರನ್ನು ಬ್ಲಾಕ್‌ ಲಿಸ್ಟ್‌ಗೆ ಹಾಕಿ: ಟಿ.ಎಸ್.ನಾಗಭರಣ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಭರಣ ಅವರು “ಈ ಪ್ರಶ್ನೆ ಪತ್ರಿಕೆಯನ್ನು ಮಾಡಿದವರನ್ನು ನಮ್ಮ ಎದುರಿಗೆ ತಂದು ನಿಲ್ಲಿಸಬೇಕೆಂದು ಕೇಳಿದ್ದೇವೆ. ಇಲ್ಲವಾದರೆ ನಿಮ್ಮ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇವೆ. ಆದರೆ ಇದು ಗೌಪ್ಯ ವಿಷಯ. ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಕೆಇಎ ತಿಳಿಸಿದೆ. ಈ ಪ್ರಶ್ನೆ ಪತ್ರಿಕೆ ಮಾಡಿದವರನ್ನು ಬ್ಲಾಕ್‌ ಲಿಸ್ಟ್‌ಗೆ ಹಾಕಬೇಕೆಂದು ಸೂಚಿಸಿದ್ದೇವೆ” ಎಂದು ಪ್ರತಿಕ್ರಿಯೆ ನೀಡಿದರು.

“ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆಗೆ ಪರಿಹಾರವನ್ನೂ ಸೂಚಿಸಬೇಕೆಂದು ತಿಳಿಸಿದ್ದೇವೆ. ಹೀಗಾಗಿ ತಪ್ಪಾದ ಪ್ರಶ್ನೆಗಳಿಗೆ ಗ್ರೇಸ್ ಅಂಕಗಳನ್ನು ಕೊಡುವುದಾಗಿ ಒಪ್ಪಿದ್ದಾರೆ” ಎಂದು ಮಾಹಿತಿ ನೀಡಿದರು.

ದೊಡ್ಡ ಪ್ರಮಾಣದ ತಪ್ಪುಗಳ ಕುರಿತು ಪ್ರಶ್ನಿಸಿದಾಗ, “ಅಭ್ಯರ್ಥಿಗಳಿಗೆ ಗೊಂದಲ ಉಂಟು ಮಾಡಲೆಂದೇ ಕೆಲವು ತಪ್ಪುಗಳನ್ನು ನೀಡಲಾಗಿದೆ ಎಂಬ ಸಮರ್ಥನೆಗಳು ಬಂದಿವೆ. ವಿದ್ಯಾರ್ಥಿ ಸ್ನೇಹಿಯಾಗಿ ಅವರು ಕ್ರಮ ಜರುಗಿಸಬೇಕಿದೆ” ಎಂದು ಆಶಿಸಿದರು.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ರಮ್ಯಾ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. “ಮಾಧ್ಯಮಗಳಿಗೆ ನಮ್ಮ ಪಿಆರ್‌ಒ ಪ್ರತಿಕ್ರಿಯೆ ನೀಡುತ್ತಾರೆ. ನಂಬರ್‌ ಕಳಿಸುತ್ತೇನೆ” ಎಂದು ಕರೆಯನ್ನು ಮೊಟಕುಗೊಳಿಸಿದ ಅವರು ಮತ್ತೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಉಳಿದ ಹಲವು ಆಕ್ಷೇಪಗಳಿಗೆ ಕೆಇಎ ಮೌನ ತಾಳಿರುವುದು ಏತಕ್ಕೆ ಎಂಬುದು ‘ಚಿದಂಬರ ರಹಸ್ಯ’ವಾಗಿಯೇ ಉಳಿದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಮಕ್ಕಳ ರಕ್ತಪಾತಕ್ಕೆ ಅಮೆರಿಕ ನೇರ ಹೊಣೆ: ಪ್ಯಾಲೆಸ್ತೀನ್

0
ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ಕಳೆದ 2 ತಿಂಗಳಿನಿಂದ ನಿರಂತರವಾಗಿ ದಾಳಿಯನ್ನು ನಡೆಸುತ್ತಿದೆ. ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವ ಯುಎನ್ ನಿರ್ಣಯವನ್ನು ಅಮೆರಿಕ ವಿಟೊ ಅಧಿಕಾರ ಬಳಸಿ ತಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ...