Homeಮುಖಪುಟದೇವೇಗೌಡರು ಪ್ರಧಾನಿಯಾಗಿ 25 ವ‍ರ್ಷದ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆಯ ಸ್ಥಿತಿಗತಿ

ದೇವೇಗೌಡರು ಪ್ರಧಾನಿಯಾಗಿ 25 ವ‍ರ್ಷದ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆಯ ಸ್ಥಿತಿಗತಿ

ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಮತ್ತು ಇತರ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಮತ್ತು ನಿರ್ಲಕ್ಷ್ಯ ದೆಹಲಿಯಲ್ಲಿ ಕುಳಿತ ನಾಯಕರಿಗೆ ಏಕೆ ಮುಖ್ಯವೆನಿಸುತ್ತಿಲ್ಲ?

- Advertisement -
- Advertisement -

ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಕರ್ನಾಟಕ ಕಂಡ ನೇರ ನುಡಿಯ ರಾಜಕಾರಣಿ. ಹಾಸನ ಜಿಲ್ಲೆಯ ಹೊಳೆನರಸೀಪುರದ ಕುಗ್ರಾಮದಿಂದ ಹೊರಟು ದೆಹಲಿಯ ಪ್ರಧಾನಿ ಖುರ್ಚಿಯಲ್ಲಿ 11 ತಿಂಗಳು ಕುಳಿತು ಕೆಳಗಿಳಿದ ರಾಜಕಾರಣಿ. ಹೆಚ್‌.ಡಿ. ದೇವೇಗೌಡ 6 ದಶಕಗಳ ರಾಜಕೀಯ ಏಳುಬೀಳುಗಳನ್ನು ಮಾಧ್ಯಮಗಳು ಮತ್ತು ಅವರನ್ನು ಹತ್ತಿರದಿಂದ ನೋಡಿದ ಪತ್ರಕರ್ತರು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಕಳೆದ ಸಂದರ್ಭದಲ್ಲಿಯೂ ಅಂತಹ ಹತ್ತಾರು ವ್ಯಾಖ್ಯಾನಗಳನ್ನು ನಾವು ಗಮನಿಸಿದ್ದೇವೆ. ದೇವೇಗೌಡರ ಪ್ರಧಾನಿ ಪಟ್ಟಕ್ಕೆ 25 ವರ್ಷ ತುಂಬಿದ್ದು ಕರ್ನಾಟಕದ ದೃಷ್ಟಿಯಲ್ಲಿ ಮಹತ್ವದ ಮೈಲಿಗಲ್ಲು ನಿಜ. ಆದರೆ ಅದು 25, ಮುಂದೆ 26, 26, 30, 50 ಹೀಗೆ ಬೆಳೆಯುತ್ತಲೇ ಹೋಗುತ್ತದೆಯೇ ಹೊರತು ಮತ್ತೊಬ್ಬ ಕನ್ನಡಿಗ ಅಥವಾ ದಕ್ಷಿಣ ಭಾರತೀಯ ಆ ಹುದ್ದೆಗೇರುವ ಅವಕಾಶವಿದೆಯೇ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ.

ದೇವೇಗೌಡರು ಪ್ರಧಾನಿಯಾಗಿ ಇಪ್ಪತ್ತೈದು ವರ್ಷದ ಕಾಲಘಟ್ಟದಲ್ಲಿ ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಸಾಕಷ್ಟು ಹೊಸ ನೀರು ಹರಿದಿರುವುದಂತೂ ನಿಜ. ಹಾಗೇ ಈ ಸುದೀರ್ಘ ಅವಧಿಯಲ್ಲಿ ಭಾರತದ ಪ್ರಧಾನಿಗಳ ಗಂಗೆಯ ತಟ ವಾರಣಾಸಿಯಲ್ಲಿ ಮಹಾ ಪ್ರವಾಹಗಳೇ ಬಂದಿವೆ. 25 ವರ್ಷ ಒಬ್ಬ ವ್ಯಕ್ತಿಗಿರಬಹುದು ಅಥವಾ ಒಂದು ಪ್ರದೇಶ ಅಥವಾ ಅಲ್ಲಿನ ಜನ ಸಮುದಾಯಕ್ಕೆ ಸುದೀರ್ಘ ಕಾಲಾವಧಿ. ಈ ಸುದೀರ್ಘ ಕಾಲಾವಧಿಯಲ್ಲಿ ಕರ್ನಾಟಕದ ಕೂಗು ಎಷ್ಟರ ಮಟ್ಟಿಗೆ ದೆಹಲಿಯ ಗದ್ದುಗೆಯನ್ನು ತಲುಪಿದೆ ಎನ್ನುವುದು ನಾವಿಂದು ಚರ್ಚಿಸ ಬೇಕಾದ ಬಹು ಮುಖ್ಯ ಸಂಗತಿ..

ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆ ಒಂದು ಕಾಲದ ಸ್ನೇಹಿತರು. ಒಂದು ಕಾಲದ ಪರಮ ಶತ್ರುಗಳು.. ಒಂದು ಕಾಲದಲ್ಲಿ ಕರ್ನಾಟಕದಿಂದ ದೆಹಲಿಯ ಕಡೆ ಮುಖ ಮಾಡಿದ ಇಬ್ಬರು ರಾಜಕೀಯ ನಾಯಕರು. 1990 ರ ದಶಕ ಭಾರತ ಇತಿಹಾಸದಲ್ಲಿ ಪರಿವರ್ತನೆಯ ಕಾಲ ಎಂದೇ ಬಣ್ಣಿಸಲಾದ ಕಾಲಘಟ್ಟ. ಭಾರತದ ಮೇಲಿನ ಕಾಂಗ್ರೇಸ್‌ ನ ಐತಿಹಾಸಿಕ ಪ್ರಾಬಲ್ಯ ದಿನೇ ದಿನೇ ಕ್ಷೀಣಿಸುತ್ತ ಜನಸಂಘದಿಂದ ಹುಟ್ಟಿಕೊಂಡ ಭಾರತೀಯ ಜನತಾ ಪಕ್ಷ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ ಅದು. ಇನ್ನೊಂದೆಡೆ ಜಯಪ್ರಕಾಶ್‌ ನಾರಾಯಣ್‌ ಅವರ ಹೋರಾಟದ ಫಲವಾಗಿ ಹುಟ್ಟಿಕೊಂಡ ನಾಯಕರ ಹಿಂಡಿನ ಜನತಾ ಪರಿವಾರ ಒಡೆದು ಹೋಳಾಗಿ ಭಾರತ ರಾಜಕೀಯದಲ್ಲಿ ಮಖಾಡೆ ಮಲಗಿಯಾಗಿತ್ತು. ದೇಶದಲ್ಲಿ ಎಮರ್ಜೆನ್ಸಿಯ ನಂತರ ಹುಟ್ಟಿಕೋಂಡ ಆಶಾಕಿರಣಗಳೆಲ್ಲ ಒಂದೊಂದಾಗಿ ಹುಸಿಯಾಗತೊಡಗಿದ್ದವು. ಅತ್ತ ಭಾರತೀಯ ಜನತಾ ಪಕ್ಷದ ವಾಜಪೇಯಿ, ಅಡ್ವಾಣಿ ದೇಶದ ಮುಂಚೂಣಿ ನಾಯಕರಾಗಿ ಬೆಳೆದು ನಿಂತಿದ್ದರು. ಆಗಲೇ ಬಾಬ್ರಿ ಮಸೀದಿಯನ್ನು ಕೆಡವಿಯಾಗಿತ್ತು. ಕಾಂಗ್ರೆಸ್‌ ಸಮರ್ಥ ನಾಯಕನಿಲ್ಲದ ಹಡಗಿನಂತಾಗಿತ್ತು. 1996 ರ ಲೋಕಸಭೆ ಚುನಾವಣೆ ಯಾವ ಒಕ್ಕೂಟಕ್ಕೂ ಬಹುಮತ ನೀಡಲಿಲ್ಲ. ವಾಜಪೇಯಿ 13 ದಿನಕ್ಕೆ ಪ್ರಧಾನಿಯಾಗಿ ಇಳಿದು ಹೋದರು. ಆಗ ತಲೆದೋರಿದ ಬಿಕ್ಕಟ್ಟಿನಲ್ಲಿ ಕಾಂಗ್ರೆಸ್‌ ಬಿಜೆಪಿಯ ಹೊರತಾದ ಪ್ರಾದೇಶಿಕ ಪಕ್ಷಗಳು ದೇಶದಲ್ಲಿ ಮೊತ್ತಮೊದಲ ಬಾರಿ ಮತ್ತು ಕಟ್ಟಕಡೆಯ ಬಾರಿ ಒಟ್ಟಾಗಿ ಸರ್ಕಾರ ರಚಿಸಿದವು. ಆಗ ಕಮ್ಯುನಿಸ್ಟರು, ಇತರ ಪ್ರಾದೇಶಿಕ ಪಕ್ಷಗಳ ನಾಯಕರೆಲ್ಲರ ನಡುವೆ ದೇಶಕ್ಕೆ ಭರವಸೆಯ ಬೆಳಕಿನಂತೆ ಕಾಣಿಸಿದ್ದು ಆ ಹೊತ್ತಿಗೆ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಹೆಚ್‌.ಡಿ. ದೇವೇಗೌಡರು. ವಿಚಿತ್ರ ಎಂದರೆ ದೇವೇಗೌಡ ಅಧಿಕಾರ ಅವಧಿಯ ನಂತರ ದಕ್ಷಿಣ ಭಾರತದ ಯಾವ ನಾಯಕನ ಮೇಲೂ ಭಾರತದ ರಾಜಕೀಯ ಪಕ್ಷಗಳಿಗೆ ಭರವಸೆ ಹುಟ್ಟದಿದ್ದುದು. ವಿಪರ್ಯಾಸವೆಂದರೆ ದೇವೇಗೌಡರ 11 ತಿಂಗಳ ಪ್ರಧಾನಿ ಅಧಿಕಾರ ಕಳೆದು 24 ವರ್ಷಗಳ ನಂತರವೂ ಈ ಒಕ್ಕೂಟ ವ್ಯವಸ್ಥೆಯಲ್ಲಿ ಮತ್ತೊಬ್ಬ ಕನ್ನಡ ನೆಲದ ನಾಯಕ ಅಥವಾ ದಕ್ಷಿಣ ಭಾರತದ ನಾಯಕನು ಈ ಪ್ರದೇಶದ ಪ್ರಬಲ ಧ್ವನಿಯಾಗಿ ಹೊರ ಹೊಮ್ಮಲು ಸಾಧ್ಯವಾಗಲಿಲ್ಲ.

ದೇವೇಗೌಡರ ಸಾಧನೆ, ಆಡಳಿತ, ಪ್ರಧಾನಿ ಗಾದಿಗೆ ಏರಿದ್ದು ಇತಿಹಾಸದ ಮಹತ್ವದ ಮೈಲಿಗಲ್ಲು ಎಂದು ಜ್ಞಾಪಿಸಿಕೊಳ್ಳುವುದರ ನಡುವೆ ಮುಂದಿನ ಎರಡೂವರೆ ದಶಕದಲ್ಲಿ ಕರ್ನಾಟಕದ ಧ್ವನಿ ಏನಾಯಿತು? ದಕ್ಷಿಣ ಭಾರತದ ಧ್ವನಿ ಏನಾಯಿತು? ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಮತ್ತು ಇತರ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಮತ್ತು ನಿರ್ಲಕ್ಷ್ಯ ದೆಹಲಿಯಲ್ಲಿ ಕುಳಿತ ಕರ್ನಾಟಕದ ನಾಯಕರಿಗೆ ಮುಖ್ಯವೆನಿಸುತ್ತಿಲ್ಲ ಎನ್ನುವುದು ಬಹು ಮುಖ್ಯವಾದ ಸಂಗತಿಯಾಗಿ ಇಂದು ನಮ್ಮ ಮುಂದೆ ಉಳಿಯುತ್ತದೆ.

ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ ವ್ಯಾಕ್ಸೀನ್‌ ಗಾಗಿ ರಾಜ್ಯ ಪರದಾಡುತ್ತಿರುವಾಗ ನಮಗೆ ಅಂದರೆ ಕರ್ನಾಟಕ ರಾಜ್ಯದ ಪಾಲು ಎಲ್ಲಿ? ಆಕ್ಸಿಜನ್‌ ನಲ್ಲಿ ರಾಜ್ಯದ ಪಾಲು ಎಲ್ಲಿ? ಎಂಬುದನ್ನು ಒಕ್ಕೂಟ ವ್ಯವಸ್ಥೆಯ ಚುಕ್ಕಾಣಿಯನ್ನು ಹಿಡಿದವರಲ್ಲಿ ಕೇಳುವ ಧೈರ್ಯ ಕರ್ನಾಟಕವನ್ನು ಪ್ರತಿನಿಧಿಸುವ ದೆಹಲಿಯ ನಾಯಕರಲ್ಲಿ ಯಾಕಿಲ್ಲ ಎಂಬುದನ್ನು ನಾವು ಗಂಭೀರವಾಗಿ ಪ್ರಶ್ನಿಸಬೇಕಾಗುತ್ತದೆ. ದೇವೇಗೌಡರು ಇಂದಿಗೂ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿ ಎಂಬುದು ವರ್ತಮಾನದ ಸಂಗತಿ. ಕಳೆದ ಅನೇಕ ದಶಕಗಳಲ್ಲಿ ದೇವೇಗೌಡರು ಮತ್ತು ಕೆಲವು ನಿರ್ದಿಷ್ಟ ನಾಯಕರು ದಶಕಗಳ ಕಾಲ ದೆಹಲಿಯಲ್ಲಿ ಸತತವಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಹಾಗಾದರೆ ಅವರು ಯಾಕೆ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಧ್ವನಿಯನ್ನು ಬಲಪಡಿಸಲಿಲ್ಲ ಎಂಬುದು ಈ ವರ್ತಮಾನದಲ್ಲಿ ಕೇಳಲೇಬೇಕಾದ ಮಹತ್ವದ ಪ್ರಶ್ನೆ. ಅವರು ಅಂದಿನಿಂದ ಕರ್ನಾಟಕದ ಕಹಳೆಯನ್ನು ರಾಜ್ಯದ ಬೇಡಿಕೆಗಾಗಿ ದೆಹಲಿಯಲ್ಲಿ ಮೊಳಗಿಸಿದ್ದರೆ ಇಂದು ಕರ್ನಾಟಕ ದೆಹಲಿಯ ಮುಂದೆ ಯಾಚಕನ ಸ್ಥಿತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ.

ಮೇಲ್ನೋಟಕ್ಕೆ ಭಾರತ ಒಕ್ಕೂಟದಿಂದ ಕರ್ನಾಟಕಕ್ಕೆ ತನ್ನ ನ್ಯಾಯೋಚಿತ ಹಕ್ಕಿನಲ್ಲಿ ವಂಚನೆಯಾಗಿದೆಯೆಂದು ತೋರುವ ಕೆಲವು ಘಟನೆಗಳನ್ನು ನೋಡೋಣ.

• ಕೊರೋನಾ ಸಂದರ್ಭದಲ್ಲಿ ರಾಜ್ಯಕ್ಕೆ ಬರಬೇಕಾದ ವ್ಯಾಕ್ಸೀನ್‌ ಮತ್ತು ಆಮ್ಲಜನಕ
• ಜಿಎಸ್‌ಟಿಯಲ್ಲಿ ಕರ್ನಾಟಕಕ್ಕೆ ಬರಬೇಕಾದ ನ್ಯಾಯೋಚಿತ ಪಾಲು
• ಕರ್ನಾಟಕದ ವಿವಿಧ ಯೋಜನೆಗಳಿಗೆ ಭಾರತ ಸರ್ಕಾರದಿಂದ ಬರಬೇಕಾದ ಅನುದಾನ
• ಪ್ರವಾಹ, ನೆರೆ, ಬರಗಾಲದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಸಿಗಬೇಕಾದ ಅನುದಾನ
• ನೀಟ್‌ : ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನಡೆಯುವ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಂದ ಕಿತ್ತುಕೊಂಡ ಸೀಟುಗಳು.. ಮತ್ತು ಪರೀಕ್ಷೆ ನಡೆಯುವ ಭಾಷೆ
• ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ಕನ್ನಡದಲ್ಲಿ ಬರೆಯಲು ಅವಕಾಶದ ನಿರಾಕರಣೆ
• ರೈಲ್ವೆ ಯೋಜನೆಗಳಲ್ಲಿ ಕರ್ನಾಟಕದ ಅವಗಣನೆ
• ಕಾವೇರಿ ನದಿ ಕಣಿವೆಯ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕಾದ ನಷ್ಟ
• ಕೃಷ್ಣಾ ನದಿ ಕಣಿವೆಯಲ್ಲಿ ಕರ್ನಾಟಕಕ್ಕಾದ ನಷ್ಟ
• ಮಹದಾಯಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ದೊರೆತ ನೀರಿನ ಪ್ರಮಾಣ
• ಹೈದ್ರಾಬಾದ್‌ ಕರ್ನಾಟಕ(ಆರ್ಟಿಕಲ್ 371 ಜೆ) ವಿಶೇಷ ಸ್ಥಾನಮಾನದಡಿಯಲ್ಲಿ ಬರಬೇಕಾದ ಅನುದಾನಗಳ ಕಡಿತ

ಇಷ್ಟು ವರ್ಷಗಳ ಇತಿಹಾಸದಲ್ಲಿ ಇದಷ್ಟೇ ಅಲ್ಲದೇ ಇನ್ನು ಹತ್ತಾರು ವಿಷಯಗಳಲ್ಲಿ ಕರ್ನಾಟಕದ ನ್ಯಾಯೋಚಿತ ಹಕ್ಕಿನ ಧ್ವನಿ ದಯನೀಯವಾಗಿ ವಿಫಲವಾಗಿದೆ. ಕರ್ನಾಟಕದ ವಿಧಾನಸಭೆಯಲ್ಲಿ ಮತ್ತು ಬೀದಿಗಳಲ್ಲಿ ʼನಮ್ಮ ಹಕ್ಕು ನಾವು ಬಿಡೆವುʼ ‘ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಭಾಷಣದಲ್ಲಿ ತೊಡಗುವ ಇದೇ ನಾಯಕರು ಮತ್ತು ಅವರ ಜೊತೆಯ ಕರ್ನಾಟಕದ ನಾಯಕರು ದೆಹಲಿಯಲ್ಲಿ ಈ ಮಾತುಗಳನ್ನು ಯಾಕೆ ಆಡುವುದಿಲ್ಲ?

ಮೊದಲಿದ್ದ ವ್ಯಾಟ್‌ ತೆರಿಗೆ ವ್ಯವಸ್ಥೆ ತೆಗೆದು ಹೊಸದಾಗಿ ಜಿಎಸ್‌ಟಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದು ಮುಂದಿನ ತಿಂಗಳು ಜುಲೈ 1 ಕ್ಕೆ ಸರಿ ಸುಮಾರು 4 ವರ್ಷಗಳು ಕಳೆಯುತ್ತವೆ. ಈ ಅವಧಿಯಲ್ಲಿ ಒಂದು ಅಂದಾಜಿನ ಪ್ರಕಾರ ಕರ್ನಾಟಕಕ್ಕೆ ಆದ ನಷ್ಟ ಸರಿ ಸುಮಾರು 50,000 ಕೋಟಿಯಿಂದ ಒಂದು ಲಕ್ಷ ಕೋಟಿಯವರೆಗೆ ಎಂದು ಹಣಕಾಸು ತಜ್ಞರು ಅಭಿಪ್ರಾಯ ಪಡುತ್ತಾರೆ. ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಯ ವೇಳೆ ರಾಜ್ಯಗಳಿಗೆ ಆಗುವ ತೆರಿಗೆ ನಷ್ಟವನ್ನು 5 ವರ್ಷಗಳ ಅವಧಿಯವರೆಗೆ ತುಂಬಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ ನಷ್ಟ ತುಂಬಿಕೊಡುವುದರಿಂದ ಕೇಂದ್ರ ಸರ್ಕಾರ ಈಗಲೇ ಯೂಟರ್ನ್‌ ಹೊಡೆದಿದೆ. ಹಾಗಿದ್ದರೆ ಈಗ ಹಳೆಯ 50 ಸಾವಿರ ಕೋಟಿಯ ಲೆಕ್ಕವನ್ನೂ ಬಿಟ್ಟು ಬಿಡೋಣ. ಈ ವರ್ಷದ 11,000 ಕೋಟಿಯ ಬಗ್ಗೆ ಯಾರಾದರೂ ಕೇಂದ್ರ ಸರ್ಕಾರವನ್ನು ಮತ್ತು ದೆಹಲಿಯ ನಾಯಕರನ್ನು ಪ್ರಶ್ನಿಸುತ್ತಾರೆಯೇ ? ಅದೂ ಇಲ್ಲ.
ಮಾತನಾಡಲಿಕ್ಕೆ ಇವರಿಗೆ ಭಾಷೆಯ ತೊಡಕೇ? ದೇಶವನ್ನು ಆಳುವ ಭಾಷೆ ಹಿಂದಿಗೊತ್ತಿಲ್ಲವೆಂಬ ಕೀಳರಿಮೆಯೇ? ಅಥವಾ ನಿಮ್ಮ ಉತ್ತರ ಭಾರತದ ಹೈಕಮಾಂಡ್‌ಗಳ ಹೆದರಿಕೆಯೇ?

ಜನಪ್ರತಿನಿಧಿಯಾಗಿ ಆಯ್ಕೆಯಾದ ನಿಮ್ಮಂತಹ ನಾಯಕರ ಸಮಸ್ಯೆಯೇ ಹೀಗಿರುವಾಗ ಕರ್ನಾಟಕದ ಜನಸಾಮಾನ್ಯನೊಬ್ಬನ ಪರಿಸ್ಥಿತಿ ಹೇಗಿರಬಹುದು ಲೆಕ್ಕಹಾಕಿ. ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪುತ್ತಲೇ ರಾಜ್ಯಗಳಿಗೂ ಒಂದಷ್ಟು ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಭಾರತ ಒಕ್ಕೂಟದ ಪಾಲುದಾರನಾಗಿ ಘನತೆಯ ಪಾಲು ಮತ್ತು ಘನತೆಯ ಸ್ಥಾನಮಾನ ಬೇಕೆಂದು ಕರ್ನಾಟಕದ ಪ್ರತಿಯೊಬ್ಬ ಪ್ರಜೆ ಬಯಸುತ್ತಾನೆ. ಆ ಕಾರಣಕ್ಕೇ ದೇವೇಗೌಡರು ಪ್ರಧಾನಿಯಾದ 10, 15, 20 ವರ್ಷಗಳನ್ನು ಕರ್ನಾಟಕದ ಜನ ಸಂಭ್ರಮಿಸುತ್ತಾರೆ. ಅದು ಕೇವಲ ದೇವೇಗೌಡರ ಮೇಲಿನ ಪ್ರೀತಿ ಮತ್ತು ಭಕ್ತಿಯಲ್ಲ. ಕನ್ನಡದ-ಕರ್ನಾಟಕದ ಅಸ್ಮಿತೆಯ ಧ್ವನಿ ದೂರದ ನಾಡು ದೇಶದ ರಾಜಧಾನಿಯಲ್ಲಿ ಕ್ಷೀಣವಾಗಿಯಾದರೂ ಕೇಳಿತು ಎಂಬ ಅಭಿಮಾನದಿಂದ. ಅದೇ ಸಮಯದಲ್ಲಿ ಒಕ್ಕೂಟ ವ್ಯವಸ್ಥೆಯನ್ನ ಭದ್ರಪಡಿಸಲಿಕ್ಕೆ ಮಾನ್ಯ ದೇವೇಗೌಡರು ಮಾಡಿದ ಕೆಲಸಗಳೇನು ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ..

ಕರ್ನಾಟಕದಿಂದ ದೇವೇಗೌಡರು ಸೇರಿದಂತೆ ನಂತರದಲ್ಲಿ ಆಯ್ಕೆಯಾಗಿ ಮಂತ್ರಿಯಾದ ರಾಮಕೃಷ್ಣ ಹೆಗಡೆ, ಖರ್ಗೆ, ಬಿಜೆಪಿಯ ನಾಯಕ ಗಣ ಯಾರೂ ಕಳೆದ ಎರಡೂವರೆ ದಶಕಗಳ ಅವಧಿಯಲ್ಲಿ ತಮ್ಮ ನೆಲದ ಅಸ್ಮಿತೆಯನ್ನು, ಭಾಷೆಯ ಅಸ್ಮಿತೆಯನ್ನು ದೆಹಲಿಯಲ್ಲಿ ಪ್ರಕಟಿಸದೇ ಇರುವುದು ಅತ್ಯಂತ ನಿರಾಸೆಯ ಸಂಗತಿ. ಕಾವೇರಿ – ಕೃಷ್ಣ ಮಹದಾಯಿ ನದಿ ನೀರಿನ ಹಂಚಿಕೆಯ ಸಂದರ್ಭದಲ್ಲೂ ನೂರಾರು ದಿನಗಳ ಸಾವಿರಾರು ರೈತರ ಹೋರಾಟ ಮತ್ತೊಂದು ಕಾವೇರಿಯಂತೆ ರಾಜಕೀಯ ಲಾಭಗಳಿಗೆ ಮೇಲಾಟಕ್ಕೆ ಬಳಕೆಯಾಯಿತೇ ವಿನಃ ಈ ನೆಲದ ರೈತರ ಮತ್ತು ಕರ್ನಾಟಕದ ನ್ಯಾಯಯುತ ಪಾಲನ್ನು ಭಾರತದ ಒಕ್ಕೂಟ ವ್ಯವಸ್ಥೆಯಿಂದ ಪಡೆದುಕೊಳ್ಳುವ ಧ್ವನಿಯಾಗಿ ಹೊಮ್ಮಲಿಲ್ಲ.

ಬ್ಯಾಂಕಿಂಗ್‌ ಸಂಬಂಧಿಸಿದ ಉದ್ಯೋಗಕ್ಕೆ ನಡೆಯುವ ಪರೀಕ್ಷೆಯನ್ನು ಇಂಗ್ಲೀಷ್‌ ಮತ್ತು ಹಿಂದಿ ಭಾಷೆಯಲ್ಲಿ ಕೇಂದ್ರ ಸರ್ಕಾರದ ಲೋಕಸೇವಾ ಆಯೋಗ ನಡೆಸುತ್ತದೆ. ಇದರ ಪರಿಣಾಮ ಇಂದು ಕರ್ನಾಟಕದ ಹಳ್ಳಿ ಹಳ್ಳಿಯ ಬ್ಯಾಂಕುಗಳಲ್ಲಿ ಬರೀ ಹಿಂದಿ ಮತ್ತು ಇತರ ಭಾಷಿಕರೇ ತುಂಬಿ ಹೋಗಿದ್ದಾರೆ. ಜನರು ತಮ್ಮ ಸಾಲ ಸೂಲ, ಬಡ್ಡಿ, ಉಳಿತಾಯಕ್ಕೆ ಸಂಬಂಧಿಸಿದ ಕೆಲಸಕ್ಕೆ ಅವರಾಡುವ ಒಂದೂ ಮಾತು ಅರ್ಥವಾಗದೇ ಹೇಳಿದಲ್ಲಿ ಸಹಿ ಒತ್ತಿ ಬರುತ್ತಿದ್ದಾರೆ. ಜೊತೆಗೆ ಎಲ್ಲಾ ದಾಖಲೆಗಳು ಇಂಗ್ಲೀಷ್‌ ಮತ್ತು ಹಿಂದಿಯಲ್ಲಿ ಇರುವ ಕಾರಣ ಅನೇಕರಿಗ್‌ ಬ್ಯಾಂಕ್‌ ಖಾತೆಯನ್ನು ತೆರೆಯುವುದೇ ಕಷ್ಟವಾಗಿದೆ. ಜೊತೆಗೆ ಇಂದು ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕರ್ನಾಟಕ ಮೂಲದ ಬ್ಯಾಂಕುಗಳ ಪರಿಸ್ಥಿತಿ ಏನಾಯಿತು ಎಂಬುದು ನಮ್ಮ ಕಣ್ಣ ಮುಂದೆಯೇ ಇದೆ.

ದೇಶದಲ್ಲಿ ಕನ್ನಡ ಅಸ್ಮಿತೆಯಾಗಿದ್ದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಬ್ಯಾಂಕ್‌ 2017 ರಿಂದ ಈಗ ಅಸ್ತಿತ್ವದಲ್ಲಿಲ್ಲ. ನಂತರ ದೇಶದ ಅತ್ಯುತ್ತಮ ಸಾರ್ವಜನಿಕ ರಂಗದ ಬ್ಯಾಂಕ್‌ ಮತ್ತು ಕರ್ನಾಟಕದ ಗ್ರಾಮೀಣ ಭಾಗದ ಜನರ ಜೀವನದ ಅವಿಭಾಜ್ಯ ಅಂಗ ವಿಜಯಾ ಬ್ಯಾಂಕ್‌ ಕೂಡ ಕಳೆದು ಹೋಯಿತು. ಸಿಂಡಿಕೇಟ್‌, ಕಾರ್ಪೊರೇಶನ್‌, ಎಲ್ಲಾ ಬ್ಯಾಂಕುಗಳೂ ಈಗ ತಮ್ಮ ಸ್ವತಂತ್ರ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಳೆದುಕೊಂಡು ದೇಶದ ದೊಡ್ಡ ಬ್ಯಾಂಕಿಂಗ್‌ ಜಾಲವೆಂಬ ಮಹಾ ಸಮುದ್ರದಲ್ಲಿ ಗುರುತಿಲ್ಲದ ಹಡಗುಗಳಂತೆ ಉಳಿದಿವೆ. ಇದರಿಂದ ಒಕ್ಕೂಟದಲ್ಲಿ ಕೇಂದ್ರ ಪ್ರಬಲವಾಗಿ ರಾಜ್ಯಗಳು ತಮ್ಮ ಅಸ್ತಿತ್ವವನ್ನು ನಿಧಾನವಾಗಿ ಕಳೆದುಕೊಳ್ಳುವ ಹಂತವನ್ನು ತಲುಪುತ್ತವೆ. ಇವೆಲ್ಲದರ ವಿರುದ್ಧ ಕರ್ನಾಟಕದ ಸಮರ್ಥ ಧ್ವನಿಯೊಂದು ದೆಹಲಿಯಲ್ಲಿ ಕೇಳಿಸುತ್ತಿಲ್ಲ.

ದಕ್ಷಿಣ ಭಾರತದ ಇತರ ರಾಜ್ಯಗಳಾದ ಪಕ್ಕದ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಲ್ಲಿ ಕರ್ನಾಟಕದಷ್ಟು ಶೋಚನೀಯ ಪರಿಸ್ಥಿತಿಯಿಲ್ಲ. ಅಲ್ಲಿ ಇನ್ನೂ ಪ್ರಾದೇಶಿಕ ಅಸ್ಮಿತೆ ಜೀವಂತವಾಗಿದೆಯೆನ್ನುವ ಕಾರಣಕ್ಕೋ ಅಥವಾ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ ಎನ್ನುವ ಕಾರಣಕ್ಕೊ ಪ್ರತಿರೋಧದ ಧ್ವನಿ ಇನ್ನೂ ಕೇಳುತ್ತಿದೆ. ಕೇಂದ್ರದ ಅನ್ಯಾಯದ ವಿರುದ್ಧ ಮತ್ತು ಭಾರತದ ಒಕ್ಕೂಟ ಸರ್ಕಾರದಿಂದ ತಮಗೆ ಬರಬೇಕಾದ ನ್ಯಾಯೋಚಿತ ಪಾಲಿಗಾಗಿ ಆಂಧ್ರ, ಕೇರಳ ಮತ್ತು ತಮಿಳುನಾಡಿನ ನಾಯಕರು ದೆಹಲಿಯ ಸಂಸತ್ತಿನ ಒಳಗೆ ಮತ್ತು ಹೊರಗೆ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಸ್ಪಷ್ಟವಾದ ಒಂದು ಉದಾಹರಣೆ ಆಂಧ್ರದ ಚಂದ್ರಬಾಬು ನಾಯ್ಡು ನೇತೃತ್ವದ ತೆಲಗು ದೇಶಂ ಪಕ್ಷ 2019 ರಲ್ಲಿ ಆಂಧ್ರಪ್ರದೇಶ ವಿಶೇಷ ಸ್ಥಾನಮಾನಕ್ಕಾಗಿ ಸಂಸತ್‌ ಹೊರಗೆ ಮತ್ತು ಒಳಗೆ ಬೃಹತ್‌ ಪ್ರತಿಭಟನೆ ನಡೆಸಿತ್ತು. ಇದೇ ಕಾರಣಕ್ಕೆ ತೆಲಗು ದೇಶಂ ಪಕ್ಷ 2019 ರ ಅಂತ್ಯದಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತದ ಒಕ್ಕೂಟ ಸರ್ಕಾರದಿಂದ ಹೊರಬಂದಿತ್ತು ಮತ್ತು ಆ ಮೂಲಕ ಪ್ರತಿಭಟನೆಯನ್ನು ತೋರಿಸಿತ್ತು. ಕೇರಳ ಕಳೆದ ಒಂದೆರಡು ದಶಕದಿಂದ ಕೇಂದ್ರದಲ್ಲಿರುವ ಎಲ್ಲಾ ಸರ್ಕಾರಗಳ ಮುಂದೆ ತನ್ನ ಪ್ರತಿರೋಧ ಮತ್ತು ಬೇಡಿಕೆಯ ಧ್ವನಿಗಳನ್ನು ಪ್ರಬಲವಾಗಿಯೇ ಮಂಡಿಸುತ್ತಿದೆ.

ಕರುಣಾನಿಧಿ ತಮಿಳುನಾಡಿನ ಜನನಾಯಕ. ಜೊತೆಗೆ ತಮಿಳು ನಾಡಿನ ಹಿತಾಸಕ್ತಿಗಾಗಿ ಕೇಂದ್ರದಲ್ಲಿ ದಶಕಗಳ ಕಾಲ ಹೋರಾಟ ಮತ್ತು ಆಡಳಿತದ ಹೊಂದಾಣಿಕೆಯನ್ನು ನಡೆಸಿದ ದಕ್ಷಿಣ ಭಾರತ ಮೂಲದ ಭಾರತದ ಮಹತ್ವದ ನಾಯಕ. ಒಂದೊಮ್ಮೆ ನಾವು ಕರುಣಾನಿಧಿಯವರಲ್ಲಿ ದಕ್ಷಿಣ ಭಾರತದಿಂದ ಮತ್ತೊಬ್ಬ ಭಾರತದ ಪ್ರಧಾನಿಯನ್ನು ನಿರೀಕ್ಷಿಸಿದ್ದೆವು ನಿಜ. ಆ ಹುಸಿ ಹೋದ ನಿರೀಕ್ಷೆಗಳ ನಡುವೆ ಕರುಣಾನಿಧಿ ತಮಿಳರ ನಿರೀಕ್ಷೆಗಾಗಲಿ ಹಿತಾಸಕ್ತಿಗಾಗಲೀ ಎಂದೂ ವಂಚನೆ ಮಾಡಿಲ್ಲ. ಒಂದು ಕಾಲದಲ್ಲಿ ತಮಿಳುನಾಡು ಪ್ರತ್ಯೇಕ ದೇಶದ ಹೋರಾಟಕ್ಕೂ ಇಳಿಯುವ ಮೂಲಕ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡಿನ ಮಹತ್ವವನ್ನು ತೋರಿಸಿಕೊಟ್ಟಿದ್ದರು.

ಇಂದು ಕರ್ನಾಟಕದ ನಾಯಕರು ಗ್ರಾಮ ಪಂಚಾಯತಿ ಅಭ್ಯರ್ಥಿ ಮತ್ತು ಅಧ್ಯಕ್ಷರ ಆಯ್ಕೆಗೆ ದೆಹಲಿಗೆ ಓಡುತ್ತಾರೆ. ತಮ್ಮ ಹೈಕಮಾಂಡ್‌ಗಳ ಮನೆ ಮುಂದೆ ದಿನಗಟ್ಟಲೆ ನಿಲ್ಲುತ್ತಾರೆ. ಕರ್ನಾಟಕಕ್ಕೆ ಈಗ ತನ್ನ ಸ್ವಂತ ಪ್ರತಿನಿಧಿಯನ್ನು ನಾಯಕನನ್ನು ಆಯ್ಕೆ ಮಾಡುವ ಶಕ್ತಿಯಿಲ್ಲ. ಇಲ್ಲಿನ ಮುಖ್ಯಮಂತ್ರಿ, ಮಂತ್ರಿ ಮತ್ತು ಶಾಸಕರು ದೆಹಲಿಯಲ್ಲಿ ನಿರ್ಧಾರವಾಗುತ್ತಾರೆ. ದೆಹಲಿಯಿಂದ ಬಂದವರು ಕರ್ನಾಟಕದಲ್ಲಿ ಯಾರು ಸಮರ್ಥರು ಎಂದು ತೀರ್ಮಾನಿಸುವ ಹಂತವನ್ನು ರಾಜ್ಯ ತಲುಪಿದೆ. ರಾಷ್ಟ್ರೀಯ ಪಕ್ಷಗಳೂ ಒಕ್ಕೂಟ ವ್ಯವಸ್ಥೆ ದುರ್ಬಲವಾಗಲು ಒಂದು ಮುಖ್ಯ ಕಾರಣ. ಜೊತೆಗೆ ರಾಷ್ಟ್ರೀಯ ನಾಯಕತ್ವಕ್ಕೆ ಸೆಡ್ಡು ಹೊಡೆದು ನಿಲ್ಲುವ ದೇವರಾಜ ಅರಸು ಅಂತವರ ಕೆಚ್ಚಿನ ನಾಯಕರ ಕೊರತೆ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಧ್ವನಿ ದುರ್ಬಲವಾಗಲು ಮತ್ತೊಂದು ಕಾರಣ.

ದೇಶದಲ್ಲಿ ಇತ್ತೀಚೆಗೆ ರಾಜ್ಯಗಳು ಭಿಕ್ಷೆಯೆತ್ತುವ ರೀತಿಯಲ್ಲಿ ಕೇಂದ್ರದ ಮುಂದೆ ಆಕ್ಸಿಜನ್‌ ಮತ್ತು ವ್ಯಾಕ್ಸೀನ್‌ ಗಳಿಗೆ ದಯನೀಯವಾಗಿ ಯಾಚಿಸುತ್ತಿರುವ ದೃಶ್ಯ ಕಣ್ಣ ಮುಂದೆ ಬಂದಾಗ ಒಕ್ಕೂಟ ವ್ಯವಸ್ಥೆ ಅಂದರೆ ಇದೆಯೇ ಎಂಬ ಪ್ರಶ್ನೆಗಳು ಎದುರಾಗುತ್ತಿವೆ. ಇನ್ನು ಎಷ್ಟು ವರ್ಷಗಳ ಕಾಲ ಹೀಗೆ ಬದುಕಬೇಕು ಎಂದು ಕಾಡುತ್ತದೆ. ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಾದ ದಕ್ಷಿಣ ಭಾರತದ ರಾಜ್ಯಗಳು ಮತ್ತೆಷ್ಟು ವರ್ಷಗಳ ಕಾಲ ಉತ್ತರ ಭಾರತವನ್ನು ಪೋಷಿಸಬೇಕೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ದೇವೆಗೌಡರು ಪ್ರಧಾನಿಯಾಗಿ 25 ವರ್ಷವಾದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಗಳಿಂದ ಮುಂದಾದರೂ ಒಕ್ಕೂಟ ವ್ಯವಸ್ಥೆಯನ್ನು ಜೀವಂತವಿಡುವ, ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸುವ ಗುಣ ದೆಹಲಿಯಲ್ಲಿರುವ ಕರ್ನಾಟಕದ ಜನಪ್ರತಿನಿಧಿಗಳಿಗೆ ಬರಲಿ. ಪ್ರಧಾನಿಯಾಗುವ ಮಹಾತ್ವಾಕಾಂಕ್ಷೆಯಿಂದಾದರೂ ಅವರು ದೆಹಲಿಯಲ್ಲಿ ಕನ್ನಡ ಕಹಳೆ ಊದಲಿ.. ಉತ್ತರ ಪ್ರದೇಶದ ಗಂಗೆಯ ತಟಕ್ಕೆ ಮಾತ್ರ ಒಕ್ಕೂಟದ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸುವ ಗುಣ ಇದೆ ಎಂಬ ಇತಿಹಾಸದ ಪುಟಗಳಲ್ಲಿನ ಮಿಥ್ಯೆಗಳು ಸುಳ್ಳಾಗಲಿ.. ಧ್ವನಿಯಿಲ್ಲದ ರಾಜ್ಯಗಳ ಹಿತಾಸಕ್ತಿಗಾಗಿ ಶ್ರಮಿಸುವ, ಭಾರತ ಒಕ್ಕೂಟದ ಎಲ್ಲಾ ರಾಜ್ಯಗಳ ನೆಲದ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವ ಯಾರಾದರೂ ಈ ದೇಶದ ನಾಯಕರಾಗಲಿ. ಕರ್ನಾಟಕ ಅವರನ್ನು ಬೆಂಬಲಿಸಲಿ. ಕರ್ನಾಟಕದ ನೆಲದ ರಾಜಕಾರಣಿಗಳಿಗೆ ಈ ನಿಟ್ಟಿನಲ್ಲಿ ಹೆಜ್ಜೆಯಿಡಲು ಈ ಸಮಯ ಸ್ಪೂರ್ತಿಯಾಗಲಿ..


ಇದನ್ನೂ ಓದಿ: ತಮಿಳುನಾಡಿಗೆ ಜೂನ್‌‌ ಮೊದಲ ವಾರದಲ್ಲೆ ವ್ಯಾಕ್ಸಿನ್ ಲೋಡ್‌ ಮಾಡಿ: ಕೇಂದ್ರಕ್ಕೆ ಸಿಎಂ ಸ್ಟಾಲಿನ್ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬ್ಯಾಂಕ್ ನೇಮಕಾತಿ ಕುರಿತು:
    ಬ್ಯಾಂಕ್ ಒರೆತಗಳಲ್ಲಿ ಇಂ/ಹಿಂದಿ ಜೊತೆಗೆ ಕನ್ನಡದಲ್ಲಿ ಬರೆಯಲು ಎಡೆಮಾಡಿದರೆ ಇಲ್ಲಿನವರಿಗೆ ತಕ್ಕಪಾಲು ಸಿಗುವಲ್ಲಿ ಏರುಪೇರುಗಳಾಗಬಹುದು.
    ಇಲ್ಲಿರುವ ಬ್ಯಾಂಕ್ ಗಳ ಕೆಲಸಗಾರರು ಇಲ್ಲಿನವರೇ ಆಗಿರಬೇಕೆಂಬ ನೇಮಕಾತಿ ಕಟ್ಟುಪಾಡು ಬರಹಗಾರ ಹೊರಗೆಡವಿರುವ ತೊಡಕಿಗೆ ಪರಿಹಾರವಾಗಬಹುದು.

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....