Homeಮುಖಪುಟ‘30 ಉಗ್ರರನ್ನು ಕೊಲ್ಲಲಾಗಿದೆ’: ಮಣಿಪುರ ಮುಖ್ಯಮಂತ್ರಿ ಬಿರೇನ್‌ ಸಿಂಗ್‌

‘30 ಉಗ್ರರನ್ನು ಕೊಲ್ಲಲಾಗಿದೆ’: ಮಣಿಪುರ ಮುಖ್ಯಮಂತ್ರಿ ಬಿರೇನ್‌ ಸಿಂಗ್‌

ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವಿನ ಘರ್ಷಣೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ

- Advertisement -
- Advertisement -

ಮಣಿಪುರದ ವಿವಿಧೆಡೆ ಭದ್ರತಾ ಪಡೆಗಳು ಮತ್ತು ಶಸ್ತ್ರಸಜ್ಜಿತ ಬಂಡುಕೋರರ ನಡುವೆ ಭಾನುವಾರ ಘರ್ಷಣೆ ಭುಗಿಲೆದ್ದಿದೆ. “ಸುಮಾರು 30 ಉಗ್ರರು ಹತರಾಗಿದ್ದಾರೆ ಮತ್ತು ಕೆಲವರನ್ನು ಬಂಧಿಸಲಾಗಿದೆ” ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ.

“ನಾಗರಿಕರ ವಿರುದ್ಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಉಗ್ರಗಾಮಿ ಗುಂಪುಗಳ ವಿರುದ್ಧ ಪ್ರತೀಕಾರ ಮತ್ತು ರಕ್ಷಣಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯ ಭಾಗವಾಗಿ ವಿವಿಧ ಪ್ರದೇಶಗಳಲ್ಲಿ ಸುಮಾರು 30 ಉಗ್ರಗಾಮಿಗಳನ್ನು ಕೊಲ್ಲಲಾಗಿದೆ. ಕೆಲವರನ್ನು ಭದ್ರತಾ ಪಡೆಗಳು ಬಂಧಿಸಿವೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಶಾಂತಿಯನ್ನು ತರುವ ಸಲುವಾಗಿ ಸೈನ್ಯ ಮುಂದಾಗಿದೆ. ಕುಕಿ ಮತ್ತು ಮಥೇಯಿ ಸಮುದಾಯಗಳ ನಡುವಿನ ಘರ್ಷಣೆಯನ್ನು ತಡೆಯಲು ಕಾರ್ಯಾಚರಣೆ ನಡೆದಿದೆ.

ಇಂಫಾಲ್ ಪಶ್ಚಿಮದ ಉರಿಪೋಕ್‌ನಲ್ಲಿರುವ ಬಿಜೆಪಿ ಶಾಸಕ ಖ್ವೈರಕ್‌ಪಾಮ್ ರಘುಮಣಿ ಸಿಂಗ್ ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ ಮತ್ತು ಅವರ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಉನ್ನತ ಭದ್ರತಾ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಇಂಫಾಲ್ ಕಣಿವೆಯ ಸುತ್ತಮುತ್ತಲಿನ ವಿವಿಧ ಜಿಲ್ಲೆಗಳ ಹಲವಾರು ಸ್ಥಳಗಳಲ್ಲಿ ಮುಂಜಾನೆ ಘರ್ಷಣೆಗಳು ಪ್ರಾರಂಭವಾದವು ಎಂದು ತಿಳಿಸಿದ್ದಾರೆ.

“ನಮ್ಮ ಮಾಹಿತಿಯ ಪ್ರಕಾರ, ಕಾಕ್ಚಿಂಗ್‌ನ ಸುಗ್ನು, ಚುರಾಚಂದ್‌ಪುರದ ಕಾಂಗ್ವಿ, ಇಂಫಾಲ್ ಪಶ್ಚಿಮದ ಕಾಂಗ್‌ಚುಪ್, ಇಂಫಾಲ್ ಪೂರ್ವದ ಸಗೋಲ್ಮಾಂಗ್, ಬಿಷೆನ್‌ಪುರದ ನುಂಗೋಯಿಪೋಕ್ಪಿ, ಇಂಫಾಲ್ ಪಶ್ಚಿಮದ ಖುರ್ಖುಲ್ ಮತ್ತು ಕಾಂಗ್‌ಪೋಕ್ಪಿಯ ವೈಕೆಪಿಐನಲ್ಲಿ ಗುಂಡಿನ ದಾಳಿ ನಡೆದಿದೆ” ಎಂದಿದ್ದಾರೆ.

ಕಾಕ್ಚಿಂಗ್ ಪೊಲೀಸ್ ಠಾಣೆಯಲ್ಲಿದ್ದ ಶಶ್ತ್ರಾಸ್ತ್ರಗಳನ್ನು ಮೈತೇಯಿ ಗುಂಪಿನವರು ಲೂಟಿ ಮಾಡಿದ್ದಾರೆಂಬ ವರದಿಯೂ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಣಿಪುರದಲ್ಲಿ ಇದುವರೆಗೆ 75 ಕ್ಕೂ ಹೆಚ್ಚು ಜೀವಗಳನ್ನು ಈ ಜನಾಂಗೀಯ ಘರ್ಷಣೆ ಬಲಿ ಪಡೆದಿದೆ. ಎಸ್‌ಟಿ ಮೀಸಲಾತಿ ವಿಚಾರವಾಗಿ ಎರಡು ಸಮುದಾಯಗಳ ನಡುವಿನ ಕಲಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮಣಿಪುರ ಮುಖ್ಯಮಂತ್ರಿ ಕುಕಿ ಸಮುದಾಯದ ವಿರೋಧಿಯಾಗಿದ್ದು, ನಮಗೆ ಪ್ರತ್ಯೇಕ ರಾಜ್ಯ ಬೇಕು ಮತ್ತು ಅದಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಪರ ಕುಕಿ ಗುಂಪಿನ ಮುಖ್ಯಸ್ಥ ವಿಲ್ಸನ್ ಲಾಲಂ ಹ್ಯಾಂಗ್‌ಶಿಂಗ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.

‘ದಿ ವೈರ್‌’ ಜಾಲತಾಣದ ಖ್ಯಾತ ಪತ್ರಕರ್ತ ಕರಣ್ ಥಾಪರ್‌ ನಡೆಸಿರುವ ಸಂದರ್ಶನದಲ್ಲಿ ಕುಕಿ ಪೀಪಲ್ಸ್ ಅಲೈಯನ್ಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾಂಗ್‌ಶಿಂಗ್ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದರು.

“ಕುಕಿ ಜನರಿಗೆ ಪ್ರತ್ಯೇಕ ಆಡಳಿತ ಬೇಕು. ಇದೇ ರಾಜ್ಯದಲ್ಲಿ ಮೈಥೇಯಿ ಸಮುದಾಯದೊಂದಿಗೆ ಮುಂದೆಯೂ ಇರುವುದು ಅಸಾಧ್ಯವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದರು.

ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಎನ್. ಬಿರೇನ್ ಸಿಂಗ್ ಸರ್ಕಾರವನ್ನು ಕುಕಿ ಪೀಪಲ್ಸ್ ಅಲಯನ್ಸ್ ಬೆಂಬಲಿಸಿದೆ ಎಂಬುದನ್ನು ಗಮನಿಸಬಹುದು. ಈ ಬಣದ ಪ್ರಭಾವಿ ನಾಯಕ ವಿಲ್ಸನ್ ಲಾಲಂ ಹ್ಯಾಂಗ್‌ಶಿಂಗ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, “ನಮಗೆ ಪ್ರತ್ಯೇಕ ಆಡಳಿತ ಬೇಕೆಂಬ ಬೇಡಿಕೆಯಿಂದ ಕುಕಿ ಸಮುದಾಯ ಹಿಂದೆ ಸರಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ಆಡಳಿತವೆಂದರೆ ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಆಗಿರಬಹುದು ಎಂದು ಅವರು ಹೇಳಿದ್ದಾರೆ. ಮಣಿಪುರದೊಳಗೆ ಸ್ವಾಯತ್ತ ಪ್ರಾದೇಶಿಕ ಮಂಡಳಿಗಳ ಆಯ್ಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗಿದೆ ಎಂದು ಅವರು ವಿಷಾದಿಸಿದ್ದಾರೆ.

“ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಮೇಲಿನ ನಂಬಿಕೆಯನ್ನು ಕುಕಿ ಪೀಪಲ್ಸ್ ಅಲೈಯನ್ಸ್ ಕಳೆದುಕೊಂಡಿದೆ” ಎಂದಿರುವ ಅವರು, ತಾಂತ್ರಿಕವಾಗಿ ಬೆಂಬಲವನ್ನು ಹಿಂತೆಗೆದುಕೊಳ್ಳದಿದ್ದರೂ, ಮುಂದಿನ ದಿನಗಳಲ್ಲಿ ಬೆಂಬಲ ವಾಪಸ್ ಪಡೆಯುವ ಸೂಚನೆಯನ್ನೂ ಅವರು ನೀಡಿದ್ದಾರೆ.

ಇದನ್ನೂ ಓದಿರಿ: ಮಣಿಪುರ ಹಿಂಸಾಚಾರ: ಅಗತ್ಯ ವಸ್ತುಗಳ ಬೆಲೆ ಮುಗಿಲೆತ್ತರ!

ಬಿರೇನ್ ಸಿಂಗ್ ಅವರು ತಮ್ಮದೇ ಆದ ಬಹುಮತವನ್ನು ಹೊಂದಿರುವುದರಿಂದ, ಕುಕಿ ಪೀಪಲ್ಸ್ ಅಲೈಯನ್ಸ್‌ನ ಬೆಂಬಲವು ತಾಂತ್ರಿಕವಾಗಿ ಅತ್ಯುತ್ತಮವಾಗಿದೆ ಎಂದು ಅವರು ವಿವರಿಸಿದ್ದಾರೆ. ಬಿರೇನ್ ಸಿಂಗ್ ‘ಕುಕಿ ವಿರೋಧಿ’ ಎಂದು ಹ್ಯಾಂಗ್‌ಶಿಂಗ್ ಕಿಡಿಕಾರಿದ್ದಾರೆ.

ಕುಕಿ ಮತ್ತು ಮೈಥೇಯಿ ಸಮುದಾಯದ ನಡುವಿನ ಸಮಸ್ಯೆಗೆ ಬಿರೇನ್‌ ಸಿಂಗ್ ಅವರು ಕಳೆದ ನಾಲ್ಕೈದು ವರ್ಷಗಳಲ್ಲಿ ತೋರಿರುವ ವರ್ತನೆಯೇ ಕಾರಣ ಎಂದು ಹ್ಯಾಂಗ್‌ಶಿಂಗ್ ಆರೋಪಿಸಿದ್ದಾರೆ.

ಸಿಎಂ ಬಿರೇನ್ ಸಿಂಗ್ ಅವರು ಬೇಜವಾಬ್ದಾರಿ ತೋರಿದ್ದಾರೆಂದು ಉದಾಹರಣೆಗಳನ್ನು ಅವರು ನೀಡಿದ್ದಾರೆ. “ತಮ್ಮ ಮನೆಯನ್ನು ಲೂಟಿ ಮಾಡಲಾಗುತ್ತಿದೆ, ಸುಟ್ಟು ಹಾಕಲಾಗುತ್ತಿದೆ” ಎಂದು ಹೇಳಲು ಬಿಜೆಪಿ ಶಾಸಕ, ಬಿರೇನ್ ಸಿಂಗ್ ಅವರ ಸರ್ಕಾರದ ಸದಸ್ಯ ಲೆಟ್ಪಾವೊ ಹಾಕಿಪ್ ಅವರು ಬಿರೇನ್ ಸಿಂಗ್ ಅವರಿಗೆ ಪದೇ ಪದೇ ಫೋನ್ ಮಾಡಿದರೂ ಸ್ಪಂದಿಸಿಲ್ಲ ಎಂದು ಟೀಕಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read