Homeಮುಖಪುಟ50,000 ಜನರನ್ನು ರಾತ್ರೋರಾತ್ರಿ ಕಿತ್ತೊಗೆಯಲು ಸಾಧ್ಯವಿಲ್ಲ: ಹಲ್ದ್‌ವಾನಿ ಒಕ್ಕಲೆಬ್ಬಿಸುವಿಕೆಗೆ ಸುಪ್ರೀಂ ತಡೆ

50,000 ಜನರನ್ನು ರಾತ್ರೋರಾತ್ರಿ ಕಿತ್ತೊಗೆಯಲು ಸಾಧ್ಯವಿಲ್ಲ: ಹಲ್ದ್‌ವಾನಿ ಒಕ್ಕಲೆಬ್ಬಿಸುವಿಕೆಗೆ ಸುಪ್ರೀಂ ತಡೆ

- Advertisement -
- Advertisement -

ಉತ್ತರಾಖಂಡ ರಾಜ್ಯದ ಹಲ್ದ್‌ವಾನಿ ಜಿಲ್ಲೆಯ ಬನ್‌ಭೂಲ್‌ಪುರ ಪ್ರದೇಶದ ರೈಲು ನಿಲ್ದಾಣದ ಪಕ್ಕದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು, ಮನೆ ಕಟ್ಟಿಕೊಂಡು ತಲೆಮಾರುಗಳಿಂದ ವಾಸಿಸುತ್ತಿದ್ದು ಸುಮಾರು 4,000ಕ್ಕೂ ಹೆಚ್ಚು ಕುಟುಂಬಗಳನ್ನು ಅಲ್ಲಿಂದ ಒಕ್ಕಲಿಬ್ಬಿಸಬೇಕು ಎಂಬ ಉತ್ತರಾಖಂಡ ಹೈಕೋರ್ಟ್ ಆದೇಶಕ್ಕೆ ಇಂದು ಸುಪ್ರೀಂ ಕೋರ್ಟ್ ತಡೆ ನೀಡಿದೆ.

50,000 ಜನರನ್ನು ರಾತ್ರೋರಾತ್ರಿ ಬೇರು ಸಮೇತ ಕಿತ್ತೊಗೆಯಲು ಸಾಧ್ಯವಿಲ್ಲ. ಇದೊಂದು ಮಾನವೀಯ ವಿಷಯ. ಇದಕ್ಕೆ ಕಾರ್ಯಸಾಧುವಾದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರ ಪೀಠವು “ಏಳು ದಿನಗಳಲ್ಲಿ 4,000 ಕ್ಕೂ ಅಧಿಕ ಕುಟುಂಬಗಳನ್ನು ಬೀದಿಪಾಲು ಮಾಡಲು ಸಾಧ್ಯವೇ? ಅವರು ಅಲ್ಲಿ ಬಹಳ ವರ್ಷಗಳಿಂದ ವಾಸವಿದ್ದಾರೆ ಎನ್ನಲಾಗಿದೆ. ಅವರನ್ನು ಪುನರ್ವಸತಿ ಇಲ್ಲದೆ ಕೊರೆಯುವ ಚಳಿಯಲ್ಲಿ ಬೀದಿಗೆ ತಳ್ಳಲು ಸಾಧ್ಯವಿಲ್ಲ” ಎಂದಿದೆ.

ದಶಕಗಳಿಂದ ಅಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಲು ಅರೆಸೈನಿಕ ಪಡೆಗಳನ್ನು ನಿಯೋಜಿಸಬೇಕು ಎಂದು ಹೇಳುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹೇಳಿದ್ದಾರೆ.

ನ್ಯಾಯಾಲಯವು ಈ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಮಾಡಬಾರದು ಎಂದು ಆದೇಶಿಸಿ, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರೈಲ್ವೆ ಮತ್ತು ಉತ್ತರಾಖಂಡ ಸರ್ಕಾರಕ್ಕೆ ಸೂಚಿಸಿದೆ. ಮುಂದಿನ ತಿಂಗಳು ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಹೇಳಿದೆ.

ಏನಿದು ಪ್ರಕರಣ?

ಉತ್ತರಾಖಂಡ ರಾಜ್ಯದ ಹಲ್ದ್‌ವಾನಿ ಜಿಲ್ಲೆಯ ರೈಲ್ವೆ ನಿಲ್ದಾಣದ ಬಳಿಯ ಬನ್‌ಭೂಲ್‌ಪುರ ಪ್ರದೇಶದ 2 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 4,000ಕ್ಕೂ ಹೆಚ್ಚು ಕುಟುಂಬಗಳು ಹಿಂದಿನಿಂದಲೂ ವಾಸಿಸುತ್ತಿವೆ. ಅಲ್ಲಿನ ಬಹುತೇಕ ಮುಸ್ಲಿಂ ಸುಮುದಾಯಕ್ಕೆ ಸೇರಿದ್ದಾರೆ. ಆ ಜಾಗವು ರೈಲ್ವೆ ಇಲಾಖೆಗೆ ಸೇರಿದ್ದು, ಅಲ್ಲಿನ ಜನರು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅದೇ ವಾದವನ್ನು ಉತ್ತರಾಖಂಡ ಹೈಕೋರ್ಟ್ ಎತ್ತಿ ಹಿಡಿದು ಡಿಸೆಂಬರ್ 20 ರಂದು ಅವರನ್ನು ಅಲ್ಲಿಂದ ತೆರವುಗೊಳಿಸಲು ಆದೇಶಿಸಿತ್ತು.

ಈ ಆದೇಶದಿಂದ ತತ್ತರಿಸಿರುವ ಅಲ್ಲಿನ ನಿವಾಸಿಗಳು ಇದು ರೈಲ್ವೆ ಇಲಾಖೆಯ ಜಾಗವಲ್ಲ ಎಂದು ವಾದಿಸಿ, ಒಕ್ಕಲೆಬ್ಬಿಸುವಿಕೆಯನ್ನು ನಿಲ್ಲಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. ನ್ಯಾಯವಾದಿ ಪ್ರಶಾಂತ್ ಭೂಷಣ್ ಸಂತ್ರಸ್ತರ ಪರವಾಗಿ ಅರ್ಜಿ ಸಲ್ಲಿಸಿ ವಾದಿಸಿದ್ದರು. ಸುಪ್ರೀಂ ಕೋರ್ಟ್ ಅರ್ಜಿದಾರರ ಪರ ನಿಂತಿದೆ.

ನಾವಿಲ್ಲಿ ಹಲವಾರು ತಲೆಮಾರುಗಳಿಂದ ವಾಸಿಸುತ್ತಿದ್ದೇವೆ. ನಮ್ಮ ಮನೆಗಳಿಗೆ ತೆರಿಗೆ ಕಟ್ಟುತ್ತಿದ್ದೇವೆ. ಈ ಪ್ರದೇಶದಲ್ಲಿ ಐದು ಸರ್ಕಾರಿ ಶಾಲೆಗಳು, ಒಂದು ಆಸ್ಪತ್ರೆ ಮತ್ತು ಎರಡು ಓವರ್‌ಹೆಡ್ ನೀರಿನ ಟ್ಯಾಂಕ್‌ಗಳಿವೆ. ಇಂತಹ ಪ್ರದೇಶವನ್ನು ಅಕ್ರಮವೆಂದು ನೆಲಸಮ ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಭೂಮಿಯ ಒಡೆತನದ ವ್ಯಾಜ್ಯ ಇನ್ನು ಜಿಲ್ಲಾ ಕೋರ್ಟ್‌ನಲ್ಲಿರುವಾಗ ಒಕ್ಕಲೆಬ್ಬಿಸುವಿಕೆಗೆ ಹೈಕೋರ್ಟ್ ಆದೇಶಿಸಿರುವುದು ಕಾನೂನುಬಾಹಿರ ಎಂದು ಅಲ್ಲಿನ ನಿವಾಸಿಗಳು ವಾದಿಸಿದ್ದಾರೆ.

ಈ ಪ್ರದೇಶದಲ್ಲಿ ಬಹುತೇಕ ಮುಸ್ಲಿಂ ಸಮುದಾಯಗಳು ವಾಸಿಸುತ್ತಿರುವ ಕಾರಣ ಹಗೆತನದಿಂದಾಗಿ ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಲೆಮಾರುಗಳಿಂದ ಇಲ್ಲಿ ಬದುಕಿದ ನಮಗೆ ಈ ಜಾಗದ ಒಡೆತನದ ಹಕ್ಕಿದೆ. ನಮ್ಮನ್ನು ಒಕ್ಕಲೆಬ್ಬಿಸುವುದು ಬೇಡ ಎಂದು ಅಲ್ಲಿನ ಸಾವಿರಾರು ಮಹಿಳೆಯರು ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read