Homeಮುಖಪುಟಪ್ರಧಾನಿ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿಯನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ?: ನಾಯಿಮರಿ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ

ಪ್ರಧಾನಿ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿಯನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ?: ನಾಯಿಮರಿ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ

ಯಡಿಯೂರಪ್ಪನವರನ್ನು ರಾಜಾ ಹುಲಿ ಎಂದು ಬಣ್ಣಿಸುತ್ತಾರೆ. ನನ್ನನ್ನು ಟಗರು ಎಂದು ಹಾಡುತ್ತಾರೆ. ನಾವೇನು ಕೋಪ ಮಾಡಿಕೊಂಡಿದ್ದೇವೆಯೇ?

- Advertisement -
- Advertisement -

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ನಾಯಿಮರಿಗೆ ಹೋಲಿಸಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ. ಹಳ್ಳಿ ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು ಮುಖ್ಯಮಂತ್ರಿಗಳನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತ ಇರಲಿಲ್ಲ, ಅದನ್ನು ಅನವಶ್ಯಕವಾಗಿ ವಿವಾದ ಮಾಡಲಾಗಿದೆ ಎಂದಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೆದುರು ಮಾತನಾಡುವ ಧೈರ್ಯ ಇಲ್ಲ, ಬೇರೆಯವರ ಧಮ್, ತಾಕತ್ ಪ್ರಶ್ನಿಸುವ ಬೊಮ್ಮಾಯಿಯೇ ಸ್ವತಃ ಮೋದಿಯವರನ್ನು ಕಂಡ್ರೆ ಹೆದರುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದೆ. ಅದನ್ನು ಅನವಶ್ಯಕವಾಗಿ ವಿವಾದ ಮಾಡಲಾಗಿದೆ” ಎಂದಿದ್ದಾರೆ.

ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು ಮುಖ್ಯಮಂತ್ರಿಗಳನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತ ಇರಲಿಲ್ಲ. ಪ್ರಾಣಿ-ಪಕ್ಷಿ-ಹೂ-ಹಣ್ಣುಗಳನ್ನು ಅವುಗಳ ಸ್ವಭಾವಗಳ ಸಾಮ್ಯತೆಗೆ ಅನುಗುಣವಾಗಿ ಮನುಷ್ಯರಿಗೆ ಹೋಲಿಸುವುದು ಜನಪದ ಸಂಸ್ಕೃತಿ. ಯಾವ ಪ್ರಾಣಿ-ಪಕ್ಷಿಯೂ ಕೀಳೂ ಅಲ್ಲ, ಮೇಲು ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಹುಲಿ ಮನುಷ್ಯರನ್ನು ಕೊಂದು ತಿನ್ನುವ ಪ್ರಾಣಿ. ಬಿಜೆಪಿಯವರೇ ಯಡಿಯೂರಪ್ಪನವರನ್ನು ರಾಜಾ ಹುಲಿ ಎಂದು ಬಣ್ಣಿಸುತ್ತಾರೆ. ಅದನ್ನೂ ಅವಮಾನ ಎಂದು ತಿಳಿದುಕೊಳ್ಳಬಹುದಲ್ಲಾ? ಟಿವಿ ಚಾನೆಲ್‌ನವರು ಪ್ರತಿದಿನ ನನ್ನನ್ನು ‘ಟಗರು’ ‘ಟಗರು’ ಎಂದು ಹಾಡು ಕಟ್ಟಿ ತೋರಿಸುತ್ತಾರೆ. ಟಗರು ಗುಮ್ಮುತ್ತೆ, ನಾನು ಯಾರಿಗೆ ಗುಮ್ಮಿದ್ದೇನೆ? ನಾನೂ ಅವಮಾನ ಮಾಡಿದ್ದಾರೆ ಎಂದು ಕೋಪಮಾಡಿಕೊಳ್ಳಬಹುದಲ್ಲಾ? ಎಂದು ಪ್ರಶ್ನಿಸಿದ್ದಾರೆ.

ಸಾವಿರಾರು ಮಂದಿ ಹತ್ಯೆಗೀಡಾದ ಗುಜರಾತ್ ಗಲಭೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ “ಕಾರಿಗೆ ಅಡ್ಡಬಂದು ನಾಯಿಮರಿ ಸತ್ತರೆ ಏನು ಮಾಡೋಣ” ಎಂದು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಹೇಳಿದ್ದರು. ಇದೂ ವಿವಾದವಾಗಿತ್ತಲ್ಲವೇ? ಎಂದಿದ್ದಾರೆ.

ನಾಯಿ ಸ್ವಾಮಿ ನಿಷ್ಠೆಗೆ ಹೆಸರಾದರೆ, ನಾಯಿ‌ಮರಿ ಪುಕ್ಕಲು ಸ್ವಭಾವಕ್ಕೆ ಕುಖ್ಯಾತಿ‌ಪಡೆದಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಪ್ರಧಾನಿ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿಯನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ? ನಾಯಿ ಮರಿ, ಬೆಕ್ಕಿನ ಮರಿಗಳಿಗೆ ಹೋಲಿಸಬೇಕಲ್ಲಾ ಎಂದು ಸಿದ್ದರಾಮಯ್ಯ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಮಗೆ ನಾಡಿನ ಹಿತ ಮುಖ್ಯ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ 5,495 ಕೋಟಿ ವಿಶೇಷ ಅನುದಾನವನ್ನು ನೀಡಲು ನಿರ್ಮಲಾ ಸೀತಾರಾಮನ್ ಅವರು ನಿರಾಕರಿಸಿದರು, ಅವರೊಂದಿಗೆ ಮಾತನಾಡಿ ಈ ಅನುದಾನ ತರಲು ಬೊಮ್ಮಾಯಿ ಅವರಿಂದ ಸಾಧ್ಯವಾಗಿಲ್ಲ. ಇದರಿಂದ ನಷ್ಟವಾಗಿದ್ದು ರಾಜ್ಯಕ್ಕಲ್ಲವೇ? ರಾಜ್ಯಕ್ಕೆ ಸಿಗಬೇಕಾದ ಅನುದಾನ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ, ಪೂರ್ಣಪ್ರಮಾಣದ ಜಿಎಸ್‌ಟಿ ಪರಿಹಾರ ಬಂದಿಲ್ಲ, ಬರ, ನೆರೆ ಪರಿಹಾರದ ಹಣ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರೋರು ಇದನ್ನೆಲ್ಲ ಗಟ್ಟಿ ಧ್ವನಿಯಲ್ಲಿ ಕೇಳದೆ ಹೆದರಿ ಸುಮ್ಮನಿದ್ರೆ ನಾಡಿಗೆ ಅನ್ಯಾಯವಾಗಲ್ವ? ಎಂದು ಪ್ರಶ್ನಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ನಮ್ಮ ಒಡನಾಟದವರು, ಅವರೇನು ಬೇಸರ ಮಾಡಿಕೊಂಡಿರಲಾರರು. ಸುತ್ತಲಿನ ವಂದಿ-ಮಾಗದರು ಅವರನ್ನು ಓಲೈಸಲಿಕ್ಕಾಗಿ ಖಂಡಿಸಿ, ಮಂಡಿಸಿ ವಿವಾದ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಬೊಮ್ಮಾಯಿಯವರು ಜಾಗರೂಕರಾಗಿರುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಹೇಳಿಕೆ ಅವರ ವ್ಯಕ್ತಿತ್ವಕ್ಕೆ ತೋರಿಸುತ್ತದೆ

ತಮ್ಮ ವಿರುದ್ಧ ಸಿದ್ದರಾಮಯ್ಯ ನಾಯಿ ಮರಿ ಪದ ಬಳಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿಯವರು, “ಆ ಹೇಳಿಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ತೋರಿಸುತ್ತದೆ. ನಾಯಿ ನಿಯತ್ತಿನ ಪ್ರಾಣಿ. ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ. ನಿಯತ್ತನ್ನ ಜನರ ಪರವಾಗಿ ಉಳಿಸಿಕೊಂಡು ಹೋಗುವೆ. ಸಿದ್ದರಾಮಯ್ಯನವರಿಗೆ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ” ಎಂದಿದ್ದಾರೆ.

“ಮೋದಿಯವರು ಪ್ರಧಾನಿಯಾದ ನಂತರ ರಾಜ್ಯಕ್ಕೆ ವಿಶೇಷವಾದ ಕೊಡುಗೆಗಳನ್ನು ನೀಡಿದ್ದಾರೆ. ಮೋದಿಯವರು ರಾಜ್ಯಕ್ಕೆ 6 ಸಾವಿರ ಕಿ.ಮೀ ಹೆದ್ದಾರಿ ಕೊಡಿಗೆ ನೀಡಿದ್ದಾರೆ. ಸ್ವತಂತ್ರ ಬಂದ ನಂತರ ಒಂದು ರಾಜ್ಯಕ್ಕೆ ಇಷ್ಟು ದೊಡ್ಡ ಬಂದಿರುವುದು ಒಂದು ದಾಖಲೆ. ಬೆಂಗಳೂರು ಮೈಸೂರು ಹೆದ್ದಾರಿ ಯೋಜನೆ, ಮಂಗಳೂರು ಕಾರವಾರ ಬಂದರು, ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಬರುವ ದಿನಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಅನುದಾನ ನೀಡಲಿದ್ದಾರೆ. ಎಲ್ಲಾ ಮಹಾನಗರಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಇರಲಿಲ್ಲ. ಇಂಥ ಮಹತ್ವದ ಯೋಜನೆಗಳನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ. ಮೋದಿ ಕೊಡುವ ಕಾಮಧೇನು
ಸಿದ್ದರಾಮಯ್ಯನವರಿಗೆ ಅದರ ಬಗ್ಗೆ ಜ್ಞಾನ ಇಲ್ಲ” ಎಂದು ಬೊಮ್ಮಾಯಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...