Homeಚಳವಳಿಪರಿಷ್ಕೃತ ಪಠ್ಯದಲ್ಲಿ ಆದಿವಾಸಿಗಳ ಅವಹೇಳನ: ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು

ಪರಿಷ್ಕೃತ ಪಠ್ಯದಲ್ಲಿ ಆದಿವಾಸಿಗಳ ಅವಹೇಳನ: ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲು ಆಗ್ರಹಿಸಲಾಗಿದೆ.

- Advertisement -
- Advertisement -

ಪಠ್ಯ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೊಸ ಸಮಿತಿ ಮಾಡಿರುವ ಅವಾಂತರಗಳು ಕ್ಷಣ ಕ್ಷಣಕ್ಕೂ ಬಹಿರಂಗವಾಗುತ್ತಿದ್ದು ಸರ್ಕಾರಕ್ಕೆ ಇಕ್ಕಟ್ಟು ತಂದಿವೆ. ಈ ನಡುವೆ ಪರಿಷ್ಕೃತ ಪಠ್ಯದಲ್ಲಿ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ರಾಮನಗರ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಲಾಗಿದೆ. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ದೂರು ಸ್ವೀಕರಿಸಿರುವ ರಾಮನಗರ ಪೊಲೀಸ್ ಅಧೀಕ್ಷಕರು ಸದರಿ ವಿಚಾರದ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಹಾಗೂ ಇತರ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ.ಎಸ್ ಸೆಲ್ವಕುಮಾರ್‌ರವರಿಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿ ನಾನುಗೌರಿ.ಕಾಂಗೆ ಲಭ್ಯವಾಗಿದೆ.

10 ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ನಮ್ಮ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಪಠ್ಯ ಮುದ್ರಿಸಿರುವ ರೋಹಿತ್ ಚಕ್ರತೀರ್ಥ ಮತ್ತು ಇತರೆ ಸದಸ್ಯರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿಯವರು ದೂರು ಸಲ್ಲಿಸಿದ್ದಾರೆ.

10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಶೀರ್ಷಿಕೆಯಲ್ಲಿ “ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಆದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ” ಎಂಬುವುದಾಗಿ ಅವಹೇಳನಕಾರಿಯಾಗಿ ಮುದ್ರಿಸಿ ಆದಿವಾಸಿಗಳನ್ನು (ಕಾಡುವಾಸಿ) ಉದ್ದೇಶಪೂರ್ವಕವಾಗಿ ಅನಾಗರಿಕರೆಂದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದಿವಾಸಿಗಳ ಘನತೆ, ಸಂಸ್ಕೃತಿಯನ್ನು ಅಲ್ಲಗೆಳೆದು ನಮ್ಮನ್ನು ಮನುಷ್ಯರಂತೆ ಕಾಣದ ವಿಕೃತ ಮನೋದೋರಣೆಯ ರೋಹಿತ್ ಚಕ್ರತೀರ್ಥ ಮತ್ತು ಇತರ ಸದಸ್ಯರನ್ನು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಬಂಧಿಸಿ, ಕಾನೂನ ರೀತ್ಯಾ ಕ್ರಮ ಜರುಗಿಸಬೇಕೆಂದು ಮನವಿ ಮಾಡಲಾಗಿದೆ.

ಪಠ್ಯದಲ್ಲಿ ಇರುವುದೆನು?

ಈ ಹಿಂದಿನ ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಸಮಿತಿಯು ಪಠ್ಯಪೂರಕ ಅಧ್ಯಯನದ ಭಾಗವಾಗಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಪಠ್ಯವನ್ನು ಸೇರಿಸಿತ್ತು. ಅದರಲ್ಲಿ ವಿವೇಕಾನಂದರಿಗೆ ಬಡಜನರ ಬಗ್ಗೆ ಇದ್ದ ಪ್ರೀತಿ, ಹಸಿವು ಹೋಗಲಾಡಿಸಲು ಅವರು ಕರೆ ನೀಡಿದ್ದು, ಸರ್ವಧರ್ಮ ಸಹಿಷ್ಣುತೆಯ ವಿಚಾರಗಳನ್ನು ಸೇರಿಸಿ ಸರಳವಾಗಿ ಹೇಳಲಾಗಿತ್ತು. “ಸ್ವಮತಾಭಿಮಾನ, ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ… ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು” ಎಂಬ ಚಿಕಾಗೋ ಸಮ್ಮೇಳನದ ಅವರ ಭಾಷಣವನ್ನು ಸೇರಿಸಲಾಗಿತ್ತು.

ಆದರೆ ರೋಹಿತ್ ಚಕ್ರತೀರ್ಥ ನೇತೃತ್ವದ ನೂತನ ಸಮಿತಿಯು ಆ ಪಠ್ಯವನ್ನು ಸಂಪೂರ್ಣ ಕೈಬಿಟ್ಟು ಅದೇ ಶೀರ್ಷಿಕೆಯಲ್ಲಿ ಹೊಸ ಪಠ್ಯ ಸೇರಿಸಿದೆ. ಅದರಲ್ಲಿ ಕಾಡುಜನರಂತೆ ಇರುವರು ಎಂಬ ಹೋಲಿಕೆ ಮಾಡುವ ಮೂಲಕ ಈ ನಾಡಿನ ಮೂಲನಿವಾಸಿಗಳಾದ ಆದಿವಾಸಿಗಳನ್ನು ಅವಹೇಳನ ಮಾಡಿ, ಸಂಸ್ಕೃತಿಯ ವ್ಯಸನ ಹೇರಲಾಗಿದೆ. ‘ಕಾಡುಜನರಂತೆ ಇರುವರು’ ಎಂದು ಸ್ವಾಮಿ ವಿವೇಕಾನಂದರು ಎಲ್ಲಿಯೂ ಹೇಳಿರದಿದ್ದರೂ ಅವರ ಹೆಸರಿನಲ್ಲಿ ಆ ಪದಗಳನ್ನು ಹಾಕಿ ಅವಮಾನಿಸಲಾಗಿದೆ ಎಂದು ವಿವೇಕಾನಂದರ ಕುರಿತು ಅಧ್ಯಯನ ನಡೆಸಿರುವ ತಜ್ಞರು ತಿಳಿಸಿದ್ದಾರೆ.

ಈ ಕೆಳಗೆ ಎರಡೂ ಸಮಿತಿ ನೀಡಿರುವ ಪೂರ್ಣ ಪಠ್ಯವನ್ನು ಪ್ರಕಟಿಸಲಾಗಿದೆ. ಆಸಕ್ತರು ಓದಬಹುದು.

ಹಿಂದಿನ ಸಮಿತಿಯ ಪಠ್ಯ (ಕೈಬಿಟ್ಟ ಪಠ್ಯ)

ವಿವೇಕಾನಂದರೆಂದರೆ ಸಾಮಾಜಿಕ ಸಂಕಟ, ಸಿಟ್ಟು, ಸ್ಫೋಟ, ಸ್ಪಷ್ಟತೆಗಳ ರೂಪಕ. ಅವರು ಶಿಖರ ಚಿಂತಕ, ಅವರ ಆಲೋಚನೆಯಲ್ಲಿ ಗೊಂದಲಗಳಿಲ್ಲ. ಕೆಲವೊಮ್ಮೆ ವೈರುದ್ಧದಂತೆ ಕಂಡರೂ ಅದು ಸಾಂದರ್ಭಿಕ ಪ್ರತಿಕ್ರಿಯೆಗಳ ಫಲ. ಅವರ ಎಲ್ಲ ವಿಚಾರಗಳನ್ನು ಒಟ್ಟಿಗೇ ನೋಡಿದಾಗ ಸ್ಪಷ್ಟ ನೋಟ ಕಾಣಿಸುತ್ತದೆ.

ದೈಹಿಕ ಹಸಿವನ್ನು ಹಿಂಗಿಸುವುದು ಮೊದಲ ಆದ್ಯತೆ; ಅನಂತರ ಆತ್ಮದ ಅವರ ಹಸಿವು, ವೇದಾಂತದ ಹಸಿವು, ಸಾಂಸ್ಥಿಕವಾದ ಧರ್ಮದ ಹಸಿವು. ಈ ಕಾರಣದಿಂದಾಗಿಯೇ ವಿವೇಕಾನಂದರು ಯಾವತ್ತೂ ಧಾರ್ಮಿಕ ಮೂಲಭೂತವಾದಿಯಾಗಿರಲಿಲ್ಲ. ಬದಲಾಗಿ ಧಾರ್ಮಿಕ ಮೂಲಭೂತವಾದಕ್ಕೆ ಉಗ್ರ ವಿರೋಧಿಯಾಗಿದ್ದರು. ಜಾತಿವಾದ ಮತ್ತು ಕೋಮುವಾದಕ್ಕೆ ಪ್ರತಿರೋಧವೊಡ್ಡಿದರು. ಹಿಂದೂಧರ್ಮದೊಳಗಿದ್ದೂ ಅದನ್ನು ಮೀರಿದ ಸಾಮಾಜಿಕ ಶಕ್ತಿಯಾದರು. ಆದ್ದರಿಂದ ಇಂದಿನ ಸನ್ನಿವೇಶದಲ್ಲಿ ಅವರು ಹೆಚ್ಚು ಪ್ರಸ್ತುತರು. ಈ ಅಂಶವನ್ನು ಮುಂದಿನಂತೆ ಮತ್ತಷ್ಟು ವಿವರಿಸಬಹುದು: ಜಾತಿವಾದ ಮತ್ತು ಕೋಮುವಾದಗಳು ಮುನ್ನೆಲೆಗೆ ಬಂದು ಮಾನವೀಯ ಮೌಲ್ಯವನ್ನು ನುಂಗಿ ನೊಣೆಯುತ್ತಿವೆ. ಸಮಾನತೆಯ ಆಶಯಗಳನ್ನು ತಪ್ಪಿತಸ್ಥ ಶಾಲಾ ಬಾಲಕರಂತೆ ಹಿಂದಿನ ಸಾಲಿನಲ್ಲಿ ಕೈಕಟ್ಟಿ ನಿಲ್ಲಿಸಲಾಗಿದೆ. ಬಡಜನರ ಪರವಾದ ಆದ್ಯತೆಗಳು ಪಲ್ಲಟಗೊಳ್ಳುತ್ತಿವೆ. ವಿವೇಕಾನಂದರಿಗೆ ಬಡಜನರ ಹೊಟ್ಟೆಹಸಿವನ್ನು ಹಿಂಗಿಸುವುದು ಮೊದಲ ಆದ್ಯತೆಯಾಗಿತ್ತು. ಆನಂತರ ಧರ್ಮ, ಜಾತಿವಾದದ ವಿಷಯಕ್ಕೆ ಬಂದರೆ ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ ಅವರಿಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು. ಹೀಗಾಗಿಯೇ ಅವರು ಸಂಶಯಕ್ಕೆಡೆಯಿಲ್ಲದಂತೆ ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ವಿರೋಧಿಸಿದರು. ಅವರು “ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ” ಎಂದು ಹೇಳಿದರು. ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿ ಶೂದ್ರರು, ಅಸ್ಪಶ್ಯರು ಸ್ವಾತಂತ್ರ್ಯಹೀನರಾಗಿ ಗುಲಾಮತನ ಅನುಭವಿಸುವುದನ್ನು ಟೀಕಿಸುವ ವಿವೇಕಾನಂದರು ಶೂದ್ರವರ್ಗ ತನ್ನ ಊಳಿಗ ಸ್ವಭಾವ’ವನ್ನು ಬಿಟ್ಟು ಹೊರಬರಬೇಕೆಂದು ಕರೆಕೊಡುತ್ತಾರೆ. ಮುಂದೊಮ್ಮೆ ಶೂದ್ರರು ತಮ್ಮ ಶೂದ್ರತ್ವದ ಶಕ್ತಿಯಿಂದಲೇ ಮೇಲೇಳುವ ಕಾಲಬರುತ್ತದೆ ಎಂದು ಭಾವಿಸುತ್ತಾರೆ ಮತ್ತು ವಿಶೇಷವೆಂದರೆ, ಮುಂದೆ ಬರುವುದು ಸಮತಾವಾದ, ಅರಾಜವಾದ, ಶೂನ್ಯವಾದಗಳು ಮುಂದಾಗಲಿರುವ ಸಮಾಜ ಕ್ರಾಂತಿಯ ಅರುಣೋದಯ” ಎಂದು ಘೋಷಿಸಿದ್ದಾರೆ.

ಕೋಮುವಾದದ ವಿಷಯಕ್ಕೆ ಬಂದರೆ ವಿವೇಕಾನಂದರೆಂದೂ ಏಕಸಂಸ್ಕೃತಿ ಮತ್ತು ಏಕ ಧರ್ಮ ವಿಸ್ತರಣೆಗಳ ಪರವಾಗಿರಲಿಲ್ಲ. ಅದು ಹಿಂದೂ ಧರ್ಮವಿರಲಿ, ಕ್ರೈಸ್ತ ಧರ್ಮವಿರಲಿ, ಇಸ್ಲಾಂ ಧರ್ಮವಿರಲಿ, ಏಕಧರ್ಮ ಶ್ರೇಷ್ಠತೆ ಮತ್ತು ವಿಸ್ತರಣೆಯು ಜೀವವಿರೋಧವೆಂದು ಅವರು ಭಾವಿಸಿದ್ದರು; ೧೧-೦೯-೧೮೯೩ ರಂದು ಚಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತ ಅವರು “ಸ್ವಮತಾಭಿಮಾನ, ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ… ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು” ಎಂದರು. ಇನ್ನೊಮ್ಮೆ ಅವರು ಹೀಗೆ ಹೇಳಿದರು : ಪ್ರತಿಯೊಬ್ಬರೂ ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ. ಈಗ ಧರ್ಮ ಮತ್ತು ಆಧ್ಯಾತ್ಮಿಕ ಭಾವನೆ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ….. ನಾವು ಎಲ್ಲ ಧರ್ಮಗಳಿಗೂ ಗೌರವವನ್ನು ತೋರಬೇಕು.”

ವಿವೇಕಾನಂದರ ಧಾರ್ಮಿಕ ಚಿಂತನೆಗಳನ್ನು ಅವಲೋಕಿಸಿದಾಗ ಅವರು ಸ್ಪಷ್ಟವಾಗಿ ಕೋಮುವಾದ ವಿರೋಧಿಯಾಗಿದ್ದರೆಂದು ತಿಳಿದುಬರುತ್ತದೆ. ಕೋಮುವಾದವು ಏಕಧರ್ಮ ಮತ್ತು ಏಕಸಂಸ್ಕೃತಿಯೇ ಶ್ರೇಷ್ಠವೆಂದೂ ಅದೇ ಅಂತಿಮವೆಂದೂ ನಂಬುತ್ತ ನಂಬಿಸುತ್ತ, ಪರಮಧರ್ಮ ದ್ವೇಷವನ್ನು ಬಿತ್ತಿ ಬೆಳೆಸುತ್ತದೆ. ಇಂತಹ ಪ್ರವೃತ್ತಿಗೆ ವಿವೇಕಾನಂದರು ಕಟ್ಟಾ ವಿರೋಧಿಯಾಗಿದ್ದರು. ಕುವೆಂಪು ಅವರು ಹೇಳುವಂತೆ ಅವರು ‘ಮಾನವತಾಮಿತ್ರ’ರಾಗಿದ್ದರು. “ಮನುಷ್ಯತ್ವದ ಮಹಿಮೆಯನ್ನು ಎಂದಿಗೂ ಮರೆಯಬೇಡಿ. ನಮಗಿಂತಲೂ ಬೇರೆಯಾದ ದೇವರು ಹಿಂದೆ ಇರಲಿಲ್ಲ. ಮುಂದೆ ಬರುವುದಿಲ್ಲ. ಕ್ರೈಸ್ತ, ಬುದ್ಧ, ಕೃಷ್ಣ, ರಾಮರೆಲ್ಲ ಅಹಮಸ್ಮಿ ಎಂಬ ಮಹಾವಾರಿಧಿಯ ತರಂಗಗಳು ಮಾತ್ರ” ಎಂದು ಘೋಷಿಸಿದರು.

ವಿವೇಕಾನಂದರ ‘ಧೀರೋದಾತ್ತ’ ನಿಲುವುಗಳು ವೈಯಕ್ತಿಕ ಮಾತ್ರವಾಗದೆ ಸಾಮಾಜಿಕವಾಗಿ ರೂಪಾಂತರಗೊಂಡು ಗಟ್ಟಿಯಾದದ್ದೇ ಅವರ ವ್ಯಕ್ತಿತ್ವದ ವಿಶೇಷ; ಅವರದು ಪ್ರಖರ ಸಾಮಾಜಿಕ ವ್ಯಕ್ತಿತ್ವ, ದೀನ ದಲಿತರ ಉದ್ಧಾರವೇ ಅವರ ಧರ್ಮದ ಮೊದಲ ತತ್ವ: ಅದೇ ಅವರ ವೈಚಾರಿಕ ಸತ್ವ. ಆದ್ದರಿಂದ ವಿವೇಕಾನಂದರು ಇಂದಿಗೂ ಸತ್ಯ.

ನೂತನ ಸಮಿತಿಯ ಪಠ್ಯ (ಸೇರಿಸಿದ ಪಠ್ಯ)

ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿ. ಅವರು ವಿಷಯಗ್ರಹಣ ಮಾಡಿಕೊಳ್ಳುವರು, ಆದರೆ ಅವರಿಗೆ ಮತ್ತೊಂದು ಅವಶ್ಯಕತೆ ಇದೆ. ಅದು ಸಂಸ್ಕೃತಿ. ನೀವು ಅವರಿಗೆ ಇದನ್ನು ಕೊಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು. ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು, ಕೇವಲ ಜ್ಞಾನರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿಗೆ ಜ್ಞಾನರಾಶಿಯನ್ನೇ ಕೊಡಬಹುದು. ಆದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಆದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ.

ನಮ್ಮ ಶಾಸ್ತ್ರಗಳಲ್ಲಿ ಹುದುಗಿರುವ, ಮಠ ಮತ್ತು ಆರಣ್ಯಗಳಲ್ಲಿ ಅಡಗಿರುವ ಕೆಲವೇ ವ್ಯಕ್ತಿಗಳ ಸ್ವತ್ತಾಗಿರುವ ಆಧ್ಯಾತ್ಮಿಕ ರತ್ನಗಳನ್ನು ದೇಶ ಭಾಷೆಗಳ ಮೂಲಕ ಜನರಿಗೆ ಪ್ರಚಾರ ಮಾಡಬೇಕು. ವೇದವೇದಾಂತಗಳ ಮುಖ್ಯ ಪಲ್ಲವಿಯೇ ಶ್ರದ್ದೆ. ಯಾವ ಶದ್ಧೆಯ ಮೂಲಕ ನಚಿಕೇತನು ಯಮರಾಜನನ್ನು ಕೂಡ ಸಂದರ್ಶಿಸಿ ಪ್ರಶ್ನೆ ಮಾಡುವುದಕ್ಕೆ ಧೈರ್ಯ ಹೊಂದಿದನೋ, ಯಾವ ಶ್ರದ್ಧೆಯ ಮೂಲಕ ಪ್ರಪಂಚ ಚಲಿಸುತ್ತಿರುವುದೋ- ಅಂತಹ ಶ್ರದ್ಧೆಯು ನಾಶವಾಗುತ್ತಿದೆ. ಇದರ ಪರಿಹಾರಕ್ಕಾಗಿ ಮೊದಲು ಆತ್ಮಜ್ಞಾನ ಪ್ರಚಾರವಾಗಬೇಕು.

ಯಾರೂ ದುರ್ಬಲರಲ್ಲ, ಆತ್ಮ ಸರ್ವಶಕ್ತಿ, ಸರ್ವಜ್ಞ, ಏಳಿ, ಯಾರಿಗೂ ಮಣಿಯಬೇಡಿ, ನಿಮ್ಮಲ್ಲಿರುವ ಭಗವಂತನನ್ನು ವ್ಯಕ್ತಗೊಳಿಸಿ. ಅದನ್ನು ಅಲ್ಲಗಳೆಯಬೇಡಿ, ಏಳಿ, ದುರ್ಬಲತೆಯ ಪರವಶತೆಯಿಂದ ಪಾರಾಗಿ, ಪಾರಾಗುವುದಕ್ಕೆ ಮಾರ್ಗ ನಿಮ್ಮ ಶಾಸ್ತ್ರಗಳಲ್ಲಿಯೇ ಇದೆ. ನಿಜವಾದ ಆತ್ಮನ ವಿಷಯವನ್ನು ನೀವು ಕೇಳಿ, ಇತರರಿಗೆ ಬೋಧಿಸಿ, ನಿದ್ರಿಸುವವರನ್ನು ಎಬ್ಬಿಸಿ, ಅವರು ಹೇಗೆ ಜಾಗೃತರಾಗುತ್ತಾರೆ ಎಂಬುದನ್ನು ನೋಡಿ. ಆಗ ಶಕ್ತಿ ಬರುವುದು, ಮಹಿಮೆ ಬರುವುದು, ಶ್ರೇಯಸ್ಸು ಬರುವುದು, ಪಾವಿತ್ರ್ಯ ಬರುವುದು. ಈಗ ನಿದ್ರಿಸುತ್ತಿರುವ ಜೀವ ಜಾಗೃತವಾಗಿ ಕಾರ್ಯೋನ್ಮುಖನಾಗುವಾಗ ಅವನಲ್ಲಿ ಎಲ್ಲ ಕಲ್ಯಾಣ ಗುಣಗಳೂ ಬರುವುವು.

ನಿಮ್ಮ ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಿಮ್ಮ ಮೇಲೆ ನಿಂತಿದೆ ಎಂದು ಭಾವಿಸಿ ಕಾರ್ಯೋನ್ಮುಖರಾಗಿ, ವೇದಾಂತದ ಸಂದೇಶವನ್ನು ಪ್ರತಿ ಮನೆಗೂ ಸಾರಿ, ಪ್ರತಿಯೊಂದು ಆತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ, ಅನಂತರ ನೀವು ಎಷ್ಟೇ ಅಲ್ಪವನ್ನು ಸಾಧಿಸಿದ್ದರೂ ನೀವು ಒಂದು ಮಹಾ ಆದರ್ಶಕ್ಕಾಗಿ ಬಾಳಿ ದುಡಿದು ಮಡಿದಿರಿ ಎಂಬ ತೃಪ್ತಿಯಾದರೂ ಇರುತ್ತದೆ.

ಈ ಆತ್ಮದ ಅನಂತ ಶಕ್ತಿಯನ್ನು ಭೌತಿಕ ಪ್ರಪಂಚದ ಮೇಲೆ ಬೀರಿದರೆ ಹಲವು ಭೌತಿಕ ಬೆಳವಣಿಗೆಗಳಾಗುವುವು. ಆಲೋಚನಾ ಪ್ರಪಂಚದ ಮೇಲೆ ಬೀರಿದರೆ ಬುದ್ಧಿ ತನ್ನ ಪರಾಕಾಷ್ಠೆಯನ್ನು ಮುಟ್ಟುವುದು, ತನ್ನ ಮೇಲೆಯೇ ಅದನ್ನು ಬೀರಿಕೊಂಡರೆ ಮಾನವನನ್ನು ದೇವನನ್ನಾಗಿ ಮಾಡುವುದು. ಮೊದಲು ನಾವು ದೇವರಾಗೋಣ, ಆನಂತರ ಇತರರು ದೇವರಾಗಲು ಅವರಿಗೆ ಸಹಾಯ ಮಾಡೋಣ. ಆದ್ದರಿಂದ ಆರ್ಯಮಾತೆಯ ಪುತ್ರರಿರಾ ಎಚ್ಚರಗೊಳ್ಳಿ, ಎದ್ದೇಳಿ: ಸೋಮಾರಿಗಳಾಗಬೇಡಿ: ಗುರಿಯು ದೊರಕುವವರೆಗೂ ನಿಲ್ಲಬೇಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತಪ್ಪಿದ್ದರೆ ಖಂಡಿತ ಬಂದಿಸಿ ಆದರೆ ಸುಮ್ಮಸುಮ್ಮನೆ ತೊಂದರೆ ಕೊಡಬೇಕು ಅದನ್ನು ಭಾರತೀಯನೇ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...