Homeಮುಖಪುಟ2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

2023: ಹೊಸ ವರ್ಷದಲ್ಲಿ ಹೋಲಿಸ್ಟಿಕ್ ಜೀವನಶೈಲಿಗೆ ಶ್ರಮಿಸೋಣ

- Advertisement -
- Advertisement -

ಬೆಳಗಿನ ಜಾವದ ಐದು ಗಂಟೆಯ ಚುಮುಚುಮು ಚಳಿಗೆ ತಲೆಗೊಂದು ಟೋಪಿ ಹಾಕಿಕೊಂಡು ರನ್ನಿಂಗ್‌ಗೆ ಹೊರಟಾಗ, ನಮಗೆ ಅಪರಿಚಿತವೆನ್ನಬಹುದಾದ, ಉತ್ತರ ಕರ್ನಾಟಕದ ಊರಿನಲ್ಲಿ ಹೆಣ್ಣುಮಗಳೊಬ್ಬಳು ಆಗಷ್ಟೇ ಸ್ನಾನ ಮುಗಿಸಿ, ನೆತ್ತಿಯ ಮೇಲಿನ ನೀರು ಆರುವ ಮುನ್ನವೇ, ಒದ್ದೆ ಮುದ್ದೆ ಕೂದಲನ್ನು ಟವಲಿನಲ್ಲಿ ಸುತ್ತಿಕೊಂಡು, ಗುಡಿಸಿ ಸಾರಿಸಿದ ನೆಲಕ್ಕೆ ರಂಗೋಲಿಯ ಚುಕ್ಕಿಯನ್ನಿಡುವುದನ್ನು ನೋಡಿದಾಗ ಮೂಡಿದ ಮನಸ್ಸಿನ ಭಾವ; ಉಳಿದುಕೊಂಡಿದ್ದ ಟೆಂಟ್ ಹೌಸ್‌ನಿಂದ ಸೂರ್ಯ ಹುಟ್ಟುವ ಮುನ್ನವೇ ಹೊರಬಂದು ಚಳಿಗೆ ಮುಖವೊಡ್ಡಿ ಕಾಲಾಡಿಸುತ್ತಿದ್ದಾಗ, ಹಿಮಾಲಯದ ತಪ್ಪಲಿನ ಕಾರ್ಗಿಲ್‌ನ ಹೊರವಲಯದ ಜನರಿಲ್ಲದ ತಾಣದಲ್ಲಿ, ಕುರಿಕಾಯುವ ಅಲೆಮಾರಿ ಸಮುದಾಯದ ವೃದ್ಧರೊಬ್ಬರು ಹರಿಯುವ ತೊರೆಯ ಪಕ್ಕದಲ್ಲಿ ಕಲ್ಲು ಜೋಡಿಸಿ ಒಲೆ ಹೂಡಿ ಚಹಾ ಕಾಯಿಸಿ “ಸರ್‌ದೀ ಮೆ ಚಾಯ್ ಬಹೊತ್ ಸುಕೂನ್ ದೇತಾ ಹೈ ಬಿಟಿಯಾ, ಪೀವೋ” (ಚಳಿಯಲ್ಲಿ ಚಹಾ ಕುಡಿಯೋದು ಬಹಳ ನೆಮ್ಮದಿ ಕೊಡುತ್ತೆ ಮಗಳೇ, ಕುಡಿ.) ಎಂದು ಟೀ ನೀಡಿ ನಕ್ಕಾಗ ಮೂಡಿದ ಮನಸ್ಸಿನ ಭಾವ; ಇವೆರಡೂ ಭಾವಗಳಿಗೆ ಇದ್ದ ಸಾಮ್ಯತೆಯೆಂದರೆ ಅವರ ’ಬದುಕು’ ಎನ್ನಬಹುದೇನೊ.

ಬದುಕಿನ ಏರಿಳಿತಗಳ ನಡುವೆ ನಾನಾ ತರಹದ ಅನುಭವಗಳಿಗೆ, ನೋವು ನಲಿವುಗಳಿಗೆ, ಕಷ್ಟ ಕಾರ್ಪಣ್ಯಗಳಿಗೆ ತೆರೆದಿಟ್ಟುಕೊಂಡು ನಿರಂತರವಾಗಿ ಸಾಗುತ್ತಲೇ ಇರುವಾಗ ನಾನು ಕೇಳಿಕೊಳ್ಳುವ ಮುಖ್ಯ ಪ್ರಶ್ನೆ ಈ ’ಬದುಕು’ ಎಂದರೆ ಏನು? ಬದುಕುವುದು ಎಂದರೆ ಹೇಗಿರಬೇಕು? ಈ ಪ್ರಶ್ನೆಗಳನ್ನು ಬಹುಶಃ ನನ್ನಂತೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಕೊಂಡಿರುತ್ತಾರೆ. ಸರಿಯುತ್ತಿರುವ ವರುಷದ ಕೊನೆಯಲ್ಲಿ ನಿಂತು ಬದಲಾಗುವ ಕ್ಯಾಲೆಂಡರಿನೊಂದಿಗೆ ಹೊಸದಿನಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ನಾವು ನಮಗೆ ಮತ್ತೆಮತ್ತೆ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಗಳಿವು. ಇತ್ತೀಚಿನ ದಿನಗಳಲ್ಲಿ ಕೋವಿಡ್‌ನಂತಹ ಕಷ್ಟದ ದಿನಗಳನ್ನು ಸವೆಸಿ, ಬದುಕುಳಿದು, ಮತ್ತೆ ಬದುಕು ಕಟ್ಟಿಕೊಳ್ಳಲು ಹೋರಾಡಿರುವವರಿಂದ ಹಿಡಿದು ಬರೀ ಆರ್ಥಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿ, ದೈಹಿಕವಾಗಿ, ಆರೋಗ್ಯದಲ್ಲೂ ಜರ್ಜರಿತರಾಗಿ, ಬದುಕುಳಿದಿರುವುದೇ ವರವೆಂದು ಜೀವಿಸುತ್ತಿರುವವರೂ, ಈಗ ಹಿಂತಿರುಗಿ ನೋಡಿ ನಕ್ಕಿದ್ದೆಲ್ಲ, ಸಂಭ್ರಮಿಸಿದ್ದೆಲ್ಲಿ, ಎಡವಿದ್ದೆಲ್ಲಿ ಹಾಗೂ ನಿಜವಾಗಿಯೂ ಬದುಕನ್ನು ಬದುಕಿದ್ದೆಲ್ಲಿ ಎನ್ನುವುದನ್ನು ಕೇಳಿಕೊಳ್ಳಲೇಬೇಕಿದೆ.

ಈ ಸಮಗ್ರ ಬದುಕಿಗೊಂದು ಇಂಥದ್ದೇ ಎಂಬ ಒಂದು ಚೌಕಟ್ಟಿಲ್ಲದಿದ್ದರೂ ಬುದ್ಧ ಹೇಳಿದ ’ಆಸೆಯೇ ದುಃಖಕ್ಕೆ ಮೂಲ’, ಬಸವಣ್ಣನೆಂದ ’ಕಾಯಕವೇ ಕೈಲಾಸ’, ಓಶೋ ಹೇಳಿದ ’ಬದುಕನ್ನು ಜೀವಿಸು’ ಅನ್ನುವ ಮಾತುಗಳನ್ನು ಜೋಡಿಸಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಹೇಗೆ ಕಣ್ಣು, ಮೂಗು, ಕೈ, ಕಾಲು ಹಾಗೂ ದೇಹದ ಪ್ರತಿಯೊಂದು ಅಂಗಾಂಗಗಳು ಆರೋಗ್ಯವಾಗಿರುವುದು ಇಡೀ ದೇಹಕ್ಕೆ ಅವಶ್ಯಕವೋ ಹಾಗೆಯೇ ಮನಸ್ಸಿನ ಆರೋಗ್ಯಕ್ಕೆ ನಮ್ಮ ಆಲೋಚನೆಗಳು, ಅವುಗಳ ಗಟ್ಟಿತನ, ಒಳನೋಟ, ಹೊರನೋಟ, ಆಂತರಿಕ ಶುದ್ಧಿ ಎಲ್ಲವೂ ಮುಖ್ಯವಾಗುತ್ತವೆ. ಹೀಗೆ ಅವೆರಡೂ ಒಂದರ ಕೈ ಇನ್ನೊಂದು ಹಿಡಿದು, ಬೆಂಬಿಡದ ಸಂಗಾತಿಯಂತೆ ನಡೆಯಬೇಕಾಗುತ್ತದೆ. ಅಂದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಒಂದಕ್ಕೊಂದು ಜೊತೆಯಾಗಿ ಸಾಗಿದಾಗಲಷ್ಟೇ ಈ ಬದುಕನ್ನು ಜೀವಿಸಲು ಸಹನೀಯವಾಗುವುದು.

ಪ್ರತಿದಿನ ಮನುಷ್ಯನ ಮೆದುಳು ಸುಮಾರು 70,000 ಆಲೋಚನೆಗಳನ್ನು ಮಂಥನ ಮಾಡುತ್ತದಂತೆ. ಇವುಗಳಲ್ಲಿ ಖುಷಿ ಕೊಡುವುದೊಂದಿಷ್ಟಿದ್ದರೆ, ಚಿಂತೆಗೆ ಹಚ್ಚುವುದು ಒಂದಿಷ್ಟು. ಇವುಗಳಲ್ಲಿನ ಅನೇಕ ಆಲೋಚನೆಗಳಿಗೆ ನಾವಿರುವ ಸಾಮಾಜಿಕ ಪರಿಸರ, ಮನೆಯ ವಾತಾವರಣ, ಬದುಕುವ ರೀತಿ, ಆರ್ಥಿಕ ಪರಿಸ್ಥಿತಿ, ಆರೋಗ್ಯದ ಸುಸ್ಥಿತಿ ಎಲ್ಲವೂ ಕಾರಣವಾಗಿರುತ್ತದೆ. ಹಾಗಾಗಿ ಈ ಸಮಗ್ರ ಬದುಕಿಗೆ ನಾವು ಆಲೋಚಿಸುವ ದಿಕ್ಕು ಸರಿದಾರಿಯಲ್ಲಿರುವುದು ಬಹಳ ಮುಖ್ಯ. ಇದ್ಯಾಕೆ ಮುಖ್ಯವಾಗುತ್ತದೆಂದರೆ, ನಮ್ಮ ಆಲೋಚನೆಗಳು ನಮ್ಮ ಸುತ್ತಲಿನ ಪರಿಸರವನ್ನು ಹಾಳು ಮಾಡುವ ಅಥವಾ ಸುಂದರಗೊಳಿಸುವ ಮೊದಲು, ಅವು ನಮ್ಮೊಳಗಿಂದಲೇ ತಮ್ಮ ಕೆಲಸವನ್ನು ಶುರುಮಾಡುತ್ತವೆ.

ಇನ್ನು ಇದರೊಂದಿಗೆ ದೈಹಿಕ ಆರೋಗ್ಯವೂ ಅಷ್ಟೇ ಮುಖ್ಯವಾದ ವಿಚಾರ. ದೈಹಿಕ ಆರೋಗ್ಯವೆಂದರೆ ಅಂಗಡಿಯಲ್ಲಿ ಕಾಸಿಗೆ ಸಿಗುವ ವಸ್ತುವಲ್ಲ ಅಥವಾ ಯಾವುದೇ ವಸ್ತುವನ್ನು ಬಳಸಿ ಸಂಪೂರ್ಣ ಆರೋಗ್ಯ ಪಡೆಯಲೂ ಸಾಧ್ಯವಿಲ್ಲ. ನಾನಾಗಲೇ ಹೇಳಿದಂತೆ, ರಂಗೋಲಿಗೆ ಚುಕ್ಕಿ ಇಟ್ಟ ಹೆಣ್ಣು ಮತ್ತು ಚಳಿಗೆ ಮೈ ಒಡ್ಡಿ ಚಹಾ ಕಾಯಿಸುವ ವೃದ್ಧನಲ್ಲಿ ಕಾಣಿಸಿದ್ದು ಒಂದು ಶಿಸ್ತುಬದ್ಧ ಜೀವನ. ಸೂರ್ಯನ ಜೊತೆಜೊತೆಗೆ ಎದ್ದು ಮನಸ್ಸಿಗೆ ಮುದ ನೀಡುವ ಹಾಗೂ ಉಲ್ಲಸಿತಗೊಳಿಸುವ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಿನದ ಸಮಯಕ್ಕೊಂದು ನಕ್ಷೆ ರೂಪಿಸಿಕೊಂಡು, ತೊಡಕುಗಳನ್ನು ಮೀರಿ ಅಂದುಕೊಂಡ ಕೆಲಸಗಳನ್ನು ಮುಗಿಸಿ, ಆರೋಗ್ಯಕರ ಗುಣಮಟ್ಟದ ಸಮಯ ಕಳೆದು, ಸಂಭ್ರಮದ ಮತ್ತು ಸಂತೃಪ್ತಿಯ ಬದುಕು ಬದುಕುವುದೇ ನಿಜವಾದ ಆರೋಗ್ಯಕರ ಜೀವನ. ಈ ತರದ ಬದುಕು ಬದುಕಲು ಶಿಸ್ತಿರಬೇಕು, ಶ್ರದ್ಧೆಯಿರಬೇಕು; ಹೀಗೇ ಬದುಕುತ್ತೇವೆನ್ನುವ ಹಠವಿರಬೇಕು. ಆಸೆ, ಆಕಾಂಕ್ಷೆ, ಖರ್ಚುವೆಚ್ಚಗಳಲ್ಲಿ ಹಿಡಿತವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಲೋಚನೆಯ ದಿಕ್ಕು ಸರಿಯಾಗಿರಬೇಕು. ಮನಸ್ಸಿನ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ನೇರವಾದ ಸಂಬಂಧವಿರುವುದರಿಂದ ಬದುಕುವ ಧಾವಂತದಲ್ಲಿ ಮನಸ್ಸಿಗೂ ದೇಹಕ್ಕೂ ಕೊಂಡಿ ತ್ರಾಸದಾಯಕವಾಗಿರಬಾರದು. ನಮ್ಮೊಳಗಿನ, ನಮ್ಮವರ ಬಗೆಗಿನ, ನಮ್ಮ ಸುತ್ತಮುತ್ತಲಿನ ಸಮಾಜದ ಬಗೆಗಿನ ನಮ್ಮ ಆಲೋಚನೆ ಪ್ರಬುದ್ಧತೆಯಿಂದ ಮತ್ತು ಕಾಳಜಿಯಿಂದ ಕೂಡಿರಬೇಕಾಗುತ್ತದೆ. ಅಂದರೆ ಒಂದು ಸ್ವಸ್ಥ ಬದುಕಿನ ಕನಸು ಕಾಣಲು ನಮ್ಮ ಸುತ್ತಲಿನ ಪರಿಸರವೂ ಸ್ವಸ್ಥವಾಗಿರುವುದು ಮುಖ್ಯ. ಅಲ್ಲಿ ದ್ವೇಷ, ಅಸೂಯೆ, ಅಸಹ್ಯ, ಅಪಹಾಸ್ಯ, ಅನಿಷ್ಟ ಆಚರಣೆ, ಅಂಧಶ್ರದ್ಧೆಗಳಿಗೆ ಜಾಗ ಕೊಡದೆ ಒಬ್ಬರಿಗೊಬ್ಬರು ಹೆಗಲಾಗಿ, ನೊಗವಾಗಿ, ಆಸರೆಯಾಗಿ ಬದುಕಲು ಯೋಗ್ಯವಾದಂತಹ ವಾತಾವರಣ ನಿರ್ಮಿಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಆಗಲೇ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಈ ಮಾನಸಿಕ ಆರೋಗ್ಯ ಸಿದ್ಧಿಸಿಕೊಂಡರೆ ದೈಹಿಕ ಆರೋಗ್ಯದೆಡೆಗೆ ಗಮನ ನೀಡುವುದು ಕಷ್ಟದ ಕೆಲಸವೇನಲ್ಲ. ಈ ಪ್ರೀತಿ ಒಂದು ರೀತಿಯ ಔಷಧಿ. ಪ್ರೀತಿ ಮನೆಯೊಳಗೆ ನೆಮ್ಮದಿ ನೆಲೆಸುವಂತೆ ಮಾಡುತ್ತದೆ. ಅದೇ ಪ್ರೀತಿಯನ್ನು ನಾವು ಬದುಕುವ ಪರಿಸರದೆಡೆಗೆ ಹಂಚಿದಾಗ ಆ ನೆಮ್ಮದಿಯೂ ಮನೆಯ ಹೊರಗೆ ಪಸರಿಸುತ್ತದೆ. ಹೀಗೊಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹೆಚ್ಚೇನೂ ಕಷ್ಟ ಪಡುವುದು ಬೇಕಿಲ್ಲ; ಹೆಚ್ಚುಹೆಚ್ಚು ಸ್ವಸ್ಥ ಮನಸ್ಸುಗಳ ಇದ್ದರದೇ ಸಾಕು. ಅಂತದೊಂದು ಸ್ವಸ್ಥ ಮನಸ್ಸು ಬೆಳೆಸಿಕೊಂಡು ನೋಡಲು ಸಾಧ್ಯವಾದರೆ, ಸುತ್ತಲಿನ ಕಲ್ಲು ಕೋಟೆಯೂ ನಕ್ಕಂತೆ ಭಾಸವಾಗುತ್ತದೆ.

ಅಂದಹಾಗೆ ಬರಲಿರುವ ದಿನಗಳಿಗಾಗಿ ಒಂದಿಷ್ಟು ಪ್ರತಿಜ್ಞೆಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಮುಖ್ಯವಾದವುಗಳು ಬೆಳಿಗ್ಗೆ ಬೇಗ ಏಳುವುದು, ಒಂದಿಷ್ಟು ವ್ಯಾಯಾಮ, ಒಳ್ಳೆಯ ಊಟ, ಒಳ್ಳೆಯ ನಿದ್ದೆ, ದೇಹ ದಣಿಯುವಷ್ಟು ಕೆಲಸ, ಒಂದಿಷ್ಟು ಸಮಯ ತಮ್ಮವರಿಗಾಗಿ ನೀಡುವುದು; ಇವಿಷ್ಟೂ ದೇಹದ ಆರೋಗ್ಯಕ್ಕಾದರೆ, ಮನಸ್ಸಿನ ಆರೋಗ್ಯಕ್ಕಾಗಿ ಒಂದಿಷ್ಟು ಓದು, ಅನಗತ್ಯ ಹಾಗೂ ಕೆಟ್ಟ ’ಕಾರ್ಯಕ್ರಮಗಳು-ಮನಸ್ಥಿತಿಯ ಜನರು-ಕೆಲಸ’ಗಳಿಂದ ದೂರವಿರುವುದು, ಪ್ರೀತಿ ಕೊಡಲಾಗದಿದ್ದರೂ ದ್ವೇಷ ಹಂಚದಿರುವುದು, ಸಮುದಾಯ ಕೇಂದ್ರಿತವಲ್ಲದ ಅನಗತ್ಯವಾದ ವಾದ ವಿವಾದಗಳಿಂದ ದೂರವಿರುವುದು ಹಾಗೂ ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಒಂದು ಒಳ್ಳೆಯ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಕಿಂಚಿತ್ತಾದರೂ ಭಾಗಿಯಾಗುವುದು; ಇವಿಷ್ಟು ನಾವು ಕೈಗೊಳ್ಳಲೇಬೇಕಾದ ಪ್ರತಿಜ್ಞೆಗಳು. ಈ ಮಾನಸಿಕ ಸಿದ್ಧತೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ನಮ್ಮ ಮುಂದಿರುವ ಅನೇಕ ಸಾಮಾಜಿಕ ಒತ್ತಡಗಳನ್ನು, ಅಂತಹ ಒತ್ತಡಗಳನ್ನು ಹೆಚ್ಚಿಸುವ ಮಾಧ್ಯಮಗಳನ್ನು ಮೀರಿ ಸ್ವಸ್ಥ ಬದುಕನ್ನು ಕಟ್ಟಕೊಳ್ಳುತ್ತಾ 2023ರಲ್ಲಿ ಮುಂದುವರಿಯೋಣ. ಅಷ್ಟಕ್ಕೂ, ಇದಕ್ಕೇ ಅಲ್ವೇ ಸಮಗ್ರ ಬದುಕು ಅಥವಾ Holistic Living ಅನ್ನುವುದು!

ಪಲ್ಲವಿ ಇಡೂರು

ಪಲ್ಲವಿ ಇಡೂರು
ಲೇಖಕಿ ಮತ್ತು ರಾಜಕೀಯ ವಿಮರ್ಶಕರು. ’ಜೊಲಾಂಟಾ’ (ಇರೇನಾ ಸ್ಲೆಂಡರ್ ಜೀವನ ಕಥನ) ಮತ್ತು ದೇಶ ವಿಭಜನೆಯ ಬಗ್ಗೆ ’ಆಗಸ್ಟ್ ಮಾಸದ ರಾಜಕೀಯ ಕಥನ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...