Homeಕರ್ನಾಟಕಒಕ್ಕಲಿಗ-ಲಿಂಗಾಯಿತರ ಮೀಸಲಾತಿ ಹೆಚ್ಚಳ; ಮೂಗಿಗೆ ತುಪ್ಪ ಸವರಿದ ಸರ್ಕಾರ

ಒಕ್ಕಲಿಗ-ಲಿಂಗಾಯಿತರ ಮೀಸಲಾತಿ ಹೆಚ್ಚಳ; ಮೂಗಿಗೆ ತುಪ್ಪ ಸವರಿದ ಸರ್ಕಾರ

- Advertisement -
- Advertisement -

ಕರ್ನಾಟಕದಲ್ಲಿ 44ಕ್ಕೂ ಹೆಚ್ಚು ಸಮುದಾಯಗಳು ತಮಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ, ಒಳಮೀಸಲಾತಿ ಜಾರಿಗೊಳಿಸುವಂತೆ ಅಥವಾ ತಮ್ಮ ಮೀಸಲಾತಿ ಪ್ರವರ್ಗವನ್ನು ಬದಲಾಯಿಸುವಂತೆ ಒತ್ತಾಯಿಸಿ ಹೋರಾಟಕ್ಕಿಳಿದಿವೆ. ಸದ್ಯ 4% ಮೀಸಲಾತಿ ಹೊಂದಿರುವ 3ಎ ಪ್ರವರ್ಗದಲ್ಲಿರುವ ಒಕ್ಕಲಿಗ ಸಮುದಾಯಕ್ಕೆ 12% ಮೀಸಲಾತಿ ಬೇಕೆಂದು ಬೇಡಿಕೆ ಇಡಲಾಗಿದೆ. ಇನ್ನು 5% ಮೀಸಲಾತಿ ಹೊಂದಿರುವ 3ಬಿ ಪ್ರವರ್ಗದಲ್ಲಿರುವ ಪಂಚಮಸಾಲಿ ಲಿಂಗಾಯತರು ತಮ್ಮನ್ನು 15% ಮೀಸಲಾತಿ ಇರುವ 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಹೋರಾಟ ನಡೆಸಿದ್ದಾರೆ. 15% ಮೀಸಲಾತಿ ಹೊಂದಿರುವ 101 ಸಮುದಾಯಗಳಿರುವ ಪರಿಶಿಷ್ಟ ಜಾತಿ ಪ್ರವರ್ಗದಲ್ಲಿ ಮುಖ್ಯವಾಗಿ ಮಾದಿಗ ಸಮುದಾಯ ತಮಗೆ ಮೀಸಲಾತಿ ವರ್ಗೀಕರಿಸಬೇಕೆಂದು ಮೂರು ದಶಕಗಳಿಂದ ಹೋರಾಟನಿರತವಾಗಿದೆ.

1980-90ರ ದಶಕದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸಿ ಮಂಡಲ್ ಆಯೋಗ ವರದಿ ಸಲ್ಲಿಸಿದಾಗ ಕಮಂಡಲ ಯಾತ್ರೆ ನಡೆಸಿ ಮೀಸಲಾತಿ ವಿರುದ್ಧವೇ ದೊಡ್ಡ ಹೋರಾಟ ನಡೆದಿತ್ತು. ಆಗ ಮೀಸಲಾತಿ ಪಡೆಯುವವರನ್ನು ನಿಂದಿಸಲಾಗಿತ್ತು. ಆದರೆ ನಿಂದನೆಗೆ ಇಳಿದಿದ್ದ ಅದೇ ಸಮುದಾಯಗಳು ಈಗ ತಮಗೆ ಮೀಸಲಾತಿ ಹೆಚ್ಚಿಸಬೇಕೆಂದು ಈ ಪರಿಯಲ್ಲಿ ಹೋರಾಟಕ್ಕಿಳಿಯಲು ಕಾರಣವೇನೆಂದು ಅರ್ಥಮಾಡಿಕೊಳ್ಳಬೇಕಿದೆ. ಜನರ ಹೋರಾಟದ ಫಲವಾಗಿ ದಕ್ಕಿದ್ದ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾಗತೀಕರಣದ ನಂತರ ಒಂದೊಂದಾಗಿ ಕಡಿತಗೊಳಿಸಲಾಗುತ್ತಿದೆ. ಸರ್ಕಾರಿ ಉದ್ಯೋಗಗಳಲ್ಲಿ ಗಣನೀಯ ಕುಸಿತ, ಖಾಯಂ ಉದ್ಯೋಗಗಳ ಬದಲಿಗೆ ಮೀಸಲಾತಿ ಇಲ್ಲದ ಗುತ್ತಿಗೆ ನೇಮಕಾತಿ, ಮಿತಿಮೀರಿದ ಖಾಸಗೀಕರಣ, ಖಾಸಗಿ ಕ್ಷೇತದಲ್ಲಿ ಮೀಸಲಾತಿ ಇಲ್ಲದಿರುವುದು, ಕೃಷಿ ಕ್ಷೇತ್ರದ ಅವಗಣನೆ, ಕೃಷಿಯಲ್ಲಿ ಲಾಭವಿಲ್ಲದಿರುವುದು, ಭೂ ಹಿಡುವಳಿಗಳ ಛಿದ್ರೀಕರಣ, ಹೆಚ್ಚುತ್ತಿರುವ ನಿರುದ್ಯೋಗ, ಸಂಪತ್ತಿನ ಅಸಮಾನ ಹಂಚಿಕೆ, ದುಬಾರಿಯಾದ ಶಿಕ್ಷಣ ಮತ್ತು ಆರೋಗ್ಯ, ಬೆಲೆ ಏರಿಕೆಯಿಂದ ಹಿಡಿದು ನೋಟು ಅಮಾನ್ಯೀಕರಣ, ಜಿಎಸ್‌ಟಿ ಹೊರೆ, ಸಾರ್ವಜನಿಕ ಸಂಸ್ಥೆಗಳ ಮಾರಾಟ, ಕೊರೊನಾ ಸಾಂಕ್ರಾಮಿಕ ತಂದ ಆರ್ಥಿಕ ಕುಸಿತದವರೆಗೂ ಕಾರಣಗಳನ್ನು ಪಟ್ಟಿಮಾಡಬಹುದು.

ಸಮಸ್ಯೆಗಳ ಸಂಕಷ್ಟದಲ್ಲಿರುವ ಜನರು ತಮ್ಮ ಜಾತಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಮೀಸಲಾತಿ ಸಿಕ್ಕರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಭಾವಿಸುತ್ತಿವೆ. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರವು ಕೇವಲ 3-4% ಇರುವ, ಎಂದೂ ಹೋರಾಟ ಮಾಡದ, ವಾಸ್ತವದಲ್ಲಿ ಮೀಸಲಾತಿಗೆ ವಿರುದ್ಧವಿದ್ದ ನಾಲ್ಕೈದು ಸಮುದಾಯಗಳಿಗೆ ಆರ್ಥಿಕವಾಗಿ ದುರ್ಬಲ ವರ್ಗಗಳು (ಇಡಬ್ಲ್ಯುಎಸ್) ಎಂಬ ಹೆಸರಿನಲ್ಲಿ ಏಕಾಏಕಿ 10%ವರೆಗೂ ಮೀಸಲಾತಿ ನೀಡಿತು. ಆ ಮೂಲಕ “ಮೀಸಲಾತಿಯೆಂಬುದು ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ. ಬದಲಿಗೆ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟವರಿಗೆ ಸಿಗಬೇಕಾದ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ” ಎಂಬ ತತ್ವಕ್ಕೆ ಎಳ್ಳುನೀರು ಬಿಟ್ಟಿತು. ಇದು ಎಲ್ಲ ಸಮುದಾಯಗಳಿಗೂ ಆಸೆ ಮತ್ತು ಭ್ರಮೆಯನ್ನು ಹುಟ್ಟಿಸಿತು. ಹಾಗಾಗಿ ಈ ಸಮುದಾಯಗಳು ತಮ್ಮ ಸಂಕಷ್ಟಗಳಿಗೆ ಪರಿಹಾರವನ್ನು ಮೀಸಲಾತಿಯಲ್ಲಿ ನೋಡುತ್ತಿದ್ದಾರೆ. ಕೆಲ ಸಮುದಾಯಗಳ ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ಇದೇ ಸಂದರ್ಭವನ್ನು ಬಳಸಿಕೊಂಡು ಆ ಸಮುದಾಯದ ನಾಯಕರಾಗಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅದೆಲ್ಲದರ ಪರಿಣಾಮವಾಗಿ ಇಷ್ಟೊಂದು ಪ್ರಮಾಣದಲ್ಲಿ ಮೀಸಲಾತಿ ಹೋರಾಟಗಳು ಹುಟ್ಟಿಕೊಂಡಿವೆ.

ಕರ್ನಾಟಕದಲ್ಲಿ ಸದ್ಯ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವು ಈ ಎಲ್ಲ ಹೋರಾಟಗಳನ್ನು ತನ್ನ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಹಾತೊರೆಯುತ್ತಿದೆ. ಹಾಗಾಗಿ ಎಲ್ಲ ಸಮುದಾಯಗಳ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಬಹಳ ನಾಜೂಕಾಗಿ ಮಾಡುತ್ತಿದೆ. ಜಸ್ಟಿಸ್ ನಾಗಮೋಹನ್ ದಾಸ್‌ರವರ ವರದಿಯ ಶಿಫಾರಸ್ಸಿನಂತೆ ಎಸ್‌ಸಿ ಸಮುದಾಯಗಳಿಗೆ 15% ನಿಂದ 17%ಗೆ ಮತ್ತು ಎಸ್‌ಟಿ ಸಮುದಾಯಕ್ಕೆ 3%ನಿಂದ 7% ಮೀಸಲಾತಿ ಹೆಚ್ಚಿಸಲಾಗುವುದು; ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸುವುದಕ್ಕಾಗಿ ಸದ್ಯ ಇರುವ ಪ್ರವರ್ಗ 3ಎ ಮತ್ತು 3ಬಿಯನ್ನು ರದ್ದುಗೊಳಿಸಿ ಅಲ್ಲಿರುವ ಜಾತಿಗಳನ್ನು ಹೊಸದಾಗಿ ರಚಿಸುವ ಪ್ರವರ್ಗ 2ಸಿ ಮತ್ತು 2ಡಿಯಲ್ಲಿ ಸೇರಿಸಲಾಗುವುದು. ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ನಂತರ ಇಡಬ್ಲ್ಯುಎಸ್ ಕೋಟಾದಲ್ಲಿ ಉಳಿಯುವ ಮೀಸಲಾತಿಯನ್ನು ತೆಗೆದು 2ಸಿ ಪ್ರವರ್ಗಕ್ಕೆ ಹೆಚ್ಚುವರಿ 3% (ಒಟ್ಟು 4+3=7%) ಮತ್ತು 2ಡಿ ಅಡಿಯಲ್ಲಿ ಬರುವ ಜಾತಿಗಳಿಗೆ ಹೆಚ್ಚುವರಿ 4% (ಒಟ್ಟು 5+4=9%) ಹಂಚಲಾಗುವುದು ಎಂದು ಸರ್ಕಾರ ಹೇಳಿದೆ.

ಸದ್ಯ ಕರ್ನಾಟಕದಲ್ಲಿ ಎಸ್‌ಸಿ 15%, ಎಸ್‌ಟಿ 3%, ಪ್ರವರ್ಗ 1ಕ್ಕೆ 4%, 2ಎಗೆ 15%, 2ಬಿಗೆ 4%, 3ಎಗೆ 4%, 3ಬಿಗೆ 5% ಮತ್ತು ಇಡಬ್ಲ್ಯುಎಸ್‌ಗೆ 10% ಸೇರಿ 60% ಮೀಸಲಾತಿ ಇದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ 6% ಹೆಚ್ಚಿಸುವುದಾಗಿ ಘೋಷಿಸಿದ್ದು ಅದು ಜಾರಿಯಾದರೆ 66% ಆಗುತ್ತದೆ. 1992ರ ಇಂದ್ರ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಶೇ.50ಕ್ಕಿಂತ ಮೀರಬಾರದು ಎಂಬ ಷರತ್ತನ್ನು ಹಾಕಿದೆ. ವಿಶೇಷ ಸಂದರ್ಭದಲ್ಲಿ ಮಾತ್ರ ಈ ನಿಯಮವನ್ನು ಮೀರಬಹುದು ಎಂದು ಹೇಳಿದೆ. ಈ ನಡುವೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿಯ ಮೂಲಕ ಇಡಬ್ಲ್ಯುಎಸ್‌ಗೆ 10% ಮೀಸಲಾತಿ ಘೋಷಿಸಿದೆ. ಸರ್ಕಾರದ ಈ ನಿರ್ಧಾರವನ್ನು ಎತ್ತಿ ಹಿಡಿಯುವಾಗಲೂ ಸುಪ್ರೀಂ ಕೋರ್ಟ್ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ 50% ಮೀರಬಾರದು ಎಂದಿದೆ. ಅಲ್ಲದೆ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಸಮುದಾಯಗಳಿಗೆ ಇಡಬ್ಲ್ಯುಎಸ್ ಮೀಸಲಾತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೆಲ್ಲ ಗೊತ್ತಿದ್ದರೂ ಕರ್ನಾಟಕದ ಬಿಜೆಪಿ ಸರ್ಕಾರ ಅದೇ 10%ನಲ್ಲಿ ಉಳಿದ ಮೀಸಲಾತಿ ಪ್ರಮಾಣವನ್ನು ಒಕ್ಕಲಿಗರಿಗೆ ಮತ್ತು ಲಿಂಗಾಯಿತರಿಗೆ ನೀಡಲಾಗುವುದು ಎಂದು ಹೇಳುತ್ತಿರುವುದು ಸುಳ್ಳಲ್ಲದೆ ಮತ್ತೇನು?

ಇದನ್ನೂ ಓದಿ: ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ

ಯಾವ ಮಾನದಂಡದ ಆಧಾರದಲ್ಲಿ ನೋಡಿದರೂ ಸಹ ಒಕ್ಕಲಿಗರಿಗೆ 3% ಮತ್ತು ಲಿಂಗಾಯಿತರಿಗೆ 4% ಮೀಸಲಾತಿಯನ್ನು ಇಡಬ್ಲ್ಯುಎಸ್ ಕೋಟಾದಿಂದ ತೆಗೆದುಕೊಡಲಾಗುವುದು ಎನ್ನುವುದು ಅಸಾಧ್ಯದ ಮಾತೇ ಸರಿ. ಏಕೆಂದರೆ ಇದು ಜಾರಿಯಾಗಬೇಕಾದರೆ ಸುಪ್ರೀಂ ಕೋರ್ಟ್‌ನ 7 ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳಿಗೆ ಹೇರಿರುವ ಶೇ.50ರ ಮೀಸಲಾತಿ ಮಿತಿಯನ್ನು ತೆಗೆದುಹಾಕಬೇಕು. ಇಡಬ್ಲ್ಯುಎಸ್ ಕೋಟಾದಲ್ಲಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ನೀಡಬೇಕು ಎಂಬ ತೀರ್ಪು ಬರಬೇಕು. ಇಲ್ಲವೇ ಸಂಸತ್ತಿನಲ್ಲಿ ಕಾಯ್ದೆಯಾಗಿ ಸಂವಿಧಾನ ತಿದ್ದುಪಡಿಯಾಗಬೇಕು. ಈ ಬಗ್ಗೆ ಒಂದೂ ಮಾತನಾಡದ ಸರ್ಕಾರ ಕೇವಲ ಸಂಪುಟ ಸಮಿತಿಯಲ್ಲಿ ಕೂತು ಘೋಷಿಸಿದರೆ ಜಾರಿಯಾಗಿಬಿಡುವುದೆ?

ಇದೇ ಸಮಸ್ಯೆ ಎಸ್‌ಸಿ, ಎಸ್‌ಟಿಗೆ 6% ಮೀಸಲಾತಿ ಹೆಚ್ಚಿಸುವ ಪ್ರಸ್ತಾಪದಲ್ಲಿಯೂ ಪುನರಾವರ್ತನೆಯಾಗುತ್ತದೆ. ಈಗ ಸುಗ್ರೀವಾಜ್ಞೆ ಮೂಲಕ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಶಾಸನ ಮಾಡಲಾಗಿದೆ. ಆದರೆ ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸಲು ಸಂಸತ್ತಿನಲ್ಲಿ ಒಪ್ಪಿಗೆ ಪಡೆಯಬೇಕು. ಅಷ್ಟು ಮಾತ್ರವಲ್ಲದೆ ಸಂವಿಧಾನ ತಿದ್ದುಪಡಿಯ ಮೂಲಕ ಶೇ.50ರ ಮೀಸಲಾತಿ ಮಿತಿಯನ್ನು ತೆಗೆದುಹಾಕಿದಾಗ ಮಾತ್ರ ಈ ಮೀಸಲಾತಿ ಹೆಚ್ಚಳ ಊರ್ಜಿತವಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ನಮ್ಮ ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಸಂವಹನ ನಡೆಸಿಲ್ಲ. ಮತ್ತೆ ಇದು ಜಾರಿಯಾಗುವುದು ಯಾವಾಗ?

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಮರಾಠರಿಗೆ 12% ಮೀಸಲಾತಿ ನೀಡಿತು. ಆದರೆ ಮೀಸಲಾತಿ ಪ್ರಮಾಣ 50% ಮಿತಿಮೀರಿದ ಕಾರಣ ಸುಪ್ರೀಂ ಕೋರ್ಟ್ ಮರಾಠ ಮೀಸಲಾತಿಯನ್ನು ರದ್ದುಗೊಳಿಸಿತು. ತೆಲಂಗಾಣದಲ್ಲಿ ಎಸ್‌ಟಿ ಮೀಸಲಾತಿಯನ್ನು ಶೇ.6 ರಿಂದ 10ಕ್ಕೆ ಏರಿಸಬೇಕೆಂದು 2017ರಲ್ಲಿ ತೆಲಂಗಾಣ ಸದನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಆದರೆ 6 ವರ್ಷ ಕಳೆದರೂ ಕೇಂದ್ರ ಸರ್ಕಾರ ಅದನ್ನು ಅನುಮೋದಿಸಿಲ್ಲ. ಈ ಎಲ್ಲಾ ಉದಾಹರಣೆಗಳನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿಯೂ ದಲಿತರಿಗೆ, ಒಕ್ಕಲಿಗರಿಗೆ ಮತ್ತು ಲಿಂಗಾಯಿತರಿಗೆ ಮೀಸಲಾತಿ ಹೆಚ್ಚಳ ಮಾಡುತ್ತೇನೆ ಎನ್ನುವ ಸರ್ಕಾರದ ಹೇಳಿಕೆ ಚುನಾವಣಾ ಕಾಲದ ವಂಚನೆಯೇ ಹೊರತು ವಾಸ್ತವವಲ್ಲ; ಮತಗಳಿಗಾಗಿ ಸಮುದಾಯಗಳ ಓಲೈಕೆ ರಾಜಕಾರಣವಿದು ಎಂಬುದು ಮನವರಿಕೆಯಾಗುತ್ತದೆ.

ಬಸವರಾಜ್ ಬೊಮ್ಮಾಯಿ

ಭಾರತದಲ್ಲಿ 1931ರಲ್ಲಿ ನಡೆದ ಜಾತಿಗಣತಿ ಬಿಟ್ಟರೆ ಮತ್ತೆ ಜಾತಿಗಣತಿ ನಡೆದೇ ಇಲ್ಲ. ದೇಶದ ಸಮುದಾಯಗಳ ಜನಸಂಖ್ಯೆ, ಅವುಗಳ ಶೈಕ್ಷಣಿಕ ಪ್ರಗತಿ, ಸಮಾಜದಲ್ಲಿನ ಪ್ರಾತಿನಿಧ್ಯದ ಕುರಿತು ನೈಜ ಚಿತ್ರಣವಿಲ್ಲ. ಆ ಸಮುದಾಯಗಳು ಹಿಂದುಳಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ವೈಜ್ಞಾನಿಕವಾಗಿ ಶೋಧಿಸಲಾಗಿಲ್ಲ. ಅದಕ್ಕಾಗಿ ಜಾತಿಗಣತಿ ನಡೆಯಬೇಕು ಎಂದು ಹಲವು ಪಕ್ಷಗಳು ಆಗ್ರಹಿಸಿದರೂ ಮೋದಿ ಸರ್ಕಾರ ಒಪ್ಪಿಗೆ ನೀಡಿಲ್ಲ. ಆದರೆ ಬಲಾಢ್ಯ ಜಾತಿಗಳು ಮೀಸಲಾತಿ ಕೇಳಿದಾಕ್ಷಣ ನಿಜವಾಗಿಯೂ ಆ ಸಮುದಾಯಗಳು ಸಾಮಾಜಿಕವಾಗಿ ಹಿಂದುಳಿದಿವೆಯೇ? ಅವುಗಳ ಪ್ರಾತಿನಿಧ್ಯ ತೀರಾ ಕಡಿಮೆಯಿದೆಯೇ ಎಂಬುದನ್ನು ಅಧ್ಯಯನ ಮಾಡದೆ ಏಕಾಏಕಿ ಮೀಸಲಾತಿ ಹೆಚ್ಚಿಸುತ್ತೇವೆ ಎಂದು ರಾಜ್ಯ ಸರ್ಕಾರ ಘೋಷಿಸುತ್ತದೆ. ಆದರೆ 30 ವರ್ಷಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಯಾಗಬೇಕೆಂದು ನ್ಯಾಯಯುತವಾಗಿ ಹೋರಾಡುತ್ತಿರುವ ಸಮುದಾಯಗಳ ಕುರಿತು ಅಸಡ್ಡೆ ತೋರಿರುವ ಸರ್ಕಾರ ಉಪ ಸಮಿತಿ ರಚಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಆ ಮೂಲಕ ಯಾವುದನ್ನು ಮಾಡಲೇಬೇಕಿತ್ತೊ ಅದನ್ನು ಮಾಡದೆ, ಯಾವುದನ್ನು ಮಾಡಲು ಸಾಧ್ಯವಿಲ್ಲವೋ ಅದನ್ನು ಮಾಡುವುದಾಗಿ ಒಣಘೋಷಣೆ ಮಾಡುತ್ತಾ ಒಂದೇ ಸಮಯಕ್ಕೆ ಎಲ್ಲಾ ಸಮುದಾಯಗಳ ಕಣ್ಣಿಗೆ ಮಣ್ಣೆರೆಚಲು ಹೊರಟಿದೆ ಬೊಮ್ಮಾಯಿ ನೇತೃತ್ವದ ಸರ್ಕಾರ.

ಒಳ ಮೀಸಲಾತಿ ವರ್ಗೀಕರಣದಿಂದ ಶೇ.50ರ ಮಿತಿಯನ್ನು ಮೀರಿದಂತಾಗುವುದಿಲ್ಲ. ಬದಲಿಗೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿದಂತಾಗುತ್ತದೆ. ಈ ಕುರಿತು ಶಿಫಾರಸ್ಸು ಮಾಡಿರುವ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಚರ್ಚೆಗೆ ಅನುವು ಮಾಡಿಕೊಡಲಿಲ್ಲ. ಕನಿಷ್ಠ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸೌಜನ್ಯ ತೋರಲಿಲ್ಲ. ಆ ಮೂಲಕ ಯಾವುದನ್ನು ಸುಲಭಕ್ಕೆ ಮಾಡಬಹುದಿತ್ತೊ ಅದನ್ನು ಮಾಡದೇ ಶೋಷಿತ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ.

ಇದನ್ನೂ ಓದಿ: ಸ್ಪೃಶ್ಯ-ಅಸ್ಪೃಶ್ಯ: ಒಳಮೀಸಲಾತಿಯ ಒಳಗುದಿ

ಒಟ್ಟಾರೆಯಾಗಿ ನೋಡುವುದಾದರೆ ಮೀಸಲಾತಿ ಹೆಚ್ಚಳವಾದರೆ ಭಾರೀ ಬದಲಾವಣೆ ಆಗುತ್ತದೆ ಎಂಬುದು ಸಹ ವಾಸ್ತವವಲ್ಲ. ಅದರೊಟ್ಟಿಗೆ ಸರ್ಕಾರಿ ಉದ್ಯೋಗಗಳು ಹೆಚ್ಚಾಗಬೇಕಿವೆ. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಜಾರಿಗೆ ಬರಬೇಕಿದೆ. ಕೃಷಿಗೆ ಮಹತ್ವ ನೀಡಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ರೈತರ ಬೆಳೆಗಳಿಗೆ ಎಂಎಸ್‌ಪಿ ಜಾರಿಯಾಗಬೇಕು. ಗುಣಮಟ್ಟದ ಉಚಿತ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಸರ್ಕಾರದ ಕರ್ತವ್ಯವಾಗಬೇಕು. ಯುವಜನರಿಗೆ ಉತ್ತಮ ಶಿಕ್ಷಣದ ಜೊತೆಗೆ ಉದ್ಯೋಗದ ಖಾತ್ರಿ ಸಿಗಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಇವೆಲ್ಲವೂ ಸಂವಿಧಾನದತ್ತವಾಗಿ ಜನತೆಗೆ ಸಿಕ್ಕಿರುವ ಹಕ್ಕುಗಳು. ಇವುಗಳನ್ನು ಜಾರಿ ಮಾಡಲು ಸಾಧ್ಯವಾಗುವಷ್ಟು ಸಂಪತ್ತು ಸಹ ನಮ್ಮ ದೇಶದಲ್ಲಿದೆ. ಹಾಗಾಗಿ ಇದನ್ನು ಅರ್ಥ ಮಾಡಿಕೊಂಡು ದೇಶದ ಎಲ್ಲಾ ಸಮುಯದಾಯದ ಬಡವರು ಇವೆಲ್ಲದ್ದಕ್ಕಾಗಿ ಹೋರಾಡಬೇಕಿದೆ. ಆದರೆ ಇವೆಲ್ಲವುಗಳನ್ನು ಜಾರಿಗೊಳಿಸಲು ಕೆಲಸ ಮಾಡದ ಸರ್ಕಾರ ಮೀಸಲಾತಿಯ ವಿಷಯಗಳಲ್ಲಿ ಗೊಂದಲಗಳನ್ನು ಸೃಷ್ಟಿಸುವ ಮೂಲಕ ಜನರ ದಿಕ್ಕುತಪ್ಪಿಸುವುದರಲ್ಲಿ ನಿರತವಾಗಿದೆ. ಈಗಲಾದರೂ ಜನತೆ ತಮ್ಮ ಬದುಕಿಗೆ ಕಂಟಕವಾಗಿರುವ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಗಳನ್ನು ಹುಡುಕಿಕೊಳ್ಳುವತ್ತ ದೃಷ್ಟಿ ಹಾಯಿಸಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...