ಕೇರಳದ ಕಲಮಸ್ಸೆರಿಯ ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಗಾಯಗೊಂಡ 50 ಜನರ ಪೈಕಿ 12 ವರ್ಷದ ಬಾಲಕಿ ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ 3ಕ್ಕೆ ಏರಿಕೆಯಾದಂತಾಗಿದೆ.
ಎರ್ನಾಕುಲಂ ಜಿಲ್ಲೆಯ ಮಲಯತ್ತೂರ್‌ನ ಲಿಬಿನಾ ಎಂದು ಗುರುತಿಸಲಾದ 12 ವರ್ಷದ ಬಾಲಕಿ ಇಂದು ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ಈ ಕುರಿತು ಹೇಳಿಕೆ ಹೊರಡಿಸಿದ್ದು, ಬಾಲಕಿಯನ್ನು ದೇಹದ ಶೇಕಡಾ 95ರಷ್ಟು ತೀವ್ರ ಸುಟ್ಟಗಾಯಗಳೊಂದಿಗೆ ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ನಲ್ಲಿ ಬಾಲಕಿಯ ಆರೋಗ್ಯ ಸ್ಥಿತಿಯು ಕ್ಷೀಣಿಸುತ್ತಲೇ ಇತ್ತು. ರಾತ್ರಿ 12.40ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕೊಚ್ಚಿಯ ಕಲಾಮಸ್ರಿಯಲ್ಲಿರುವ ಜಮ್ರಾ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಕ್ರಿಶ್ಚಿಯನ್ ಧಾರ್ಮಿಕ ಪ್ರಾರ್ಥನೆ ವೇಳೆ ಸರಣಿ ಸ್ಪೋಟಗಳು ಸಂಭವಿಸಿದ್ದವು. ಸ್ಪೋಟದಲ್ಲಿ ನಿನ್ನೆ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು.
ಘಟನೆ ಕುರಿತು ಪ್ರಾಥಮಿಕ ತನಿಖೆಯಲ್ಲಿ ಸ್ಪೋಟಕ್ಕೆ ಐಇಡಿ ಸಾಧನವನ್ನು ಬಳಸಿರುವುದು ಪತ್ತೆಯಾಗಿದೆ. ಈ ಕುರಿತು ತನಿಖೆಗೆ ವಿಶೇಷ ತಂಡ ರಚಿಸಲಾಗುವುದು ಎಂದು ಕೇರಳದ ಡಿಜಿಪಿ ಶೇಕ್ ದರ್ವೇಶ್ ಸಾಹೇಬ್ ಹೇಳಿದ್ದರು.
ಟಿಫಿನ್ ಬಾಕ್ಸ್‌ನಲ್ಲಿ ಇರಿಸಲಾಗಿದ್ದ ಐಇಡಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಬ್ಲಾಸ್ಟ್ ನಡೆಯುವ ಸ್ವಲ್ಪ ಮೊದಲು ಕನ್ವೆನ್ಷನ್ ಸೆಂಟರ್‌ನಿಂದ ವೇಗವಾಗಿ ಕಾರು ತೆರಳುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿತ್ತು. ಸ್ಪೋಟಕ ಇಟ್ಟ ವ್ಯಕ್ತಿ ಕಾರಿನಲ್ಲಿ ತೆರಳಿರುವ ಶಂಕೆ ವ್ಯಕ್ತವಾಗಿತ್ತು.
ಇದಾದ ಕೆಲವೇ ಗಂಟೆಗಳಲ್ಲಿ 48 ವರ್ಷದ ವ್ಯಕ್ತಿ ಡೊಮಿನಿಕ್ ಮಾರ್ಟಿನ್ ಪೊಲೀಸರಿಗೆ ಶರಣಾಗಿದ್ದಾನೆ. ನಾನೇ ಸ್ಪೋಟವನ್ನು ನಡೆಸಿರುವುದು ಎಂದು ವಿಡಿಯೋ ಹೇಳಿಕೆಯನ್ನು ಕೂಡ ರಿಲೀಸ್ ಮಾಡಿದ್ದ. ಯಹೋವನ ಸಾಕ್ಷಿಗಳ ನಿಲುವಿನ ವಿರುದ್ಧ ಆಕ್ಷೇಪವನ್ನು ವ್ಯಕ್ತಪಡಿಸಿ ಬಹಳ ಯೋಚಿಸಿ ಬಾಂಬ್ ಇಡುವ ತೀರ್ಮಾನ ಮಾಡಿದೆ ಎಂದು ವಿಡಿಯೋದಲ್ಲಿ ಹೇಳಿದ್ದ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನು ಓದಿ: ಕೊಚ್ಚಿ: ಸರಣಿ ಸ್ಪೋಟ ಪ್ರಕರಣ: ವಿಡಿಯೋ ಹೇಳಿಕೆ ಕೊಟ್ಟು ಪೊಲೀಸರಿಗೆ ಶರಣಾದ ಆರೋಪಿ


