Homeಮುಖಪುಟವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಚಟುವಟಿಕೆಗಳು ಮತ್ತು ವಿವಾದಗಳು

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಚಟುವಟಿಕೆಗಳು ಮತ್ತು ವಿವಾದಗಳು

- Advertisement -
- Advertisement -

ಭಾರತದ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) 1956ರಲ್ಲಿ ಭಾರತ ಸರ್ಕಾರ ಸ್ಥಾಪಿಸಿದ ಶಾಸನಬದ್ಧ ಸಂಸ್ಥೆ. ದೇಶದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಮಾನದಂಡಗಳನ್ನು ರೂಪಿಸುವುದು ಮತ್ತು ಅವುಗಳ ಜಾರಿಯನ್ನು ಖಚಿತಪಡಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ವಿಶ್ವವಿದ್ಯಾಲಯದ ಶಿಕ್ಷಣದ ಸಮನ್ವಯ ಮತ್ತು ಗುಣಮಟ್ಟಗಳ ನಿರ್ವಹಣೆಯಲ್ಲಿ ಯುಜಿಸಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಸ್ವಾತಂತ್ರ್ಯದ ನಂತರ ಭಾರತವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿತು. ಆದರೆ ಹೀಗೆ ಸ್ಥಾಪಿತವಾದ ಸಂಸ್ಥೆಗಳಲ್ಲಿ ಸ್ಥಿರವಾದ ಶೈಕ್ಷಣಿಕ ಮಾನದಂಡಗಳನ್ನು ರೂಪಿಸುವ ಮತ್ತು ದೇಶಾದ್ಯಂತ ಉನ್ನತ ಶಿಕ್ಷಣದ ಗುಣಮಟ್ಟವನ್ನು ಪ್ರಮಾಣೀಕರಿಸುವ ಅಗತ್ಯವಿತ್ತು. ಇದನ್ನು ಖಚಿತಪಡಿಸಿಕೊಳ್ಳುವ ಹಾಗು ಶೈಕ್ಷಣಿಕ ಗುಣಮಟ್ಟವನ್ನು ಎತ್ತಿಹಿಡಿಯಲು, ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವ ಮತ್ತು ಮಾನ್ಯತೆ ನೀಡುವ ಕಾರ್ಯವನ್ನು ನಿರ್ವಹಿಸಲು ಯುಜಿಸಿಯ ಸ್ಥಾಪನೆಯಾಯ್ತು.

ಇದರೊಂದಿಗೆ ದೇಶದ ವೈವಿಧ್ಯಮಯ ಶಿಕ್ಷಣ ವ್ಯವಸ್ಥೆಗೆ ಹಣಕಾಸು ಕೂಡ ಬಹಳ ಮುಖ್ಯವಾಗಿದ್ದು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸಂಪನ್ಮೂಲಗಳ ನ್ಯಾಯಯುತ ಮತ್ತು ಪರಿಣಾಮಕಾರಿ ವಿತರಣೆಯನ್ನು ಮಾಡಲು ಕೂಡ ಕೇಂದ್ರೀಕೃತ ಸಂಸ್ಥೆಯಾಗಿ ಯುಜಿಸಿಯನ್ನು ಸ್ಥಾಪಿಸಲಾಯಿತು.

ಇಷ್ಟೇ ಅಲ್ಲದೆ ಭಾರತದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಜಾಗತಿಕ ಸ್ಪರ್ಧಾತ್ಮಕತೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಗುರಿಗಳತ್ತ ಕೊಂಡೊಯ್ಯುವ ನೀತಿಗಳನ್ನು ಅಭಿವೃದ್ಧಿಪಡಿಸಲು ಚಿಂತಕರ ಚಾವಡಿಯಾಗಿ ಯುಜಿಸಿ ಕಾರ್ಯನಿರ್ವಹಿಸಬೇಕೆಂದು ಉದ್ದೇಶಿಸಲಾಗಿತ್ತು ಹಾಗು ಆರಂಭದ ಬಹುಕಾಲ ಯುಜಿಸಿಯು ಈ ಉದ್ದೇಶಗಳೆಡೆಗೆ ಕಾರ್ಯನಿರ್ವಹಿಸಿತು.

ಇದಲ್ಲದೆ ಪ್ರಾಧ್ಯಾಪಕರ, ಕುಲಪತಿಗಳ ನೇಮಕಾತಿ, ಬಡ್ತಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಹಲವಾರು ವಿದ್ಯಾರ್ಥಿವೇತನಗಳ ಮೂಲಕ ಬೆಂಬಲ ನೀಡಲು ಯುಜಿಸಿ ನಿಯಮಾವಳಿಗಳನ್ನು ರೂಪಿಸಿ ನಿರ್ವಹಿಸುತ್ತದೆ. ಇದರಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್‌ಗಳು ಮತ್ತು ಉಪನ್ಯಾಸಕ ಅರ್ಹತೆಗಳಿಗಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಕೂಡ ಸೇರಿದೆ. ಇಷ್ಟೇಅಲ್ಲದೆ ಜಾಗತಿಕ ಶೈಕ್ಷಣಿಕ ಪ್ರವೃತ್ತಿಗಳು ಮತ್ತು ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಆಧುನೀಕರಿಸುವ ಮತ್ತು ನವೀಕರಿಸುವಲ್ಲಿ ಯುಜಿಸಿ ಪ್ರಮುಖ ಪಾತ್ರ ವಹಿಸುತ್ತದೆ.

ಹೀಗೆ ನಿರಂತರವಾಗಿ ಉನ್ನತಶಿಕ್ಷಣದ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕಾದ ಯುಜಿಸಿಯು ಹಲವಾರು ಬಾರಿ ತನ್ನ ತೀರ್ಮಾನಗಳು ಮತ್ತು ಸಲಹೆಗಳಿಂದಾಗಿ ವಿವಾದಕ್ಕೊಳಗಾಗಿದೆ. ಇದರಲ್ಲಿ ಇತ್ತೀಚಿನ ಸೇರ್ಪಡೆ ಎಂದರೆ ಜನವರಿ 7ರಂದು ಕೇಂದ್ರ ಶಿಕ್ಷಣ ಸಚಿವರು ಬಿಡುಗಡೆ ಮಾಡಿದ 2025ರ ವಿಶ್ವವಿದ್ಯಾಲಯ ಅನುದಾನ ಆಯೋಗದ ಕರಡು ನಿಯಮಾವಳಿಗಳು. “ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ ಹಾಗೂ ಪದೋನ್ನತಿಯ ಕನಿಷ್ಟ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಕ್ರಮಗಳು” ಎಂಬ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಶಿಕ್ಷಣದ ಕುರಿತು ರಾಜ್ಯ ಮತ್ತು ಕೇಂದ್ರದ ನಡುವಿನ ಜವಾಬ್ದಾರಿಯನ್ನು ಅಳಿಸಿಹಾಕುವಂತ ಹೊಸ ನಿಯಮಾವಳಿ ಪ್ರಕಟಿಸಿದೆ.

ಭಾರತದಲ್ಲಿನ ಉನ್ನತ ಶಿಕ್ಷಣ ಹಂತದಲ್ಲಿನ ಬೋಧನೆ ಮತ್ತು ಸಂಶೋಧನೆಯ ಗುಣಮಟ್ಟ ಕುಸಿಯುತ್ತಿದೆ ಎಂಬ ನಿರಂತರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈಗ ತರಲು ಉದ್ದೇಶಿಸಿರುವ ಕೆಲವು ಹೊಸ ನಿಯಮಗಳು ಅದರಲ್ಲಿ ಈ ಕರಡಿನ 10ನೇ ನಿಯಮದಲ್ಲಿ ವಿಶ್ವವಿದ್ಯಾಲಯಗಳ ನೇಮಕಾತಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ತರುವ ದಿಕ್ಕಿನಲ್ಲಿ ಕೆಲವು ಅಂಶಗಳನ್ನು ಒಕ್ಕೂಟ ಸರ್ಕಾರ ಪ್ರಸ್ತಾಪಿಸಿದೆ. ಆ ನಿಯಮಗಳ ಪ್ರಕಾರ ಇನ್ನು ಮುಂದೆ ಕುಲಪತಿಗಳ ನೇಮಕಾತಿಯಲ್ಲಿ ರಾಜ್ಯಪಾಲರ ತೀರ್ಮಾನವೇ ನಿರ್ಣಾಯಕವಾಗಲಿದೆ; ಮತ್ತು ಬೋಧನೆಯ ಅನುಭವ ಇಲ್ಲದ “ಖಾಸಗೀ ಉದ್ದಿಮೆಯ ಅನುಭವಿ ವ್ಯಕ್ತಿಯು” ಕೂಡ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸುವ ಅವಕಾಶ ಇದೆ. ಈ ಹಿಂದಿನ ನಿಯಮಾವಳಿಯಲ್ಲಿ ಯಾವುದೇ ವಿಶ್ವವಿದ್ಯಾಲಯದ ಕುಲಪತಿಯಾಗಬೇಕೆಂದರೆ ಅವರು ಮೊದಲು ಬೋಧಕರಾಗಿರಬೇಕಿತ್ತು. ಈ ನಿಯಮವನ್ನು ಪ್ರಸ್ತುತ ಕರಡು ನಿಯಮಾವಳಿಯಲ್ಲಿ ಬದಲಿಸಲಾಗಿದೆ ಮತ್ತು ಈ ಕರಡು ನಿಯಮಾವಳಿಯು ಕುಲಪತಿ ನೇಮಕಾತಿಯಲ್ಲಿ ರಾಜ್ಯ ಸರ್ಕಾರಕ್ಕಿಂತಲೂ ಕೇಂದ್ರ ನೇಮಿಸಿರುವ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ನೀಡಿರುತ್ತದೆ.

ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಉಂಟಾಗಿತ್ತು. ಈಗ ಯುಜಿಸಿಯ ನಿಯಮಾವಳಿಗಳು ರಾಜ್ಯ ಸರ್ಕಾರದ ಅಧಿಕಾರವನ್ನೇ ಮೊಟಕುಗೊಳಿಸುವಂತಿದೆ. ಯುಜಿಸಿಯ ಕರಡು ನಿಯಮಾವಳಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಹುಟ್ಟುಹಾಕುವ ಸಾಧ್ಯತೆ ಇದೆ.

1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡುವ ಮೂಲಕ ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು. ಈ ಹಿನ್ನೆಲೆಯಲ್ಲಿ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ನೇಮಕಾತಿ ಅಧಿಕಾರ ಇರುತ್ತದೆ. ಹಾಗೆಯೇ ಪ್ರಾಧ್ಯಾಪಕರುಗಳ ನೇಮಕಾತಿಯಲ್ಲೂ ಕನಿಷ್ಟ ವಿದ್ಯಾರ್ಹತೆಯ ಮಾನದಂಡವನ್ನು ಯುಜಿಸಿ ಹೇಳಿದರೂ ಸರ್ಕಾರಗಳು ನೇಮಕಾತಿ ವಿಧಾನವನ್ನು ತಾವೇ ನಿರ್ಣಯಿಸುತ್ತವೆ; ಉದಾಹರಣೆಗೆ ಈಗ ಕರ್ನಾಟಕದಲ್ಲಿ ಕೆಇಎ ಮೂಲಕ ಲಿಖಿತ ಪರೀಕ್ಷೆಗಳನ್ನು ನಡೆಸಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಲಾಗುತ್ತದೆ; ಸರ್ಕಾರ ಬಯಸಿದರೆ ಇದಕ್ಕೆ ಸಂದರ್ಶನವನ್ನೂ ಸೇರಿಸಬಹುದು- ಇವೆಲ್ಲಾ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ವಿಶ್ವವಿದ್ಯಾನಿಲಯಗಳು ನೇಮಕಾತಿಗೆ ತಮ್ಮದೇ ವಿಧಾನಗಳನ್ನು ಹೊಂದಿವೆ. ಇದನ್ನು ಸಹ ಸರ್ಕಾರವು ಬದಲಿಸಲು ಸಾಧ್ಯ. ಹಾಗೆಯೇ ಯುಜಿಸಿ ಯಾವುದೇ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಅಥವಾ ಮುಚ್ಚುವ ಅಧಿಕಾರ ಹೊಂದಿಲ್ಲ; ಅದು ಸಹ ಆಯಾ ರಾಜ್ಯಗಳ ಅಧಿಕಾರದ ವ್ಯಾಪ್ತಿಗೆ ಬರುತ್ತದೆ.

ಈಗಿನ ಕರಡು ಪ್ರಸ್ತಾಪವು ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆಗೆ ಮಾರಕ ಮತ್ತು ಉನ್ನತ ಶಿಕ್ಷಣದ ಸಂಪೂರ್ಣ ಖಾಸಗೀಕರಣಕ್ಕೆ ಕಾರಣವಾಗಲಿದೆ ಎಂಬ ವಿಮರ್ಶೆಗೆ ಒಳಗಾಗಿದೆ. ಯುಜಿಸಿ ರೂಪಿಸಿರುವ ಕುಲಪತಿಗಳ ನೇಮಕಾತಿ ಕರಡು ನಿಯಮಗಳು ಉನ್ನತ ಶಿಕ್ಷಣದ ಕುರಿತು ರಾಜ್ಯಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಗುಣ ಹೊಂದಿದೆ.

ತನ್ನ ರಾಜ್ಯದ ಉನ್ನತ ಶಿಕ್ಷಣದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ರಾಜ್ಯಗಳಿಗೆ ಇರಬೇಕಾಗಿರುವುದು ಪ್ರಜಾತಾಂತ್ರಿಕ ನಿರ್ಣಯ. ಶಿಕ್ಷಣದ ಮೇಲಿನ ರಾಜ್ಯಗಳ ಹಕ್ಕನ್ನೇ ಮೊಟಕುಗೊಳಿಸುವ ಕ್ರಮವು ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ತೀರಾ ಅಪಾಯಕಾರಿ ಎನಿಸುತ್ತದೆ. ಇದರ ಜೊತೆಗೆ ಶೈಕ್ಷಣಿಕ ಹಿನ್ನೆಲೆ ಇಲ್ಲದ ವ್ಯಕ್ತಿ ಕೂಡ ಕುಲಪತಿ ಹುದ್ದೆಗೆ ಅರ್ಹ ವ್ಯಕ್ತಿಯಾಗಿದ್ದಾರೆ ಎಂಬುದು ಚರ್ಚಾರ್ಹವಾಗಿದೆ. ಈಗ ಯಾವ ಅನುಭವವೂ ಇಲ್ಲದ ವ್ಯಕ್ತಿಯನ್ನು ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಿದರೆ ಆ ವ್ಯಕ್ತಿಯಿಂದ ವಿಶ್ವವಿದ್ಯಾಲಯಕ್ಕೆ ಬೇಕಾದ ಶೈಕ್ಷಣಿಕ ನಾಯಕತ್ವ ಮತ್ತು ಶೈಕ್ಷಣಿಕಾಡಳಿತ ಎರಡನ್ನೂ ನೀಡಲು ಸಾಧ್ಯವಾಗುವುದಿಲ್ಲ. ಶೈಕ್ಷಣಿಕ ಅನುಭವವಿಲ್ಲದ ವ್ಯಕ್ತಿಗಳು ವಿಶ್ವವಿದ್ಯಾಲಯದ ಶೈಕ್ಷಣಿಕ ನಾಯಕತ್ವಕ್ಕೆ ನೇಮಕವಾದರೆ ಅದೊಂದು ಅಪಕ್ವ ನಡೆಯಾಗುತ್ತದೆ.

ಕರಡು ನಿಯಮಾವಳಿಗಳ ಪ್ರಕಾರ ಸ್ನಾತಕೋತ್ತರ ಪದವಿ ಪಡೆಯದಿದ್ದರೂ, ನೆಟ್ ಅಥವಾ ಕೆಸೆಟ್ ಇಲ್ಲದಿದ್ದರೂ, ನಾಲ್ಕು ವರ್ಷ ಓದಿದ 75 ಶೇ ಅಂಕ ಇರುವ ಪದವೀಧರರು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರಿರುತ್ತಾರೆ. ಎಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಆಯ್ಕೆಯಾಗಲು ಅರ್ಹರು. ಈ ಹಿಂದೆ ಇದ್ದ ಯುಜಿಸಿ 2018ರ ನಿಯಮಾವಳಿ ಪ್ರಕಾರ ಸಹಾಯಕ ಪ್ರಾಧ್ಯಾಪಕರಾಗಲು ಪದವಿ ಮತ್ತು ಸ್ನಾತಕೋತ್ತರ ಪದವಿಯ ಜೊತೆಗೆ ಸಂಬಂಧಿಸಿದ ವಿಷಯದಲ್ಲಿ NET/SLET/PhD ಶೈಕ್ಷಣಿಕ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದರಿಂದ, ವಿಷಯದಲ್ಲಿ ಪರಿಣಿತಿಯನ್ನು ಪಡೆದುಕೊಂಡಿರುವವರು ಆಯ್ಕೆಯಾಗುತ್ತಿದ್ದರು. ಈಗ ಯುಜಿಸಿ ಹೊಸ ನಿಯಮಾವಳಿ ಪ್ರಕಾರ ನವೀನ ಬೋಧನಾ ವಿಧಾನಗಳು, ಡಿಜಿಟಲ್ ರೂಪದಲ್ಲಿ ಪಠ್ಯ ರಚನೆ ಮತ್ತು ಸಂಶೋಧನಾ ನಿಧಿಗೆ ಕೊಡುಗೆಗಳಂತಹ ವೃತ್ತಿಪರ ಸಾಧನೆಗಳನ್ನು ಗುರುತಿಸುವ ನಿಬಂಧನೆಗಳನ್ನು ಪರಿಚಯಿಸುವ ಮೂಲಕ ಕರಡು ಅರ್ಹತೆಗಳ ವ್ಯಾಪ್ತಿಯನ್ನು ಸಡಿಲಗೊಳಿಸಿದೆ. ಬಡ್ತಿಗೆ ಬೇಕಾದ ಮಾನದಂಡಗಳನ್ನು ಕಡಿಮೆ ಮಾಡಿರುವುದು ಸಹ ಶೈಕ್ಷಣಿಕ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಹೊಸ ಮಾರ್ಗಸೂಚಿಗಳು ಅಧ್ಯಾಪಕರ ಬಡ್ತಿಗಾಗಿ ಬಳಸಲಾಗುತ್ತಿದ್ದ ಶೈಕ್ಷಣಿಕ ಕಾರ್ಯಕ್ಷಮತೆ ಸೂಚಕ ವ್ಯವಸ್ಥೆಯನ್ನು ತೆಗೆದುಹಾಕುತ್ತವೆ.

ಯುಜಿಸಿಯ ಈ ಕರಡು ನಿಯಮಗಳು, ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಉದ್ದೇಶಗಳನ್ನು ಹೇಗಾದರೂ ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುವ ಜೊತೆಗೆ ಕುಲಪತಿ (ವಿಸಿ) ಹುದ್ದೆಯ ಆಯ್ಕೆಯಲ್ಲಿ ಶೈಕ್ಷಣಿಕೇತರರಿಗೆ ಸ್ಥಾನವನ್ನು ಕೊಡಲು ಕೂಡ ಪ್ರಯತ್ನಿಸುತ್ತವೆ.

ಈಗಾಗಲೇ ಕರ್ನಾಟಕದ ಉನ್ನತ ಶಿಕ್ಷಣ ಸಚಿವರು ಇದನ್ನು ವಿರೋಧಿಸಿ ಕೇಂದ್ರಕ್ಕೆ ಪತ್ರವನ್ನು ಬರೆದಿದ್ದಾರೆ. ಈ ಕರಡು ನಿಯಮಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ರಾಜಸ್ಥಾನದ ಮುಖ್ಯಮಂತ್ರಿ ಕೂಡ ವಿರೋಧಿಸಿದ್ದಾರೆ. ಹೈದರಾಬಾದ್‌ನ ಒಬಿಸಿ ವಿಧ್ಯಾರ್ಥಿ ಒಕ್ಕೂಟ ಸಹ ವಿರೋಧಿಸಿದೆ. ಪಶ್ಚಿಮ ಬಂಗಾಳ ಕೂಡ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದೆ. ಪುದುಚೇರಿಯು ಯುಜಿಸಿಯನ್ನು ಭಾಗೀದಾರರ ಸಮಾಲೋಚನೆಗೆ ಕರೆದಿದೆ. ಹೀಗೆ ಪ್ರತಿರೋಧ ಬರುತ್ತಿರುವ ಹಿನ್ನೆಲೆಯಲ್ಲಿ ಯುಜಿಸಿ ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆಯುವ ಮತ್ತು ದೇಶದ ಬೋಧನೆ ಮತ್ತು ಸಂಶೋಧನೆಗಳಿಗೆ ಅನುದಾನ ನೀಡಲು ಎಂದೇ ರಚಿತವಾದ ಸಂಸ್ಥೆಯು ಮೊದಲಿನ ಹಾಗೆ ಅನುದಾನ ನೀಡುವುದನ್ನು, ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸ್ಕಾಲರ್ಶಿಪ್ ನೀಡುವುದನ್ನು ಮುಂದುರಿಸುವ ಮತ್ತು ಒಕ್ಕೂಟ ವ್ಯವಸ್ಥೆಗೆ ಮಾರಕ ಎನಿಸುವ ನಿಲುವುಗಳನ್ನು ಪ್ರಕಟಿಸದೆ ದೇಶದ ಸಮಗ್ರ ಶೈಕ್ಷಣಿಕ ಗುಣಮಟ್ಟವನ್ನು, ಬೋಧನೆ ಮತ್ತು ಸಂಶೋಧನೆಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ವಿಹಿತ.

ಸಂತೋಷ್ ನಾಯಕ್ ಆರ್

ಸಂತೋಷ್ ನಾಯಕ್ ಆರ್
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...