Homeಮುಖಪುಟಅಜಿತ್ ಪವಾರ್ ಸಾವು | ಪತನಗೊಂಡ ವಿಮಾನದ ನಿರ್ವಹಣಾ ಸಂಸ್ಥೆಗೂ ಟಿಡಿಪಿಗೂ ನಂಟು : ರೋಹಿತ್...

ಅಜಿತ್ ಪವಾರ್ ಸಾವು | ಪತನಗೊಂಡ ವಿಮಾನದ ನಿರ್ವಹಣಾ ಸಂಸ್ಥೆಗೂ ಟಿಡಿಪಿಗೂ ನಂಟು : ರೋಹಿತ್ ಪವಾರ್

- Advertisement -
- Advertisement -

ಅಜಿತ್ ಪವಾರ್ ಸಾವಿಗೆ ಕಾರಣವಾದ ಪತನಗೊಂಡ ವಿಮಾನದ ನಿರ್ವಾಹಕ ಸಂಸ್ಥೆ ವಿಎಸ್ಆರ್ ವೆಂಚರ್ಸ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಡುವೆ ಸಂಬಂಧವಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ ಪವಾರ್ ಬಣದ) ಶಾಸಕ ರೋಹಿತ್ ಪವಾರ್ ಆರೋಪಿಸಿದ್ದಾರೆ.

ಅಜಿತ್ ಪವಾರ್ ಅವರ ಸೋದರ ಸಂಬಂಧಿಯ ಮಗನಾದ ರೋಹಿತ್ ರಾಜೇಂದ್ರ ಪವಾರ್, ಪ್ರಸ್ತುತ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕರ್ಜತ್-ಜಮಖೇಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಎನ್‌ಸಿಪಿ ಶರದ್ ಪವಾರ್ ಬಣದಲ್ಲಿದ್ದಾರೆ.

ಹಾಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಟಿಡಿಪಿ ಪಕ್ಷದ ಸಂಸದರು. ಟಿಡಿಪಿ ಪಕ್ಷ ಮತ್ತು ವಿಎಸ್ಆರ್ ವೆಂಚರ್ಸ್ ನಡುವೆ ಆರ್ಥಿಕ ಮತ್ತು ರಾಜಕೀಯ ಸಂಬಂಧಗಳಿವೆ. ಹೀಗಿರುವಾಗ ಅಜಿತ್ ಪವಾರ್ ವಿಮಾನ ಪತನದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವಿಲ್ಲ ಎಂದು ರೋಹಿತ್ ಪವಾರ್ ಹೇಳಿದ್ದಾರೆ. ರಾಮ್ ಮೋಹನ್ ನಾಯ್ಡು ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ವಿಎಸ್ಆರ್ ವೆಂಚರ್ಸ್‌ಗೆ ಸಾಲ ನೀಡಿದವರಲ್ಲಿ ಒಬ್ಬರು ಹೆರಿಟೇಜ್ ಫಿನ್‌ಲೀಸ್ ಲಿಮಿಟೆಡ್. ಬ್ಯಾಂಕೇತರ ಹಣಕಾಸು ಕಂಪನಿಯಾದ (ಎನ್‌ಬಿಎಫ್‌ಸಿ) ಇದರ ಸ್ಥಾಪಕರು ಟಿಡಿಪಿ ಪಕ್ಷದ ನಾಯಕ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಂದು ರೋಹಿತ್ ಪವಾರ್ ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಮತ್ತು ಸೊಸೆ ಬ್ರಾಹ್ಮಣಿ ಕೂಡ ಹೆರಿಟೇಜ್ ಫಿನ್‌ಲೀಸ್ ಲಿಮಿಟೆಡ್‌ನ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ಹಾಗಾಗಿ, ಇದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ತನಿಖೆಯ ಪಾರದರ್ಶಕತೆಯನ್ನು ಕುಂದಿಸಬಹುದು ಎಂದು ರೋಹಿತ್ ಪವಾರ್ ತಿಳಿಸಿದ್ದಾರೆ.

ಟಿಡಿಪಿ ಮತ್ತು ವಿಎಸ್‌ಆರ್ ವೆಂಚರ್ಸ್ ಕಂಪನಿಯ ನಡುವೆ ಅತ್ಯಂತ ಆಪ್ತ ಸಂಬಂಧವಿದೆ. ಇದಕ್ಕೆ ಸಾಕ್ಷಿಯಾಗಿ, ಕಳೆದ ವರ್ಷ ಜೈಪುರದಲ್ಲಿ ನಡೆದ ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾದ ರೋಹಿತ್ ಸಿಂಗ್ ಅವರ ವಿವಾಹ ಸಮಾರಂಭದಲ್ಲಿ ಅನೇಕ ಟಿಡಿಪಿ ನಾಯಕರು ಭಾಗವಹಿಸಿದ್ದರು ಎಂದು ರೋಹಿತ್ ಪವಾರ್ ವಿವರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಪವಾರ್, ಅಜಿತ್ ಪವಾರ್ ವಿಮಾನ ಪತನದ ಕುರಿತು ವಿವರವಾದ ವರದಿ ಎಂದು ಹೇಳಿ ಮಾಹಿತಿ ನೀಡಿದ್ದು, ಅಜಿತ್ ಪವಾರ್ ಸಾವು ‘ರಾಜಕೀಯ ಅಥವಾ ವಾಣಿಜ್ಯ ಪಿತೂರಿ’ ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ವಿಎಸ್‌ಆರ್ ವೆಂಚರ್ಸ್ ಕಂಪನಿಯನ್ನು ‘ಅತ್ಯಂತ ಪ್ರಭಾವಿ’ ರಾಜಕೀಯ ಮತ್ತು ವ್ಯಾಪಾರ ಹಿತಾಸಕ್ತಿಗಳು ರಕ್ಷಿಸುತ್ತಿವೆ ಎಂದಿರುವ ಅವರು, ಕಂಪನಿಯ ಕೆಲವು ಹಣಕಾಸುದಾರರು ಟಿಡಿಪಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ವಿಮಾನ ಅಪಘಾತ ಸಂಭವಿಸಿದ ಬೆನ್ನಲ್ಲೇ ವಿಮಾನಯಾನ ಸಚಿವರು ವಿಎಸ್‌ಆರ್ ವೆಂಚರ್ಸ್ ಕಂಪನಿಗೆ ‘ಕ್ಲೀನ್ ಚಿಟ್’ ಕೊಟ್ಟಂತೆ ತೋರುವ ಹೇಳಿಕೆಗಳನ್ನು ಏಕೆ ನೀಡಿದ್ದರು ಎಂದು ಪ್ರಶ್ನಿಸಿದ ರೋಹಿತ್ ಪವಾರ್, “ನಾವು ಈ ಪ್ರಕರಣದ ಆಳಕ್ಕೆ ಹೋದಷ್ಟೂ, ಆ ಕಂಪನಿಗೆ ಅತ್ಯಂತ ಪ್ರಭಾವಿ ವ್ಯಕ್ತಿಗಳ ಬೆಂಬಲವಿದೆ ಎಂಬುವುದು ಸ್ಪಷ್ಟವಾಗುತ್ತಿದೆ. ಈಗ ಕೇವಲ ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಮಾತ್ರ ಅಜಿತ್ ದಾದಾ ಅವರಿಗೆ ನ್ಯಾಯ ಕೊಡಿಸಲು ಸಾಧ್ಯ” ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಹಂಚಿಕೊಂಡ ಸಹಿ ಇಲ್ಲದ ಹೇಳಿಕೆಯಲ್ಲಿ ಟಿಡಿಪಿ ಪಕ್ಷವು, ರೋಹಿತ್ ಪವಾರ್ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದೆ. ಸಚಿವ ರಾಮ್ ಮೋಹನ್ ನಾಯ್ಡು ಅಥವಾ ಟಿಡಿಪಿ ಪಕ್ಷವು ವಿಮಾನ ಅಪಘಾತಕ್ಕೆ ಸಂಬಂಧಿಸಿದವರನ್ನು ರಕ್ಷಿಸುತ್ತಿದೆ ಎಂಬ ಆರೋಪಗಳು ‘ಸಂಪೂರ್ಣ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾಗಿದ್ದು, ಇವು ರಾಜಕೀಯ ಪ್ರೇರಿತವಾಗಿವೆ’ ಎಂದಿದೆ.

ವಿಮಾನ ಅಪಘಾತದ ತನಿಖೆಗಳನ್ನು ಸ್ಥಾಪಿತ ಅಂತಾರಾಷ್ಟ್ರೀಯ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಪ್ರೋಟೋಕಾಲ್‌ಗಳು ಮತ್ತು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ಐಸಿಎಒ) ಮಾನದಂಡಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ನಡೆಸಲಾಗುತ್ತದೆ. ಈ ವಿಚಾರಣೆಗಳು ತಾಂತ್ರಿಕವಾಗಿರುತ್ತವೆ, ಪಾರದರ್ಶಕವಾಗಿರುತ್ತವೆ ಮತ್ತು ಸಂಪೂರ್ಣವಾಗಿ ಪುರಾವೆ ಆಧಾರಿತವಾಗಿರುತ್ತವೆ ಎಂದು ಟಿಡಿಪಿ ಹೇಳಿದೆ.

ಒಬ್ಬ ಗೌರವಾನ್ವಿತ ರಾಜಕೀಯ ನಾಯಕನ ದುರಂತ ಅಂತ್ಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಟಿಡಿಪಿ ಯಾವಾಗಲೂ ಅಜಿತ್ ಪವಾರ್ ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದೆ. ಸತ್ಯ ಹೊರಬರುವಂತೆ ನೋಡಿಕೊಳ್ಳಲು ಮತ್ತು ಒಂದು ವೇಳೆ ಯಾರಾದರೂ ತಪ್ಪಿತಸ್ಥರಿದ್ದರೆ ಅವರನ್ನು ಹೊಣೆಗಾರರನ್ನಾಗಿ ಮಾಡಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ ಎಂದು ತಿಳಿಸಿದೆ.

ವಿಮಾನ ಅಪಘಾತ ತನಿಖಾ ಸಂಸ್ಥೆಯಾದ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಅಜಿತ್ ಪವಾರ್ ವಿಮಾನ ಪತನದ ತಾಂತ್ರಿಕ ತನಿಖೆಯ ನೇತೃತ್ವ ವಹಿಸಿದೆ. ಈ ತನಿಖೆಯ ಪ್ರಾಥಮಿಕ ವರದಿಯು ಫೆಬ್ರವರಿ 27 ಅಥವಾ 28 ರೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ತಿಳಿಸಿದ್ದಾರೆ.

ವಿಮಾನ ಪತನಗೊಂಡ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ವಿಎಸ್ಆರ್ ವೆಂಚರ್ಸ್‌ನ ನಿರ್ದೇಶಕ ವಿಜಯ್ ಕುಮಾರ್ ಸಿಂಗ್, ಪತನಗೊಂಡ ಲಿಯರ್ಜೆಟ್ 45 ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷಗಳಿರಲಿಲ್ಲ ಎಂದು ಖಚಿತವಾಗಿ ಹೇಳಿದ್ದರು.

ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ರೋಹಿತ್ ಪವಾರ್ (ಇದರ ಪ್ರತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕಳುಹಿಸಿದ್ದಾರೆ), ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಮತ್ತು ವಿಎಸ್‌ಆರ್ ವೆಂಚರ್ಸ್ ನಡುವಿನ ಸಂಬಂಧದ ಬಗ್ಗೆ ಸ್ವತಂತ್ರ ಮತ್ತು ಸಮರ್ಥ ಪ್ರಾಧಿಕಾರದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈ ತನಿಖೆಯು ಪೂರ್ಣಗೊಳ್ಳುವವರೆಗೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ನೀವು ಯಾವಾಗಲೂ ಅಜಿತ್ ದಾದಾ ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಗೌರವವನ್ನು ತೋರಿಸಿದ್ದೀರಿ. ಈ ಹಿನ್ನೆಲೆಯಲ್ಲಿ, ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ರಾಮಮೋಹನ್ ನಾಯ್ಡು ಅವರನ್ನು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಬೇಕೆಂದು ನಾನು ವಿನಂತಿಸುತ್ತೇನೆ. ವಿಎಸ್‌ಆರ್ ಕಂಪನಿಗೆ ಸಂಬಂಧಿಸಿದಂತೆ ಡಿಜಿಸಿಎ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಂಡಿಲ್ಲ ಅಥವಾ ಕಂಪನಿ ತನಿಖೆಯ ಮೇಲೆ ಪ್ರಭಾವ ಬೀರಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದು ಅಗತ್ಯವಾಗಿದೆ. ಈ ವಿಷಯದಲ್ಲಿ ನೀವು ಸೂಕ್ತ ಕ್ರಮ ಕೈಗೊಳ್ಳುತ್ತೀರಿ ಎಂದು ನಾನು ನಂಬುತ್ತೇನೆ” ಎಂಬುವುದಾಗಿ ರೋಹಿತ್ ಪವಾರ್ ಪತ್ರದಲ್ಲಿ ಹೇಳಿದ್ದಾರೆ.

“ಈ ಪ್ರಕರಣವನ್ನು ಕೇವಲ ‘ಆಕಸ್ಮಿಕ ಸಾವು’ ಎಂದು ಪರಿಗಣಿಸದೆ, ಇದನ್ನು ‘ಅಪರಾಧ ಸದೃಶ ನರಹತ್ಯೆ’ ಎಂದು ಪರಿಗಣಿಸಬೇಕು. ಅಲ್ಲದೆ, ವಿಎಸ್‌ಆರ್ ವೆಂಚರ್ಸ್ ಮಾಲೀಕರ ವಿರುದ್ಧ ಹಾಗೂ ವಿಮಾನದ ಹಾರಾಟದ ಅರ್ಹತೆಯನ್ನು ದೃಢೀಕರಿಸಿದ ತಾಂತ್ರಿಕ ಸಿಬ್ಬಂದಿಯ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಬೇಕು” ಎಂದು ರೋಹಿತ್ ಪವಾರ್ ಒತ್ತಾಯಿಸಿದ್ದಾರೆ.

“ಈ ಅಪಘಾತವು ಸಾಂವಿಧಾನಿಕ ಹುದ್ದೆಯಲ್ಲಿದ್ದ ಒಬ್ಬ ಉನ್ನತ ವ್ಯಕ್ತಿಗೆ ಸಂಬಂಧಿಸಿದ್ದು ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿಮಾನಯಾನ ಕ್ಷೇತ್ರಕ್ಕೆ ಒಳಪಟ್ಟಿರುವುದರಿಂದ, ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕು. ರಾಜ್ಯ ಸಿಐಡಿ ತಂಡಕ್ಕೆ ಈ ಬಗ್ಗೆ ತಾಂತ್ರಿಕ ಪರಿಣತಿ ಹಾಗೂ ರಾಜಕೀಯ ಸ್ವತಂತ್ರದ ಕೊರತೆ ಇರುವುದರಿಂದ, ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ರೋಹಿತ್ ಪವಾರ್ ಅವರು ತಾಂತ್ರಿಕ ದತ್ತಾಂಶಗಳು ನಾಪತ್ತೆಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ವಿಮಾನದ ಟ್ರಾನ್ಸ್‌ಪಾಂಡರ್ ಅನ್ನು ಹಾರಾಟದ ಕೊನೆಯ ನಿಮಿಷದಲ್ಲಿ ಆಫ್ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ. ಹ್ಯಾಂಗರ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗುತ್ತಿದೆ ಮತ್ತು ಕಂಪನಿಯನ್ನು ರಕ್ಷಿಸಲು ಹಳೆಯ ದಿನಾಂಕದ ಆಡಿಟ್ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಮತ್ತಷ್ಟು ಗಂಭೀರ ಆರೋಪ ಮಾಡಿದ್ದಾರೆ.

ಈ ವಿಷಯದಲ್ಲಿ ಸತ್ಯ ಮರೆಮಾಚದಂತೆ ನೋಡಿಕೊಳ್ಳಲು ಮತ್ತು ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಲು ರೋಹಿತ್ ಪವಾರ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.

ಜನವರಿ 28,2026 ರಂದು ಬಾರಾಮತಿಯಲ್ಲಿ ನಡೆದ ಈ ಅಪಘಾತವು ಲಿಯರ್‌ಜೆಟ್ 45 ವಿಮಾನಕ್ಕೆ ಸಂಬಂಧಿಸಿದ್ದಾಗಿದೆ. ಅಂದಿನಿಂದ ರೋಹಿತ್ ಪವಾರ್ ಅವರು ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದು, ತಾಂತ್ರಿಕ ವ್ಯತ್ಯಾಸಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ವಿಮಾನದಲ್ಲಿ ಹೆಚ್ಚುವರಿ ಇಂಧನ ಟ್ಯಾಂಕ್‌ಗಳ ಬಳಕೆ ಮತ್ತು ಕೊನೆಯ ಕ್ಷಣದಲ್ಲಿ ಮುಖ್ಯ ಪೈಲಟ್ ಅನ್ನು ಬದಲಾಯಿಸಿರುವುದು ಸೇರಿದಂತೆ ಹಲವು ಸಂಶಯಾಸ್ಪದ ಅಂಶಗಳನ್ನು ಅವರು ಉಲ್ಲೇಖಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್: ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ಬ್ರೇಕ್! ಬಂಗಾಳ ಸಿಎಂ ಗೆ ಪತ್ರ ಬರೆದ ಕೇರಳ ಸಿಎಂ

ಹಿರಿಯ ಪತ್ರಕರ್ತ ಮತ್ತು ‘ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ರಾಮದಾಸ್ ಅವರ ಪಾಸ್‌ಪೋರ್ಟ್ ನವೀಕರಣ ವಿವಾದವು ಸೋಮವಾರ ಮತ್ತಷ್ಟು ತೀವ್ರಗೊಂಡಿದೆ. ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ...

ರಾಮ ಮಂದಿರ ದೇಣಿಗೆ ಹಗರಣ: ಅರ್ಜಿ ವಿಚಾರಣೆ ಕೆಲ ದಿನ ತಡವಾದರೆ ‘ಆಕಾಶವೇನೂ ಉರುಳಿ ಬೀಳುವುದಿಲ್ಲ’ ಎಂದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರಿಂದ ಬಂದ ದೇಣಿಗೆ ಹಣ ದುರುಪಯೋಗ ಆಗಿರುವ ಕುರಿತು ಸಿಬಿಐ ನೇತೃತ್ವದ ಬಹು-ಸಂಸ್ಥೆಗಳ ಜಂಟಿ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ...

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...