ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು ‘ಭಾರತದ ಪರಿಕಲ್ಪನೆ’ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ ಚುನಾವಣಾ ಅಂಕಗಣಿತ ಮತ್ತು ಲೆಕ್ಕಾಚಾರಗಳಾಗಿ ಉಳಿದುಹೋಗಿದೆ.
ವಿರೋಧ ಪಕ್ಷಗಳು ಒಟ್ಟಾಗಿ ಚುನಾವಣೆಗಳನ್ನು ಬಹಿಷ್ಕರಿಸಬೇಕು ಮತ್ತು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳೆಲ್ಲದರಿಂದ ರಾಜೀನಾಮೆ ನೀಡಬೇಕು ಎಂದು ನಾನು ಬಹಳ ಕಾಲದಿಂದ ವಾದಿಸುತ್ತಿದ್ದೇನೆ. ಬಿಜೆಪಿಯನ್ನು ಒಬ್ಬ ‘ಅತಿಕ್ರಮಣಕಾರ’ನಂತೆ ಕಾಣುವಂತೆ ಮಾಡಿ; ನಮ್ಮ ಜನರ ಮತ್ತು ಜಗತ್ತಿನ ಕಣ್ಣಿನಲ್ಲಿ ಅದಕ್ಕಿರುವ ಸಾಂವಿಧಾನಿಕ ಮಾನ್ಯತೆಯನ್ನು ನಿರಾಕರಿಸಬೇಕು.
ಒಂದೆಡೆ ಈ ವಿರೋಧ ಪಕ್ಷಗಳು ‘ಮತಗಳ ಕಳ್ಳತನ’ (Vote Chori) ಎಂದು ಕೂಗಾಡುತ್ತವೆ, ಆದರೆ ಮತ್ತೊಂದೆಡೆ ಹೇಗಾದರೂ ಮಾಡಿ ಗೆಲ್ಲಬಹುದು ಎಂಬ ಅಸ್ಪಷ್ಟ ಭರವಸೆಯೊಂದಿಗೆ ಅದೇ ಚುನಾವಣೆಗಳಲ್ಲಿ ಸ್ಪರ್ಧಿಸುತ್ತವೆ. ಇಡೀ ವ್ಯವಸ್ಥೆಯೇ ‘ಫಿಕ್ಸ್’ ಆಗಿದೆ ಎಂಬ ಸತ್ಯವನ್ನು ಅವು ಅರಿಯುತ್ತಿಲ್ಲ ಅಥವಾ ನಂಬಲು ನಿರಾಕರಿಸುತ್ತಿವೆ. ಅವರು ಮತಗಳ ಕಳ್ಳತನದ ಬಗ್ಗೆ ಹೇಳುವ ಮಾತುಗಳಲ್ಲಿ ಪ್ರಾಮಾಣಿಕತೆ ಇಲ್ಲವೇ ಅಥವಾ ಅವರು ಅಷ್ಟು ಮುಗ್ಧರೇ?
ಮತಗಳ ಕಳ್ಳತನ ಮತ್ತು ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂದು ತಾವು ಹೇಳುವುದನ್ನು ಅವರೇ ನಂಬುವುದಾದರೆ, ಈ ನಕಲಿ ಚುನಾವಣೆಗಳಲ್ಲಿ ಅವರು ಭಾಗವಹಿಸುತ್ತಿರುವುದೇಕೆ? ಕದ್ದ ಜನಾದೇಶದ ಆಧಾರದ ಮೇಲೆ ಆಯ್ಕೆಯಾದ ಸದನಗಳಲ್ಲಿ ಕೂರುತ್ತಿರುವುದೇಕೆ? ಇದು ಕದ್ದ ಜನಾದೇಶಕ್ಕೆ ಮಾನ್ಯತೆ ನೀಡಿದಂತಾಗುವುದಿಲ್ಲವೇ?
ಮಮತಾ ಬ್ಯಾನರ್ಜಿ ಅವರ ನಿಲುವಿನ ಬಗ್ಗೆ ನಾನಿಷ್ಟು ಹೇಳುತ್ತೇನೆ: ಘೋಷಿತ ಜನಾದೇಶವನ್ನು ಅವರು ನಿಜವಾಗಿಯೂ ತಿರಸ್ಕರಿಸುವುದಾದರೆ ಮತ್ತು ರಾಜೀನಾಮೆ ನೀಡಲು ನಿರಾಕರಿಸಿದರೆ, ಅದರರ್ಥ ಅವರು ರಚನೆಯಾಗಲಿರುವ ನೂತನ ವಿಧಾನಸಭೆಯನ್ನು ಮಾನ್ಯ ಮಾಡುತ್ತಿಲ್ಲ ಎಂದರ್ಥ. ಅಂದರೆ ಅವರು ಹಳೆಯ ಸದನವೇ ಇನ್ನೂ ಚಾಲ್ತಿಯಲ್ಲಿದೆ ಎಂದು ಪರಿಗಣಿಸುತ್ತಿದ್ದಾರೆ. ಹಾಗಿದ್ದಲ್ಲಿ, ಅವರು ತಮ್ಮ ಪಕ್ಷದ ಎಲ್ಲಾ ಚುನಾಯಿತ ಶಾಸಕರು ಸದನದಿಂದ ಹೊರಬರುವಂತೆ ಮಾಡಬೇಕು. ಆಗ ಮಾತ್ರ ಅವರ ನಿಲುವಿಗೆ ಒಂದು ತೂಕ ಬರುತ್ತದೆ.
“ನನ್ನ ಪಕ್ಷದ ವಿಜೇತರು ಸರಿ, ಆದರೆ ನಿಮ್ಮ ಪಕ್ಷದ ವಿಜೇತರು ಅಕ್ರಮವಾಗಿ ಆಯ್ಕೆಯಾದವರು” ಎನ್ನುವುದು ಯಾವ ರೀತಿಯ ಸದ್ಧಾಂತಿಕ ನಿಲುವು? ಬದಲಾಗಿ ಅವರು, “ನೋಡಿ, 93 ಲಕ್ಷ ಮತದಾರರ ಹೆಸರು ಕೈಬಿಟ್ಟು, 28 ಲಕ್ಷ ಜನರಿಗೆ ಮತದಾನದ ಹಕ್ಕು ನಿರಾಕರಿಸಿದ ಮೇಲೆ, ಒಂದು ವೇಳೆ ನಾನೇ ಗೆದ್ದಿದ್ದರೂ ಸಹ ಈ ಇಡೀ ಚುನಾವಣಾ ಪ್ರಕ್ರಿಯೆಯೇ ದೋಷಪೂರಿತವಾಗಿದೆ, ಹಾಗಾಗಿ ನಾನು ಇದನ್ನು ಮಾನ್ಯ ಮಾಡುವುದಿಲ್ಲ” ಎಂದು ಹೇಳಿದ್ದರೆ, ಆಗ ಅವರ ನಿಲುವು ಪ್ರಾಮಾಣಿಕ ಎನಿಸುತ್ತಿತ್ತು. ಈಗ ಅವರು ಸೋಲನ್ನು ಒಪ್ಪಿಕೊಳ್ಳದ ‘ಸೋರ್ ಲೂಸರ್’ (Sore Loser) ಎಂಬ ಟೀಕೆಗೆ ಗುರಿಯಾಗುವಂತಾಗಿದೆ. ಈ ಆರೋಪದಲ್ಲಿ ಬಲವೂ ಇದೆ.
ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರನ್ನು ಕೈಬಿಟ್ಟಿರುವುದು ಮತ್ತು ಲಕ್ಷಾಂತರ ಮತದಾರರನ್ನು ‘ವಿಚಾರಣಾ ಹಂತದಲ್ಲಿದೆ’ (Under Adjudication) ಎಂಬ ವರ್ಗಕ್ಕೆ ಸೇರಿಸಿ ಮತದಾನದಿಂದ ವಂಚಿತಗೊಳಿಸಿರುವುದನ್ನು ನೋಡಿದರೆ, ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಕುಳಿತು ಗಂಭೀರವಾಗಿ ಚಿಂತಿಸುವ ಸಮಯ ಬಂದಿದೆ.
ಬಿಹಾರವನ್ನು ನೋಡಿ: ಇಬ್ಬರು ಯುವಕರು ‘ಮತದಾನದ ಹಕ್ಕು’ ಯಾತ್ರೆ ಮಾಡಿದರು. ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳ ಕೈಬಿಡಲಾಗಿದೆ ಎಂದು ಆರೋಪಿಸಿದರು. ಹಾಗಿರುವಾಗ ಅವರು ಸ್ಪರ್ಧಿಸಿದ್ದೇಕೆ? ಜನಸಾಗರವನ್ನು ನೋಡಿ ಹೇಗಾದರೂ ಗೆಲ್ಲಬಹುದು ಎಂದು ಭಾವಿಸಿದರೇ? ಅಂದರೆ ಮತದಾನದ ಹಕ್ಕಿನಿಂದ ವಂಚಿತರಾದ ಜನರು ಅವರಿಗೆ ಮುಖ್ಯವಾಗಲಿಲ್ಲವೇ? ತಾವು ಗೆದ್ದಿದ್ದರೆ ಈ ಅಕ್ರಮಗಳು ಅವರಿಗೆ ಅಪ್ರಸ್ತುತವಾಗುತ್ತಿದ್ದವೇ? ಗೆಲುವು ಅಥವಾ ಸೋಲು ಮಾತ್ರ ಅವರಿಗೆ ಮುಖ್ಯವಾಯಿತೇ? ವಿರೋಧ ಪಕ್ಷಗಳು ಸೋತಾಗ ಮಾತ್ರ ಹಕ್ಕುಗಳ ಹರಣ ಅವರಿಗೆ ಸಮಸ್ಯೆಯಾಗಿ ಕಾಣುತ್ತದೆಯೇ?
ಮತದಾರರ ಪಟ್ಟಿಯಿಂದ ಅರ್ಹ ವ್ಯಕ್ತಿಯೊಬ್ಬನ ಹೆಸರನ್ನು ಕೈಬಿಡುವುದು ಪಟ್ಟಿಯಲ್ಲಿರುವ ಪ್ರತಿಯೊಬ್ಬರನ್ನೂ ಚಿಂತೆಗೆ ದೂಡಬೇಕಲ್ಲವೇ? ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಬಾಗ್ಚಿ ಅವರ ಮಾತನ್ನು ನೆನಪಿಸಿಕೊಳ್ಳಿ: “ಒಂದು ವೇಳೆ ಕೈಬಿಟ್ಟ ಮತಗಳ ಸಂಖ್ಯೆ ಗೆಲುವಿನ ಅಂತರಕ್ಕಿಂತ ಹೆಚ್ಚಿದ್ದರೆ ಮಾತ್ರ ಅದನ್ನು ನ್ಯಾಯಾಲಯ ಗಂಭೀರವಾಗಿ ಪರಿಶೀಲಿಸಬೇಕು.” ಇದರ ಅರ್ಥವೇನು? ನನ್ನ ಹಕ್ಕು ಮುಖ್ಯವಾಗುವುದು ಗೆಲುವಿನ ಅಂತರದ ಆಧಾರದ ಮೇಲೆಯೇ ಹೊರತು ಪ್ರಜೆಯಾಗಿ ಅಲ್ಲವೇ? ನ್ಯಾಯಾಲಯವು ಇಷ್ಟು ವಿಕಾರವಾಗಿರಲು ಸಾಧ್ಯವೇ?
ಫಲಿತಾಂಶ ಬಂದ ನಂತರ ಬಿಹಾರದಲ್ಲಿ ಕೈಬಿಡಲಾದ 63 ಲಕ್ಷ ಜನರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಚುನಾವಣೆ ಮುಗಿಯಿತು, ಆ ಜನರು ಈಗ ಯಾರಿಗೂ ಬೇಡವಾಗಿದ್ದಾರೆ. ತಮಿಳುನಾಡು, ಕೇರಳ, ಪುದುಚೇರಿಯಲ್ಲೂ ಇದೇ ಕಥೆ. ಚುನಾವಣೆ ನಡೆಯದ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ 2.83 ಕೋಟಿ ಮತದಾರರ ಹೆಸರನ್ನು ಕೈಬಿಡಲಾಗಿದೆ, ಅವರ ಬಗ್ಗೆ ಯಾರಿಗಾದರೂ ಕಾಳಜಿ ಇದೆಯೇ?
ಕಳೆದ ಎರಡು ವರ್ಷಗಳಿಂದ ಉರಿಯುತ್ತಿರುವ ಮಣಿಪುರದ ಬಗ್ಗೆಯೂ ನಮಗೆ ಚಿಂತೆ ಇಲ್ಲ. ಮತದಾರರ ಪಟ್ಟಿಯಿಂದ ಕೈಬಿಟ್ಟ ಈ ಜನರಿಗೂ ಆ ಮಣಿಪುರದವರಿಗೂ ಏನು ವ್ಯತ್ಯಾಸ? ಅಲ್ಲಿ ಈಗ ಚುನಾವಣೆ ಇಲ್ಲದ ಕಾರಣ ಯಾರೂ ಮಾತನಾಡುತ್ತಿಲ್ಲ. ರಾಜಕೀಯ ಪಕ್ಷಗಳಾಗಲಿ, ಮಾಧ್ಯಮಗಳಾಗಲಿ ಅಥವಾ ಸ್ವತಂತ್ರ ಡಿಜಿಟಲ್ ಪ್ಲಾಟ್ಫಾರ್ಮ್ಗಳಾಗಲಿ ಇವರ ಬಗ್ಗೆ ಚಕಾರವೆತ್ತುತ್ತಿಲ್ಲ. ಚುನಾವಣೆ ಇಲ್ಲದಿದ್ದರೆ 2.83 ಕೋಟಿ ಜನ ನಮಗೆ ಮನುಷ್ಯರಲ್ಲವೇ?
ಸಂಸ್ಥೆಗಳ ಮೇಲೆ ನಡೆದಿರುವ ಈ ಹಿಡಿತ ತಪ್ಪುವವರೆಗೆ ಚುನಾವಣೆಗಳನ್ನು ಬಹಿಷ್ಕರಿಸುವುದು ಮತ್ತು ಸದನಗಳಿಂದ ರಾಜೀನಾಮೆ ನೀಡುವುದು ಆದರ್ಶವಾಗಿ ಕಂಡರೂ ಅವಾಸ್ತವಿಕವಾಗಿ ಕಾಣಬಹುದು. ಆದರೆ, ಜೀವನದಲ್ಲಿ ಅಪರೂಪಕ್ಕೆ ಒಮ್ಮೆ ಆದರ್ಶ ಮತ್ತು ಪ್ರಾಯೋಗಿಕತೆ ಒಂದಾಗುವ ಕ್ಷಣ ಬರುತ್ತದೆ. ನಮ್ಮ ರಾಷ್ಟ್ರದ ಬದುಕಿನಲ್ಲಿ ಆ ಕ್ಷಣ ಈಗ ಬಂದಿದೆ. ಯಾವುದು ಆದರ್ಶವೋ ಅದೇ ಈಗಿರುವ ಏಕೈಕ ಪ್ರಾಯೋಗಿಕ ದಾರಿ.
ನಮ್ಮ ಗಣರಾಜ್ಯವು ಈಗ ತೀವ್ರ ಬಿಕ್ಕಟ್ಟಿನಲ್ಲಿದೆ, ಮರಣಾಂತಿಕ ಅಪಾಯದಲ್ಲಿದೆ. ಮಮತಾ ಬ್ಯಾನರ್ಜಿ ಅವರು ನಿಜವಾದ ಹೋರಾಟಗಾರ್ತಿ ಎಂದು ನಾನು ನಂಬಬೇಕಾದರೆ, ಅವರು ಮೊದಲು ತಮ್ಮ ಶಾಸಕರು ರಾಜೀನಾಮೆ ನೀಡುವಂತೆ ಅಥವಾ ಪ್ರಮಾಣವಚನ ಸ್ವೀಕರಿಸದಂತೆ ನಿರ್ಧಾರ ಮಾಡಲಿ. ಇಲ್ಲವಾದರೆ ಸೋಲಿನ ಹತಾಶೆಯಲ್ಲಿ ಅವರು ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಯಾರೂ ತಡೆಯಲು ಸಾಧ್ಯವಿಲ್ಲ.
ವಿರೋಧ ಪಕ್ಷಗಳು ಈ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ? ಇದು ಇನ್ನು ಎಂದಿನಂತೆ ಇರುವಂತಹ ಸಮಯವಲ್ಲ. ಅಸಮಾನ್ಯ ಕಾಲಘಟ್ಟವು ಅಸಾಮಾನ್ಯ ಕ್ರಮಗಳನ್ನು ಬಯಸುತ್ತದೆ.
ಒಂದು ವೇಳೆ ರಾಜಕೀಯ ಪಕ್ಷಗಳು ಇದನ್ನು ಮಾಡದಿದ್ದರೆ, ಕನಿಷ್ಠ ಪಕ್ಷ ನಾಗರಿಕ ಸಮಾಜವು ಇಂತಹ ಹೋರಾಟಕ್ಕಿಳಿದಾಗ ಅದರ ಹಿಂದೆ ಬೆಂಬಲವಾಗಿ ನಿಲ್ಲಲಿ. ಇದು ಕೇವಲ ಪಕ್ಷಗಳ ನಡುವಿನ ಆಟವಲ್ಲ, ಇದು ಇಡೀ ಗಣರಾಜ್ಯದ ಅಳಿವು-ಉಳಿವಿನ ಪ್ರಶ್ನೆ. ಇದು ನಮ್ಮ ಗಣರಾಜ್ಯ. ಈ ಸಂವಿಧಾನವನ್ನು ನಮಗೆ ನಾವೇ ಕೊಟ್ಟುಕೊಂಡಿದ್ದೇವೆ. ಗಾಂಧೀಜಿಯವರ ಅಹಿಂಸಾತ್ಮಕ ಹಾದಿಯ ‘ಬೀದಿ ಹೋರಾಟ’ ಮಾತ್ರವೇ ನಮ್ಮ 1950ರ ಸಂವಿಧಾನದ ಆಶಯವನ್ನು ಉಳಿಸಬಲ್ಲದು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನ್ಯಾಯ ಮತ್ತು ಜಾತ್ಯತೀತ ಮೌಲ್ಯಗಳನ್ನು ಈ ಮೂಲಕವೇ ರಕ್ಷಿಸಲು ಸಾಧ್ಯ.
ನಾವು ಈ ಸವಾಲನ್ನು ಎದುರಿಸಲು ಸಿದ್ಧರಿದ್ದೇವೆಯೇ? ಪ್ರತಿಯೊಬ್ಬರೂ ಈ ನಿರ್ಧಾರ ಮಾಡಬೇಕು ಮತ್ತು ಸಾಮೂಹಿಕ ಹೋರಾಟಕ್ಕೆ ಸಜ್ಜಾಗಬೇಕು. ಉಳಿದೆಲ್ಲಾ ಅಜೆಂಡಾಗಳನ್ನು ಬದಿಗಿಟ್ಟು ಭಾರತದ ಪರಿಕಲ್ಪನೆಯನ್ನು ಮತ್ತು ಗಣರಾಜ್ಯವನ್ನು ರಕ್ಷಿಸಲು ಕೆಲಸ ಮಾಡಬೇಕಿದೆ. ನೆನಪಿರಲಿ, ಈ ಮಣ್ಣಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಈ ದೇಶದ ಮಾಲೀಕರು. ಇದು ಯಾವುದೇ ಒಂದು ಧರ್ಮ, ಜಾತಿ, ಪಂಗಡ, ಪ್ರದೇಶ ಅಥವಾ ಆಹಾರ ಪದ್ಧತಿಗೆ ಸೇರಿದ್ದಲ್ಲ. ಇದು ಎಲ್ಲರಿಗೂ ಸೇರಿದ್ದು. ಭಾರತದ ಈ ಪರಿಕಲ್ಪನೆಯನ್ನು ಒಪ್ಪದ ಶಕ್ತಿಗಳು ಇದನ್ನು ಹಾಳುಗೆಡವಲು ನೂರು ವರ್ಷ ಕೆಲಸ ಮಾಡಿವೆ. ಇದನ್ನು ರಕ್ಷಿಸಲು ನಾವು ಕೆಲವು ತಿಂಗಳಾದರೂ ಕೆಲಸ ಮಾಡೋಣ. ಎಲ್ಲರಿಗೂ ಸಮಾನ ಅವಕಾಶವಿರುವ ಭಾರತದ ಮೂಲ ಚಹರೆಯನ್ನು ಉಳಿಸಿಕೊಳ್ಳುವುದಕ್ಕೆ ನಮಗೆ ಬೇರೆ ಆಯ್ಕೆಯೇ ಇಲ್ಲ.
ಬರಹ
ಪರಕಾಲ ಪ್ರಭಾಕರ್
ಹಿರಿಯ ಅರ್ಥಶಾಸ್ತ್ರಜ್ಞರು


