ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ.
ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಚುನಾವಣಾ ಆಯೋಗ ಪ್ರಾರಂಭಿಸಿತ್ತು. ಆವತ್ತಿನಿಂದ ಪ್ರಾರಂಭಗೊಂಡ ಗೊಂದಲಗಳು ಚುನಾವಣೆ ಮುಗಿದರೂ ಪರಿಹಾರಗೊಂಡಿಲ್ಲ.
ಈಗ ಎಸ್‌ಐಆರ್ ಮುಗಿದಿದೆ, ಚುನಾವಣೆಯೂ ಮುಗಿದಿದೆ. ಎಸ್‌ಐಆರ್‌ನಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು ಚುನಾವಣೆಯನ್ನು ನಡೆಸಲಾಗಿದೆ. ಒಂದಷ್ಟು ಜನರು ಹೋರಾಟ ನಡೆಸಿ ಚುನಾವಣೆಗೆ ಮುನ್ನ ತಮ್ಮ ಹಕ್ಕು ಉಳಿಸಿಕೊಂಡಿದ್ದಾರೆ. ಉಳಿದವರ ಸ್ಥಿತಿ ಅತಂತ್ರವಾಗಿದೆ.
ಟಿಎಂಸಿ ಪಕ್ಷ ಎಸ್‌ಐರ್‌ನ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು. ಸ್ವತಃ ಸಿಎಂ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ವಾದ ಮಂಡಿಸಿದ್ದರು. ಈಗ ಚುನಾವಣೆ ಮುಗಿದಿದೆ, ಟಿಎಂಸಿಯೂ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಹಾಗಾಗಿ, ಟಿಎಂಸಿ ಇನ್ನು ಮುಂದೆ ಎಸ್‌ಐಆರ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಾಧ್ಯತೆ ಇಲ್ಲ.
ಹಕ್ಕು ಕಳೆದುಕೊಂಡ ಮತದಾರರು ತಮ್ಮ ಹಕ್ಕನ್ನು ತಾವೇ ಉಳಿಸಿಕೊಳ್ಳುವತ್ತ ಪ್ರಯತ್ನಿಸಬೇಕಿದೆ. ಏಕೆಂದರೆ, ಇವತ್ತು ಮತದಾನದ ಹಕ್ಕು ಕಳೆದುಕೊಂಡವರು ನಾಳೆ ನಾಗರಿಕತ್ವ ಕಳೆದುಕೊಳ್ಳಬಹುದು. ಅದಕ್ಕೂ ಮುನ್ನ ಎಸ್‌ಐರ್‌ನ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಎಸ್‌ಐಆರ್ ಈ ಚುನಾವಣೆಯ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕು.
ಪಶ್ಚಿಮ ಬಂಗಾಳದ ಚುನಾವಣೆ ಮುಗಿದ ಬಳಿಕ, ಎಸ್‌ಐಆರ್ ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಈ ಆರೋಪವನ್ನು ಸ್ಪಷ್ಟವಾಗಿ ರುಜುವಾತು ಮಾಡುವುದು ಕೊಂಚ ಕಷ್ಟ. ಆದರೆ, ಎಸ್‌ಐಆರ್ ಬಳಿಕ ನಡೆದ ಚುನಾವಣೆಯಲ್ಲಿ ಟಿಎಂಸಿ ಬಳಿಯಿದ್ದ ಕ್ಷೇತ್ರಗಳು ಬಿಜೆಪಿ ಪಾಲಾಗಿರುವುದು ಸತ್ಯ.
ನಾವು ಗಮನಿಸಿದಂತೆ, ಚುನಾವಣಾ ಫಲಿತಾಂಶ ಮತ್ತು ಅದರ ನಂತರದ ಬೆಳವಣಿಗೆಗಳು ಎಸ್‌ಐಆರ್ ಟಿಎಂಸಿ ಸೋಲಿಗೆ ಕಾರಣವಾಗಿದೆ ಮತ್ತು ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ ಎಂಬ ಚರ್ಚೆಗಳನ್ನು ಪುಷ್ಠೀಕರಿಸುತ್ತದೆ.
2021 ಮತ್ತು 2026ರ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಟಿಎಂಸಿಯ ಸೋಲು ಗೆಲುವು, ಎಸ್‌ಐಆರ್‌ನಲ್ಲಿ ಅಳಿಸಲಾದ ಮತದಾರರ ಸಂಖ್ಯೆಗಳನ್ನು ತಾಳೆ ಹಾಕಿ ನೋಡಿದಾಗ ನಮಗೆ ಬದಲಾವಣೆಗಳು ಕಂಡು ಬಂದಿವೆ.
ಎಸ್‌ಐಆರ್ ವೇಳೆ ಅತಿ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲಾದ 100 ಕ್ಷೇತ್ರಗಳ ಪಟ್ಟಿಯನ್ನು ತೆಗೆದು ನೋಡಿದಾಗ, 2021ರಲ್ಲಿ ಟಿಎಂಸಿ ಕೈಯಲ್ಲಿದ್ದ ಕ್ಷೇತ್ರಗಳು ಎಸ್‌ಐಆರ್ ಬಳಿಕ ನಡೆದ 2026ರ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿರುವುದನ್ನು ನೋಡಬಹುದು.
ಎಸ್‌ಐಆರ್‌ನಲ್ಲಿ ಅತಿ ಹೆಚ್ಚು ಹೆಸರುಗಳನ್ನು ಅಳಿಸಲಾದ 100 ಕ್ಷೇತ್ರಗಳಲ್ಲಿ ಪೈಕಿ 2021ರಲ್ಲಿ ಕೇವಲ 20 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಉಳಿದ 80 ಕ್ಷೇತ್ರಗಳು ಟಿಎಂಸಿ ಪಾಲಾಗಿತ್ತು. ಆದರೆ, 2026ರ ಚುನಾವಣೆಯಲ್ಲಿ ಇದೇ 100 ಕ್ಷೇತ್ರಗಳ ಪೈಕಿ 68 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಉಳಿದ 31 ಕ್ಷೇತ್ರಗಳಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ.
ಎಸ್‌ಐಆರ್ ವೇಳೆ ಉತ್ತರ ಕೋಲ್ಕತ್ತಾದ ಚೌರಂಗಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು, ಅಂದರೆ ಸುಮಾರು 74,553 ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ. ಇದು ಆ ಕ್ಷೇತ್ರದ ಒಟ್ಟು ಮತದಾರರ ಸುಮಾರು ಶೇ. 35.45 ರಷ್ಟಾಗಿದೆ.
ಈ ಕ್ಷೇತ್ರದಲ್ಲಿ 2021ರಲ್ಲಿ ಟಿಎಂಸಿ ಗೆಲುವು ಸಾಧಿಸಿತ್ತು, 2026 ಚುನಾವಣೆಯಲ್ಲೂ ಟಿಎಂಸಿ ಗೆದ್ದಿದೆ. ಆದರೆ, ಬಿಜೆಪಿ ಮತ್ತು ಟಿಎಂಸಿಯ ಗೆಲುವಿನ ಅಂತರ 2021ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.
2021ರ ಚುನಾವಣೆಯಲ್ಲಿ ಟಿಎಂಸಿಯ ನಯನಾ ಬಂಡೋಪಾಧ್ಯಾಯ ಅವರು ಬಿಜೆಪಿಯ ದೇವದತ್ತಾ ಮಾಜಿ ಅವರ ವಿರುದ್ಧ 45,344 ಮತಗಳ ಬೃಹತ್ ಅಂತರದಿಂದ ಜಯಗಳಿಸಿದ್ದರು. ಆದರೆ, 2026ರಲ್ಲಿ ಈ ಅಂತರ 22,002ಕ್ಕೆ ಕುಸಿದಿದೆ. ಈ ಬಾರಿ ಟಿಎಂಸಿಯ ನಯನಾ ಅವರು 62,938 ಮತಗಳನ್ನು ಮತ್ತು ಬಿಜೆಪಿಯ ಸಂತೋಷ್ ಕುಮಾರ್ ಪಾಠಕ್ ಅವರು 40,936 ಮತಗಳನ್ನು ಪಡೆದಿದ್ದಾರೆ. 2021ಕ್ಕೆ ಹೋಲಿಸಿದರೆ ಟಿಎಂಸಿಯ ಅಭ್ಯರ್ಥಿಯ ಮತಗಳ ಅಂತರ 23,342ರಷ್ಟು ಕಡಿಮೆಯಾಗಿದೆ.
ಬಿಜೆಪಿ ಸೋಲಿನ ಅಂತರ 2021ರಲ್ಲಿ 45,344 ಇತ್ತು. ಅದು 2026ರಲ್ಲಿ 22,002ಕ್ಕೆ ಕುಸಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ 40,936 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಟಿಎಂಸಿ ಗೆದ್ದ ಅಂತರದಷ್ಟು ಮತಗಳನ್ನು ಈ ಬಾರಿ ಬಿಜೆಪಿ ಗಳಿಸಿಕೊಂಡಿದೆ.
ಮೇಲಿನ ಅಂಕಿ ಅಂಶಗಳನ್ನು ನೋಡಿದಾಗ ಎಸ್‌ಐಆರ್‌ನಲ್ಲಿ ಅತಿ ಹೆಚ್ಚು ಹೆಸರುಗಳನ್ನು ತೆಗೆದು ಹಾಕಿದ ಕ್ಷೇತ್ರದಲ್ಲಿ ಟಿಎಂಸಿಯೇ ಗೆದ್ದಿದೆಯಲ್ಲವೇ?..ಹೀಗಿರುವಾಗ ಒಟ್ಟಾರೆಯಾಗಿ ಟಿಎಂಸಿ ಸೋಲಿಗೆ ಎಸ್‌ಐಆರ್ ಕಾರಣ ಎಂದು ಹೇಗೆ ಹೇಳುವುದು ಎಂಬ ಪ್ರಶ್ನೆ ಮೂಡಬಹುದು.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ದೊಡ್ಡ ಮಟ್ಟದಲ್ಲಿ ಮತದಾರರ ಹೆಸರನ್ನು ಅಳಿಸಿದಾಗ, ಅಲ್ಲಿ ಎಲ್ಲಾ ಪಕ್ಷಗಳ ಮತದಾರರು ಹಕ್ಕು ಕಳೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಪಕ್ಷದ ಮತಗಳು ಕಡಿಮೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಯಾವ ಪಕ್ಷದ ಮತಗಳು ಕುಸಿತಗೊಂಡಿದೆಯೋ..ಅದೇ ಪಕ್ಷದ ಮತದಾರರ ಹೆಸರುಗಳು ಹೆಚ್ಚು ಅಳಿಸಲ್ಪಟ್ಟಿವೆ ಎಂದು ಅಂದಾಜಿಸಬಹುದು.
ಚೌರಂಗಿ ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವುದು ಇದುವೇ. ಇಲ್ಲಿ ಎಸ್‌ಐಆರ್‌ನಿಂದ ಟಿಎಂಸಿ ಮತಗಳು ಬಿಜೆಪಿ ಪಾಲಾಗಿವೆ ಎಂದು ನಾವು ಹೇಳುತ್ತಿಲ್ಲ. ಆದರೆ, ಟಿಎಂಸಿಯ ಮತಗಳು ಕಡಿಮೆಯಾಗಿರುವುದು ಎಸ್‌ಐಆರ್ ಮೂಲಕವೇ ಎಂದು ಊಹಿಸಬಹುದು. ಏಕೆಂದರೆ, ಟಿಎಂಸಿಯ ಮತದಾರರು ದಲಿತರು, ಮುಸ್ಲಿಮರು ಮತ್ತು ಇತರ ಹಿಂದುಳಿದವರು. ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಕಳೆದುಕೊಂಡವರು ಈ ಸಮುದಾಯದ ಜನರೇ ಹೆಚ್ಚು.
100 ಕ್ಷೇತ್ರಗಳ ಪೈಕಿ ಎರಡನೇ ಅತಿ ಹೆಚ್ಚು ಹೆಸರುಗಳು ಅಳಿಸಲ್ಪಟ್ಟ ಎರಡನೇ ಕ್ಷೇತ್ರ ಜೋರಾಸಂಕೊ. ಈ ಕ್ಷೇತ್ರದಲ್ಲಿ ಸುಮಾರು 72,900 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿತ್ತು.
ಈ ಕ್ಷೇತ್ರದಲ್ಲಿ 2021ರಲ್ಲಿ ಟಿಎಂಸಿ ಗೆಲುವು ಸಾಧಿಸಿತ್ತು. 2026ರಲ್ಲಿ ಕ್ಷೇತ್ರ ಬಿಜೆಪಿ ಪಾಲಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ್ ಓಜಾ ಅವರು ಒಟ್ಟು 52,868 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಟಿಎಂಸಿ ಅಭ್ಯರ್ಥಿ ವಿಜಯ್ ಉಪಾಧ್ಯಾಯ ಅವರು 47,071 ಮತಗಳನ್ನು ಗಳಿಸಿದ್ದಾರೆ.
ಜೋರಾಸಂಕೊದಲ್ಲಿ 2021ರ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ವಿವೇಕ್ ಗುಪ್ತ ಅವರು ಬಿಜೆಪಿಯ ಮೀನಾ ದೇವಿ ಪುರೋಹಿತ್ ಅವರ ವಿರುದ್ಧ 12,743 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಈ ಬಾರಿ ಫಲಿತಾಂಶ ಬದಲಾಗಿದ್ದು, ಬಿಜೆಪಿಯ ವಿಜಯ್ ಓಜಾ ಅವರು ಟಿಎಂಸಿಯ ವಿಜಯ್ ಉಪಾಧ್ಯಾಯ ಅವರ ವಿರುದ್ಧ 5,797 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಈ ಕ್ಷೇತ್ರದಲ್ಲೂ ಎಸ್‌ಐಆರ್ ಮೂಲಕ ಟಿಎಂಸಿ ಮತಗಳು ಬಿಜೆಪಿ ಪಾಲಾಗಿದೆ ಎಂದು ನಾವು ಅಂದಾಜಿಸುತ್ತಿಲ್ಲ. ಬದಲಾಗಿದೆ, ಎಸ್‌ಐಆರ್ ಮೂಲಕ ಟಿಎಂಸಿ ಮತಗಳನ್ನು ಕಳೆದುಕೊಂಡಿದೆ. ಇದರಿಂದ ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ ಎಂಬ ಚರ್ಚೆಗಳಿವೆ.
ವಿಶ್ಲೇಷಣೆಗಳ ಪ್ರಕಾರ, ಬಿಜೆಪಿ ಗೆದ್ದ ಸುಮಾರು 105 ಕ್ಷೇತ್ರಗಳಲ್ಲಿ, ಗೆಲುವಿನ ಅಂತರಕ್ಕಿಂತ ಅಳಿಸಿಹೋದ ಮತದಾರರ ಸಂಖ್ಯೆಯೇ ಹೆಚ್ಚಾಗಿತ್ತು. ಅಂದರೆ, ಆ ಮತದಾರರು ಪಟ್ಟಿಯಲ್ಲಿದ್ದರೆ ಫಲಿತಾಂಶ ಬೇರೆಯೇ ಆಗುವ ಸಾಧ್ಯತೆ ಇತ್ತು ಎಂಬುದು ಟಿಎಂಸಿಯ ವಾದವಾಗಿದೆ.
ಟಿಎಂಸಿ ಮತ್ತು ಇತರ ಪ್ರತಿಪಕ್ಷಗಳು ಆರೋಪಿಸುವಂತೆ, ಮುಸ್ಲಿಂ ಮತದಾರರು ಮತ್ತು ವಲಸಿಗರು ಹೆಚ್ಚಿರುವ ಗಡಿ ಜಿಲ್ಲೆಗಳಲ್ಲಿ (ಮಾಲ್ಡಾ, ಮುರ್ಷಿದಾಬಾದ್ ಮುಂತಾದವು) ಅತಿ ಹೆಚ್ಚು ಹೆಸರುಗಳನ್ನು ಅಳಿಸಲಾಗಿದೆ.
ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ 5,000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದೆ. ಅಂತಹ ಕಡೆಗಳಲ್ಲಿ 20,000ಕ್ಕೂ ಹೆಚ್ಚು ಮತದಾರರ ಹೆಸರುಗಳು ಅಳಿಸಿಹೋಗಿದ್ದು ಬಿಜೆಪಿಗೆ ಪೂರಕವಾಯಿತು ಎನ್ನಲಾಗಿದೆ.
ಮತದಾರರ ಪಟ್ಟಿ ಶುದ್ಧೀಕರಣವು ಒಂದು ಕಡೆಯಾದರೆ, ಮತ್ತೊಂದೆಡೆ ಬಿಜೆಪಿ ಪರವಾದ ಹಿಂದೂ ಮತಗಳ ಭಾರಿ ಧ್ರುವೀಕರಣವೂ ಈ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಇದರ ಹಿಂದೆ ಬಿಜೆಪಿಯ ಹಿಂದುತ್ವ ರಾಜಕಾರಣ ಕೆಲಸ ಮಾಡಿದೆ ಎನ್ನಲಾಗ್ತಿದೆ.
ಎಸ್‌ಐಆರ್‌ನಲ್ಲಿ ಅತಿ ಹೆಚ್ಚು ಹೆಸರುಗಳನ್ನು ಅಳಿಸಲಾದ 100 ಕ್ಷೇತ್ರಗಳ ಪೈಕಿ, ಅತಿ ಕಡಿಮೆ ಅಂತರದ ಗೆಲುವು ದಾಖಲಾದ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ.
ರಾಜರಹತ್ ನ್ಯೂ ಟೌನ್ ಪಶ್ಚಿಮ ಬಂಗಾಳದ ಇಡೀ ಚುನಾವಣೆಯಲ್ಲಿ ಅತಿ ಸಣ್ಣ ಅಂತರದ ಪೈಪೋಟಿ ಕಂಡ ಕ್ಷೇತ್ರ. ಇಲ್ಲಿ ಬಿಜೆಪಿಯ ಪಿಯೂಷ್ ಕನೋಡಿಯಾ ಅವರು ಟಿಎಂಸಿಯ ತಾಪಸ್ ಚಟರ್ಜಿ ವಿರುದ್ಧ ಕೇವಲ 316 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸುಮಾರು 24,132 ಹೆಸರುಗಳನ್ನು ಅಳಿಸಲಾಗಿದೆ. ಅಳಿಸಲಾದ ಮತಗಳು ಇದ್ದಿದ್ದರೆ ಟಿಎಂಸಿ ಗೆಲ್ಲಬಹುದಿತ್ತು ಎನ್ನುವುದು ಲೆಕ್ಕಾಚಾರ.
ಕಾಶೀಪುರ-ಬೆಲ್ಗಾಚಿಯಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ಹಣಾಹಣಿ ನಡೆದು, ಅಂತರವು 2,000 ಮತಗಳಿಗಿಂತ ಕಡಿಮೆ ಬಂದಿದೆ. ಈ ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಹೆಸರು ಅಳಿಸಲಾಗಿತ್ತು. ಪಾಂಡವೇಶ್ವರ ಕ್ಷೇತ್ರದಲ್ಲೂ ಗೆಲುವಿನ ಅಂತರ 2,000 ಮತಗಳಿಗಿಂತ ಕಡಿಮೆ ಇದ್ದು, ಬಿಜೆಪಿ ಜಯಗಳಿಸಿದೆ.
ಎಸ್‌ಐಆರ್‌ನಲ್ಲಿ ಅಳಿಸಿರುವುದು ಮೃತರು, ವಲಸೆ ಹೋದವರು ಮತ್ತು ನಕಲಿ ಹೆಸರುಗಳಲ್ಲವೇ? ಎಂಬ ಪ್ರಶ್ನೆ ಮೂಡಬಹುದು. ಅಲ್ಲ, ದಾಖಲೆಗಳಿರುವ ನೈಜ ಮತದಾರರ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂಬುವುದನ್ನು ಈ ಹಿಂದಿನ ಲೇಖನಗಳಲ್ಲಿ ನಾವು ಉದಾಹರಣೆ ಸಹಿತ ವಿವರಿಸಿದ್ದೇವೆ.
ತಾರ್ಕಿಕ ವ್ಯತ್ಯಾಸಗಳ ಹೆಸರಿನಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮುಂದಿಟ್ಟು ಅಸಂಬದ್ದ ಕಾರಣಗಳನ್ನು ನೀಡುವ ಮೂಲಕ ನೈಜ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಿರುವುದು ದಾಖಲೆ ಸಹಿತ ರುಜುವಾತಾಗಿದೆ. ದೇಶಕ್ಕಾಗಿ ದುಡಿದ ಯೋಧನಿಂದ ಹೈಕೋರ್ಟ್ ನ್ಯಾಯಾಧೀಶರವರೆಗೆ ಲಕ್ಷಾಂತರ ಜನರು ಈ ರೀತಿ ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಸುಮಾರು 49 ಕ್ಷೇತ್ರಗಳಲ್ಲಿ ಅಳಿಸಿಹೋದ ಮತದಾರರ ಸಂಖ್ಯೆಯು ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿತ್ತು. ಈ ಪೈಕಿ ಬಿಜೆಪಿ 26 ಸ್ಥಾನಗಳನ್ನು ಗೆದ್ದರೆ, ಟಿಎಂಸಿ 21 ಸ್ಥಾನಗಳನ್ನು ಗೆದ್ದಿದೆ. ಈ ದತ್ತಾಂಶವು ಸಣ್ಣ ಅಂತರದ ಪೈಪೋಟಿ ಇದ್ದ ಕಡೆಗಳಲ್ಲಿ ಮತದಾರರ ಅಳಿಸುವಿಕೆ ಫಲಿತಾಂಶದ ಮೇಲೆ ಬೀರಿದ ಪ್ರಭಾವವನ್ನು ತೋರಿಸುತ್ತದೆ. ಹಾಗಾಗಿ, ಎಸ್‌ಐಆರ್ ಅಳಿಸುವಿಕೆ ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ ಎನ್ನಲಾಗ್ತಿದೆ.


