Homeಮುಖಪುಟ'ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು': ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

- Advertisement -
- Advertisement -

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ.

24 ವರ್ಷದ ಯುವಕ ದಿಲ್ಶಾದ್ ಮೊಹಮ್ಮದ್ ದುಡಿದು ತನ್ನ ಕುಟುಂಬವನ್ನು ಸಲಹುವ ಸಲುವಾಗಿ ಕಳೆದ ಐದು ತಿಂಗಳ ಹಿಂದೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ತನ್ನ ಮನೆ ತೊರೆದಿದ್ದ. ಮೊದಲ ಕೆಲ ವಾರಗಳ ಕಾಲ ಆತ ತನ್ನ ಪತ್ನಿ ಗುಲಿಸ್ತಾ ಬೇಗಮ್‌ಗೆ ನಿರಂತರ ಕರೆ ಮಾಡಿ ಮಾತನಾಡುತ್ತಿದ್ದ. ಆದರೆ, ಒಂದು ದಿನ ಆತನ ಕರೆ ಹಠಾತ್ ನಿಂತು ಹೋಗಿತ್ತು. ಆ ಬಳಿಕ ದಿಲ್ಶಾದ್ ಎಲ್ಲಿಗೆ ಹೋದ ಎಂಬುವುದು ಗೊತ್ತಾಗಿರಲಿಲ್ಲ.

ಕುಟುಂಬಸ್ಥರು ದಿಲ್ಶಾದ್‌ಗಾಗಿ ಎಲ್ಲೆಡೆ ಹುಡುಕಾಡಿದ್ದರು. ಆತನನ್ನು ಸಂಪರ್ಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಆದರೆ, ಅದು ಯಾವುದೂ ಸಫಲವಾಗದಿದ್ದಾಗ ದೇವರ ಮೇಲೆ ಭಾರ ಹಾಕಿ ಸುಮ್ಮನಾಗಿದ್ದರು. ದಿಲ್ಶಾದ್‌ನ ಪತ್ನಿ ಕೂಡ ತನ್ನ ಗಂಡನಿಗಾಗಿ ಕಾದು ಕಾದು ಕೊನೆಗೆ ಭರವಸೆ ಕಳೆದುಕೊಂಡಿದ್ದಳು. ಆತನಿಗೆ ಏನಾದರು ಆಗಿರಬಹುದು ಎಂದು, ತನ್ನ ಪುಟ್ಟ ಮಗನ ಜೊತೆ ತವರು ಮನೆ ಸೇರಿದ್ದಳು.

ಈ ನಡುವೆ ಕಳೆದ ಗುರುವಾರ ಮೆಹರ್ಬಾನ್ ಶಾ ಅವರ ಪೋನ್ ರಿಂಗಣಿಸಿದೆ. ಕರೆ ಸ್ವೀಕರಿಸಿದಾಗ ಆ ಕಡೆಯಿಂದ ತನ್ನ ಪ್ರೀತಿಯ ಮಗ ದಿಲ್ಶಾದ್ ಮಾತನಾಡುವುದು ಕೇಳಿಸಿದೆ.

ಹೌದು, ಕುಟುಂಬಸ್ಥರು ಭರವಸೆ ಕಳೆದುಕೊಂಡಿದ್ದ ದಿಲ್ಶಾದ್ ಬದುಕಿದ್ದಾನೆ..

ಮುಝಫ್ಫರ್‌ನಗರದ ತಿತಾವಿ ಪ್ರದೇಶದಲ್ಲಿ ಹಾಳೆ, ಎಲೆಯ ತಟ್ಟೆ ತಯಾರಿಸುವ ಕಾರ್ಖಾನೆಯೊಂದರಿಂದ ದಿಲ್ಶಾದ್ ಮತ್ತು ಇತರ 11 ಜನರನ್ನು ಸೋಮವಾರ ಪೊಲೀಸರು ರಕ್ಷಿಸಿದ್ದಾರೆ. ಇವರನ್ನು ಅಲ್ಲಿ ಜೀತದಾಳುಗಳಾಗಿ ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಕಾರ್ಖಾನೆಯಲ್ಲಿ ಕಾರ್ಮಿಕರನ್ನು ತಿಂಗಳುಗಟ್ಟಲೆ ಕೂಡಿಡಲಾಗಿತ್ತು, ದಿನಕ್ಕೆ 20 ಗಂಟೆಗಳವರೆಗೆ ಬಲವಂತವಾಗಿ ಕೆಲಸ ಮಾಡಿಸಲಾಗುತ್ತಿತ್ತು ಮತ್ತು ನಿರಂತರವಾಗಿ ದೈಹಿಕ ದೌರ್ಜನ್ಯಕ್ಕೆ ಒಳಪಡಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

“ನನ್ನ ಮಗನ ಧ್ವನಿ ಕೇಳಿದಾಗ ನನಗೆ ಎಷ್ಟೊಂದು ಭಾವುಕತೆಯಾಯಿತು ಎಂದರೆ ಕೆಲವು ಕ್ಷಣಗಳ ಕಾಲ ನನಗೆ ಮಾತನಾಡಲು ಸಾಧ್ಯವಾಗಲಿಲ್ಲ” ಎಂದು ಮೆಹರ್ಬಾನ್ ನೆನಪಿಸಿಕೊಂಡಿದ್ದಾರೆ. “ನಾನು ಅವನಲ್ಲಿ ಕೇಳಿದ ಮೊದಲ ಪ್ರಶ್ನೆ ಅವನು ಎಲ್ಲಿದ್ದಾನೆ ಎಂಬುವುದಾಗಿತ್ತು. ಅವನು ಮುಝಫ್ಫರ್ ನಗರ ಎಂದಾಗ, ನಾನು ತಕ್ಷಣ ಅವನಿಗೆ ಮನೆಗೆ ಬರುವಂತೆ ಹೇಳಿದೆ” ಎಂದು ಮೆಹರ್ಬಾನ್ ಶಾ ವಿವರಿಸಿದ್ದಾರೆ.

ಮನೆಯವರಿಂದ ಸಂಪರ್ಕ ಕಳೆದುಕೊಂಡ ಮೂರು ತಿಂಗಳ ಕಾಲ ದಿಲ್ಶಾದ್‌ ಕಾರ್ಖಾನೆಯಲ್ಲಿ ನರಕಯಾತನೆ ಅನುಭವಿಸಿದ್ದ ಎಂದು ವರದಿಗಳು ಹೇಳಿವೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಜೊತೆ ಮಾತನಾಡಿರುವ ದಿಲ್ಶಾದ್‌, “ನಾವು ಕಾರ್ಖಾನೆ ಆವರಣದಿಂದ ಹೊರಗೆ ಹೋಗಲು ಅವಕಾಶ ಇರಲಿಲ್ಲ. ಯಾರಾದರೂ ಮನೆಗೆ ಹೋಗಲು ಕೇಳಿದರೆ, ಅಲ್ಲಿನ ಪರಿಸ್ಥಿತಿಗಳನ್ನು ಪ್ರಶ್ನಿಸಿದರೆ ಅಥವಾ ಮೂರು-ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರಿಸಿದರೆ, ಅವರನ್ನು ಥಳಿಸಲಾಗುತ್ತಿತ್ತು ಮತ್ತು ಹಿಂಸಿಸಲಾಗುತ್ತಿತ್ತು. ಅವರು ನನ್ನ ಮೊಬೈಲ್ ಫೋನ್ ಕಿತ್ತುಕೊಂಡಿದ್ದರು. ಹಾಗಾಗಿ, ನಾವು ಅನುಭವಿಸುತ್ತಿದ್ದ ಕಷ್ಟಗಳ ಬಗ್ಗೆ ನನ್ನ ಕುಟುಂಬಕ್ಕಾಗಲಿ ಅಥವಾ ಹೊರಗಿನ ಯಾರಿಗಾದರೂ ತಿಳಿಸಲು ನನಗ ಯಾವುದೇ ದಾರಿಯೇ ಇರಲಿಲ್ಲ” ಎಂದು ಹೇಳಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಕಾರ್ಖಾನೆಯಿಂದ ತಪ್ಪಿಸಿಕೊಂಡು ಬಂದಿದ್ದ ವ್ಯಕ್ತಿಯೊಬ್ಬರಿಂದ ಮಾಹಿತಿ ಪಡೆದ ಪೊಲೀಸರು, ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು, ಸೋಮವಾರ ಮಂಡಿ ಗ್ರಾಮದಲ್ಲಿದ್ದ ಕಾರ್ಖಾನೆ ಮೇಲೆ ಜಂಟಿ ದಾಳಿ ನಡೆಸಿ ಜೀತದಾಳುಗಳಾಗಿದ್ದ ಕಾರ್ಮಿಕರನ್ನು ರಕ್ಷಿಸಿದೆ.

ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಛತ್ತೀಸ್‌ಗಢ, ಹರಿಯಾಣ ಮತ್ತು ರಾಜಸ್ಥಾನದ 16 ರಿಂದ 44 ವರ್ಷದೊಳಗಿನವರನ್ನು ರಕ್ಷಣೆ ಮಾಡಲಾಗಿದೆ.

ಪ್ರಕರಣ ಸಂಬಂಧ ಕಾರ್ಖಾನೆಯ ಮಾಲೀಕ ಅಂಕಿತ್ ಬಲ್ಯಾನ್‌ನ ತಂದೆ ಪ್ರದೀಪ್ ಬಲ್ಯಾನ್ ಮತ್ತು ಅಂಕಿತ್‌ನ ಸಹವರ್ತಿ ಶಿವ ತ್ಯಾಗಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಂಕಿತ್ ಪರಾರಿಯಾಗಿದ್ದಾನೆ. ಆತನನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಿರುವ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಆರೋಪಿಗಳ ವಿರುದ್ಧ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ, 1986, ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ಮತ್ತು ಜೀತಪದ್ಧತಿ (ನಿರ್ಮೂಲನೆ) ಕಾಯಿದೆ, 1976ರ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ಖಾಯಂ ಕೆಲಸ, ಉತ್ತಮ ವೇತನ, ಉಚಿತ ವಸತಿ ಮತ್ತು ಊಟದ ಭರವಸೆ ನೀಡಿ ಅಂಕಿತ್ ಮತ್ತು ಇತರರು ರೈಲ್ವೆ ನಿಲ್ದಾಣ ಹಾಗೂ ಇತರ ಸಾರ್ವಜನಿಕ ಸ್ಥಳಗಳಿಂದ ನಮ್ಮನ್ನು ಪುಸಲಾಯಿಸಿ ಕರೆತಂದಿದ್ದರು. ಇದರಿಂದಾಗಿ ನಾವು ಕಾರ್ಖಾನೆ ಒಳಗೆ ಸಿಲುಕಿಕೊಳ್ಳುವಂತೆ ಆಯಿತು ಎಂದು ಕಾರ್ಮಿಕರು ತಿಳಿಸಿದ್ದಾರೆ.

ಕಾರ್ಖಾನೆಯ ಒಳಗಡೆ ಆರೋಪಿಗಳು ಹಿಂಸೆ, ಬೆದರಿಕೆ ಮತ್ತು ನಿಂದನೆಗಳ ಮೂಲಕ ಕಾರ್ಮಿಕರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಅವರು ಆವರಣದಿಂದ ಹೊರಹೋಗದಂತೆ ತಡೆದು, ಅವರನ್ನು ಅಮಾನವೀಯ ಜೀವನ ಮತ್ತು ಕೆಲಸದ ಪರಿಸ್ಥಿತಿಗಳಿಗೆ ದೂಡಿದ್ದರು ಎಂದು ಆರೋಪಿಸಲಾಗಿದೆ.

ಆರೋಪಗಳ ಸಮಗ್ರ ತನಿಖೆ ನಡೆಸಲು ಪೊಲೀಸ್ ವರಿಷ್ಠಾಧಿಕಾರಿ ಮಹಾದಿಕ್ ಅಕ್ಷಯ್ ಸಂಜಯ್ ನೇತೃತ್ವದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಮುಝಫ್ಫರ್‌ನಗರ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

“ಫೋನ್‌ ಕಿತ್ತುಕೊಂಡಿದ್ದು, ನಮ್ಮನ್ನು ಭಯಭೀತಗೊಳಿಸಲು ಪಿಟ್‌ಬುಲ್ ನಾಯಿಗಳನ್ನು ಬಳಸಿದ್ದರು”

ಸಂಕಷ್ಟದಿಂದ ಪಾರಾದ ಬಳಿಕ ಕಾರ್ಮಿಕರು ಕಾರ್ಖಾನೆಯೊಳಗೆ ಅನುಭವಿಸಿದ ನರಕಯಾತನೆಯನ್ನು ವಿವರಿಸಿದ್ದಾರೆ. ಕಡಿಮೆ ಆಹಾರ ಕೊಡುತ್ತಿದ್ದರು. ಪ್ರತಿನಿತ್ಯ ಥಳಿಸುತ್ತಿದ್ದರು. ನಮ್ಮನ್ನು ಭಯಭೀತಗೊಳಿಸಲು ಪಿಟ್‌ಬುಲ್ ನಾಯಿಗಳನ್ನು ಬಳಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

“ಎಂಟು ಗಂಟೆಗಳ ಕೆಲಸಕ್ಕೆ ತಿಂಗಳಿಗೆ 14,000 ರೂಪಾಯಿ ಸಂಬಳ, ಉಚಿತ ಊಟ ಮತ್ತು ವಸತಿಯ ಭರವಸೆ ನೀಡಿ ಅಂಬಾಲಾದಿಂದ ನನ್ನನ್ನು ಇಲ್ಲಿಗೆ ಕರೆತಂದಿದ್ದರು” ಎಂದು ಆಗ್ರಾದ 42 ವರ್ಷದ ಸೋನು ಚೌಹಾಣ್ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಅವರು ಕಳೆದ ಎರಡು ತಿಂಗಳಿನಿಂದ ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

“ಕಾರ್ಖಾನೆಗೆ ಕರೆತಂದ ತಕ್ಷಣ ನನ್ನ ಮೊಬೈಲ್ ಫೋನ್ ಕಿತ್ತುಕೊಂಡರು. ಕಿರುಕುಳ ಅಲ್ಲಿಂದಲೇ ಪ್ರಾರಂಭವಾಯಿತು. ನಮಗೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ ನೀಡುತ್ತಿದ್ದರು. ಸಾಮಾನ್ಯವಾಗಿ ಒಣ ರೊಟ್ಟಿ ಕೊಡುತ್ತಿದ್ದರು. ನಾವು ನಮ್ಮ ಕೂಲಿ ಕೇಳಿದಾಗ ಅಥವಾ ಕೆಲಸ ಬಿಡುವುದಾಗಿ ಹೇಳಿದಾಗ ದೊಣ್ಣೆಯಿಂದ ಹೊಡೆದು ನಿಂದಿಸುತ್ತಿದ್ದರು. ನಮ್ಮನ್ನು ಬಂಧಿತ ಕಾರ್ಮಿಕರಂತೆ ಕೆಲಸ ಮಾಡಲು ಒತ್ತಾಯಿಸಿದ್ದರು” ಎಂದು ಸೋನು ಚೌಹಾಣ್ ಹೇಳಿಕೊಂಡಿದ್ದಾರೆ.

“ನಮ್ಮ ಫೋನ್‌ಗಳನ್ನು ಅವರು (ಆರೋಪಿಗಳು) ಕಿತ್ತುಕೊಂಡಿದ್ದರು. ಅವರ ಬಳಿ ಕಬ್ಬಿಣದ ರಾಡ್‌ ಮತ್ತು ಭಾರವಾದ ಕೋಲುಗಳು ಸೇರಿದಂತೆ ಹಲವಾರು ವಸ್ತುಗಳಿವೆ. ಅವುಗಳಿಂದ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದರು” ಎಂದು ಚೌಹಾಣ್ ಆರೋಪಿಸಿದ್ದಾರೆ.

ಕಾರ್ಖಾನೆ ಮಾಲೀಕ ಅಂಕಿತ್ ನಮ್ಮ ಮೇಲೆ ಸದಾ ಕಣ್ಗಾವಲಿಡಲು ಮತ್ತು ತಾವು ಪ್ರತಿಭಟಿಸಿದಾಗ ಅಥವಾ ಹೊರಹೋಗಲು ಯತ್ನಿಸಿದಾಗ ಹಲ್ಲೆ ನಡೆಸಲು ಶಿವ ಎಂಬಾತನನ್ನು ನೇಮಿಸಿದ್ದ ಎಂದು ಕಾರ್ಮಿಕರು ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಝಫ್ಫರ್‌ನಗರ ಸರ್ಕಲ್ ಆಫೀಸರ್ ವಿಶ್ವಜೀತ್ ಸಿಂಗ್ ಮಾತನಾಡಿ, ದಾಳಿಯ ಸಂದರ್ಭದಲ್ಲಿ ಕಾರ್ಖಾನೆಯೊಳಗೆ ಸರಪಳಿಯಿಂದ ಕಟ್ಟ ಹಾಕಲಾಗಿದ್ದ ಪಿಟ್‌ಬುಲ್ ನಾಯಿಯೊಂದು ಪೊಲೀಸರಿಗೆ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

“ತಮ್ಮನ್ನು ಹೆದರಿಸಲು ಮತ್ತು ತಾವು ತಪ್ಪಿಸಿಕೊಳ್ಳದಂತೆ ತಡೆಯಲು ಈ ನಾಯಿಯನ್ನು ಬಳಸಲಾಗುತ್ತಿತ್ತು ಎಂದು ರಕ್ಷಿಸಲ್ಪಟ್ಟ ಕಾರ್ಮಿಕರು ಪೊಲೀಸರಿಗೆ ತಿಳಿಸಿದ್ದಾರೆ. ಕಾರ್ಮಿಕರನ್ನು ಕಾರ್ಖಾನೆ ಹಿಂಭಾಗದ ಎರಡು ಸಣ್ಣ ಕೋಣೆಗಳಲ್ಲಿ ಕೂಡಿಡಲಾಗುತ್ತಿತ್ತು ಮತ್ತು ನಾಯಿಯನ್ನು ಪ್ರತಿ ರಾತ್ರಿ ಕಾರ್ಖಾನೆಯ ಆವರಣದಲ್ಲಿ ಗಸ್ತು ತಿರುಗಲು ಮುಕ್ತವಾಗಿ ಬಿಡಲಾಗುತ್ತಿತ್ತು” ಎಂದು ಪೊಲೀಸರು ವಿವರಿಸಿದ್ದಾರೆ.

ಕೊಲೆ ಆರೋಪ

ಟೋಪಿ ಅಲಿಯಾಸ್ ಅರ್ಜುನ್ ಎಂಬ ನಮ್ಮ ಸಹ ಕಾರ್ಮಿಕ ಕಾರ್ಖಾನೆಯೊಳಗೆ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ ಎಂದು ಕಾರ್ಮಿಕರು ಹೇಳಿಕೆ ನೀಡಿದ ನಂತರ ಪೊಲೀಸರು ಕಾರ್ಖಾನೆ ಮಾಲೀಕ ಅಂಕಿತ್ ಮತ್ತು ಆತನ ಸಹಚರ ಶಿವ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

“ಸುಮಾರು ಏಳು ತಿಂಗಳ ಹಿಂದೆ ತೀವ್ರವಾಗಿ ಥಳಿಸಿದ ಬಳಿಕ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದ. ಆತನ ಶವವನ್ನು ಗೋಣಿ ಚೀಲಕ್ಕೆ ತುಂಬಿ ಹೊರಗೆ ಎಸೆದಿದ್ದೇವೆ ಎಂದು ಕಾರ್ಖಾನೆ ಮಾಲೀಕ ಅಂಕಿತ್ ನಮೆ ಹೇಳಿದ್ದಾನೆ. ಇದು ನಿಜವೋ, ಇಲ್ಲಾ ನಮ್ಮನ್ನು ಭಯಭೀತಗೊಳಿಸಲು ಹೇಳಿದ ಕಥೆಯೋ ಎಂಬುವುದು ನಮಗೆ ಗೊತ್ತಿಲ್ಲ. ಆತ ಹೇಳಿರುವುದು ಕೇಳಿ ನಮಗೆ ಭಯ ಆಗಿತ್ತು. ಹಾಗಾಗಿ, ನಾವು ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿರಲಿಲ್ಲ. ಅವರು ಬಂದೂಕು ಹಿಡಿದು ನಮ್ಮನ್ನು ಬೆದರಿಸುತ್ತಿದ್ದರು” ಎಂದು ಕಾರ್ಮಿಕರು ಪೊಲೀಸರು ಮುಂದೆ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಗ್ರಾಮದಲ್ಲಿ ಗೋಣಿಚೀಲದಲ್ಲಿ ತುಂಬಿದ್ದ ಅಪರಿಚಿತ ವ್ಯಕ್ತಿಯ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಸರ್ಕಲ್ ಆಫೀಸರ್ ಸಿಂಗ್ ಹೇಳಿದ್ದಾರೆ. ಆದರೆ, ಆ ಸಮಯದಲ್ಲಿ ಅವರ ಗುರುತನ್ನು ಸ್ಥಾಪಿಸಲು ಅವರಿಗೆ ಸಾಧ್ಯವಾಗಿಲ್ಲ. ಕಾನೂನು ಪ್ರಕ್ರಿಯೆಗಳ ನಂತರ ದೇಹವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಟೋಪಿ ಪ್ರಕರಣದ ಬಗ್ಗೆ ಕೇಳಿದಾಗ, ತಿಟಾವಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಪ್ರಮೋದ್ ಕುಮಾರ್, ಟೋಪಿ ಮತ್ತು ಅವರ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ರಕ್ಷಿಸಲ್ಪಟ್ಟವರಲ್ಲಿ ಸಂತೋಷ್ ಹೆಂಬ್ರಾಮ್ ಎಂಬ 38 ವರ್ಷದ ವ್ಯಕ್ತಿ 10 ತಿಂಗಳಿನಿಂದ ಕಾರ್ಖಾನೆಯಲ್ಲಿದ್ದರು.

ಸಂತೋಷ್‌ ಅವರನ್ನು ಬಿಹಾರದ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ಸೋದರ ಮಾವ ಚೋಟ್ಟೆ ಲಾಲ್ ದಿ ಇಂಡಿಯನ್‌ ಎಕ್ಸ್‌ಪ್ರೆಸ್ ಜೊತೆ ಮಾತನಾಡಿ, “ಸಂತೋಷ್ ಕೆಲಸ ಹುಡುಕಿಕೊಂಡು ಅಂಬಾಲಕ್ಕೆ ಹೋಗಿದ್ದ. ಅಲ್ಲಿಂದ ಅಂಕಿತ್ ಉತ್ತಮ ಸಂಬಳದ ಕೆಲಸ ನೀಡುವ ಭರವಸೆಯೊಂದಿಗೆ ಮುಝಫ್ಫರ್‌ನಗರಕ್ಕೆ ಕರೆದೊಯ್ದು, ಆತನ ಕಾರ್ಖಾನೆಯಲ್ಲಿ ಬಂಧಿಸಿಟ್ಟಿದ್ದ” ಎಂದು ಹೇಳಿದ್ದಾರೆ.

“ನಾವು ಅವನನ್ನು (ಸಂತೋಷ್‌) ಹುಡುಕುತ್ತಾ ಕಳೆದ ಒಂಬತ್ತು ತಿಂಗಳುಗಳಲ್ಲಿ ಹಲವಾರು ಬಾರಿ ಅಂಬಾಲಾಕ್ಕೆ ಹೋಗಿದ್ದೆ. ಮಂಗಳವಾರ, ನನ್ನ ಸಹೋದರಿ ಸುನೀತಾ ದೇವಿ ಕರೆ ಮಾಡಿ ಸಂತೋಷ್ ಅವಳನ್ನು ಸಂಪರ್ಕಿಸಿದ್ದಾಗಿ ತಿಳಿಸಿದಳು. ಅವನನ್ನು ಮರಳಿ ಕರೆದುಕೊಂಡು ಬರುವಂತೆ ನನಗೆ ಕೇಳಿಕೊಂಡಲು. ಹಾಗಾಗಿ, ಇಲ್ಲಿಗೆ ಬಂದೆ ಎಂದು ತಿಳಿಸಿದ್ದಾರೆ.

ಸಂತೋಷ್‌ಗೆ ಕುಟುಂಬದೊಂದಿಗೆ ಮತ್ತೆ ಒಂದಾಗುವುದನ್ನು ಬಿಟ್ಟು ಸದ್ಯಕ್ಕೆ ಬೇರೇನೂ ಬಯಸಿಲ್ಲ. ಹೆಂಡತಿ, ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿಂದ ಆತನ ದೂರವಾಗಿದ್ದ. ನಾನೂ ಅಂಬಾಲಾದಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲೇ ನನ್ನ ಜೊತೆಗಿದ್ದ ಸಂತೋಷನನ್ನು ಕೆಲಸ ಕೊಡಿಸುವ ಭರವಸೆ ನೀಡಿ ಮುಝಫ್ಫರ್‌ನಗರಕ್ಕೆ ಕರೆದೊಯ್ದು, ಅಲ್ಲಿ ಊಹಿಸಲಾಗದಷ್ಟು ಕಷ್ಟ ಕೊಟ್ಟಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.

ಎಲ್ಲಾ 12 ಕಾರ್ಮಿಕರ ದೇಹದಲ್ಲಿ ಗಾಯದ ಗುರುತುಗಳಿವೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರು ಅನುಭವಿಸಿದ ಆಘಾತದಿಂದ ಚೇತರಿಸಿಕೊಳ್ಳಲು ಆಪ್ತ ಸಮಾಲೋಚನೆಯನ್ನೂ ನೀಡಲಾಗುತ್ತಿದೆ. ಎಲ್ಲರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಎಂಟು ಮಂದಿಯ ಸಂಬಂಧಿಕರು ಬುಧವಾರದ ವೇಳೆಗೆ ಮುಝಫ್ಫರ್‌ನಗರ ತಲುಪಿದ್ದಾರೆ. ನ್ಯಾಯಾಲಯದ ಮುಂದೆ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತಹ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಎಲ್ಲರನ್ನು ಮನೆಗೆ ಕಳಿಸಿಕೊಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಮಿಕರು ಪುನರ್ವಸತಿ ನೆರವು ಮತ್ತು ಇತರ ಸರ್ಕಾರಿ ಕಲ್ಯಾಣ ಯೋಜನೆ ಪ್ರಯೋಜನಗಳನ್ನು ಪಡೆಯುವಂತೆ ಮಾಡಲು ಸಂಬಂಧಿಸಿದ ಸರ್ಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂತೋಷ್ ಅವರಂತೆಯೇ ದಿಲ್ಶಾದ್ ಕೂಡ ತಮ್ಮ ಕುಟುಂಬವನ್ನು ನೋಡುವ ಹಂಬಲ ಹೊಂದಿದ್ದಾರೆ. “ಈಗ ನಾನು ರಕ್ಷಿಸಲ್ಪಟ್ಟಿದ್ದೇನೆ, ಮನೆಗೆ ಹಿಂದಿರುಗಲು ಮತ್ತು ನನ್ನ ಜೀವನವನ್ನು ಪುನರ್ನಿರ್ಮಿಸಲು ನನಗೆ ಬೇರೇನೂ ಬೇಕಾಗಿಲ್ಲ” ಎಂದು ದಿಲ್ಶಾದ್ ಹೇಳಿದ್ದಾರೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದೆ.

Courtesy : indianexpress.com

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...