ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ ಕೈಬಿಡುವಂತೆ ವಿರೋಧ ಪಕ್ಷಗಳ ನಾಯಕರ ಕಳಕಳಿಯ ಮನವಿಯನ್ನು ಖ್ಯಾತ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ನಿರಾಕರಿಸಿದ್ದಾರೆ. ಸರ್ಕಾರದಿಂದ ಯಾವುದೇ ಸೂಕ್ತ ಸ್ಪಂದನೆ ಬರದ ಹೊರತು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ತಡರಾತ್ರಿ, ಅಂದರೆ ತಮ್ಮ ಉಪವಾಸ ಸತ್ಯಾಗ್ರಹದ 18ನೇ ದಿನದಂದು ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಸೋನಮ್ ವಾಂಗ್‌ಚುಕ್, ಸರ್ಕಾರದ ಯಾವುದೇ ಕ್ರಮವಿಲ್ಲದೆ ಪ್ರತಿಭಟನೆಯನ್ನು ಅಂತ್ಯಗೊಳಿಸಿದರೆ ಈ ಇಡೀ ಹೋರಾಟದ ಉದ್ದೇಶವೇ ವ್ಯರ್ಥವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನಾನು ಅನ್ನ ತಿಂದರೆ ಸರ್ಕಾರಕ್ಕೆ ಏನು ಸಂದೇಶ ಹೋಗುತ್ತದೆ?:
ಈಗ ನಾನು ಉಪವಾಸವನ್ನು ಕೊನೆಗೊಳಿಸಿ ಅನ್ನ ತಿಂದರೆ ಸರ್ಕಾರಕ್ಕೆ ಏನು ಸಂದೇಶ ಹೋಗುತ್ತದೆ? ಇಲ್ಲಿ ಯಾರಿಗೂ ಉತ್ತರದಾಯಿತ್ವದ ಅಗತ್ಯವಿಲ್ಲ, ಪ್ರತಿಭಟನಾಕಾರರು ಬರುತ್ತಾರೆ, ಕುಳಿತು ಹೊರಟುಹೋಗುತ್ತಾರೆ’ ಎಂಬ ತಪ್ಪು ಸಂದೇಶ ಸರ್ಕಾರಕ್ಕೆ ತಲುಪುತ್ತದೆ. ನಾನೀಗ ಧರಣಿ ಹಿಂಪಡೆದರೆ ಬದಲಾಗುವುದಾದರೂ ಏನು? ಎಂದು ವಾಂಗ್‌ಚುಕ್ ಪ್ರಶ್ನಿಸಿದ್ದಾರೆ.
ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಕೋರಿ ತಮಗೆ ಸಾವಿರಾರು ಬೆಂಬಲಿಗರಿಂದ ಸಂದೇಶಗಳು ಬಂದಿವೆ ಮತ್ತು ಹಲವು ರಾಜಕೀಯ ನಾಯಕರು ಕಾಳಜಿಯಿಂದ ಭೇಟಿಯಾಗಿದ್ದಾರೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಾವು ಆಹಾರ ಸೇವಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಕೆಲವು ಬೆಂಬಲಿಗರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ ಎಂದೂ ಅವರು ಬಹಿರಂಗಪಡಿಸಿದ್ದಾರೆ.
“ನಾನಿನ್ನೂ 2-4 ದಿನದಲ್ಲಿ ಸಾಯಲ್ಲ, ಹೃದಯ ಗಟ್ಟಿಯಾಗಿದೆ:
ತಮ್ಮ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಹಿತೈಷಿಗಳಿಗೆ ಧೈರ್ಯ ತುಂಬಿರುವ ವಾಂಗ್‌ಚುಕ್, ವೈದ್ಯಕೀಯ ತಪಾಸಣೆಗಳಲ್ಲಿ ಯಾವುದೇ ತಕ್ಷಣದ ಜೀವಾಪಾಯದ ಲಕ್ಷಣಗಳು ಕಂಡುಬಂದಿಲ್ಲ ಎಂದಿದ್ದಾರೆ.
ನನ್ನ ಪರಿಸ್ಥಿತಿ ಇನ್ನು ಎರಡು ಅಥವಾ ನಾಲ್ಕು ದಿನಗಳಲ್ಲಿ ಸತ್ತುಹೋಗುವಷ್ಟೇನೂ ಹದಗೆಟ್ಟಿಲ್ಲ. ಹಲವು ವೈದ್ಯಕೀಯ ಪರೀಕ್ಷೆಗಳು ನಡೆದಿದ್ದು, 18 ದಿನಗಳ ಉಪವಾಸಕ್ಕೆ ಹೋಲಿಸಿದರೆ ರಿಸಲ್ಟ್ ಸಾಮಾನ್ಯವಾಗಿಯೇ ಇದೆ. ಇಸಿಜಿ (ECG) ವರದಿಯೂ ತೃಪ್ತಿಕರವಾಗಿದೆ. ನಾನು ಇನ್ನೂ ಹಲವು ದಿನಗಳ ಕಾಲ ಉಪವಾಸವನ್ನು ಮುಂದುವರಿಸಬಲ್ಲೆ, ಎಂದು ಹೇಳಿದ್ದಾರೆ. ಉಪವಾಸದಿಂದಾಗಿ ದೇಹದ ಸ್ನಾಯುಗಳ ಶಕ್ತಿ ಕುಂದಿದ್ದು, ಶಾರೀರಿಕವಾಗಿ ಬಲಹೀನತೆ ಎನಿಸುತ್ತಿದೆಯಾದರೂ, ತಮ್ಮ ಹೃದಯ ಮತ್ತು ಒಟ್ಟಾರೆ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.
ಜುಲೈ 20ಕ್ಕೆ ‘ಸಂಸತ್ ಚಲೋ’ ವಿದ್ಯಾರ್ಥಿ-ಯುವಜನರಿಗೆ ಕರೆ:
ತಮ್ಮ ಉಪವಾಸವನ್ನು ಬಿಡಿವಂತೆ ಮನವಿ ಮಾಡುವ ಬದಲಿಗೆ, ಜುಲೈ 20 ರಂದು ಹಮ್ಮಿಕೊಳ್ಳಲಾಗಿರುವ ಬೃಹತ್ ‘ಸಂಸತ್ ಚಲೋ’ (Chalo Sansad) ಪಾದಯಾತ್ರೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿ-ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಾಂಗ್‌ಚುಕ್ ವಿನಂತಿಸಿದ್ದಾರೆ.
ಅಲ್ಲದೆ, ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಕರೆ ನೀಡಿರುವ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅಡಿಯಲ್ಲಿ ಜುಲೈ 20 ರ ಪ್ರತಿಭಟನೆಯನ್ನು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನೇರವಾಗಿ ಅನುಭವಿಸುವ ಪ್ರಾಯೋಗಿಕ ಶಿಕ್ಷಣದ ದಿನವನ್ನಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳು ರಾಜಕೀಯ ವಿಜ್ಞಾನ ಮತ್ತು ಪ್ರಜಾಪ್ರಭುತ್ವದ ನೈಜ ಪಾಠಕ್ಕೆ ಸಾಕ್ಷಿಯಾಗಲು ಮತ್ತು ಭಾಗವಹಿಸಲು ಇದು ದೊಡ್ಡ ಅವಕಾಶ ಎಂದಿದ್ದಾರೆ.
ಜುಲೈ 20 ರಂದು ಸಾವಿರಾರು ಸಂಖ್ಯೆಯಲ್ಲಿ ದೆಹಲಿಗೆ ಬನ್ನಿ. ನಾವೆಲ್ಲರೂ ಒಟ್ಟಾಗಿ ಈ ಪರೀಕ್ಷಾ ಅಕ್ರಮಗಳ ವಿಷಯವನ್ನು ಸಂಸತ್ತಿಗೆ ತಲುಪಿಸೋಣ. ಆಗ ಮಾತ್ರ ಈ ಹೋರಾಟ ಸರಿಯಾದ ದಿಕ್ಕಿಗೆ ತಲುಪಿದೆ ಎಂದು ನಾನು ನಂಬುತ್ತೇನೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಜುಲೈ 20 ರಂದೇ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ಸಂಸತ್ತಿಗೆ ಮುತ್ತಿಗೆ ಹಾಕುವ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ.


