Homeನ್ಯಾಯ ಪಥದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

- Advertisement -
- Advertisement -

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ ಟಿಕೆಟ್ ನೀಡಿ ಅಭ್ಯರ್ಥಿ ಮಾಡಬೇಕಿತ್ತು. ಸಿಎಂ ಸಿದ್ದುಗೆ ಅಹಿಂದ ಕುಲದವರಿಗೆ ‘ಕೈ’ ಟಿಕೆಟ್ ಕೊಡುವ ಮನಸ್ಸಿತ್ತಾದರೂ ಇದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆಶಿಗೆ ಬೇಡದ ಉಸಾಬರಿಯಾಗಿತ್ತು. ಯೋಜನಾಬದ್ಧವಾಗಿ ಮುಸಲ್ಮಾನ್ ಸಮುದಾಯಕ್ಕೆ ಟಿಕೆಟ್ ತಪ್ಪಿಸಿದ ಕಾರ್ಯಾಚರಣೆ ಹಿಂದೆ ಸಿಎಂ ಸಿದ್ದುರನ್ನು ಮಣಿಸಿ ಅಸಹಾಯಕರನ್ನಾಗಿಸುವ ಹಲವು ನಿಖರ ಲೆಕ್ಕಾಚಾರಗಳು ಅಡಗಿರುವುದು ಬಹಿರಂಗ ರಹಸ್ಯ; ಮುಖ್ಯಮಂತ್ರಿ ಕುರ್ಚಿ ವಶಪಡಿಸಿಕೊಳ್ಳುವ ಡಿಕೆಶಿ ಮತ್ತವರ ಹಿಂದಿದ್ದ ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಗದ ತಂತ್ರಗಾರಿಕೆಯಾಗಿತ್ತು ಎಂಬ ಮಾತೀಗ ರಾಜಕೀಯ ಪಡಸಾಲೆಯಲ್ಲಿ ಸಾಮಾನ್ಯವಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಟ್ಯಾಕ್ಟೀಸ್‌ನಲ್ಲಿ ಕಾಂಗ್ರೆಸ್‌ನ ಆಯಕಟ್ಟಿನ ಸ್ಥಾನದಲ್ಲಿರುವವರು ಸಿಎಂ ಸಿದ್ದುರನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಇದು ರಾಹುಲ್ ಗಾಂಧಿ-ಸೋನಿಯಾ ಗಾಂಧಿಗೆ ತಿಳಿದಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಡಿಕೆಶಿ ಬಣ ಸಿದ್ದು ಮೇಲೆ ಮುರಕೊಂಡು ಬಿದ್ದಿತ್ತು. ಉಪಚುನಾವಣೆ ಸಂದರ್ಭ ಬಳಸಿಕೊಂಡು ಸಿದ್ದುರ ಪ್ರಚಂಡ ಶಕ್ತಿಯಾದ ಅಹಿಂದದ “ಅ” ಹಿಸುಕಿಹಾಕುವ ಆಟ ಆಡಲಾಯಿತು. ಕೈ ಟಿಕೆಟ್‌ಗೆ ಹಠ ಹಿಡಿದಿದ್ದ ದಾವಣಗೆರೆ ಮುಸಲ್ಮಾನರನ್ನು ಹಣಿಯುವ ಮೂಲಕ ರಾಜ್ಯ ಕಾಂಗ್ರೆಸ್‌ನ ಮುಸಲ್ಮಾನ್ ನಾಯಕರಲ್ಲಿ ಒಡಕು ಮೂಡಿಸಿದರೆ ಸಿದ್ದು ಮೆತ್ತಗಾಗುತ್ತಾರೆಂಬ ಲೆಕ್ಕಾಚಾರ ಇಲ್ಲಡಗಿತ್ತು. ಕಾಂಗ್ರೆಸ್ ಹೈಕಮಾಂಡ್‌ನ ದಿಗ್ಗಜರು ತಮ್ಮದೇ ಪಕ್ಷದ ಘೋಷಿತ ಸೆಕ್ಯೂಲರ್ ತತ್ವ-ಸಿದ್ಧಾಂತ ಗಾಳಿಗೆ ತೂರಿ ಸಾಹುಕಾರ್-ಯಜಮಾನ್ ಎಂಬ ಅಭಿದಾದೊಂದಿಗೆ ದಶಕಗಳ ಕಾಲ ದಾವಣಗೆರೆಯನ್ನು ಆಳಿದ್ದ ಸ್ವಜಾತಿ ಲಿಂಗಾಯತ “ಸ್ಪಿರಿಟ್”ನ ಶಾಮನೂರು ಶಿವಶಂಕರಪ್ಪರ ಕುಟುಂಬದ ವಂಶಪಾರಂಪರ್ಯ ರಾಜಕಾರಣಕ್ಕೆ ಶರಣಾಗಿದ್ದರು.

ದಾವಣಗೆರೆ ದಕ್ಷಿಣ ಕ್ಷೇತ್ರ ಅಹಿಂದ ಕ್ಷೇತ್ರ; ಅಲ್ಪಸಂಖ್ಯಾತ ಮುಸ್ಲಿಮರು ಸುಮಾರು 80 ಸಾವಿರದಷ್ಟಿದ್ದಾರೆ. ಚಲಾವಣೆಯಾಗುವ ಮುಸಲ್ಮಾನರ ಮತಗಳಲ್ಲಿ ಶೇಕಡಾ 99ರಷ್ಟು ಏಕಗಂಟಲ್ಲಿ ಕಾಂಗ್ರೆಸ್‌ಗೆ ದಕ್ಕುತ್ತದೆ. ಸ್ಥಳೀಯ ಮುಸಲ್ಮಾನರಿಗೆ ಸ್ವಸಮುದಾಯದ ಎಮ್ಮೆಲ್ಲೆ ಪಡೆಯುವ ಆಸೆ ಬಹುದಿನದಿಂದ ಇತ್ತಾದರೂ ಧಡಪ್‌ಶಾಹಿ ಶಾಮನೂರು ಶಿವಶಂಕರಪ್ಪರ “ಯಜಮಾನಿಕೆ”ಗೆ ಗೌರವ ಕೊಟ್ಟು ಕೈ ಟಿಕೆಟ್ ಬೇಡಿಕೆ ದೊಡ್ಡ ದ್ವನಿಯಲ್ಲಿ ಇಡುತ್ತಿರಲಿಲ್ಲ. ಒಮ್ಮೆ ಶಾಮನೂರು ಶಿವಶಂಕರಪ್ಪನವರೇ “ನನಗೀಗ ವಯಸ್ಸಾಗಿದೆ; ಮುಂದಿನ ಬಾರಿ ಮುಸ್ಲಿಮ್ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುತ್ತೇನೆ” ಎಂದಿದ್ದೂ ಇದೆ. ಸಹಜವಾಗೇ ಶಿವಶಂಕರಪ್ಪರ ಕಾಲದ ಬಳಿಕ ಮುಸಲ್ಮಾನರ ಟಿಕೆಟ್ ಕೂಗು ಭುಗಿಲೆದ್ದಿತು. ಇಷ್ಟುದಿನ ಎರಡು ಬಗೆಯದೇ ಕಾಂಗ್ರೆಸ್‌ಗೆ ಕಣ್ಣುಮುಚ್ಚಿ ಮತಹಾಕುತ್ತ ಬಂದಿದ್ದೇವೆ; ಸಣ್ಣ ಅಂತರದಲ್ಲಿ ಚುನಾಯಿತರಾಗುತ್ತಿದ್ದ ಶಿವಶಂಕರಪ್ಪರ ಗೆಲುವಿಗೆ ಮುಸಲ್ಮಾನರ ನಿರ್ವ್ಯಾಜ್ಯ ಬೆಂಬಲವೇ ಕಾರಣ; ಈ ಬಾರಿ ನಮಗೇ ಅವಕಾಶ ಕೊಡಿ ಎಂಬುದು ಮುಸಲ್ಮಾನರ ನ್ಯಾಯಯುತ ಹಕ್ಕೊತ್ತಾಯವಾಗಿತ್ತು.


ಕಾಂಗ್ರೆಸ್ ನಾಯಕರು ಒಂದಾಗಿ ಮುಸಲ್ಮಾನರ ಈ ಅಳಲನ್ನು ಪರಿಗಣಿಸುವುದು ಧರ್ಮವಾಗಿತ್ತು; “ಅ” ಆಭ್ಯರ್ಥಿ ಕಣಕ್ಕಿಳಿಸಿ “ಹಿಂದ್” ಮತ ಕ್ರೋಢೀಕರಿಸುವ ಅಹಿಂದ್ ರಾಜಕಾರಣ ಮಾಡಬೇಕಿತ್ತು. ಆ ಮೂಲಕ ಅತಿರೇಕದ ಧರ್ಮಕಾರಣ ಮಾಡುತ್ತಿರುವ ಬಿಜೆಪಿಗೆ ಸಶಕ್ತ ಸವಾಲೆಸೆಯಬೇಕಿತ್ತು; ಆದರೆ ಶೇ 20ರಷ್ಟೂ ಓಟು ಕಾಂಗ್ರೆಸ್ ಕಡೆ ಬರದ ಲಿಂಗಾಯತ ಸಮುದಾಯದ ಹುಡುಗನಿಗೆ ಹುರಿಯಾಳಾಗಿಸಿದ ಕಾಂಗ್ರೆಸ್ ಐತಿಹಾಸಿಕ ಪ್ರಮಾದ ಮಾಡಿತು. ಕ್ಷೇತ್ರದ ಭೌಗೋಳಿಕ ಪರಿಚಯ-ಜನಜೀವನದ ಅರಿವು ಕಿಂಚಿತ್ತೂ ಇಲ್ಲದ ಹುಡುಗಾಟಿಕೆಯ ಹುಡುಗ-ಮಂತ್ರಿ ಮಲ್ಲಿಕಾರ್ಜುನರ ಮಗ ಸಮರ್ಥನನ್ನು ಕಾಂಗ್ರೆಸ್ ಕಿಂಗ್‌ಗಳು ಕಣಕ್ಕಿಳಿಸಿದರು. ಲಿಂಗಾಯತರ ದಿವಂಗತ ನಾಯಕ ಕಾಂಗ್ರೆಸ್ ಶಾಮನೂರು ಶಿವಶಂಕರಪ್ಪರ ಮೊಮ್ಮಗನೆಂಬುದೊಂದೇ ಸಮರ್ಥಗಿದ್ದ ಅರ್ಹತೆಯಾಗಿತ್ತು.

ಹಾಗೆ ನೋಡಿದರೆ ಕಾಂಗ್ರೆಸ್ ಮುಖಂಡರಿಗೆ ತೀರಾ ಸಣ್ಣ ಪ್ರಾಯದ ಅನನುಭವಿ ಸಮರ್ಥಗೆ ಕ್ಯಾಂಡಿಡೇಟಾಗಿಸಲೇಬೇಕಾದ ಯಾವ ಅನಿವಾರ್ಯತೆಯೂ ಇರಲಿಲ್ಲ; ಶಾಮನೂರು ಪರಿವಾರವನ್ನು ಸಮಾಧಾನಪಡಿಸುವುದು ಕಷ್ಟವೂ ಆಗಿರಲಿಲ್ಲ. ಸಮರ್ಥ್ ಅಜ್ಜ ದಾವಣಗೆರೆ ದಕ್ಷಿಣ ಕ್ಷೇತ್ರ ರಚನೆ ಆದಾಗಿಂದ ಶಾಸಕರಾಗಿದ್ದರು; ಅದಕ್ಕೂ ಮೊದಲು ಅವಿಭಜಿತ ದಾವಣಗೆರಯಿಂದಲೂ ಎಮ್ಮೆಲ್ಲೆಯಾಗಿದ್ದರು. ಅಪ್ಪ ರಾಜ್ಯ ಸರಕಾರದ ಕ್ಯಾಬಿನೆಟ್ ಮಂತ್ರಿ ಮಾಂಡಲೀಕರಾಗಿದ್ದಾರೆ; ತಾಯಿ ಲೋಕಸಭಾ ಸದಸ್ಯೆಯಾಗಿದ್ದಾರೆ. ಇಷ್ಟೆಲ್ಲ ಅಧಿಕಾರ ಇರುವ ಕುಟುಂಬದ “ಪೋರ”ನಿಗೆ ಶಾಸಕನಾಗಿಸುವ ದರ್ದು ಖರ್ಗೆ-ಡಿಕೆಶಿಗೆ ಏನಿತ್ತು? ಎಂಬುದು ನಿಷ್ಠಾವಂತ ಕಾಂಗ್ರೆಸಿಗರ ಅಳಲು.

ಹಾಗೊಮ್ಮೆ ಟಿಕೆಟ್ ಸಿಗದ ಸಿಟ್ಟಲ್ಲಿ ಶಾಮನೂರು ಕುಟುಂಬ ಬಂಡೆದ್ದರೂ ಕಾಂಗ್ರೆಸಿಗೆ ತೊಂದರೆ ಏನಾಗುತ್ತಿರಲಿಲ್ಲ; ಕ್ಷೇತ್ರದ ಹಿಂದುಳಿದ ಮತ್ತು ದಲಿತದವರಿಗಷ್ಟೇ ಅಲ್ಲ, ಲಿಂಗಾಯತ ಸಮುದಾಯದ ಬಹುಸಂಖ್ಯಾತ ಪಂಚಮಸಾಲಿ ಪಂಗಡದವರಿಗೂ ಅಲ್ಪಸಂಖ್ಯಾತ ಸಾಧು ಲಿಂಗಾಯತ ಶಾಮನೂರು ಫ್ಯಾಮಿಲಿಯ ಏಕಚಕ್ರಾಧಿಪತ್ಯದಿಂದ ರೇಜಿಗೆ ಮೂಡಿತ್ತು. ಹಾಗಾಗಿ ಅಹಿಂದಗೆ ಸೇರಿದ ಯಾವ ಜಾತಿಯ ಕ್ಯಾಂಡಿಡೇಟಾದರೂ ಕಾಂಗ್ರೆಸಿಗೆ ಗೆಲುವು ಕಷ್ಟವಾಗುತ್ತಿರಲಿಲ್ಲ ಎಂದು ಕ್ಷೇತ್ರದ ಚುನಾವಣಾ ರಾಜಕಾರಣದ ಸೂತ್ರ-ಸಮೀಕರಣ ಬಲ್ಲವರು ಹೇಳುತ್ತಾರೆ. ಆದರೆ ಸಿಎಮ್ ಸಿದ್ದುರನ್ನು ದುರ್ಬಲರಾಗಿಸಿ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಸುವ ಹುನ್ನಾರ ಹೆಣೆದವರಿಗೆ ಅಹಿಂದ ಕ್ಯಾಂಡಿಡೇಟ್ ಅಖಾಡಕ್ಕೀಳಿಯುವುದು ಬೇಡವಾಗಿತ್ತು; ಹಾಗೊಮ್ಮೆ ಅಹಿಂದ ಹುರಿಯಾಳು ಕಾಂಗ್ರೆಸಿಗನಾದರೆ ಸಿದ್ದು ಮತ್ತಷ್ಟು ಸ್ಟ್ರಾಂಗ್ ಆಗುತ್ತಿದ್ದರಲ್ಲವೇ? ಇದು ಬಹಳ ವರ್ಷದಿಂದ ರಾಜಕಾರಣದಲ್ಲಿ ಪಳಗಿರುವ ಖರ್ಗೆ-ಡಿಕೆಶಿಗೆ ಅರ್ಥವಾಗದೇ? ಹಾಗಾಗಿ ಕಾಂಗ್ರೆಸ್ ಸೋತರೂ ಅಡ್ಡಿಯಿಲ್ಲ; ಸಿದ್ದು ಸಿಎಮ್ ಪಟ್ಟ ಬಿಡುವಂತಾಗಬೇಕೆಂಬ ದೂ(ದು)ರಾಲೋಚನೆಯಲ್ಲಿ ಟಿಕೆಟ್ ಕಮಿಟಿ ಕಾಂಗ್ರೆಸಿಗೇ ಗುಂಡಿ ತೋಡಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಚರ್ಚಿತವಾಗುತ್ತಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಜನರ ಬಾಯಲ್ಲಿರುವ ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಮುಸಲ್ಮಾನರ ಮುನಿಸಿನಿಂದಾಗಿ ಕಾಂಗ್ರೆಸ್ ಗೆಲುವು ತೀರಾ ಕಷ್ಟ! ಇದು ಖರ್ಗೆ-ಡಿಕೆಶಿಯನ್ನು ಹತಾಶವಾಗಿಸಿದೆ. ಸಿಎಮ್ ಸಿದ್ದು ಬೆನ್ನಿಗಿರುವ ಮುಸ್ಲಿಮ್ ನಾಯಕರ ಅಸಹಕಾರವೇ ಸಂಭವನೀಯ ಸೋಲಿಗೆ ಕಾರಣವೆಂದವರು ತೀರ್ಮಾನಿಸಿದಂತಿದೆ. ಈಗ “ದ್ರೋಹಿ”ಗಳ ಬಲಿಹಾಕುವ ಮಾರಿ ಹಬ್ಬದ ಸಡಗರ ಕಾಂಗ್ರೆಸಲ್ಲಿ ಶುರುವಾಗಿದೆ. ಕಾಂಗ್ರೆಸ್ ಗೆಲುವಿನ ಹೊಸ್ತಿಲಲ್ಲಿದ್ದರೂ ಈ “ಆಪರೇಷನ್ ನಡೆಯುತಿತ್ತೆಂಬುದು ಬೇರೆ ಮಾತು. ಇದು ಪೂರ್ವ ನಿರ್ಧರಿತ. ಇನ್ನೊಂದೆಡೆ ತಮ್ಮ ಸಮುದಾಯಕ್ಕೆ ಸಿಗಬೇಕಾಗಿದ್ದ ಅವಕಾಶ ದಕ್ಕದಂತೆ ನಂಬಿದ್ದ ಕಾಂಗ್ರೆಸ್ ದ್ರೋಹ ಮಾಡಿತೆಂಬ ಬೇಸರ-ನೋವಿನಿಂದ ಉಪ-ಚುನಾವಣೆ ಪ್ರಚಾರದಲ್ಲಿ ತಟಸ್ಥರಾದ ಮುಸಲ್ಮಾನರು ದ್ರೋಹಿಗಳೋ? ಮೇಲ್ವರ್ಗದ ಪಟ್ಟಭದ್ರರ ಪಾಳೆಗಾರಿ ಪೊಗರಿಗೆ ಹೆದರಿ ಮುಸಲ್ಮಾನರನ್ನು ಕರಾರುವಾಕ್ಕಾಗಿ ಅವಗಣಿಸಿದ ಕಾಂಗ್ರೆಸ್‌ನ ಮಹಾಮಹಿಮರು ದ್ರೋಹಿಗಳೋ? ಎಂಬ ಜಿಜ್ಞಾಸೆ ಮತ್ತೊಂದೆಡೆ ನಡೆದಿದೆ. ಆಯ್ದ ಮುಸಲ್ಮಾನ್ ನಾಯಕರ ಮೇಲೆ ಪಕ್ಷ ನಿಷ್ಠೆ-ಶಿಸ್ತಿನ ನೆಪದಲ್ಲಿ ಪ್ರಹಾರ ನಡೆಸಿ ಸಿಎಂ ಸಿದ್ದುರನ್ನು ಪಳಗಿಸುವ ಸ್ಕೆಚ್ ಒಂದು ದಾವಣಗೆರೆಯ ಸಮರಾಂಗಣದಲ್ಲೇ ಎದುರಾಳಿಗಳು ರೂಪಿಸಿದ್ದರೆನ್ನಲಾಗಿದೆ.

ಮತದಾನ ಮುಗಿದ ಮರುಕ್ಷಣವೇ ಮುಸ್ಲಿಮ್ ಸಮುದಾಯದ ಶಾಸಕ ರಿಜ್ವಾನ್ ಅರ್ಷದ್ ಮತ್ತು ವಿಧಾನ ಪರಿಷತ್‌ನ ಆಳುವ ಪಕ್ಷದ ಮುಖ್ಯ ಸಚೇತಕ ಕಮ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸಮುದಾಯದಲ್ಲೇ “ಗದ್ಧರ್‍”ಗಳಿದ್ದಾರೆ. ದಾವಣಗೆರೆ ಉಪಚುನಾವಣೆಯಲ್ಲಿ ಇವರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ; ಇವರ ಮೇಲೆ ಶಿಸ್ತು ದಂಡ ಪ್ರಯೋಗವಾಗಬೇಕೆಂಬ ಅರ್ಥದ ಹೇಳಿಕೆ ಬಿತ್ತರಿಸಿಬಿಟ್ಟರು. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪೀಠಕ್ಕಾಗಿ ನಡೆಯುತ್ತಿರುವ ಬೀದಿ ಜಗಳದ ಮರ್ಮ ಬಲ್ಲವರಿಗೆ ಮುಸಲ್ಮಾನ್ ಸಮುದಾಯದ ಶಾಸಕರು ತಮ್ಮವರ ಮೇಲೆಯೇ ದಾಳಿ ಮಾಡುತ್ತಿರುವುದರ ಹಿಂದೆ ಡಿಕೆಶಿ ತಂತ್ರಗಾರಿಕೆ ಇರುವುದು ನಿಸ್ಸಂಶಯವಾಗಿ ಅರ್ಥವಾಗಿತ್ತು.



ಇದರ ಬೆನ್ನಿಗೇ ದಾವಣಗೆರೆ ಮೂಲದ ಎಮ್ಮೆಲ್ಸಿ-ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಮರುದಿನವೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ಅಲ್ಪ ಸಂಖ್ಯಾತ ಸಮುದಾಯದ ಪ್ರಮುಖ ನಾಯಕರೂ ಆಗಿರುವ ಜಬ್ಬಾರ್‌ರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸುವ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಆಗ ದಿಲ್ಲಿ ಹೈಕಮಾಂಡಿನ ಮಾಂಡಲೀಕರ ಬೆಂಬಲವಿಲ್ಲದೆ ಡಿಕೆಶಿಗೆ ಇಂಥ ಧೈರ್ಯ ಬರಲು ಸಾಧ್ಯವೇ ಎಂಬ ಮಾತುಗಳೂ ಕೇಳಿಬರುತ್ತವೆ. ಜಬ್ಬಾರ್ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ; ಪ್ರಚಾರಕ್ಕೆ ಬರದೆ ಅಸಹಕಾರ ತೋರಿದ್ದಾರೆ ಎಂಬುದು ಆರೋಪ. ಆದರೆ ಚುನಾವಣೆ ವಾರವಿರುವಾಗಲೇ ಜಬ್ಬಾರ್ ತನ್ನನ್ನು ಪ್ರಚಾರಕ್ಕೆ ಕರೆಯುತ್ತಿಲ್ಲ; ನಾವಿಲ್ಲದೆ ಗೆಲ್ಲಬಹುದೆಂದು ಮಂತ್ರಿ ಮಲ್ಲಿಕಾರ್ಜುನ್ ಅಂದುಕೊಂಡಿರಬಹುದು. ನಾನಂತೂ ಮನೆಯಿಂದಲೇ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದರು.

ಜಬ್ಬಾರ್ “ಪ್ರಕರಣ” ಮುಗಿಯುತ್ತಿದ್ದಂತೆಯೇ ಡಿಕೆಶಿ ಬಣದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಮ್ಮೆಲ್ಸಿ ನಜೀರ್ ಅಹಮದ್ ಮೇಲೂ ಶಿಸ್ತು ಕ್ರಮದ “ಕಾರ್ಯಕ್ರಮ” ನಡೆಯಿತು. ಕ್ಯಾಬಿನೆಟ್ ಮಂತ್ರಿಗಿರಿಯ ಸ್ಥಾನ-ಮಾನದ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಕೊಡುವಂತೆ ಕೇಳಲಾಯಿತು. ಹುದ್ದೆ ಬಿಡಲಾರೆನೆಂದು ತಿರುಗಿ ನಿಂತಿದ್ದ ನಜೀರ್‌ರನ್ನು ಮುಲಾಜಿಲ್ಲದೆ ಅಧಿಕಾರದಿಂದ ಕಿತ್ತೆಸೆಯಲಾಯಿತು. ನಜೀರ್ ಕಾಂಗ್ರೆಸಿಗೆ ಮತಹಾಕಬೇಡಿ ಎಂದಿದ್ದ ಆಡಿಯೋ ಸಾಕ್ಷಿ “ಶಿಸ್ತು ಬೋಧಕರ” ಬಳಿಯಿದೆಯಂತೆ. ಇದರ ಜತೆಗೇ ಸಿಎಂ ಸಿದ್ದುರ ಪ್ರಬಲ ಬೆಂಬಲಿಗ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ತಲೆದಂಡದ ಸುದ್ದಿಯೂ ಹಬ್ಬಿತು. ಜಮೀರ್ ಗಡಿಬಿಡಿಗೆ ಬಿದ್ದರು. ಜಮೀರ್ ತಮ್ಮ ಸಮುದಾಯಕ್ಕೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದೇ ಪ್ರಮಾದವಾಗಿತ್ತು. ಇದು ಮಗನ ಪಟ್ಟಾಭಿಷೇಕಕ್ಕೆ ಹಾತೊರೆಯುತ್ತಿದ್ದ ಮಂತ್ರಿ ಮಲ್ಲಿಕಾರ್ಜುನರಲ್ಲಿ ಕೋಪ ಉಕ್ಕಿಸಿತ್ತು. ಟಿಕೆಟ್ ತಳಮಳದ ಹೊತ್ತಲ್ಲಿ ಬಹಿರಂಗವಾಗೇ ಮಂತ್ರಿ ಮಲ್ಲಿ ಜಮೀರನ್ನು ಏಕವಚದಲ್ಲಿ ಮೂದಲಿಸಿದ್ದೂ ನಡೆದಿತ್ತು. ಸ್ವಸಮುದಾಯಕ್ಕೆ ಟಿಕೆಟ್ ತಪ್ಪಿಸಿದ್ದಕ್ಕೆ ಜಮೀರ್ ಬೇಸರದಲ್ಲಿದ್ದದ್ದು ನಿಜ. ಆದರೆ ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್ ಆಣತಿಯಂತೆ ಕೇರಳ ಚುನಾವಣೆ ಪ್ರಚಾರದಲ್ಲಿ ಪುರುಸೊತ್ತಿಲ್ಲದಂತಾಗಿದ್ದ ಜಮೀರ್ ದಾವಣಗೆರೆಗೆ ಕೊನೆ ದಿನ ಬಂದು ಮಂತ್ರಿ ಮಲ್ಲಿಯನ್ನು ಬಹಿರಂಗವಾಗಿ ಅಪ್ಪಿ ಮುದ್ದಾಡಿ ಹೋಗಿದ್ದರು. ಸಂಪುಟ ವಿಸ್ತರಣೆಯಾದರೆ ಡಿಕೆಶಿ ಬಣದ ಕಣ್ಣು ಕೆಂಪಾಗಿಸಿರುವ ಜಮೀರ್‌ಗೆ ಗೇಟ್‌ಪಾಸ್ ಎಂಬ ಕಥವವೂ ಕೇಳಿಬರುತ್ತಿದೆ.

ಜಮೀರ್ ತಮ್ಮ ಸ್ಥಾನ ಗಟ್ಟಿ ಪಡಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಅತ್ತ ವಿರೋಧಿಗಳು ಜಮೀರ್ ಮತ್ತು ಅವರ ಮಾಜಿ ಗೆಣೆಗಾರ ಕೇಂದ್ರ ಮಂತ್ರಿ ಕುಮಾರಸ್ವಾಮಿ ನಡುವೆ ನಂಟು ಅಂಟುತ್ತಿದೆ ಎಂಬ ಸುದ್ದಿಗಳನ್ನು ತೇಲಿಬಿಟ್ಟರು.”ಕಾಂಗ್ರೆಸ್ ಬಿಟ್ಟು ಜಮೀರ್ ಜೆಡಿಎಸ್‌ಗೆ ಬಂದರೆ ಬಿಜೆಪಿ ಸಖ್ಯ ತೊರೆಯುತ್ತೇನೆ. ಅಲಸಂಖ್ಯಾತರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬರೋಣ. ಆಗ ನಿಮಗೆ ದೊಡ್ಡ ಇನಾಮು ಕೊಡಲಾಗುತ್ತದೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಕುತೂಹಲಕರ ವದಂತಿಗಳು ಹರಿದಾಡಿತು. ಆದರೆ ಅಂಥದೊಂದು “ಮಾತು-ಕತೆ”ಯೇ ನಡೆದಿರಲಿಲ್ಲ. ಇದೆಲ್ಲ ಸಿದ್ದು ನಿಷ್ಠರ ಡಿಮಾರಲೈಸ್ ಮಾಡುವ ಕಾಂಗ್ರೆಸ್‌ನ ಒಳಗಿನ ಕಾಲೆಳೆವ ಕಸರತ್ತಾಗಿತ್ತಷ್ಟೇ ಎಂದು ಜಮೀರ್ ಕಡೆಯವರು ಪಿಸುಗುಡುತ್ತಾರೆ. ಇಷ್ಟೆಲ್ಲ ದಾಳಿ-ಅವಮಾನಗಳಾದರೂ ಟಗರು ಮಾತ್ರ ಕೆರಳದೆ ಪುಣ್ಯಕೋಟಿಯಾಗಿ ಕಾಲಹಾಕುತ್ತಿರುವುದು ರಾಜಕೀಯ ಪಡಸಾಲೆಯಲ್ಲಿ ಅಚ್ಚರಿಯ ಚರ್ಚೆಗಳನ್ನು ಹುಟ್ಟುಹಾಕಿದೆ. ಅಧಿಕಾರಕ್ಕಾಗಿ ಸಿದ್ದು ಸಮನ್ವಯ ಸಿದ್ಧಾಂತಿಯಾದರೆ ಎಂಬ ಜಿಜ್ಞಾಸೆಯೂ ನಡೆಯಹತ್ತಿದೆ!

ಕಾಂಗ್ರೆಸ್‌ನಲ್ಲಿ ಅಲ್ಪ ಸಂಖ್ಯಾತ ಮುಖಂಡರ ಮೇಲೆ ನಡೆಯುತ್ತಿರುವ ಸರಣಿ ಶಿಸ್ತು ದಾಳಿಗೆ ತತ್ವ-ನ್ಯಾಯದ ಯಾವ ಸಮರ್ಥನೆಯೂ ಇಲ್ಲವೆಂದು ಆ ಪಕ್ಷದ ನಿಷ್ಠಾವಂತರು ಹೇಳುತ್ತಾರೆ. ಕಾಂಗ್ರೆಸ್‌ನಲ್ಲಿ ಬಲಾಢ್ಯ ಲಿಂಗಾಯತರಿಗೊಂದು ನ್ಯಾಯ, ದುರ್ಬಲ ಮುಸಲ್ಮಾನರಿಗೊಂದು ನ್ಯಾಯ ನೀಡಲಾಗುತ್ತಿದೆ ಎಂಬುದು ಹೈಕಮಾಂಡ್‌ನ ಎಡಬಿಡಂಗಿ ನಡಾವಳಿಯೇ ಸಾರಿ ಹೇಳುತ್ತದೆ. ಲಿಂಗಾಯತರ ಅತ್ಯುಚ್ಚ ಮುಖಂಡರೆನಿಸಿದ್ದ ಶಾಮನೂರು ಶಿವಶಂಕರಪ್ಪ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿದ್ದರು. ಶಿವಶಂಕರಪ್ಪರಿಗೆ ಕಾಂಗ್ರೆಸ್‌ನ ಯಾವ ಶಿಸ್ತು-ನೀತಿ-ನಿಯಮದ ಮುಲಾಜೂ ಇರಲಿಲ್ಲ. ಪಕ್ಕಕ್ಕಿಂತ ಜಾತಿಯೇ ಶಿವಶಂಕರಪ್ಪರಿಗೆ ಮುಖ್ಯವಾಗಿತ್ತು. ಕಾಂಗ್ರೆಸ್‌ನ ಖಜಾಂಚಿ, ಶಾಸಕ, ಮಂತ್ರಿಯಾಗಿದ್ದುಕೊಂಡು ಅವರು ಬಹಿರಂಗವಾಗೇ ಸ್ವಪಕ್ಷಕ್ಕೆ ಡ್ಯಾಮೇಜ್ ಮಾಡಿ ಸ್ವಜಾತಿಯ ವಿಪಕ್ಷದವರ ಹಿತ ಕಾಯುತ್ತಿದ್ದರು. ಕಾಂಗ್ರೆಸ್‌ಗೆ ತೊಂದರೆಯಾದರೂ ಆಗಲಿ ತಮ್ಮ ಬಿಜೆಪಿ ದೋಸ್ತಿಗಳಾದ ಯಡಿಯೂರಪ್ಪ, ಬೊಮ್ಮಾಯಿ, ಜಗದೀಶ್ ಶೆಟ್ಟರ್ ವಗೈರೆಗಳಿಗೆ ಮಾತ್ರ ಯಾವ ಬಾಧೆಯೂ ಆಗಬಾರದೆಂಬ ನಿಲುವು ಶಿವಶಂಕರಪ್ಪರದಾಗಿತ್ತು.

ಕಳೆದ ಲೋಕಸಭಾ ಚುನಾವಣೆ ವೇಳೆ ಪಕ್ಕದ ಶಿವಮೊಗ್ಗದಲ್ಲಿ ಯಡಿಯೂರಪ್ಪರ ಪುತ್ರ ರಾಘವೇಂದ್ರರನ್ನು ಗೆಲ್ಲಿಸುವಂತೆ ವೇದಿಕೆ ಮೇಲಿಂದಲೇ ಶಿವಶಂಕರಪ್ಪ ಕರೆಕೊಟ್ಟಿದ್ದರು! ಶಿಕಾರಿಪುರದಲ್ಲಿ ಬಿಜೆಪಿಯ ವಿಜಯೇಂದ್ರ, ಅತ್ತ ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್, ಹಾವೇರಿಯಲ್ಲಿ ಬೊಮ್ಮಾಯಿ ವಿಜಯಶಾಲಿಗಳಾಗಿ ಲಿಂಗಾಯತರ ತಾಕತ್ತು ತೋರಿಸಲಿ ಎಂಬ ಹಾರೈಕೆ ಅವರದಾಗಿತ್ತು. ಆಗೆಲ್ಲ ಡಿಕೆಶಿ, ಖರ್ಗೆಗಳಿಗೆ ಶಿಸ್ತು, ಪಾರ್ಟಿ ಹಿತದ ನೀತಿ-ನಿಯಮ ನೆನಪಾಗಿರಲಿಲ್ಲ. ಅಷ್ಟೇ ಏಕೆ, ಮೊನ್ನೆ ದಾವಣಗೆರೆ ಉಪಚುನಾವಣೆಯ ಸಂದರ್ಭದಲ್ಲಿ ಅಧಿಕೃತವಾಗಿ ಅಭ್ಯರ್ಥಿಯೆಂದು ಘೋಷಣೆಯಾಗುವ ಮೊದಲೇ ಹೈಕಮಾಂಡ್ ಧಿಕ್ಕರಿಸಿ ಶಾಮನೂರರ ಮೊಮ್ಮಗ ನಾಮಪತ್ರ ಸಲ್ಲಿಸಿದ್ದರು. ಅಪ್ಪ ಕಾಂಗ್ರೆಸ್ ಮಂತ್ರಿ ಮಲ್ಲಿ, ಅಮ್ಮ ಕಾಂಗ್ರೆಸ್ ಸಂಸದೆ ಜತೆಗಿದ್ದರು. ಆಗಲೂ ಕಾಂಗ್ರೆಸ್ ಹೈಕಮಾಂಡಿಗೆ ಇದು ಅಪರಾಧವಾಗಿ ಕಂಡಿರಲಿಲ್ಲ. ಹೀಗಿರುವಾಗ ಅಲ್ಪಸಂಖ್ಯಾತ ಮುಸಲ್ಮಾನರ ಮೇಲಷ್ಟೇ ಈಗ ಶಿಸ್ತು ಅಸ್ತ್ರ ಪ್ರಯೋಗಿಸಲ್ಪಡುತ್ತಿರುವುದು ಕಾಂಗ್ರೆಸ್‌ನ ಕುರ್ಚಿ ಕಿತ್ತಾಟದ ಧಾರಾವಾಹಿಯ ಮತ್ತೊಂದು ಅಂಕವೆಂಬುದು ಪಕ್ಕಾ ಮಾಡುತ್ತದಲ್ಲವೇ?!



ಈ ಕುರ್ಚಿ ಕಾಳಗ ಏನೇ ಇರಲಿ; ಕಾಂಗ್ರೆಸ್ ಹೈಕಮಾಂಡ್ ವಿವೇಚನಾ ರಹಿತವಾಗಿ ತನ್ನ ನಿಷ್ಠಾವಂತ ಇಡಿಗಂಟಿನ ಮತ ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತರನ್ನು ಘಾಸಿಗೊಳಿಸುವಂತೆ “ಹಲ್ಲೆ” ಮಾಡಿರುವುದು ಆತ್ಮಹತ್ಯಾತ್ಮಕವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಬಲಾಢ್ಯ ಮೇಲ್ವರ್ಗದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ಓಟು ಶೇಕಡಾ 20-25ರಷ್ಟೂ ಸಿಗುವುದಿಲ್ಲ. ಕಾಂಗ್ರೆಸ್ ಗೆಲ್ಲುವುದೇ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದ ಮತಗಳಿಂದ. ಕಾಂಗ್ರೆಸ್ ಕಳೆದ 2023ರ ಚುನಾವಣೆಯಲ್ಲಿ ಅಧಿಕಾರ ಹಿಡಿದಿರುವುದೇ ಶೇಕಡಾ 80ರಷ್ಟು ಬಂದಿರುವ ಅಹಿಂದ ಮತದಿಂದ; ಅದರಲ್ಲಿ ಶೇ.88ರಷ್ಟು ಮುಸಲ್ಮಾನರ ಮತಗಳಿವೆ. ಸಿದ್ದು ಸಿಎಂ ಎಂದು ಬಿಂಬಿತವಾಗಿದ್ದರೂ ಅವರದೇ ಕುರುಬರ ಜಾತಿಯಿಂದ ಬಂದಿದ್ದು ಪ್ರತಿಶತ 63 ಮತಗಳು ಮಾತ್ರ! ಶೇ.66 ಎಸ್‌ಸಿ, ಶೇ.44 ಎಸ್‌ಟಿ, ಶೇ.31 ಒಬಿಸಿ, ಶೇ.24 ಒಕ್ಕಲಿಗ, ಶೇ.20 ಲಿಂಗಾಯತ ಮತಗಳು 2023ರಲ್ಲಿ ಕಾಂಗ್ರೆಸಿಗೆ ಬಂದಿದೆ ಎಂದು ಒಂದು ನಂಬಲರ್ಹ ಸಮೀಕ್ಷೆಯಿಂದ ದೃಢವಾಗಿದೆ. ಡಿಕೆಶಿ ಸಿಎಮ್ ಎಂದು ಬಿಂಬಿಸಿದರೂ ಹೆಚ್ಚು ಒಕ್ಕಲಿಗರ ಓಟು ಪಡೆಯಲಾಗಿಲ್ಲ; ಇಂದಿಗೂ ಒಕ್ಕಲಿಗರಿಗೆ ಡಿಕೆಶಿಗಿಂತ ದೇವೇಗೌಡ-ಕುಮಾರಸ್ವಾಮಿಯೇ ನೆಚ್ಚಿನ ನಾಯಕರು!! ಡಿಕೆಶಿಗೆ ಒಕ್ಕಲಿಗರ ವಿಶ್ವಾಸಾರ್ಹ ಮುಂದಾಳಾಗಿ ಹೊರಹೊಮ್ಮಲಾಗಿಲ್ಲ ಎಂಬುದು ವಾಸ್ತವ ರಾಜಕಾರಣ.


ಮುಸಲ್ಮಾರ ಮತದಿಂದ ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಾಯಕ ಮಣಿಗಳು ಆ ಸಮುದಾಯಕ್ಕೆ ಕೊಟ್ಟಿದ್ದೇನು? ಸರಿಸುಮಾರು ಒಂದು ಕೋಟಿ ಜನಸಂಖ್ಯೆಯ ಮುಸಲ್ಮಾನರು 20 ಅಸೆಂಬ್ಲಿ ಕ್ಷೇತ್ರಗಳಲ್ಲಿ ಗೆಲ್ಲುವ, 50 ಕ್ಷೇತ್ರಗಳಲ್ಲಿ ಪೈಪೋಟಿ ಕೊಡುವ ಶಕ್ತಿ ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಕಳೆದ ಬಾರಿ ಎಲೆಕ್ಷನ್‌ನಲ್ಲಿ ಮುಸಲ್ಮಾನರಿಗೆ ಟಿಕೆಟ್ ಕೊಟ್ಟಿದ್ದು ಕೇವಲ 15 ಕ್ಷೇತ್ರದಲ್ಲಿ ಮಾತ್ರ. ಇದರಲ್ಲಿ ಗೆದ್ದವರು 9 ಮಂದಿ. ಶಾಸಕರಾದವರ ಪೈಕಿ ಯು.ಟಿ.ಖಾದರ್ ವಿಧಾನಸಭೆಯ ಸ್ಪೀಕರ್ ಸ್ಥಾನ ಪಡೆದರೆ, ಜಮೀರ್ ಅಹಮದ್ ಮತ್ತು ರಹೀಮ್ ಖಾನ್ ಮಂತ್ರಿಗಳಾದರು, ನಜೀರ್ ಅಹಮದ್ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದರೆ, ಹ್ಯಾರೀಸ್ ಬಿಡಿಎ ಚೇರ್ಮನ್ ಆದರು; ಎಮ್ಮೆಲ್ಸಿ ಸಲೀಮ್ ಅಹಮದ್‌ರನ್ನು ಪರಿಷತ್‌ನಲ್ಲಿ ಆಡಳಿತ ಪಕ್ಷ ಮುಖ್ಯ ಸಚೇತಕ ಹುದ್ದೆ ಕೊಡಲಾಯಿತು. ಈಗ ಒಬ್ಬೊಬ್ಬರದೇ ಸ್ಥಾನ ಕಸಿದು ಮಾನ ಕಳೆಯಲಾಗುತ್ತಿದೆ. ನಂಬಿ ಬೆಂಬಲಿಸಿದ್ದ ಕಾಂಗ್ರೆಸ್ ಯಜಮಾನರ ಮನೆ ಮುರುಕ ರಾಜಕಾರಣದಿಂದ ಮುಸಲ್ಮಾನರೀಗ ದಿಗ್ಭ್ರಾಂತರಾಗಿದ್ದಾರೆ; ಸಿದ್ದು ಆದಿಯಾಗಿ ಕಾಂಗ್ರೆಸ್‌ನ ಯಾವ ಪ್ರಮುಖ ನಾಯಕನನ್ನೂ ನಂಬದ ಗೊಂದಲಕ್ಕೆ ಸಿಲುಕಿದ್ದಾರೆ. ಆಗಿರುವ ಅಚಾತುರ್ಯ ಸರಿಪಡಿಸಿಕೊಂಡು ಖರ್ಗೆ-ಸಿದ್ದು-ಡಿಕೆಶಿ ಮುಸಲ್ಮಾನರ ವಿಶ್ವಾಸಗಳಿಸದಿದ್ದರೆ ಉತ್ತರ ಭಾರತದಲ್ಲಿ ಬಂದಿರುವ ದುಸ್ಥಿತಯೇ ಕರ್ನಾಟಕದಲ್ಲೂ ಖಾತ್ರಿಯೆಂದು ಜನರಾಡಿಕೊಳ್ಳುತ್ತಿದ್ದಾರೆ.

ಒಂದಂತೂ ಪಕ್ಕಾ; ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನೆಪದಲ್ಲಿ ಕಾಂಗ್ರೆಸ್ಸ್‌ನಲ್ಲಿ ಭುಗಿಲೆದ್ದ ದಂಗಲ್ ಕಾಂಗ್ರೆಸ್ ಘಟಾನುಘಟಿಗಳಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರಂಥವರ ಸೋಗಲಾಡಿ ಸೆಕ್ಯುಲರ್ ರಾಜಕಾರಣದ ಬಣ್ಣ ಬಯಲಾಗಿಸಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್‌ನ ಸೋಲು-ಗೆಲುವು ಈಗ ಮುಖ್ಯವಾಗಿ ಉಳಿದಿಲ್ಲ. ಕೋಮುವಾದದ ಈ ವಿಷಮ ಸಂದರ್ಭದಲ್ಲಿ ತನ್ನದೇ ಘೋಷಿತ ಸಿದ್ಧಾಂತದ ಬದ್ಧತೆ ತೋರಿಸಲಾಗದ ಕಾಂಗ್ರೆಸ್‌ನ ವಿಫಲ ಸೋಷಿಯಲ್ ಇಂಜಿನಿಯರಿಂಗ್ ರಾಜಕಾರಣವಂತೂ ಮಕಾಡೆ ಮಲಗಿಬಿಟ್ಟಿದೆ! ಸಮಾಜದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣಕ್ಕೆ ಕಡಿವಾಣಹಾಕಿ ಬಹುಮತ ಕಟ್ಟಿಕೊಳ್ಳುವ ಪ್ರಶಸ್ತ ಅವಕಾಶವನ್ನೇ ಕೈ ಚೆಲ್ಲುತ್ತ ಕಾಂಗ್ರೆಸ್ ಮುಗ್ಗರಿಸುತ್ತಿದೆ!!

ಸಮಾಜ ಮತ್ತು ರಾಜಕಾರಣದಲ್ಲಿ ಘೋಷಿತ ಕ್ರೂರ ಕೋಮುವಾದಿ ಸಿದ್ಧಾಂತದಿಂದ ಮುಸಲ್ಮಾನ್ ಸಮುದಾಯವನ್ನು ಸತತ ದಾಳಿಗೀಡಾಗಿಸಿ ಹೈರಾಣಾಗಿಸಿ ಎರಡನೇ ದರ್ಜೆ ಪ್ರಜೆಗಳಾಗಿಸುವ ಕಾರ್ಯಾಚರಣೆ ಯಶಸ್ವಿಯಾಗಿ ಬಿಜೆಪಿ-ಸಂಘ ಪರಿವಾರ ಮಾಡುತ್ತಿದೆ. ಈ ಸಮುದಾಯದ ಅಖಂಡ-ಪ್ರಚಂಡ ಬೆಂಬಲ ಪಡೆದ ಕಾಂಗ್ರೆಸ್ ಬಳಿ ಕೋಮುವಾದಕ್ಕೆ ಪ್ರತ್ಯಸ್ತ್ರ ಇಲ್ಲದಾಗಿದೆ; ಮುಸಲ್ಮಾನ್ ಸಮುದಾಯಕ್ಕೆ ಸಾಮಾಜಿಕ-ರಾಜಕೀಯ ನ್ಯಾಯ ಒದಗಿಸಿ ಸಮೂಹ ನೆಲೆಯನ್ನು ರಕ್ಷಿಸುವ ಇಚ್ಚಾಶಕ್ತಿಯೂ ಕಾಂಗ್ರೆಸ್ ನಾಯಕಾಗ್ರೇಸರೆಂದುಕೊಂಡವರಿಗೆ ಇಲ್ಲ! ಮೇಲ್ವರ್ಗದ ಬಲಾಢ್ಯರನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲದ ಕಾಂಗ್ರೆಸ್ ನಾಯಕರು ಸಾಂಪ್ರದಾಯಿಕ ರಾಜಕಾರಣದ ಗುಂಗಿನಲ್ಲೇ ಗಿರಕಿ ಹೊಡೆಯುತ್ತಿದ್ದಾರೆ. ಇದೆಲ್ಲದರಿಂದ ಮುಸಲ್ಮಾನ್ ಸಮುದಾಯ ಅನ್ಯಾಯ-ದೌರ್ಜನ್ಯ ಎದುರಿಸುವಂತಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ. ದಂಡ

ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಸಾಲು ಸಾಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಣಿ ಮತ್ತು...

ಪಶ್ಚಿಮ ಬಂಗಾಳ SIR: 38 ಲಕ್ಷ ಮೇಲ್ಮನವಿಗಳಲ್ಲಿ ವಿಲೇವಾರಿಯಾಗಿದ್ದು ಕೇವಲ 1 ಲಕ್ಷ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೃಹತ್ ಪ್ರಮಾಣದ ಮೇಲ್ಮನವಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ತೀರಾ ಕನಿಷ್ಠ ಮಟ್ಟದಲ್ಲಿದೆ ಎಂಬ ಆಘಾತಕಾರಿ ಮಾಹಿತಿ...