ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ ಜನರನ್ನು ಒಕ್ಕಲೆಬ್ಬಿಸಬೇಕು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಹೆಸರಲ್ಲಿ ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ರಚಿಸಲಾಗುತ್ತಿದೆ. ಆದರೆ ಪ್ರಾಣಿ ಸಂಖ್ಯೆ ಹೆಚ್ಚುತ್ತಿದೆ ಎಂದು ಜನವಸತಿ ಕಡಿಮೆ ಮಾಡುವುದು ಪರಿಹಾರವೇ?
24-25ರಲ್ಲಿ ಆನೆದಾಳಿಯಿಂದ ರಾಜ್ಯದಲ್ಲಿ 48 ಜನ ಬಡರೈತರು, ಕೂಲಿ ಕಾರ್ಮಿಕರು ಬಲಿಯಾಗಿದ್ದಾರೆ. ಆನೆಗಳ ವಾಸಸ್ಥಾನವಲ್ಲದ ಮಲೆನಾಡಿನ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಒಂದು ವರ್ಷದಲ್ಲಿ ಹತ್ತು ಜನ ಬಡಪಾಯಿಗಳ ಮಾರಣಹೋಮವಾಗಿದೆ. ಇದು ಪರಿಸರ ದೃಷ್ಟಿಯಿಂದಲೂ ಭವಿಷ್ಯದಲ್ಲಿ ಭೀಕರ ಸಮಸ್ಯೆ ಆನೆಗಳನ್ನು ಹಿಡಿಯುವುದರಿಂದ ಆನೆದಾಳಿಗೆ ಒಳಗಾದ ಬಲಿಪಶುಗಳ ಕುಟುಂಬಕ್ಕೆ ಪರಿಹಾರ ಕೊಟ್ಟು ಫೋಸು ಕೊಡುವುದರಿಂದ ಆನೆ ಸಮಸ್ಯೆಯಿಂದ ಶಾಶ್ವತ ಪರಿಹಾರ ಸಾಧ್ಯವಾಗದು.
ಆನೆಗಳು ದುಪ್ಪಟ್ಟಾಗಲು ಏನು ಕಾರಣ, ಯಾವುದೇ ಪ್ರಾಣಿ ಸಮೃದ್ಧ ಆಹಾರ ರಕ್ಷಣೆ ಇಲ್ಲದೆ ವಂಶಾಭಿವೃದ್ಧಿ ಮಾಡುವುದಿಲ್ಲ. ಹಾಗಾದರೆ ಆನೆ ಹೆಚ್ಚಾಗಲು ಅವೈಜ್ಞಾನಿಕ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಕಾರಣವೆ? ಅಥವಾ ಮಲೆನಾಡ ರೈತರು ಕಾಡು ಒತ್ತುವರಿ ಮಾಡಿರುವುದೇ? ಈ ಪ್ರಶ್ನೆಗೆ ಒಂದನೆ ಪ್ರಶ್ನೆಯಲ್ಲಿ ಹೆಚ್ಚು ಉತ್ತರವಿದೆ.
ಆನೆಗಳು ಹೆಚ್ಚಾಗಲು ಹಲವು ಕಾರಣಗಳಿವೆ. ಆನೆ ಮಲೆನಾಡಿನ ಎಲ್ಲಾ ಪ್ರದೇಶಗಳಲ್ಲೂ ಇರುವ ಪ್ರಾಣಿಯಲ್ಲ. ಮಲೆನಾಡು ಎಂದರೆ ಮಳೆ, ಮುಂಗಾರು, ಮಳೆ ಸುರಿಯುವ ಪ್ರದೇಶವನ್ನು ಮಲೆನಾಡು ಎನ್ನುತ್ತೇವೆ. ಮಲೆನಾಡಿನಲ್ಲಿ ಮುಂಗಾರು ಮಳೆ ಏಕ ಪ್ರಕಾರವಾಗಿ ಎಲ್ಲಾ ಕಡೆ ಒಂದೆರೀತಿ ಸುರಿಯುವುದಿಲ್ಲ. ಮುಂಗಾರು ಮಳೆ 500 ರಿಂದ 400ರಷ್ಟು ಇಂದಿಗೂ ಹೆಚ್ಚು ಸುರಿಯುವ ಪ್ರಮಾಣಕ್ಕೆ ಅನುಗುಣವಾಗಿ ಮಲೆನಾಡನ್ನು ಘಟ್ಟ ಮಲೆನಾಡು, ದಟ್ಟ ಮಲೆನಾಡು, ಮಟ್ಟ ಮಲೆನಾಡು ಅಂದರೆ 50”-100”, 100ರಿಂದ 150″, 150 ರಿಂದ 400- ಹೀಗೆ ಐವತ್ತರಿಂದ 400 ಇಂಚು ವಾರ್ಷಿಕ ಮುಂಗಾರು ಮಳೆ ಬೀಳುತ್ತದೆ. ವೈಚಿತ್ರವೆಂದರೆ ಘಟ್ಟ ಮಲೆನಾಡಿನ ಯಾವೊಂದು ಪ್ರಾಣಿ, ಸಸ್ಯ, ಪಕ್ಷಿ ಐವತ್ತು ಇಂಚು ಮಳೆಯಾಗುವ ಪ್ರದೇಶದಲ್ಲಿ ಕಂಡುಬರುವುದಿಲ್ಲ. ಐವತ್ತು ಇಂಚು ಮಳೆಯ ಪ್ರದೇಶದ ಪ್ರಾಣಿ, ಪಕ್ಷಿ, ಸಸ್ಯಗಳು ಘಟ್ಟ ಮಲೆನಾಡಿನಲ್ಲಿ ಬದುಕುಳಿಯುವುದಿಲ್ಲ. ಇದು ನಿಸರ್ಗ ನಿಯಮ. ವಿಶೇಷವೆಂದರೆ ಐವತ್ತರಿಂದ 100-120 ಇಂಚು ಮಳೆ ಸುರಿಯುವ ಆರೆ ಎಲೆ ಉದುರುವ ಮಟ್ಟ ಮಲೆನಾಡೆ. ಮಲೆನಾಡಿನ ಜೀವವೈವಿಧ್ಯ ಸಮೃದ್ಧ. ಮಟ್ಟ ಮಲೆನಾಡಿನಲ್ಲಿ ಮಾತ್ರ ಹುಲಿ, ಜಿಂಕೆಯಿಂದ ಹಿಡಿದು ಆನೆಗಳ ವಾಸಸ್ಥಾನ. ಆನೆಗಳಿಗೂ ಜಿಂಕೆಗಳಿಗೂ ಬದುಕಿನಲ್ಲಿ ಒಂದು ಸಾಮ್ಯತೆ ಇದೆ. ಎಲ್ಲಿ ಆನೆಗಳು ಇರುತ್ತವೂ ಅಲ್ಲಿ ಹುಲಿಯೂ ಇರುತ್ತದೆ ಕಾರಣ ಹುಲಿಯ ಪ್ರಮುಖ ಆಹಾರ ಜಿಂಕೆ. ಜಿಂಕೆಗಳ ವಾಸಸ್ಥಾನವೆ ಹುಲಿಯ ವಾಸಸ್ಥಾನ. ಜಿಂಕೆಗಳು ಕಡಿದಾದ ಪ್ರದೇಶದಲ್ಲಿ ಇರುವುದಿಲ್ಲ. ಜಿಂಕೆಗಳು ಏಕೈಕ ರಕ್ಷಣೆ ಓಡಿ ತಪ್ಪಿಸಿಕೊಳ್ಳುವುದು. ಅವುಗಳು 10-20 ಅಡಿ ನೆಗೆಯುತ್ತವೆ. ಕಡಿದಾದ ಪ್ರದೇಶದಲ್ಲಿ ಹಾರಿದರೆ ಮುಗ್ಗರಿಸಿಬಿಳುತ್ತವೆ. ಹಾಗೆಯೆ ಆನೆಗಳು ಎಷ್ಟೇ ಕಡಿದಾದ ಬೆಟ್ಟವಾದರೂ ಹತ್ತುತ್ತವೆ, ಇಳಿಯಲು ಅವಕ್ಕೆ ಬರುವುದಿಲ್ಲ. ಮಂಡಿಯಲ್ಲಿ ಜಾರಬೇಕು. ಕಡಿದಾಗಿದ್ದರೆ ಮುಗ್ಗರಿಸಿ ಬೀಳುತ್ತವೆ. ಹಾಗಾಗಿ ಆನೆ ಜಿಂಕೆಯಂಥ ಪ್ರಾಣಿಗಳು ಮಟ್ಟ ಮಲೆನಾಡಿನ ಇಳಿಜಾರು ಬಯಲು ಪ್ರದೇಶದಲ್ಲಿ ಬದುಕುತ್ತವೆ.
ಆನೆಗಳಾಗಲಿ, ಜಿಂಕೆಗಳಾಗಲಿ, ಹುಲಿಯೇ ಆಗಲಿ 150 ರಿಂದ 400 ಇಂಚು ಮಳೆ ಸುರಿಯುವ ದಟ್ಟ ಮತ್ತು ಘಟ್ಟ ಮಲೆನಾಡಿನಲ್ಲಿ ವಾಸ್ತವ್ಯ ಸಾಧ್ಯವಿಲ್ಲ. ಅಂತಹದ್ದರಲ್ಲಿ ಘಟ್ಟ ಪ್ರದೇಶ 250 ರಿಂದ 400 ಇಂಚು ಮಳೆಯ ಪ್ರದೇಶಕ್ಕೆ ಬಂದಿವೆ ಎಂದರೆ ಅದು ಪರಿಸರದಲ್ಲಿ ಏನೋ ಗಂಭೀರ ವೈಪರೀತ್ಯ ಸಂಭವಿಸುತ್ತಿದೆ ಎಂದೇ ಅರ್ಥ. ಕೋಗಿಲೆಯೊಂದು ಕುದುರೆಮುಖ ಉದ್ಯಾನದಲ್ಲಿ ಉಳಿದರೆ, ಸಿಂಗಳೀಕ ಪೇಟೆಗೆ ಬಂದರೆ, ಗಂಗಾ ಮೂಲದಲ್ಲಿ ಗಂಧದ ಗಿಡ ಬೆಳೆಯುತ್ತೆ ಎಂದರೆ ಅದು ಪರಿಸರ ವೈಪರಿತ್ಯ.

ಆನೆಗಳ ಸ್ವಭಾವದ ಬಗ್ಗೆ ನೋಡೊಣ. ಆನೆಗಳು ಸಂಘಜೀವಿಗಳು ಮನುಷ್ಯರಿಗೂ ಆನೆಗೂ ವಂಶಾವಳಿಯಲ್ಲಿ ಒಂದು ಕೋಟಿ ವರ್ಷಕ್ಕೂ ಹೆಚ್ಚಿನ ವ್ಯತ್ಯಾಸ, ಆದರೆ ಆನೆಗೂ ಮನುಷ್ಯನಿಗೂ ಒಂದು ಜೀನ್ ಸಾಮಾನ್ಯವಾಗಿದೆ ಮನುಷ್ಯರಂತೆ ಆನೆಯು ಸಂಘಜೀವಿ. ಆನೆಯಲ್ಲಿ ಅಜ್ಜಿ ಆನೆಯ ಗುಂಪಿನ ನೇತೃತ್ವ ವಹಿಸುವುದು ಅದಕ್ಕಿಂತ ಆನೆಯ ಮರಿಗಳ ಆರೈಕೆ ಯೋಗಕ್ಷೇಮ ಅಜ್ಜಿಯದೆ. ಮನುಷ್ಯರಂತೆ ಆನೆಗಳ ಕೂಟದಲ್ಲಿ ಅಜ್ಜಿ ಮೊಮ್ಮಗಳ ಸಂಬಂಧ ವಂಶವಾಹಿನಿಯಿಂದ ಬಂದದ್ದು. ಆನೆಗಳು ದೈತ್ಯ ಜೀವಿಗಳು. ಅವುಗಳಿಗೆ ಸಂಮೃದ್ಧ ಆಹಾರ ನೀಡಬೇಕು. ಒಂದು ಆರೋಗ್ಯವಂತ ಆನೆ 800 ಕೆಜಿಯಷ್ಟು ಆಹಾರ ದಿನ ಒಂದಕ್ಕೆ ಮೇಯುತ್ತದೆ. ದಿನ 200ಲೀ ನೀರು ಬೇಕು. (ಇತ್ತೀಚಿನ ಸಂಶೋಧನೆ ಪ್ರಕಾರ ಆನೆಗಳು ಬೇರೆಬೇರೆ ಆಹಾರ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತವೆ ಎಂದು ತಿಳಿದುಬಂದಿದೆ) ಆದರೂ ಆನೆ ಬದುಕಲು ಸಂಮೃದ್ಧ ಪ್ರದೇಶ ಬೇಕು. ಆನೆಗಳೇಕೆ ಅವುಗಳ ಸಾಂಪ್ರದಾಯಿಕ ಪ್ರದೇಶದಿಂದ ಹೊರಗೆ ಬರುತ್ತವೆ. ಹಿಂದೆಂದೂ ಕಾಣದ ಜಾಗಕ್ಕೆ ಪ್ರವೇಶ ಮಾಡುತ್ತಿವೆ.
ಆನೆ ತಮ್ಮದಲ್ಲದ ಪ್ರದೇಶಕ್ಕೆ ಹೋಗಲು ಹಲವು ಕಾರಣಗಳಿವೆ. ಅದಕ್ಕೆ ಸಂರಕ್ಷಣೆಯ ಕಾರಣವೊಂದಿದೆ. ಆನೆಗಳ ದೊಡ್ಡ ಆವಾಸಸ್ಥಾನದ ನಾಶ. ಆನೆಗಳು ಮಟ್ಟ ಮಲೆನಾಡಿನ ಜೀವನದಿಗಳ ದೊಡ್ಡ ಪಾತ್ರ ಅಂದರೆ ಘಟ್ಟದಲ್ಲಿ ಹುಟ್ಟುವ ಜಲತೊರೆಗಳು ದಟ್ಟ ಮಲೆನಾಡಿನಲ್ಲಿ ಹೊಳೆಹೊಳೆಯಾಗಿ ಮಟ್ಟ ಮಲೆನಾಡಿನಲ್ಲಿ ಹೊಳೆಹೊಳೆಗಳು ಕೂಡಿ ಹೆಬ್ಬೊಳೆಯಾಗುತ್ತವೆ. ಅಂಥ ಸಮೃದ್ದ ನೀರಾವರಿ ಪ್ರದೇಶ ಬೇಕು. ಅಂತಹ ನೀರಾವರಿ ಅಚ್ಚುಕಟ್ಟುಗಳನ್ನು ಅಂಶಿ ಕಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ಮುಚ್ಚಿಹಾಕಲಾಗಿದೆ. ಹಾರಂಗಿ, ಮೆಟ್ಟೂರು, ಲಕ್ಕವಳ್ಳಿಯ ಭದ್ರಾ ಇತ್ಯಾದಿ. ಹೇಮಾವತಿ ನದಿಯ ಹಾರಂಗಿ, ಕಬ್ಬಿನಾಲೆ, ಕಬಿನಿ ಅಭಯಾರಣ್ಯ ಪ್ರದೇಶಗಳು ಆನೆಯ ದೊಡ್ಡ ವಾಸಸ್ಥಾನ ಆವಾಸವಾಗಿತ್ತು. ಅಂಶಿ ಕಟ್ಟೆಯಿಂದ ಆನೆಗಳ ಮನೆ ನಾಶವಾಯಿತು. ಆನೆಗಳಲ್ಲಿ 10-50 ಒಂದೊಂದು ಗುಂಪಿನಲ್ಲಿ ಬದುಕುತ್ತವೆ. ಒಂದು ಗುಂಪು ಮತ್ತೊಂದನ್ನು ಸೇರುವುದಿಲ್ಲ. ಹೇಮಾವತಿ ನೀರಾವರಿಯಿಂದ ಅನೇಕ ಆನೆ ಗುಂಪುಗಳ ಮನೆ ನಾಶವಾಗಿ ನೆಲೆ ಇಲ್ಲವಾಯಿತು. ಅಂಥ ನೆಲೆ ಕಳೆದುಕೊಂಡ ಮನೆಯಿಲ್ಲದ ಆನೆಗಳಿಗೆ ಮತ್ತೇ ಶಾಶ್ವತ ಮನೆ ದಕ್ಕಲಿಲ್ಲ. ಮನೆ ಇಲ್ಲದ ಆನೆಗಳು ಅಲ್ಲದೆ 1972 ವನ್ಯಜೀವಿ ಸಂರಕ್ಷಣೆ ಕಾಯ್ದೆಯಂತೆ 80ರಲ್ಲಿ ಮರದ ದಿಮ್ಮು ಭಾರವಾದ ವಸ್ತುಗಳನ್ನು ಎಳೆಯಲು (ಈಗಿನ JCBಗೆ) ಬಳಸುತ್ತಿದ್ದ, ಖಾಸಗಿಯವರಲ್ಲಿದ್ದ ನೂರಾರು ಆನೆಗಳು ಮಠ, ದೇವಸ್ಥಾನ ಮತ್ತು ರಾಜರ ಆಶ್ರಯದಲ್ಲಿದ್ದ ಹೆಚ್ಚುವರಿ ನೂರಾರು ಆನೆಗಳು, ಸರ್ಕಸ್ ಕಂಪನಿಯವರ ಆನೆಗಳು ಎಲ್ಲವನ್ನು ವಶಪಡಿಸಿಕೊಂಡು ಅರಣ್ಯ ಇಲಾಖೆ ಕಾಡಿಗೆ ಬಿಟ್ಟಿತು. ಇವರು ಮಾಡಿದ ಅವೈಜ್ಞಾನಿಕ ಕಾರ್ಯದಿಂದ ಈ ಎರಡು ಮನುಷ್ಯರ ಅಕ್ರಮಗಳಿಂದ ಆನೆ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಅದರಲ್ಲೂ ಮನುಷ್ಯರ ಆಹಾರ ಸಂಸ್ಕೃತಿಯ ಆವಾಸವಾಗಿದ್ದ ಊರು, ಆನೆಗಳು ಈ ಊರು ಆನೆಗಳನ್ನು ಕಾಡು ಆನೆಗಳು ಯಾವ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ. ಈ ಊರು ಆನೆಗಳಿಂದಲೇ ಇಂದು ಸಮಸ್ಯೆ ತೀವ್ರವಾಗಿರುವುದು. ಈ ಊರ ಆನೆಗಳು ಅಂಚಿನಲ್ಲೆ ಬದುಕಿ ಊರಿಗೆ ದಾಳಿ ಇಡುತ್ತಿವೆ.
ಮಲೆನಾಡಿನಲ್ಲಿ ಒತ್ತುವರಿಯಿಂದ ಕಾಡು ನಾಶವಾಗಿದೆ. ಆನೆಗಳ ಓಡಾಡುವ ಪ್ರದೇಶ ಸಂಕುಚಿತಗೊಂಡಿದೆ. ಇದು ಅರ್ಧ ಸತ್ಯ. ಇನ್ನು ಮನುಷ್ಯರ ದುರಾಸೆಯಿಂದ ಮಲೆನಾಡ ಪರಿಸರ ನಾಶವಾಗಿದೆ ಎಂಬ ಕೆಲವು “ಇಂಗ್ಲಿಷ್ ಮೀಡಿಯಂ” ಪರಿಸರವಾದಿಗಳ ಅರಣ್ಯ ಅಧಿಕಾರಿಗಳ ವಾದವಿದೆ.
ಮಲೆನಾಡಿನಲ್ಲಿ ಶಿಲಾಯುಗದ ಕಾಲದಿಂದಲೂ ಅಂದರೆ ಹತ್ತು ಸಾವಿರ ವರ್ಷಕ್ಕಿಂತಲೂ ಪೂರ್ವದ ಪ್ರಾಚೀನ ಯುಗದಿಂದ ಜನ ಬದುಕಿದ್ದಾರೆ, ಮನುಷ್ಯರು ಪ್ರಾಣಿಗಳನ್ನು ಎದುರಿಸುತ್ತಾ ಬಂದಿದ್ದಾರೆ. ಪ್ರಾಣಿಗಳ ಸಂತತಿ ನಾಶವಾಗಬೇಕಿತ್ತು, ಇಲ್ಲವೆ ಪ್ರಾಣಿಗಳಿಂದ ಇಂದಿನ ರೀತಿಯಲ್ಲಿ ದಾಳಿಯಾಗುತ್ತ ಬಂದಿದ್ದರೆ ಮನುಷ್ಯರೆ ನಾಶವಾಗಬೇಕಿತ್ತು ಅಥವಾ ಪರ್ಯಾಯ ಜಾಗ ಹುಡುಕಬೇಕಿತ್ತು. ಮಲೆನಾಡಿನ ಪ್ರಾಚೀನ ವಾಸ್ತು ಚರಿತ್ರೆಯನ್ನು ನೋಡಿದರೆ ಮನುಷ್ಯರ ಆವಾಸಸ್ಥಾನ ಘಟ್ಟ ಮಲೆನಾಡು, ದಟ್ಟ ಮಲೆನಾಡಿಗಿಂತ ಮಟ್ಟ ಮಲೆನಾಡಿನ 50 ರಿಂದ 120 ಇಂಚು ಮಳೆ ಬೀಳುವ ಆನೆ, ಹುಲಿ, ಜಿಂಕೆ ವಾಸ ಮಾಡುವ ಮಟ್ಟ ಮಲೆನಾಡು ಆಗಿದೆ.
ಮಲೆನಾಡಿನ ಪರಿಸರಸ್ನೇಹಿ ಉನ್ನತ ಸಂಸ್ಕೃತಿಯೊಂದಕ್ಕೆ ಒಂದು ನಿದರ್ಶನ ಮಲೆನಾಡೆಂದರೆ ಕಾಡು ನಾನಾರೀತಿಯ ವಿವಿಧ ಹಾವುಗಳು ಸ್ವಾಭಾವಿಕವಾಗಿ ಹೆಚ್ಚಾಗಿರುತ್ತವೆ. ಮನುಷ್ಯರ ಸಂಖ್ಯೆಯ ವಿರಳ ಕರ್ನಾಟಕ ರಾಜ್ಯದ ಹಾವುಕಚ್ಚಿದ ಪ್ರಕರಣಗಳ ಅಂಕಿಅಂಶ ನೋಡಿದರೆ ಕಾಡು ಕಡಿಮೆ ಇರುವ ಬಯಲುಸೀಮೆ ಗುಲ್ಬರ್ಗ, ಬಿದರ್, ರಾಯಚೂರು ಇತ್ಯಾದಿ.. ಅದೇಕೆ ಹಾಗೆ?
ಮಲೆನಾಡಿನಲ್ಲಿ ವಾಸ ಮಾಡುವ ಹಾವಾಗಲಿ, ಹುಲಿಯಾಗಲಿ, ಆನೆಯೇ ಆಗಲಿ ವೈವಿಧ್ಯ ಜೀವಿಗಳ ಭಂಡಾರವೇ ಆಗಿರುವ ಮಲೆನಾಡಿನಲ್ಲಿ ಬದುಕುವ ರೈತಾಪಿ ಜನರಿಗೂ ಇಲ್ಲಿ ಬದುಕುವ ಪ್ರತಿಯೊಂದು ಜೀವಿಗೂ ಒಂದು ಒಪ್ಪಂದವಿದೆ. ಅದು ಉಪಾಯದಲ್ಲಿ ಬದುಕುವುದು, ವಿನಾಕಾರಣ ಯಾರನ್ನು ಯಾರು ಎದುರಿಸುವುದಿಲ್ಲ. ಉದಾಹರಣೆ- ಪ್ರಪಂಚದಲ್ಲೆ ಅತಿ ಉದ್ದ ಮತ್ತು ವಿಶಿಷ್ಟ ಹೆಸರು ವಾಸಿಯಾದ ಕಾಳಿಂಗ ಹಾವು ಇದೆ. ಆದರೆ ಕಾಳಿಂಗ ಹಾವು ಕಚ್ಚಿ ಸತ್ತ ಪ್ರಕರಣಗಳಿಲ್ಲ. ಕಾಳಿಂಗ ಹಾವೇ ಆಗಲಿ, ಹುಲಿಯೆ ಆಗಲಿ ಮನುಷ್ಯ ಬದುಕುತ್ತಿದ್ದಾನೆ ಎಂದರೆ ಅವನ ದಾರಿ ಬಿಡುತ್ತವೆ. ಕಾಡಲ್ಲಿ ಹೋಗುವ ಮನುಷ್ಯ ಹಾವನ್ನು, ಹುಲಿಯನ್ನು ನೋಡಿದರೆ ಬೇರೆ ದಾರಿ ಹಿಡಿಯುತ್ತಾನೆ. ಒಟ್ಟಿನಲ್ಲಿ ಯಾರು ಮೊದಲು ನೋಡುತ್ತಾರೊ ಅವರು ದಾರಿ ಬಿಡುತ್ತಾರೆ. ಹಾಗೆ ಮಲೆನಾಡಿನಲ್ಲಿ ಹುಲಿ, ಚಿರತೆ ಇವೆ. ಎಷ್ಟು ಜನ ಹುಲಿ, ಚಿರತೆಯನ್ನು ನೋಡಿದ್ದಾರೆ ಎಂದರೆ ಅಪರೂಪಕ್ಕೆ ಯಾರೋ ಪುಣ್ಯವಂತ, ಹುಲಿ ಕೂಗಿದ್ದು ಎಲ್ಲರು ಕೇಳಿರುತ್ತಾರೆ. ಆದರೆ ಹುಲಿ ಕಂಡವರು ಇಲ್ಲ. ಪ್ರಾಣಿಗಳಿಗೆ ವಾಸನೆಗ್ರಹಿಕೆ ಇರುತ್ತದೆ. ಆನೆಗಳು ಆಕಸ್ಮಾತ್ ನೋಡಿದರೆ ಕಲ್ಲಾಗುತ್ತವೆ ಸುಮ್ಮನೆ ನೋಡಿದರೆ ನಿಶ್ಚಲವಾಗಿ ಬಂಡೆಯಂತೆ ನಿಲ್ಲುವ ಸ್ವಭಾವ ಇದೆ.
ಮಲೆನಾಡಿನ ಅವಘಡಗಳಿಗೆಲ್ಲ ಮಲೆನಾಡಿಗರನ್ನೆ ಹೊಣೆ ಮಾಡುವ ಕೆಟ್ಟ ಚಾಳಿಯೊಂದು ನಗರವಾಸಿ ಪರಿಸರವಾದಿಗಳು ಮತ್ತು ಅವರ ಕೃಪಾಪೋಷಿತ ಅರಣ್ಯ ಅಧಿಕಾರಿಗಳಿಗಿದೆ. ನಮ್ಮ ಅರಣ್ಯ ಸಂರಕ್ಷಣೆ ನಿಯಮ ಹೇಗಿದೆ ಎಂದರೆ ಗಿಳಿ ಸಾಕಿದವನನ್ನು ಜೈಲಿಗೆ ಹಾಕಿದ್ದಾರೆ (ಚಿಕ್ಕಮಗಳೂರು ಪ್ರಕರಣ) ಗಿಳಿ, ಮಂಗ, ಕರಡಿ, ಮುಂಗುಸಿ, ಹಾವು ಆಡಿಸಿ ಜೀವನ ಸಾಗಿಸುತ್ತಿದ್ದ ಅನೇಕ ಬುಡಕಟ್ಟುಗಳಿವೆ. ಅದನ್ನೆಲ್ಲಾ ನಿಷೇಧಿಸಿ ಬೀದಿಗೆ ತಳ್ಳಲಾಗಿದೆ. ನೆಲದ ಮೇಲಿನ ಅತಿದೊಡ್ಡ ಸಸ್ತನಿ ಆನೆ. ಅಂಥ ದೈತ್ಯ ಪ್ರಾಣಿಯನ್ನು ಮಠಗಳಲ್ಲಿ ಸಾಕಿಕೊಂಡು ಜಗದ್ಗುರುಗಳು ವೈಭವಯುತ ಮೆರವಣಿಗೆ ಮಾಡುತ್ತಾರೆ. ಉಡುಪಿ ಮಠದ ಆನೆಗಳಿಗೆ ಅಲ್ಲಿನ ಸ್ವಾಮಿಗಳಿಗೆ ಹಿಮ್ಮುಖವಾಗಿ ನಡೆದು ತಲೆಯನ್ನು ಕುಣಿಸುವಂತೆ ಹಿಂಸೆ ಮಾಡಲಾಗುತ್ತದೆ. ದಸರಾ ಅಂಬಾರಿಗಳಿಗೆ ರಾಜಕಾರಣಿಗಳಿಗೆ ಸಲಾಮು ಹೊಡೆಯಲು ಆನೆ ಬಳಸಬಹುದು ಹಾವಾಡಿಸಿದರೆ ಜೀವಾವಧಿ ಶಿಕ್ಷೆ. ಮಲೆನಾಡಿಗರನ್ನು ಕಾಡು ನಾಶ ಮಾಡುವ ಒತ್ತುವರಿದಾರರು ಎಂದೇ ಸರ್ವೋಚ್ಚ ನ್ಯಾಯಾಲಯವು ಪ್ರತಿಪಾದಿಸಿದೆ. ಅಂಬಾನಿ, ಅದಾನಿಗೆ ಗಣಿಗಾರಿಕೆ, ವಿದ್ಯುಚ್ಛಕ್ತಿ ಕೇಂದ್ರ ಸರಕಾರದ ವಿವಿಧ ಯೋಜನೆಗಳಿಗೆ ಸಾವಿರಾರು ಎಕರೆ ರಕ್ಷಿತ ಅರಣ್ಯ ಡಿನೋಟಿಫೈ ಮಾಡಲಾಗುತ್ತದೆ.
ರಾಮದೇವ ಅವನ ಗೆಳೆಯ ವರ್ಮನಿಗೆ 10 ಸಾವಿರ ಎಕರೆ ಸಾಮ್ ಮತ್ತು ಔಷಧಿ ಗಿಡ ಬೆಳೆಸಲು ಅಸ್ಸಾಂ, ಛತ್ತೀಸಗಡ, ಮಣಿಪುರ ಈಶಾನ್ಯ ರಾಜ್ಯಗಳಲ್ಲಿ ಕೊಟ್ಟಿದ್ದರು. ಜೀವನ ಸಾಗಿಸಲು ಭೂಹೀನರು ಒಂದೆರಡು ಎಕರೆಗಳಷ್ಟನ್ನು ಒತ್ತುವರಿ ಮಾಡಿಕೊಂಡರೆ ಮಾತ್ರ ಅವರನ್ನು ಕ್ರಿಮಿನಲ್‌ಗಳನ್ನಾಗಿ ಮಾಡಿಕೊಳ್ಳಲಾಗ್ತಿದೆ. ಇದೊಂದು ವಿಪರ್ಯಾಸದ ಸಂಗತಿ ಹಾಗೂ ಸರ್ಕಾರಗಳ ಜನವಿರೋಧಿ ನೀತಿಗಳ ಅನಾವರಣ.
ಪರಿಹಾರವೇನು?
ರಾಜ್ಯ ಸರಕಾರ ಆನೆ ದಾಳಿ ನಿಯಂತ್ರಣಕ್ಕೆ ಟಾಸ್ಕ್‌ಪೊರ್ಸ್ ರಚಿಸಿದೆ. ಪರಿಹಾರ ಮಾತ್ರ ಹೆಚ್ಚಿಸಿದೆ. ತಡೆಬೇಲಿ ಮತ್ತು ವಿದ್ಯುತ್ ಬೇಲಿ ನಿರ್ಮಿಸುವ ಕೋಟ್ಯಾಂತರ ಯೋಜನೆ ಜಾರಿಯಾಗುತ್ತಿದೆ.
ಆನೆಗಳ ಸಮಸ್ಯೆ ಇಂದು ಮಲೆನಾಡಿಗೆ ಸೀಮಿತವಾಗಿಲ್ಲ ಅದು ಬೆಂಗಳೂರಿನ ಬನ್ನೇರುಘಟ್ಟ, ಚನ್ನಪಟ್ಟಣ, ಮಂಡ್ಯದಿಂದ ದಕ್ಷಿಣ ಕನ್ನಡದ ಪುತ್ತೂರಿನವರೆಗೂ ಬಡಪಾಯಿಗಳ ಬಲಿಯಾಗಿದೆ. ಮೇಲ್ಕಂಡ ಯೋಜನೆಗಳಿಂದ ಶಾಶ್ವತ ಪರಿಹಾರ ಸಾಧ್ಯವೆ?

ನಮ್ಮ ದೇಶದ ಆನೆಗಳನ್ನು ಏಷ್ಯಾದ ಆನೆಗಳು ಎನ್ನುತ್ತಾರೆ. ಇಲ್ಲಿ ಪಶ್ಚಿಮಘಟ್ಟದ ಮಲೆನಾಡು ಕೇರಳ, ಅಸ್ಸಾಂ ಮತ್ತು ಹಿಮಾಲಯದ ತಪ್ಪಲಲ್ಲಿ ಆನೆಗಳ ಸಂಖ್ಯೆ ಹೆಚ್ಚಿದೆ. ನಮ್ಮ ದೇಶಕ್ಕಿಂತ ಸಿಲೂನ್ ಆಫ್ರಿಕಾದ, ದಕ್ಷಿಣ ಆಫ್ರಿಕ, ಜಿಂಬಾಬ್ವೆ, ಕೀನ್ಯಾಗಳಲ್ಲಿ ಹೆಚ್ಚಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಆನೆಗಳಿವೆ. ಶ್ರೀಲಂಕಾ, ಕೀನ್ಯಾದಲ್ಲಿ ತಡೆಗೋಡೆಗಳನ್ನು ನಿರ್ಮಿಸಿ ಅದರಿಂದ ನೂರಾರು ಜನರನ್ನು ಕಳೆದುಕೊಂಡ ದಾರುಣ ಘಟನೆಗಳಿವೆ. ಕೀನ್ಯಾ ಸರಕಾರ ಆನೆಗಳನ್ನು ಕೊಂದು ಮಾಂಸ ತಿನ್ನಲು ಜನರಿಗೆ ಪ್ರಚೋದಿಸಿದೆ. ಆನೆಗಳ ಸಮಸ್ಯೆಗೆ ಸದ್ಯಕ್ಕೆ “ಅಂತರಾಷ್ಟ್ರೀಯ ಆನೆ ಉಳಿಸಿ” ಇಂಟರ್ನ್ಯಾಷನಲ್ ಸೇವ್ ಎಲಿಫೆಂಟ್ ಯೋಜನೆಯ ರೂಮ್ ಟು ರೋಮ ಕಾರ್ಯಕ್ರಮ ಯಶಸ್ವಿಯಾಗಿ ಆನೆ ದಾಳಿಯಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಅರ್ಧಕ್ಕೆ ಇಳಿದಿದೆ.
ಏನದು ರೂಮ್ ಟೂ ರೋಮ್ ಎಂದರೆ
ಆನೆಗಳ ಕಾರ್ಯ ವಾಸಸ್ಥಾನದಿಂದ ಹೊರಗೆಬರುವ ಬಿಡಾಡಿ ಆನೆಗಳನ್ನು ಪತ್ತೆಹಚ್ಚಿ ಅವುಗಳಿಗೆ ಆನೆ ವಾಸಸ್ಥಾನದಲ್ಲ ಒಂದಷ್ಟು ಪ್ರದೇಶವನ್ನು ಬೃಹತ್ ಬೇಲಿಯನ್ನು ನಿರ್ಮಿಸಿ ಅದರೊಳಗೆ ನಿರ್ಬಂಧಿಸುವುದು. ಅಲ್ಲೂ ಅವುಗಳಿಗೆ ಬೇಕಾದ ಆಹಾರ, ಸಂರಕ್ಷಣಾ ಕಾರ್ಯ ಮಾಡಲಾಗುತ್ತದೆ. ಈ ಕಾರ್ಯ ಯೋಜನೆಗಾಗಿ ಸರಕಾರಗಳು, ವ್ಯಕ್ತಿಗಳು ಮತ್ತು ಪ್ರಪಂಚದ ಯಾರಾದರೂ ದೇಣಿಗೆ ನೀಡಬಹುದು. 2010ರಲ್ಲೂ ದಕ್ಷಿಣ ಆಫ್ರಿಕಾದ ಹಲವು ದೇಶಗಳಲ್ಲಿ ಜಾರಿಗೆ ತಂದಿದ್ದು ಮೊದಲು 10 ಸಾವಿರ ಆನೆಗಳಿಂದ ಪ್ರಾರಂಭಿಸಿ ಈಗ ಅದು ವಿವಿಧ ಹತ್ತು ಕೇಂದ್ರಗಳಲ್ಲಿ ಒಂದು ಲಕ್ಷ ಆನೆಗಳನ್ನು ಸಂರಕ್ಷಿಸಲಾಗುತ್ತಿದೆ.
ಇನ್ನು ಅರಣ್ಯ ಮಂತ್ರಿಗಳು ಸಂತಾನ ಹರಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದು ಕೂಡ ಸಾಧುವೆ. ಯಾವುದೇ ಪ್ರಾಣಿಗಳಿಗಾಗಲಿ ನಿಯಂತ್ರಣವಿರಬೇಕು. ಆನೆಗಳು ಜನವಸತಿ ರೈತರ ಜಮೀನುಗಳಿಗೆ ದಾಳಿ ಮಾಡಿ ರುಚಿಕರ ಆಹಾರದ ರುಚಿ ಹತ್ತಿಸಿಕೊಂಡಿವೆ. ಆಯುಧಗಳಿಲ್ಲದ ಮನುಷ್ಯರ ಮೇಲಿನ ದಾಳಿ ಸಾಮಾನ್ಯವಾಗಿದೆ. ಎಲೆಟ್ರೀಕ್ ಬೇಲಿ ಮತ್ತೊಂದು ಅಪಾಯಕಾರಿ ಯೋಜನೆ ಕರೆಂಟು ಹೊಡೆಸಿಕೊಂಡ ಆನೆ ತಲೆ ಕೆಟ್ಟಂತೆ ಭಯದಿಂದ ವರ್ತಿಸುತ್ತದೆ.
ಇದಕ್ಕೆ ಇನ್ನೊಂದು ಕಾರಣ ರೈಲ್ವೆ ಹಳಿಯ ಬೇಲಿಯನ್ನು ಊರಿಗೆ ಬರದಂತೆ ತಡೆಯುವುದಲ್ಲ. ಕಾಡಿನಿಂದ ಹೊರಬರದಂತೆ ಕಾಡಿಗೆ ಬೇಲಿ ಮಾಡಬೇಕು.


