HomeಮುಖಪುಟNEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

- Advertisement -
- Advertisement -

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ.

ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್ ಮೇಘವಾಲ್, ಉತ್ತರ ಪ್ರದೇಶದ ಲಖಿಂಪುರ ಖೇರಿಯ 21 ವರ್ಷದ ರಿತಿಕ್ ಮಿಶ್ರಾ, ದೆಹಲಿಯ ಆಝಾದ್‌ಪುರದ 20 ವರ್ಷದ ಅನ್ಶಿಕಾ ಮತ್ತು ಗೋವಾದ 17 ವರ್ಷದ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೇ 3, 2026 ಭಾನುವಾರ ದೇಶದಾದ್ಯಂತ ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 2026ರ ನೀಟ್-ಯುಜಿ ಪರೀಕ್ಷೆ ಬರೆದಿದ್ದರು. ಮೇ 12 ರಂದು ಪ್ರಶ್ನೆಪತ್ರಿಕೆ ಸೋರಿಕೆ ಕಾರಣ ನೀಡಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

ವಿದ್ಯಾರ್ಥಿಗಳಿಗೆ ಜೂನ್ 14ರ ಒಳಗಾಗಿ ಹೊಸ ಪ್ರವೇಶ ಪತ್ರಗಳನ್ನು ನೀಡಲಾಗುವುದು ಮತ್ತು ಜೂನ್ 21, 2026ರಂದು ದೇಶದಾದ್ಯಂತ ಮರುಪರೀಕ್ಷೆ ನಡೆಸಲಾಗುವುದು ಎಂದು ಎನ್‌ಟಿಎ ಹೇಳಿದೆ.

ಎನ್‌ಟಿಎ ನಿರ್ಧಾರ ದೇಶದಾದ್ಯಂತ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಲ್ಲಿ ಆತಂಕ ಮತ್ತು ಆಕ್ರೋಶವನ್ನು ಉಂಟುಮಾಡಿದೆ. ವಿದ್ಯಾರ್ಥಿಗಳು ಆಘಾತ, ಒತ್ತಡ ಮತ್ತು ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಗೆ ಒಳಗಾಗಿದ್ದಾರೆ. ತಮ್ಮ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ದೇಶದ ಮೂಲೆ ಮೂಲೆಗಳಲ್ಲಿ ವಿದ್ಯಾರ್ಥಿ ಸಮುದಾಯ ಬೀದಿಗಿಳಿದಿದೆ.

ಪದೇ ಪದೇ ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದರೂ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವ್ಯವಸ್ಥೆಯ ತಪ್ಪಿಗೆ ತಮ್ಮ ಪ್ರಾಣ ಕಳೆದುಕೊಂಡಿರುವ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆಯಿದೆ. ನಾಲ್ವರ ಪೈಕಿ ಮೂವರು ನೀಟ್ ರದ್ದತಿಯ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಖಚಿತವಾಗಿದೆ. ಇನ್ನೊಬ್ಬರು ಈ ಪರೀಕ್ಷೆಗೆ ಸಂಬಂಧಪಟ್ಟ ಒತ್ತಡದಿಂದ ಖಿನ್ನೆತೆಗ ಒಳಗಾಗಿ ಸಾವಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ಪ್ರದೀಪ್ ಮೇಘವಾಲ್ : ರಾಜಸ್ಥಾನದ ಝುಂಜುನು ಜಿಲ್ಲೆಯ 22 ವರ್ಷದ ಪ್ರದೀಪ್ ಮೇಘವಾಲ್ ಅವರು, ಕಳೆದ ಮೂರು ವರ್ಷಗಳಿಂದ ಸಿಕಾರ್‌ನ ಜಲಧಾರಿ ನಗರ ಪ್ರದೇಶದ ಬಾಡಿಗೆ ಕೋಣೆಯೊಂದರಲ್ಲಿ ವಾಸಿಸುತ್ತಾ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಪ್ರದೀಪ್ ಪರೀಕ್ಷೆಯಲ್ಲಿ 650 ಅಂಕಗಳನ್ನು ಗಳಿಸುವ ಭರವಸೆ ಹೊಂದಿದ್ದರು ಮತ್ತು ತಮ್ಮ ಆಯ್ಕೆ ಖಚಿತ ಎಂದು ನಂಬಿದ್ದರು. ಆದರೆ, ವ್ಯವಸ್ಥೆಯ ತಪ್ಪಿಗೆ ದುರದೃಷ್ಟವಶಾತ್ ಅವರು ಸಿಕಾರ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಮನೆಗೆ ಮರಳಿದ ಎರಡು ದಿನಗಳಲ್ಲಿ ಪ್ರದೀಪ್ ಸಾವಿಗೆ ಶರಣಾಗಿದ್ದಾರೆ. ಶುಕ್ರವಾರ (ಮೇ.15) ಸಹೋದರಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಹಿಂತಿರುಗಿ ಬಂದಾಗ ಈ ವಿಷಯ ಬೆಳಕಿಗೆ ಬಂದಿದ್ದು, ತಕ್ಷಣವೇ ಮನೆ ಮಾಲೀಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.

ಪೊಲೀಸರು ಬಂದು ಪ್ರದೀಪ್ ಅವರನ್ನು ಸ್ಥಳೀಯ ಎಸ್‌ಕೆ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಮೃತ ಪ್ರದೀಪ್ ಅವರ ತಂದೆ, “ನಾವು ನಮ್ಮ ಇಡೀ ಜೀವಮಾನದ ಉಳಿತಾಯದ ಹಣವನ್ನು, ಅಂದರೆ ಸುಮಾರು 8 ರಿಂದ 11 ಲಕ್ಷ ರೂಪಾಯಿಗಳನ್ನು ಪ್ರದೀಪ್ ಶಿಕ್ಷಣಕ್ಕಾಗಿ ಹೂಡಿಕೆ ಮಾಡಿದ್ದೆವು. ಪ್ರದೀಪ್‌ಗೆ ಉಜ್ವಲ ಭವಿಷ್ಯವನ್ನು ಖಚಿತಪಡಿಸಬೇಕೆಂಬ ಕಾರಣಕ್ಕಾಗಿ ನಾವು ನಮ್ಮ ಸ್ವಂತ ಮನೆ ಕಟ್ಟುವ ಕೆಲಸವನ್ನೂ ಮುಂದೂಡಿದ್ದೆವು” ಎಂದು ತಿಳಿಸಿದ್ದಾರೆ.

ರಿತಿಕ್ ಮಿಶ್ರಾ : ಮೇ 3ರಂದು ಮೂರನೇ ಬಾರಿಗೆ ಪರೀಕ್ಷೆ ಬರೆದಿದ್ದ 21 ವರ್ಷದ ರಿತಿಕ್ ಮಿಶ್ರಾ ಗುರುವಾರ (ಮೇ.14) ಲಖಿಂಪುರ ಖೇರಿಯ ಗಂಗೋತ್ರಿನಗರ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ವರ್ಷ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಬಗ್ಗೆ ರಿತಿಕ್ ಹೆಚ್ಚಿನ ಆತ್ಮವಿಶ್ವಾಸ ಹೊಂದಿದ್ದರು, ಆದರೆ ಪರೀಕ್ಷೆ ರದ್ದಾದ ನಂತರ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ರಿತಿಕ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೀಲಿ ಹಾಕಿದ ಕೋಣೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಸಿಗದಿದ್ದರೂ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅದರ ಪರಿಣಾಮವಾಗಿ ಪರೀಕ್ಷೆ ರದ್ದಾದುದೇ ಈ ನಿರ್ಧಾರಕ್ಕೆ ಕಾರಣ ಎಂದು ಅವರ ಪೋಷಕರು ಮತ್ತು ಇತರ ನಿಕಟ ಕುಟುಂಬ ಸದಸ್ಯರು ಹೇಳಿದ್ದಾರೆ.

ಅವರ ತಂದೆ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ, ಇದು ರಿತಿಕ್ ಅವರ ಮೂರನೇ ನೀಟ್ ಪ್ರಯತ್ನವಾಗಿತ್ತು ಮತ್ತು ಈ ಬಾರಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಬಗ್ಗೆ ಅವರು ಹೆಚ್ಚಿನ ಆತ್ಮವಿಶ್ವಾಸ ಹೊಂದಿದ್ದರು ಎಂದಿದ್ದಾರೆ.

ಬುಧವಾರ ಅವರು ಗ್ರಾಮದಿಂದ ನಗರಕ್ಕೆ ಮರಳಿದ ನಂತರ ಈ ಘಟನೆ ನಡೆದಿದ್ದು, ಪರೀಕ್ಷೆ ರದ್ದತಿಯಿಂದ ತಾವು ಅನುಭವಿಸುತ್ತಿದ್ದ ಮಾನಸಿಕ ಒತ್ತಡ ಮತ್ತು ತೀವ್ರ ವೇದನೆಯನ್ನು ಅವರು ಮರೆಮಾಚಿರಲಿಲ್ಲ.

“ಪ್ರಶ್ನೆ ಪತ್ರಿಕೆ ಸೋರಿಕೆಯ ವರದಿಗಳ ಬೆನ್ನಲ್ಲೇ ನೀಟ್ ಪರೀಕ್ಷೆಗಳು ರದ್ದಾದ ನಂತರ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದರು” ಎಂದು ಅವರ ಕುಟುಂಬದವರು ಪಿಟಿಐಗೆ ತಿಳಿಸಿದ್ದಾರೆ.

ಲಖಿಂಪುರ ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ರಾಜೇಶ್ ಕುಮಾರ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಿತಿಕ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೋಣೆಯಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ಮರಣದ ನಿಖರ ಕಾರಣವನ್ನು ಪತ್ತೆಹಚ್ಚಲು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅನ್ಶಿಕಾ : ದೆಹಲಿಯ ಆಝಾದ್‌ಪುರ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ 20 ವರ್ಷದ ಅನ್ಶಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರ ಅವಳಿ ಸಹೋದರಿಯ ಪ್ರಕಾರ, ಅನ್ಶಿಕಾ 12ನೇ ತರಗತಿ ಮುಗಿಸಿದಾಗಿನಿಂದ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಮತ್ತು ಈಗಾಗಲೇ ಹಲವು ಬಾರಿ ನೀಟ್ ಪರೀಕ್ಷೆಗೆ ಹಾಜರಾಗಿದ್ದರು.

ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗದಿದ್ದರೂ, ಪರೀಕ್ಷೆ ರದ್ದತಿಯಿಂದಾಗಿಯೇ ಆಕೆ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಕುಟುಂಬ ಸದಸ್ಯರು ಶಂಕಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಅನ್ಶಿಕಾ, ಈ ವರ್ಷ ಉತ್ತಮ ಗ್ರೇಡ್ ಪಡೆಯುವ ಭರವಸೆಯೊಂದಿಗೆ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪರೀಕ್ಷೆ ರದ್ದಾಗಿದೆ ಎಂಬ ವರದಿಗಳಿಂದ ಆಕೆ ಮನನೊಂದಿದ್ದರು ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ.

ಅನ್ಶಿಕಾ ಅವರ ಸಂಬಂಧಿಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, “ಕಳೆದ ಬಾರಿ ಆಕೆ ಕೇವಲ ನಾಲ್ಕು ಅಂಕಗಳ ಅಂತರದಿಂದ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅವಕಾಶವನ್ನು ಕಳೆದುಕೊಂಡಿದ್ದರು” ಎಂದು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ, “ಆಕೆ (ಮೃತ ಅನ್ಶಿಕಾ) 2022 ಮತ್ತು 2023ರಲ್ಲೂ ನೀಟ್ ಪರೀಕ್ಷೆಗೆ ಹಾಜರಾಗಿದ್ದರು ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ. ಈ ವರ್ಷ ಪರೀಕ್ಷೆಯ ನಂತರ ಆಕೆ ಎಷ್ಟು ಮಾನಸಿಕ ಒತ್ತಡದಲ್ಲಿದ್ದರು ಎಂಬುವುದನ್ನು ಕುಟುಂಬದವರು ತನಿಖಾ ತಂಡಕ್ಕೆ ವಿವರಿಸಿದ್ದಾರೆ. ಆಕೆಯನ್ನು ಈ ತೀವ್ರ ಹೆಜ್ಜೆ ಇಡಲು ಪ್ರೇರೇಪಿಸಿದ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಮತ್ತೊಬ್ಬ ಸಂಬಂಧಿ ಮಾತನಾಡಿ, “ವೈದ್ಯೆಯಾಗಬೇಕೆಂಬ ಕನಸಿನೊಂದಿಗೆ ಆಕೆ ಕಳೆದ ಮೂರು ವರ್ಷಗಳಿಂದ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ನೀಟ್ ಪರೀಕ್ಷೆ ರದ್ದಾದ ನಂತರ ತೀವ್ರ ಖಿನ್ನತೆಗೆ ಒಳಗಾಗಿದ್ದರು” ಎಂದು ತಿಳಿಸಿದ್ದಾರೆ.

“ಆಕೆ ಓದಿನಲ್ಲಿ ತುಂಬಾ ಮುಂದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿಯ ಬಗ್ಗೆ ಸುದ್ದಿಯ ಮೂಲಕ ತಿಳಿದುಕೊಂಡ ನಂತರ ತೀವ್ರ ಖಿನ್ನತೆಗೆ ಜಾರಿದ್ದರು” ಎಂದು ಇನ್ನೊಬ್ಬರು ಸಂಬಂಧಿ ಹೇಳಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿದ ಮೃತಳ ಸಹೋದರಿ, “ಆಕೆಗೆ ವೈದ್ಯೆಯಾಗಬೇಕೆಂಬ ಆಸೆಯಿತ್ತು. ತನ್ನ ಹಿಂದಿನ ಪ್ರಯತ್ನದಲ್ಲಿ ಕೇವಲ ನಾಲ್ಕು ಅಂಕಗಳು ಕಡಿಮೆಯಾಗಿದ್ದವು. ಈ ಬಾರಿ ಮೇ 3 ರಂದು ಪರೀಕ್ಷೆ ಬರೆದಾಗ, ತಾನು ಖಂಡಿತವಾಗಿಯೂ ತೇರ್ಗಡೆಯಾಗುತ್ತೇನೆ ಎಂಬ ದೊಡ್ಡ ಭರವಸೆಯನ್ನು ಆಕೆ ಹೊಂದಿದ್ದಳು” ಎಂದು ವಿವರಿಸಿದ್ದಾರೆ.

ಗೋವಾದ ವಿದ್ಯಾರ್ಥಿ : ವರದಿಗಳ ಪ್ರಕಾರ, ಈ ವಿದ್ಯಾರ್ಥಿ ಆತ್ಮಹತ್ಯೆ ಪತ್ರವೊಂದನ್ನು ಬರೆದಿಟ್ಟು ಸಾವಿಗೆ ಶರಣಾಗಿದ್ದು, ಅದರಲ್ಲಿ ತಾನು ಕಳೆದ ಎರಡು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರಣದಿಂದಾಗಿ ತೀವ್ರ ಮಾನಸಿಕ ಒತ್ತಡದಲ್ಲಿದ್ದೆ ಮತ್ತು ಆ ಒತ್ತಡವನ್ನು ನಿಭಾಯಿಸಲು ತನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ತಾನು ಗಂಭೀರವಾಗಿ ತೊಡಗಿಸಿಕೊಂಡಿದ್ದ ಹಾಕಿ ಕ್ರೀಡೆ ಮತ್ತು ಶಿಕ್ಷಣದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ತನಗೆ ಕಷ್ಟವಾಗುತ್ತಿತ್ತು ಎಂದೂ ಅವನು ಅದರಲ್ಲಿ ಉಲ್ಲೇಖಿಸಿದ್ದಾರೆ. ಮುಂದುವರಿದು, ತನಗೆ ಇನ್ನು ಮುಂದೆ ಇಂತಹ ಪರೀಕ್ಷೆಗಳಿಗೆ ಹಾಜರಾಗಲು ಇಷ್ಟವಿಲ್ಲ ಎಂದು ಬರೆದಿದ್ದಾರೆ.

ಮೇ 12ರಂದು ಎನ್‌ಟಿಎ ಪರೀಕ್ಷೆ ರದ್ದತಿ ಬಗ್ಗೆ ಘೋಷಣೆ ಮಾಡಿದ್ದು, 15ರ ಒಳಗೆ ನಾಲ್ವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ವ್ಯವಸ್ಥೆಯ ತಪ್ಪಿಗೆ ಲಕ್ಷಾಂತರ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಿದ್ದಾರೆ. ಇದರ ಮಧ್ಯೆ ಮತ್ತೆ ಪರೀಕ್ಷೆ ಬರೆಯುವ ಸವಾಲು ಇವರಿಗೆ ಎದುರಾಗಿದೆ.

ವಿದ್ಯಾರ್ಥಿಗಳನ್ನು ಶಂಕಿತ ಉಗ್ರರಂತೆ ಪರಿಶೀಲಿಸಿ, ಅವರ ದೇಹದಲ್ಲಿ ಒಂದು ನೂಲು ಕೂಡ ಬಿಡದೆ ಕತ್ತರಿಸಿ, ಧರಿಸಿದ್ದ ವಸ್ತ್ರವನ್ನು ಹಾಳುಗೆಡವಿ ಪರೀಕ್ಷೆ ಬರೆಸಿದ್ದ ಸರ್ಕಾರ, ಒಂದೇ ಸಮನೆ ರದ್ದು ಮಾಡಿ ಕೈ ತೊಳೆದುಕೊಂಡಿದೆ. ಆದರೆ, ಅದು ಎಲ್ಲವನ್ನೂ ತ್ಯಾಗ ಮಾಡಿ ಭವಿಷ್ಯದ ಕನಸು ಹೊತ್ತು ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮೇಲೆ ಬೀರಿದ ಪರಿಣಾಮ ಸಣ್ಣದಲ್ಲ.

ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104








ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...