ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ ವರದಿಯೊಂದರಿಂದ ಬಹಿರಂಗಗೊಂಡಿದ್ದು, ಇದರ ಬೆನ್ನಲ್ಲೇ ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
ರಾಜಕೀಯಕ್ಕೆ ಬರುವ ಮುನ್ನವೇ ತಾವೊಬ್ಬ ಕೃಷಿಕರಾಗಿದ್ದರಿಂದ ಈ ಸಬ್ಸಿಡಿ ಪಡೆದುಕೊಳ್ಳುವಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಚೌಧರಿ ಸಮರ್ಥಿಸಿಕೊಂಡಿದ್ದಾರೆ. ನಾನೊಬ್ಬ ರೈತ ಮತ್ತು ಬಾಲ್ಯದಿಂದಲೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ” ಎಂದು ಎಎನ್ಐ (ANI) ಸುದ್ದಿ ಸಂಸ್ಥೆಗೆ ತಿಳಿಸಿದ ಚೌಧರಿ, ತಾವು 2018 ರಲ್ಲೇ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿದ್ದು, ಈ ಯೋಜನೆಗಾಗಿ ಪಡೆದ ಸಾಲ ಮತ್ತು ಸಬ್ಸಿಡಿಯ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರುವುದಾಗಿ ಹೇಳಿದ್ದಾರೆ.
ಇದರ ಜೊತೆಗೆ, ತಾವೊಬ್ಬ ಬಿಜೆಪಿ ನಾಯಕರಾಗಿದ್ದರೂ ತಮ್ಮ ಜಮೀನನ್ನು ಇತರ ರೈತರಿಗೆ ಆಧುನಿಕ ಕೃಷಿ ಪದ್ಧತಿ ಹಾಗೂ ನೈಸರ್ಗಿಕ ಕೃಷಿ ಕುರಿತು ತರಬೇತಿ ನೀಡಲು ಬಳಸುತ್ತಿರುವುದಾಗಿ ತಿಳಿಸಿದ ಅವರು, “ಸಾವಿರಾರು ರೈತರು ಪಾಲಿಹೌಸ್ಗಳನ್ನು ನಿರ್ಮಿಸಿಕೊಂಡು ಸಬ್ಸಿಡಿ ಪಡೆಯುತ್ತಾರೆ, ಹಾಗೆಯೇ ನಾನೂ ಕೂಡ ಪಡೆದಿದ್ದೇನೆ. ಸ್ಥಳೀಯ ಅಧಿಕಾರಿಗಳು ಜಮೀನಿಗೆ ಬಂದು ಯೋಜನೆಯ ಪರಿಶೀಲನೆ ನಡೆಸಿದ್ದಾರೆ” ಎಂದಿದ್ದಾರೆ.
ರಾಷ್ಟ್ರೀಯ ತೋಟಗಾರಿಕಾ ಮಂಡಳಿ (NHB) ಉಸ್ತುವಾರಿ ಇಲಾಖೆಯ ಯೋಜನೆಯಡಿಯಲ್ಲೇ ಚೌಧರಿ ಸಬ್ಸಿಡಿ ಪಡೆದಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದ ನಂತರ ಈ ವಿವಾದ ಭುಗಿಲೆದ್ದಿದೆ. ವಿಶೇಷವೆಂದರೆ, ಸಚಿವ ಸ್ಥಾನದ ಕಾರಣದಿಂದಾಗಿ ಚೌಧರಿ ಅವರೇ ಈ ಮಂಡಳಿಯ ಪದನಿಮಿತ್ತ ಉಪಾಧ್ಯಕ್ಷರಾಗಿದ್ದಾರೆ.
ಆಯ್ದ ತರಕಾರಿಗಳು ಮತ್ತು ಹೂವುಗಳ ದೊಡ್ಡ ಪ್ರಮಾಣದ ವಾಣಿಜ್ಯ ಬೇಸಾಯವನ್ನು ಉತ್ತೇಜಿಸಲು 2014-15 ರಲ್ಲಿ ಪ್ರಾರಂಭಿಸಲಾದ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್’ (MIDH) ಅಡಿಯಲ್ಲಿ ಈ ಸಬ್ಸಿಡಿಯನ್ನು ಮಂಜೂರು ಮಾಡಲಾಗಿದೆ.
ರಾಜಸ್ಥಾನದ ದೀದ್ವಾನಾ-ಕುಚಾಮನ್ ಜಿಲ್ಲೆಯ ಪೀಹ್ ಗ್ರಾಮದಲ್ಲಿರುವ ಚೌದರಿ ಅವರು ಕಲ್ಲಿನ ಕೌಂಪೌಂಡ್, ಮುಳ್ಳುತಂತಿ ಬೇಲಿಗಳು, ಕೃತಕ ಹೊಂಡಗಳು ಹಾಗೂ ನಾಲ್ಕು ದೊಡ್ಡ ಪಾಲಿಹೌಸ್ಗಳಿರುವ 16,592 ಚದರ ಮೀಟರ್ ವಿಸ್ತೀರ್ಣದ ಜಮೀನು ಹೊಂದಿದ್ದಾರೆ. ಈ ವಿಶಾಲವಾದ ಕೃಷಿ ಭೂಮಿಯಲ್ಲಿ ಬಿಳಿ ಬಣ್ಣದ ಅಧಿಕೃತ ನಾಮಫಲಕವೊಂದನ್ನು ಅಳವಡಿಸಲಾಗಿದೆ. ಅದರಲ್ಲಿ “ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಿಂದ ಸಹಾಯ ಪಡೆದಿದೆ” ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಫಲಾನುಭವಿಯ ಹೆಸರು ‘ಭಗೀರಥ್ ಚೌಧರಿ’ ಎಂದಿದ್ದು, 50%ರಷ್ಟು ಅಂದರೆ 99,60,000 ರೂ. ಸಬ್ಸಿಡಿ ಮೊತ್ತವನ್ನು ಉಲ್ಲೇಖಿಸಲಾಗಿದೆ.
NHB ನಿರ್ವಹಿಸುವ ಈ ಯೋಜನೆಯು ಸೌತೆಕಾಯಿ, ದಪ್ಪಮೆಣಸಿನಕಾಯಿ (Capsicum), ಟೊಮೆಟೊ ಮತ್ತು ಕೆಲವು ಹೂವುಗಳ ಕೃಷಿಗಾಗಿ ಒಟ್ಟು ಯೋಜನಾ ವೆಚ್ಚದ ಶೇ. 50 ರಷ್ಟು ಸಬ್ಸಿಡಿಯನ್ನು ನೀಡುತ್ತದೆ. ಇದರ ಗರಿಷ್ಠ ಮಿತಿ ಒಂದು ಕುಟುಂಬಕ್ಕೆ 1 ಕೋಟಿ ರೂಪಾಯಿ ಆಗಿದೆ.
ಎನ್ಹೆಚ್ಬಿ (NHB) ವೆಬ್ಸೈಟ್ ಪ್ರಕಾರ, ಈ ಮಂಡಳಿಗೆ ಕೇಂದ್ರ ಕೃಷಿ ಸಚಿವರು ಪದನಿಮಿತ್ತ ಅಧ್ಯಕ್ಷರಾಗಿದ್ದರೆ, ಕೃಷಿ ಖಾತೆ ರಾಜ್ಯ ಸಚಿವರು ಪದನಿಮಿತ್ತ ಉಪಾಧ್ಯಕ್ಷರಾಗಿರುತ್ತಾರೆ. ಆದರೆ, ಅಧಿಕೃತ ದಾಖಲೆಗಳ ಪ್ರಕಾರ, ಸಬ್ಸಿಡಿ ಪ್ರಸ್ತಾಪಗಳನ್ನು ಪ್ರತ್ಯೇಕವಾದ ‘NHB ಪ್ರಾಜೆಕ್ಟ್ ಅಪ್ರೂವಲ್ ಕಮಿಟಿ’ ಅಂಗೀಕರಿಸುತ್ತದೆ. ಈ ಸಮಿತಿಯಲ್ಲಿ ಮಂಡಳಿಯ ಅಧ್ಯಕ್ಷರಾಗಲಿ ಅಥವಾ ಉಪಾಧ್ಯಕ್ಷರಾಗಲಿ ಸದಸ್ಯರಾಗಿರುವುದಿಲ್ಲ ಎಂದು ವರದಿಯಾಗಿದೆ.


