ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ದಿಢೀರನೆ ಮುಂದೂಡಲಾಗಿದೆ.
ಶನಿವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಮಂಡಳಿಯು, “ರಾಜ್ಯಾದ್ಯಂತ 1,028 ಕೇಂದ್ರಗಳಲ್ಲಿ ಜೂನ್ 28 ರಂದು ನಡೆಯಬೇಕಿದ್ದ ಟಿಇಟಿ 2026 ಪರೀಕ್ಷೆಯನ್ನು ಪಾರದರ್ಶಕತೆ ಮತ್ತು ಪರೀಕ್ಷಾ ಪ್ರಕ್ರಿಯೆಯ ನಂಬಿಕೆಯನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಮುಂದೂಡಲಾಗಿದೆ” ಎಂದು ತಿಳಿಸಿದೆ.
ಮಂಡಳಿಯ ಪ್ರಕಾರ, ಶನಿವಾರ ಮುಂಜಾನೆ ಸಿಕ್ಕ ರಹಸ್ಯ ಮಾಹಿತಿಯ ಮೇರೆಗೆ ಭಿವಾಂಡಿ ಪೊಲೀಸರು ನಿರ್ದಿಷ್ಟ ಸ್ಥಳವೊಂದರ ಮೇಲೆ ದಾಳಿ ನಡೆಸಿದಾಗ, ಕೆಲವು ವ್ಯಕ್ತಿಗಳ ಬಳಿ ಸೀಲ್ ಮಾಡಲಾಗಿದ್ದ ಟಿಇಟಿ 2026 ರ ಪ್ರಶ್ನೆ ಪತ್ರಿಕೆಯ ಪ್ಯಾಕೆಟ್‌ನ ಪುಟಗಳು ಪತ್ತೆಯಾಗಿವೆ. ತಕ್ಷಣವೇ ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಮಂಡಳಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಆ ಪತ್ರಿಕೆಯನ್ನು ಪರಿಶೀಲಿಸಲಾಯಿತು. ಅದು ಅಸಲಿ ಪ್ರಶ್ನೆ ಪತ್ರಿಕೆ ಎಂಬುದು ಖಚಿತವಾದ ಬೆನ್ನಲ್ಲೇ ಭಿವಾಂಡಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ಪರೀಕ್ಷೆಗೂ 24 ಗಂಟೆಗಳ ಮುನ್ನವೇ ಥಾಣೆ ವಲಯದಲ್ಲಿ ಈ ಸೋರಿಕೆಯಾದ ಪ್ರಶ್ನೆ ಪತ್ರಿಕೆ ಹರಿದಾಡುತ್ತಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಶ್ನೆ ಪತ್ರಿಕೆಯನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಬಂಧಿತರ ಗುರುತನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ.
ಮಹಾರಾಷ್ಟ್ರದ ಈ ಟಿಇಟಿ ಪರೀಕ್ಷಾ ಅಕ್ರಮವು ಇತ್ತೀಚೆಗಷ್ಟೇ ದೇಶವನ್ನೇ ನಡುಗಿಸಿದ ‘ನೀಟ್’ (NEET) ಪರೀಕ್ಷಾ ಮಹಾ ಹಗರಣವನ್ನು ಮತ್ತೆ ನೆನಪಿಸುವಂತಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ವೈದ್ಯಕೀಯ ಆಕಾಂಕ್ಷಿಗಳು ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಹಗಲಿರುಳು ಅನ್ನ ನಿದ್ದೆ ಬಿಟ್ಟು ವರ್ಷಗಟ್ಟಲೆ ಕಷ್ಟಪಟ್ಟು ಓದಿದ್ದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಶ್ರಮ, ಭ್ರಷ್ಟರ ದುರಾಶೆಯಿಂದಾಗಿ ಒಂದೇ ರಾತ್ರಿಯಲ್ಲಿ ಹರಾಜಾಗಿ ಹೋಯಿತು. ಪರೀಕ್ಷೆ ರದ್ದಾದ ಆಘಾತ ಮತ್ತು ಮರುಪರೀಕ್ಷೆಯ ಅನಿಶ್ಚಿತತೆಯ ನಡುವೆ ಸಿಲುಕಿದ ದೇಶದ ವಿವಿಧ ರಾಜ್ಯಗಳ 13 ಅಮೂಲ್ಯ ವಿದ್ಯಾರ್ಥಿ ಜೀವಗಳು ತೀವ್ರ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದು ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಚುಚ್ಚುವಂತಿದೆ.


