ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್ : “ಇನ್ನು ಮುಂದೆ ಅವರೊಂದಿಗೆ (ಇರಾನ್) ವ್ಯವಹರಿಸುವುದಿಲ್ಲ, ಅವರು ನೀಚರು ಮತ್ತು ಅನಾರೋಗ್ಯ ಪೀಡಿತರು” ಎಂದು ಹೇಳಿದ್ದಾರೆ. “ಅವರ ನಾಯಕತ್ವವು ವಿಕೃತ ಮನಸ್ಸಿನವರ ಕೈಯಲ್ಲಿದ್ದು, ತಮ್ಮ ಮಟ್ಟಿಗೆ ಈ ವಿಚಾರ ಮುಗಿದಿದೆ ಎಂದಿದ್ದಾರೆ” ಎಂದು ಬಿಬಿಸಿ ವರದಿ ಮಾಡಿದೆ.
“ಎರಡೂ ಕಡೆಯ ಸಂಧಾನಕಾರರು ಮಾತುಕತೆಯನ್ನು ಮುಂದುವರಿಸಬಹುದು, ಆದರೆ ಅವರು (ಇರಾನ್) ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಟ್ರಂಪ್ ಹೇಳಿದ್ದಾರೆ.
ಮಂಗಳವಾರ ತಡರಾತ್ರಿ, ಹಾರ್ಮುಜ್ ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಯ ನಂತರ 80ಕ್ಕೂ ಹೆಚ್ಚು ಇರಾನಿನ ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕ ತಿಳಿಸಿದೆ. ಆದರೆ ಇರಾನ್ ಹಾರ್ಮುಜ್ ದಾಳಿಯ ನೇರ ಹೊಣೆಯನ್ನು ಹೊತ್ತುಕೊಂಡಿಲ್ಲ.
ಅಮೆರಿಕ ದಾಳಿಗೆ ಪ್ರತಿಯಾಗಿ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ಹೇಳಿದೆ.
ನ್ಯಾಟೋ ಮುಖ್ಯಸ್ಥ ಮಾರ್ಕ್ ರುತ್ತೆ ಅವರು ಅಮೆರಿಕದ ದಾಳಿಗಳು “ಅತ್ಯಗತ್ಯವಾಗಿದ್ದವು” ಎಂದು ಹೇಳಿದ್ದಾರೆ ಮತ್ತು ಇರಾನ್ “ಕದನ ವಿರಾಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ” ಎಂದು ಆರೋಪಿಸಿದ್ದಾರೆ. ಆದರೆ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಘಾಲಿಬಾಫ್ ಅವರು ಅಮೆರಿಕವೇ ಕದನ ವಿರಾಮವನ್ನು ಮುರಿದಿದೆ ಎಂದು ದೂರಿದ್ದಾರೆ.
ಕಳೆದ ತಿಂಗಳು, ಕದನ ವಿರಾಮವನ್ನು ವಿಸ್ತರಿಸುವ ಮತ್ತು “ಎಲ್ಲಾ ರಂಗಗಳಲ್ಲಿ” ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ 14 ಪುಟಗಳ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ್ದವು.


