ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ ‘ನೈಸ್’ ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸುವ ವೇಳೆ ನ್ಯಾಯಾಲಯ ಈ ಐತಿಹಾಸಿಕ ಮತ್ತು ಖಂಡನೀಯ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಮುಖ ಆದೇಶ ನೀಡಿದ್ದು, ನೈಸ್ ಯೋಜನೆಯಲ್ಲಿ ನೈಸ್ ಎನ್ನುವಂಥದ್ದು ಏನೂ ಇಲ್ಲ ಎಂದು ಖಾರವಾಗಿ ಹೇಳಿದೆ. ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿದ್ದ ಬಡ ರೈತರ ಜಮೀನುಗಳನ್ನು ಸಂವಿಧಾನದ 300A ವಿಧಿಯಡಿ ನೀಡಬೇಕಾದ ನ್ಯಾಯಯುತ ಪರಿಹಾರವನ್ನೂ ನೀಡದೆ ಬಲವಂತವಾಗಿ ಕಸಿದುಕೊಳ್ಳಲಾಗಿದೆ ಎಂದು ಕೋರ್ಟ್ ಅಸಮಾಧಾನ ಹೊರಹಾಕಿದೆ. 2025ರ ಜುಲೈ 4ರಂದು ರೈತರ ಪರವಾಗಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಹಾಗೂ ಕೆಐಎಡಿಬಿ ಮೇಲ್ಮನವಿ ಸಲ್ಲಿಸಿದ್ದವು. ಆದರೆ, ಭೂಮಿ ಸ್ವಾಧೀನಪಡಿಸಿಕೊಂಡ ಮೂಲ ಉದ್ದೇಶಕ್ಕಾಗಿಯೇ ಅದನ್ನು ಬಳಸಲಾಗಿಲ್ಲ ಎಂಬ ಏಕಸದಸ್ಯ ಪೀಠದ ತೀರ್ಮಾನವನ್ನು ವಿಭಾಗೀಯ ಪೀಠವೂ ಎತ್ತಿಹಿಡಿದಿದೆ.
ಎಕ್ಸ್‌ಪ್ರೆಸ್‌ವೇ, ಪೆರಿಫೆರಲ್ ರಸ್ತೆ, ಲಿಂಕ್ ರಸ್ತೆ, ಟೋಲ್ ಪ್ಲಾಜಾ ಮತ್ತು ಇಂಟರ್‌ಚೇಂಜ್ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, 2003ರಿಂದ 2009ರ ನಡುವೆ ಅಂತಿಮ ಅಧಿಸೂಚನೆಗಳು ಹೊರಬಿದ್ದಿದ್ದರೂ, ಸತತ 11ರಿಂದ 23 ವರ್ಷಗಳು ಕಳೆದರೂ ಪರಿಹಾರ ನಿಗದಿಪಡಿಸುವ ‘ಅವಾರ್ಡ್’ ಪ್ರಕಟಿಸದಿರುವುದು ಮತ್ತು ಅದಕ್ಕೆ ಸೂಕ್ತ ಕಾರಣ ನೀಡದಿರುವುದು ಇಡೀ ಭೂಸ್ವಾಧೀನ ಪ್ರಕ್ರಿಯೆಯನ್ನೇ ಕಾನೂನುಬಾಹಿರವಾಗಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರು 2026ರ ಜುಲೈ 28ರಂದು ಸಲ್ಲಿಸಿದ ಪ್ರಮಾಣಪತ್ರವನ್ನು ಉಲ್ಲೇಖಿಸಿದ ಹೈಕೋರ್ಟ್, ಕಳೆದ 25-26 ವರ್ಷಗಳಲ್ಲಿ ಪ್ರಸ್ತಾವಿತ 111 ಕಿಲೋಮೀಟರ್ ಎಕ್ಸ್‌ಪ್ರೆಸ್‌ವೇ ಪೈಕಿ ನಿರ್ಮಾಣವಾಗಿರುವುದು ಕೇವಲ 5 ಕಿಲೋಮೀಟರ್ ಮಾತ್ರ ಎನ್ನುವ ಆಘಾತಕಾರಿ ಸತ್ಯವನ್ನು ಹೊರಹಾಕಿದೆ.
ರಸ್ತೆ ನಿರ್ಮಾಣಕ್ಕೆಂದು ಪಡೆದ ಭೂಮಿಯನ್ನು ನೈಸ್ ಸಂಸ್ಥೆಯು ತನ್ನ ಖಾಸಗಿ ರಿಯಲ್ ಎಸ್ಟೇಟ್ ಲಾಭಕ್ಕಾಗಿ ಬಳಸಿಕೊಂಡಿದೆ ಎಂಬ ಅಂಶವೂ ವಿಚಾರಣೆ ವೇಳೆ ಬಯಲಾಗಿದೆ. ಮಾದವಾರ, ಕೆಂಗೇರಿ, ಪಿಳ್ಳಗನಹಳ್ಳಿ, ವರಹಸಂದ್ರ ಸೇರಿದಂತೆ ವಿವಿಧ ಭಾಗಗಳ 110 ಎಕರೆಗೂ ಅಧಿಕ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ನೈಸ್ ಸಂಸ್ಥೆಯು ಹಲವು ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು (JDA) ಮಾಡಿಕೊಂಡಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಸುಮಾರು 20 ಸಾವಿರ ಎಕರೆಗೂ ಅಧಿಕ ಭೂ ಬ್ಯಾಂಕ್ ಮೇಲೆ ಕುಳಿತಿರುವ ಸಂಸ್ಥೆಯು, ಸುಪ್ರೀಂ ಕೋರ್ಟ್ ಆದೇಶ ಹಾಗೂ ಫ್ರೇಮ್‌ವರ್ಕ್ ಒಪ್ಪಂದದ (FWA) ಉಲ್ಲಂಘನೆ ಮಾಡಿ ಭೂಮಿಯನ್ನೇ ಬಂಡವಾಳವಾಗಿಸಿಕೊಂಡು ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿದೆ ಎಂದು ಪೀಠ ವಾಗ್ದಾಳಿ ನಡೆಸಿದೆ.
ಈ ಪ್ರಕರಣದಲ್ಲಿ ನಡೆದಿರುವ ಬೃಹತ್ ವಂಚನೆ ಹಾಗೂ ಅಕ್ರಮಗಳ ಕುರಿತು ಸ್ವತಂತ್ರ ತಜ್ಞರ ತಂಡದಿಂದ ಸಮಗ್ರ ತನಿಖೆ ಮತ್ತು ಫೊರೆನ್ಸಿಕ್ ಆಡಿಟ್ ನಡೆಸಬೇಕಾದ ತುರ್ತು ಅಗತ್ಯವಿದೆ ಎಂದು ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ, ಪ್ರಸ್ತುತ ರಾಜ್ಯ ಸರ್ಕಾರವೇ ಈ ಯೋಜನಾ ಪ್ರವರ್ತಕರಿಗೆ ನೆರವಾಗುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡುಬರುತ್ತಿದೆ ಎಂದು ಹೇಳಿರುವ ಹೈಕೋರ್ಟ್, ಸರ್ಕಾರದ ಕಡೆಯಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಬಗ್ಗೆ ನಮಗೆ ತೀವ್ರ ಅನುಮಾನವಿದೆ ಎಂದು ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ.
1990ರ ದಶಕದ ಮಧ್ಯಭಾಗದಲ್ಲಿ ಆರಂಭಗೊಂಡು, 1997ರ ಏಪ್ರಿಲ್‌ನಲ್ಲಿ ಫ್ರೇಮ್‌ವರ್ಕ್ ಒಪ್ಪಂದಕ್ಕೆ ಸಹಿ ಹಾಕಿದ್ದ ಈ ಬೃಹತ್ ಯೋಜನೆ, ಮೂರು ದಶಕಗಳು ಕಳೆದರೂ ಪೂರ್ಣಗೊಳ್ಳದೆ ಕೇವಲ ರಿಯಲ್ ಎಸ್ಟೇಟ್ ದಂಧೆಯಾಗಿ ಮಾರ್ಪಟ್ಟಿದೆ. ಪೆರಿಫೆರಲ್ ಮತ್ತು ಲಿಂಕ್ ರಸ್ತೆಗಳು ನಿರ್ಮಾಣವಾಗಿದ್ದರೂ, ಪ್ರಮುಖ 111 ಕಿ.ಮೀ. ಎಕ್ಸ್‌ಪ್ರೆಸ್‌ವೇ ಹಾಗೂ ಟೌನ್‌ಶಿಪ್‌ಗಳು ಕೇವಲ ಕಾಗದದಲ್ಲೇ ಉಳಿದಿದ್ದು, ರೈತರ ಬದುಕಿನ ಜೊತೆ ಚೆಲ್ಲಾಟವಾಡಿದ ನೈಸ್ ಸಂಸ್ಥೆಯ ಮುಖವಾಡವನ್ನು ಹೈಕೋರ್ಟ್ ತೀರ್ಪು ಸಂಪೂರ್ಣವಾಗಿ ಕಳಚಿದೆ.


