Homeಅಂತರಾಷ್ಟ್ರೀಯಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

- Advertisement -
- Advertisement -

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.

ಇದೇ ವಿಚಾರವಾಗಿ ಇಸ್ರೇಲ್ ಮತ್ತು ಸ್ಪೇನ್‌ನ ರಾಜತಾಂತ್ರಿಕರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಜಟಾಪಟಿ ಜೋರಾಗಿದೆ.

ಮೊರಾಕನ್ನರ ಬೃಹತ್ ವಲಸೆಯ ಬಳಿಕ ಪ್ರತಿಕ್ರಿಯಿಸಿದ್ದ ವಿಶ್ವಸಂಸ್ಥೆಗೆ ಇಸ್ರೇಲ್‌ನ ರಾಯಭಾರಿಯಾದ ಡ್ಯಾನಿ ಡ್ಯಾನನ್, “ಸ್ಪೇನ್ ತನ್ನ ವಲಸೆ ನೀತಿಯಿಂದಾಗಿ ಸಿಯುಟಾದಲ್ಲಿ ತುರ್ತು ಪರಿಸ್ಥಿತಿ ಎದುರಿಸುತ್ತಿದೆ” ಎಂದು ಎಕ್ಸ್‌ನಲ್ಲಿ ಬರೆದಿದ್ದರು. “ಇಸ್ರೇಲ್‌ಗೆ ಸದಾ ಬುದ್ಧಿ ಹೇಳುವ ಸ್ಪೇನ್, ಆಫ್ರಿಕಾ ಖಂಡದಲ್ಲಿ ತಾನು ಇನ್ನೂ ವಸಾಹತುಶಾಹಿ ಪ್ರದೇಶಗಳನ್ನು (ಸಿಯುಟಾ ಮತ್ತು ಮೆಲಿಲ್ಲಾ) ಏಕೆ ಉಳಿಸಿಕೊಂಡಿದೆ ಎಂಬುವುದನ್ನು ಜಗತ್ತಿಗೆ ವಿವರಿಸಲಿ” ಎಂದು ಅವರು ಹೇಳಿದ್ದರು.

ಇಸ್ರೇಲ್ ರಾಯಭಾರಿಯ ಈ ಪೋಸ್ಟ್‌ಗೆ ತಿರುಗೇಟು ನೀಡಿದ್ದ ಸ್ಪೇನ್‌ನ ಸಾರಿಗೆ ಸಚಿವ ಆಸ್ಕರ್ ಪುಯೆಂಟೆ “ಈಗ ಎಲ್ಲವೂ ಸ್ಪಷ್ಟವಾಗುತ್ತಿದೆ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದರು. ಇದು ವಲಸೆ ಬಿಕ್ಕಟ್ಟಿನ ಹಿಂದೆ ಇಸ್ರೇಲ್‌ನ ಪ್ರಚೋದನೆ ಇರಬಹುದು ಎಂಬ ಅನುಮಾನವನ್ನು ಪರೋಕ್ಷವಾಗಿ ಸೂಚಿಸುವಂತಿತ್ತು.

ವಿವಾದ ತೀವ್ರಗೊಳ್ಳುತ್ತಿದ್ದಂತೆ, ಸ್ಪೇನ್‌ನಲ್ಲಿರುವ ಇಸ್ರೇಲ್‌ನ ರಾಜತಾಂತ್ರಿಕ ಅಧಿಕಾರಿ ಡಾನಾ ಎರ್ಲಿಚ್ ಅವರು, ವಿಶ್ವಸಂಸ್ಥೆಯ ರಾಯಭಾರಿಯ ಹೇಳಿಕೆ ಇಸ್ರೇಲ್ ಸರ್ಕಾರದ ಅಧಿಕೃತ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.

ಸಿಯುಟಾ ಮತ್ತು ಮೆಲಿಲ್ಲಾ ನಗರಗಳನ್ನು ಸ್ಪೇನ್ ತನ್ನ ಸಾರ್ವಭೌಮ ಭಾಗವೆಂದು ಪರಿಗಣಿಸಿದರೆ, ಮೊರಾಕೊ ಇವುಗಳನ್ನು ಸ್ಪೇನ್ ಆಕ್ರಮಿತ ತನ್ನದೇ ಐತಿಹಾಸಿಕ ಭೂಮಿ ಎಂದು ವಾದಿಸುತ್ತದೆ.

ಈ ಹಿಂದೆಯೂ (ಉದಾಹರಣೆಗೆ 2021ರಲ್ಲಿ) ಸ್ಪೇನ್ ಜೊತೆ ರಾಜತಾಂತ್ರಿಕ ಭಿನ್ನಾಭಿಪ್ರಾಯ ಬಂದಾಗಲೆಲ್ಲಾ ಮೊರಾಕೊ ತನ್ನ ಗಡಿ ಭದ್ರತೆಯನ್ನು ಸಡಿಲಗೊಳಿಸಿ, ವಲಸಿಗರು ಸ್ಪೇನ್ ಗಡಿಯೊಳಗೆ ನುಗ್ಗುವಂತೆ ರಾಜಕೀಯ ಒತ್ತಡ ತಂತ್ರ ರೂಪಿಸುತ್ತ ಬಂದಿದೆ ಎಂಬ ಆರೋಪಗಳಿವೆ.

ಮೊರಾಕೊ ತನ್ನ ಗಡಿ ಭದ್ರತೆಯನ್ನು ಸಡಿಲಗೊಳಿಸುವುದರ ಹಿಂದೆ ಇಸ್ರೇಲ್‌ ಕುತಂತ್ರವಿದೆ. ಸ್ಪೇನ್‌ ಮೇಲಿನ ದ್ವೇಷಕ್ಕೆ ಮೊರಾಕೊ ಮೇಲೆ ಒತ್ತಡ ಹೇರಿ ಇಸ್ರೇಲ್ ಕೃತ್ಯವನ್ನು ನಡೆಸುತ್ತಿದೆ ಎಂದು ಹೇಳಲಾಗ್ತಿದೆ.

ಮೊರಾಕೊದಲ್ಲಿನ ಕೆಲವು ಮೂಲಗಳು ಈ ಗೊಂದಲದ ಹಿಂದೆ ಇಸ್ರೇಲ್ ಮಾತ್ರವಲ್ಲದೆ, ದೇಶದ ಇಮೇಜ್ ಹಾಳುಮಾಡಲು ಅಲ್ಜೀರಿಯಾ ಅಥವಾ ಇರಾನ್ ಬೆಂಬಲಿತ ಶಕ್ತಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಪ್ರಚೋದಿಸಿರಬಹುದು ಎಂದೂ ಶಂಕಿಸಿವೆ.

ಏನಿದು ಮೊರಾಕನ್ನರ ಸ್ಪೇನ್ ವಲಸೆ?

ಆಫ್ರಿಕಾ ಖಂಡದ ಉತ್ತರ ಕರಾವಳಿಯಲ್ಲಿರುವ ಸ್ಪೇನ್ ದೇಶಕ್ಕೆ ಸೇರಿದ ಸಿಯುಟಾ ಎಂಬ ಸಣ್ಣ ದ್ವೀಪ ನಗರಕ್ಕೆ ಸಾವಿರಾರು ಮೊರಾಕೊ ನಾಗರಿಕರು ಅಕ್ರಮವಾಗಿ ನುಗ್ಗುತ್ತಿರುವ ಗಂಭೀರ ಗಡಿ ಸಮಸ್ಯೆ ಉಂಟಾಗಿದೆ.

ಜುಲೈ 2026ರ ಕೊನೆಯ ದಿನಗಳಲ್ಲಿ, ಕೇವಲ 24 ರಿಂದ 48 ಗಂಟೆಗಳ ಅವಧಿಯಲ್ಲಿ ಸುಮಾರು 60,000ಕ್ಕೂ ಹೆಚ್ಚು ವಲಸಿಗರು ಮೊರಾಕೊ ಗಡಿಯಿಂದ ಸಿಯುಟಾ ನಗರಕ್ಕೆ ನುಗ್ಗಿದ್ದಾರೆ ಎಂದು ವರದಿಯಾಗಿದೆ.

ಸಿಯುಟಾ ಮತ್ತು ಮೆಲಿಲ್ಲಾ ಎಂಬ ಎರಡು ನಗರಗಳು ಆಫ್ರಿಕಾ ಖಂಡದ ಭೂಪ್ರದೇಶದಲ್ಲಿದ್ದರೂ, ಅವು ಸ್ಪೇನ್ ದೇಶಕ್ಕೆ ಸೇರಿದ ಸ್ವಾಯತ್ತ ನಗರಗಳಾಗಿವೆ. ಭೌಗೋಳಿಕವಾಗಿ ಇವುಗಳನ್ನು ಮೊರಾಕೊ ದೇಶವು ಸುತ್ತುವರೆದಿದೆ.

ಆಫ್ರಿಕಾ ಖಂಡದಿಂದ ಯುರೋಪಿಯನ್ ಯೂನಿಯನ್ ಒಕ್ಕೂಟವನ್ನು ತಲುಪಲು ಇರುವ ಏಕೈಕ ಭೂಗಡಿಗಳೆಂದರೆ, ಈ ಸಿಯುಟಾ ಮತ್ತು ಮೆಲಿಲ್ಲಾ ನಗರಗಳು. ಹೀಗಾಗಿ, ಆಫ್ರಿಕಾದ ವಲಸಿಗರಿಗೆ ಇದು ಯುರೋಪ್ ಪ್ರವೇಶಿಸುವ ಮುಖ್ಯ ಹೆಬ್ಬಾಗಿಲಾಗಿದೆ. ಮೊರಾಕೊ ಈ ನಗರಗಳನ್ನು ಸ್ಪೇನ್ ಆಕ್ರಮಿತ ತನ್ನದೇ ಭೂಮಿ ಎಂದು ವಾದಿಸುತ್ತದೆ.

ಸಾವಿರಾರು ಯುವಕರು, ಮಹಿಳೆಯರು ಮತ್ತು ಅಪ್ರಾಪ್ತ ಮಕ್ಕಳು ಮೊರಾಕೊ ಕರಾವಳಿಯಿಂದ ಸಿಯುಟಾದ ತಾರಾಜಲ್ ಸಮುದ್ರ ತೀರಕ್ಕೆ ಕಿಲೋಮೀಟರ್‌ಗಟ್ಟಲೆ ಈಜಿಕೊಂಡು ಅಥವಾ ಸಣ್ಣ ದೋಣಿಗಳ ಮೂಲಕ ಆಗಮಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನೂ ಕೆಲವರು ಗಡಿ ಬೇಲಿಗಳ ಕಲ್ಲುಬಂಡೆಗಳ ಮೇಲೆ ನಡೆದುಕೊಂಡು ಅಥವಾ ಗಡಿ ದಾಟುವ ತಡೆಗೋಡೆಗಳನ್ನು ಮುರಿದು ನುಗ್ಗುತ್ತಿದ್ದಾರೆ. ಈ ಅಪಾಯಕಾರಿ ಪ್ರಯತ್ನದಲ್ಲಿ ಸಮುದ್ರದಲ್ಲಿ ಮುಳುಗಿ ಇದುವರೆಗೆ ಕನಿಷ್ಠ 57ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಿಬಿಸಿ ವರದಿ ಹೇಳಿದೆ.

ನ್ಯಾಯಾಲಯದ ತೀರ್ಪು ಮತ್ತು ಸುಳ್ಳು ವದಂತಿ ಬೃಹತ್ ವಲಸೆಗೆ ಕಾರಣ?

ಜೂನ್ 2026ರಲ್ಲಿ ಸ್ಪೇನ್‌ನ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿತ್ತು. ಅದರ ಪ್ರಕಾರ, “ಸಮುದ್ರದ ಮಾರ್ಗವಾಗಿ ಬರುವ ಅಕ್ರಮ ವಲಸಿಗರನ್ನು ಕಾನೂನು ಪ್ರಕ್ರಿಯೆ ನಡೆಸದೆ ತಕ್ಷಣವೇ ಗಡಿಯಿಂದ ವಾಪಸ್ ಕಳುಹಿಸುವಂತಿಲ್ಲ” ಎಂದು ಹೇಳಲಾಗಿತ್ತು. ಮಾನವ ಕಳ್ಳ ಸಾಗಾಣಿಕೆದಾರರ ಜಾಲಗಳು ಈ ತೀರ್ಪನ್ನು ತಪ್ಪಾಗಿ ಬಿಂಬಿಸಿ, “ಈಗ ಸಿಯುಟಾಗೆ ಹೋದರೆ ಯಾರೂ ವಾಪಸ್ ಕಳಿಸಲ್ಲ, ಗಡಿ ಮುಕ್ತವಾಗಿದೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವದಂತಿ ಹಬ್ಬಿಸಿವೆ. ಈ ಕಾರಣದಿಂದ ಸಾವಿರಾರು ಜನರು ಸಿಯುಟಾಗೆ ನುಗ್ಗಿದ್ದಾರೆ ಎಂದು ಹೇಳಲಾಗ್ತಿದೆ.

ಮೊರಾಕೊದ ಯುವ ಜನರಲ್ಲಿ ನಿರುದ್ಯೋಗ ಮತ್ತು ಬಡತನ ತೀವ್ರವಾಗಿದೆ. ಉತ್ತಮ ಭವಿಷ್ಯ ಮತ್ತು ಆದಾಯದ ಹುಡುಕಾಟದಲ್ಲಿ ಯುರೋಪ್ ಸೇರಲು ಅಲ್ಲಿನ ಯುವ ಜನಾಂಗ ಕಾಯುತ್ತಿದ್ದಾರೆ. ಇದೂ ಕೂಡ ಗಡಿ ದಾಟಿರುವುದರ ಹಿಂದಿನ ಮತ್ತೊಂದು ಕಾರಣ ಎನ್ನಲಾಗ್ತಿದೆ.

ಇನ್ನು, ಸ್ಪೇನ್ ಮತ್ತು ಮೊರಾಕೊ ನಡುವೆ ಗಡಿ ವಿಷಯದಲ್ಲಿ ರಾಜಕೀಯ ಮುನಿಸು ಉಂಟಾದಾಗಲೆಲ್ಲಾ, ಮೊರಾಕೊ ತನ್ನ ಗಡಿ ಭದ್ರತೆಯನ್ನು ಸಡಿಲಗೊಳಿಸಿ ಸ್ಪೇನ್ ಮೇಲೆ ಒತ್ತಡ ಹೇರುತ್ತದೆ ಎಂಬ ಆರೋಪಗಳಿವೆ.

ಸ್ಪೇನ್ ಮತ್ತು ಇಸ್ರೇಲ್ ನಡುವಿನ ದ್ವೇಷ

ಸ್ಪೇನ್ ಮತ್ತು ಇಸ್ರೇಲ್ ನಡುವಿನ ಸಂಬಂಧಗಳು ಪ್ರಸ್ತುತ ತೀವ್ರ ರಾಜತಾಂತ್ರಿಕ ಬಿಕ್ಕಟ್ಟಿಗೆ ತಲುಪಿದ್ದು, ಎರಡು ದೇಶಗಳ ನಡುವೆ ಶೀತಲ ಸಮರದ ವಾತಾವರಣ ಸೃಷ್ಟಿಯಾಗಿದೆ. ವಿಶೇಷವಾಗಿ ಅಕ್ಟೋಬರ್ 2023ರ ಗಾಝಾ ಯುದ್ಧದ ಆರಂಭದ ನಂತರ, ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ನೇತೃತ್ವದ ಸರ್ಕಾರವು ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗಳ ವಿರುದ್ಧ ವಿಶ್ವದಲ್ಲೇ ಅತ್ಯಂತ ಕಠಿಣ ನಿಲುವನ್ನು ತಳೆದ ದೇಶಗಳಲ್ಲಿ ಒಂದಾಗಿದೆ.

ಮೇ 2024ರಲ್ಲಿ ಸ್ಪೇನ್, ಐರ್ಲೆಂಡ್ ಮತ್ತು ನಾರ್ವೆ ದೇಶಗಳ ಜೊತೆಗೂಡಿ ಪ್ಯಾಲೆಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಅಧಿಕೃತವಾಗಿ ಅಂಗೀಕರಿಸಿತ್ತು.

ಈ ಕ್ರಮವನ್ನು ಇಸ್ರೇಲ್ ತೀವ್ರವಾಗಿ ಖಂಡಿಸಿತ್ತು. ಇಸ್ರೇಲ್ ವಿದೇಶಾಂಗ ಸಚಿವಾಲಯವು ಸ್ಪೇನ್‌ನ ಈ ನಿರ್ಧಾರ “ಹಮಾಸ್ ಉಗ್ರರಿಗೆ ನೀಡಿದ ಬಹುಮಾನ” ಎಂದು ಕರೆದಿತ್ತು. ಜೆರುಸಲೆಮ್‌ನಲ್ಲಿರುವ ಸ್ಪೇನ್ ರಾಯಭಾರ ಕಚೇರಿಯು ಪ್ಯಾಲೆಸ್ತೀನಿಯರಿಗೆ ಸೇವೆ ನೀಡುವುದನ್ನು ಇಸ್ರೇಲ್ ನಿಷೇಧಿಸಿತ್ತು.

ಮಾರ್ಚ್ 2026ರಲ್ಲಿ ಸ್ಪೇನ್ ಸರ್ಕಾರವು ಇಸ್ರೇಲ್‌ನಲ್ಲಿದ್ದ ತನ್ನ ರಾಯಭಾರಿಯನ್ನು ಅಧಿಕೃತವಾಗಿ ವಾಪಸ್ ಕರೆಯಿಸಿಕೊಂಡಿದೆ. ಪ್ರಸ್ತುತ ಉಭಯ ದೇಶಗಳಲ್ಲಿ ಪೂರ್ಣ ಪ್ರಮಾಣದ ರಾಯಭಾರಿಗಳೇ ಇಲ್ಲದಂತಾಗಿದೆ.

ಸ್ಪೇನ್ ಪ್ರಧಾನಿ ಸ್ಯಾಂಚೆಝ್ ಅವರು ಇಸ್ರೇಲ್‌ನ ಗಾಝಾ ದಾಳಿಯನ್ನು “ಅಪರಾಧ ಮತ್ತು ನರಮೇಧ” ಎಂದು ಬಹಿರಂಗವಾಗಿ ಕರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಸ್ಪೇನ್ ಇಸ್ರೇಲ್ ವಿರುದ್ಧ “ರಾಜತಾಂತ್ರಿಕ ಯುದ್ಧ” ಸಾರಿದೆ ಎಂದು ಆರೋಪಿಸಿದ್ದಾರೆ.

ದಕ್ಷಿಣ ಆಫ್ರಿಕಾ ದೇಶವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ವಿರುದ್ಧ ಹೂಡಿರುವ ನರಮೇಧದ ಮೊಕದ್ದಮೆಯನ್ನು ಬೆಂಬಲಿಸಿದ ಮತ್ತು ಅದರಲ್ಲಿ ಭಾಗಿಯಾದ ಮೊದಲ ಯುರೋಪಿಯನ್ ರಾಷ್ಟ್ರ ಸ್ಪೇನ್ ಆಗಿದೆ.

ಇಸ್ರೇಲ್‌ಗೆ ಯಾವುದೇ ರೀತಿಯ ಆಯುಧಗಳನ್ನು ಪೂರೈಸದಂತೆ ಸ್ಪೇನ್ ಸಂಪೂರ್ಣ ಶಸ್ತ್ರಾಸ್ತ್ರ ನಿಷೇಧ ಹೇರಿದೆ ಮತ್ತು ಇಸ್ರೇಲ್‌ನ ಕೆಲವು ಉಗ್ರ ಬಲಪಂಥೀಯ ಮಂತ್ರಿಗಳು ಸ್ಪೇನ್ ಪ್ರವೇಶಿಸದಂತೆ ನಿಷೇಧಿಸಿದೆ.

ಫುಟ್ಬಾಲ್‌ನಲ್ಲೂ ಇಸ್ರೇಲ್-ಸ್ಪೇನ್ ಸಮರ

ಸ್ಪೇನ್ ಮತ್ತು ಇಸ್ರೇಲ್ ನಡುವಿನ ತೀವ್ರ ರಾಜತಾಂತ್ರಿಕ ಸಂಘರ್ಷವು ಕ್ರೀಡಾಂಗಣಕ್ಕೆ, ವಿಶೇಷವಾಗಿ ಫುಟ್ಬಾಲ್ ಮೈದಾನಕ್ಕೂ ವಿಸ್ತರಿಸಿದ್ದು, ಇತ್ತೀಚಿನ 2026ರ ಫಿಫಾ ವಿಶ್ವಕಪ್ ಸಮಯದಲ್ಲಿ ಇದು ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು.

ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರು ಗಾಝಾದಲ್ಲಿನ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿ, “ಇಸ್ರೇಲ್ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ತನ್ನ ಇಮೇಜ್ ಸುಧಾರಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ, ಹೀಗಾಗಿ ರಷ್ಯಾದಂತೆ ಇಸ್ರೇಲ್ ಅನ್ನು ಎಲ್ಲಾ ಜಾಗತಿಕ ಕ್ರೀಡೆಗಳಿಂದ ನಿಷೇಧಿಸಬೇಕು” ಎಂದು ಬಹಿರಂಗವಾಗಿ ಕರೆ ನೀಡಿದ್ದರು.

ಒಂದು ವೇಳೆ ಇಸ್ರೇಲ್ ತಂಡವು 2026ರ ವಿಶ್ವಕಪ್‌ಗೆ ಅರ್ಹತೆ ಪಡೆದರೆ, ಸ್ಪೇನ್ ಟೂರ್ನಿಯಿಂದಲೇ ಹಿಂದೆ ಸರಿಯಬಹುದು ಎಂಬ ರಾಜಕೀಯ ಚರ್ಚೆಗಳು ಆರಂಭವಾಗಿದ್ದವು. ಆದರೆ, ಇಸ್ರೇಲ್ ಅರ್ಹತಾ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರಿಂದ ಮತ್ತು ಸ್ಪೇನ್ ಸ್ಪಷ್ಟನೆ ನೀಡಿದ್ದರಿಂದ ಈ ವಿವಾದ ತಣ್ಣಗಾಯಿತು.

2026 ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಮತ್ತು ಅರ್ಜೆಂಟೀನಾ ಮುಖಾಮುಖಿಯಾಗಿದ್ದವು. ಈ ಪಂದ್ಯವು ಕೇವಲ ಫುಟ್ಬಾಲ್ ಆಗಿ ಉಳಿಯದೆ ಇಸ್ರೇಲ್-ಪ್ಯಾಲೆಸ್ತೀನ್ ರಾಜಕೀಯದ ಯುದ್ಧಭೂಮಿಯಾಗಿ ಬದಲಾಗಿತ್ತು.

ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೈ ಮತ್ತು ಅಲ್ಲಿನ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಇಸ್ರೇಲ್‌ನೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲಿ ಅಭಿಮಾನಿಗಳು ಬಹಿರಂಗವಾಗಿ ಅರ್ಜೆಂಟೀನಾ ತಂಡವನ್ನು ಬೆಂಬಲಿಸಿದ್ದರು.

ಮತ್ತೊಂದೆಡೆ, ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದ್ದ ಸ್ಪೇನ್ ತಂಡವನ್ನು ಗಾಝಾ ಮತ್ತು ಪ್ಯಾಲೆಸ್ತೀನ್‌ನ ಲಕ್ಷಾಂತರ ಜನ ತಮ್ಮದೇ ತಂಡವೆಂಬಂತೆ ಬೆಂಬಲಿಸಿದ್ದರು. ಸ್ಪೇನ್‌ನ ಯುವ ತಾರೆ ಲಾಮಿನ್ ಯಮಲ್ ಈ ಹಿಂದೆ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿದ್ದು ಇದಕ್ಕೆ ಪ್ರಮುಖ ಕಾರಣವಾಗಿತ್ತು.

ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸ್ಪೇನ್ 1-0 ಗೋಲುಗಳಿಂದ ಐತಿಹಾಸಿಕ ಜಯಗಳಿಸಿ ವಿಶ್ವಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಈ ಗೆಲುವನ್ನು ಇಸ್ರೇಲ್‌ನ ಆಡಳಿತಗಾರರು ಇಷ್ಟಪಡದಿದ್ದರೆ, ಗಾಝಾ ಪಟ್ಟಿಯ ನಿರಾಶ್ರಿತರ ಶಿಬಿರಗಳಲ್ಲಿ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವೆಯೇ ಪ್ಯಾಲೆಸ್ತೀನಿಯರು ಸ್ಪೇನ್ ಧ್ವಜ ಹಿಡಿದು ಭಾರಿ ವಿಜಯೋತ್ಸವ ಆಚರಿಸಿದರು. ಗಾಝಾ ನಗರದಲ್ಲಿ ಲಾಮಿನ್ ಯಮಲ್ ಅವರ ಬೃಹತ್ ಚಿತ್ರಗಳನ್ನು ಬಿಡಿಸಿ ಗೌರವಿಸಲಾಯಿತು.

ಒಟ್ಟಿನಲ್ಲಿ ಗಾಝಾ, ಲೆಬನಾನ್, ಇರಾನ್, ಸಿರಿಯಾ, ಯೆಮನ್ ಹೀಗೆ ಹಲವು ದೇಶಗಳ ಮೇಲಿನ ಆಕ್ರಮಣ ಮತ್ತು ನರಮೇಧಲ್ಲಿ ಇಸ್ರೇಲ್ ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿರುವುದು ಜಗತ್ತಿಗೆ ಗೊತ್ತಿರುವ ಸತ್ಯ. ಈಗ ಮೊರಾಕನ್ನರ ವಲಸೆಯ ಹಿಂದೆಯೂ ಇಸ್ರೇಲ್ ಕೈವಾಡ ಇರುವುದು ಅಲ್ಲಗಳೆಯಲಾಗದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...