ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತದ್ದು ಎಂದು ಕಲ್ಯಾಣ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಆಳಂದ ಕ್ಷೇತ್ರದ ಶಾಸಕ ಬಿ. ಆರ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ಹಾಗೂ ಪ್ರಮುಖ ಹುದ್ದೆಗಳ ಹಂಚಿಕೆ ಬೆನ್ನಲ್ಲೇ ಆಳಂದ ಶಾಸಕ ಸ್ಥಾನಕ್ಕೆ ಬಿ.ಆರ್. ಪಾಟೀಲ್ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿದ್ದವು. ಈ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
‘ಜನಾದೇಶಕ್ಕೆ ದ್ರೋಹ ಎಸಗಲಾರೆ’
ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ ಬಿ.ಆರ್. ಪಾಟೀಲ್, ನನ್ನ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಶಾಸಕ ಸ್ಥಾನ ಎಂಬುದು ನನಗೆ ಸಿಕ್ಕ ಬರಿ ಹುದ್ದೆಯಲ್ಲ, ಅದು ನನ್ನ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ನಂಬಿಕೆ ಮತ್ತು ಜವಾಬ್ದಾರಿಯ ಸಂಕೇತ. ಯಾವುದೇ ಕಾರಣಕ್ಕೂ ಆ ಜನಾದೇಶಕ್ಕೆ ದ್ರೋಹ ಬಗೆಯುವ ಪ್ರಶ್ನೆಯೇ ಇಲ್ಲ. ನನ್ನನ್ನು ಗೆಲ್ಲಿಸಿದ ಜನರ ಆಶಯಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆ. ಸಚಿವ ಸ್ಥಾನ ಸಿಗಲಿ, ಸಿಗದಿರಲಿ, ನಾನು ನನ್ನ ಜನರ ಸೇವೆಗೆ ಸದಾ ಬದ್ಧ ಎಂದು ಹೇಳಿದ್ದಾರೆ.
ಸಚಿವ ಸ್ಥಾನ ಸಿಗದೇ ಇದ್ದುದಕ್ಕೆ ತಮ್ಮ ಅಸಮಾಧಾನವನ್ನು ಮುಚ್ಚಿಡದೆ ನೇರವಾಗಿ ವ್ಯಕ್ತಪಡಿಸಿದ ಅವರು, ಸಚಿವ ಸ್ಥಾನ ದೊರಕದಿರುವುದು ನನಗೂ ಸಹಜವಾಗಿ ನೋವು ಮತ್ತು ತೀವ್ರ ಅಸಮಾಧಾನವನ್ನು ಉಂಟುಮಾಡಿದೆ. ಆದರೆ, ಐದು ದಶಕಗಳ (50 ವರ್ಷಗಳ) ನನ್ನ ರಾಜಕೀಯ ಜೀವನದಲ್ಲಿ ನಾನು ಹುದ್ದೆಗಿಂತ ಪಕ್ಷವನ್ನು, ವೈಯಕ್ತಿಕ ಹಿತಾಸಕ್ತಿಗಿಂತ ಸಿದ್ಧಾಂತವನ್ನು ಎತ್ತಿಹಿಡಿದಿದ್ದೇನೆ. ಕಾಂಗ್ರೆಸ್ ಪಕ್ಷದ ಮೇಲಿನ ನನ್ನ ನಿಷ್ಠೆ ಅಚಲವಾದದ್ದು. ಸಮಾಜವಾದಿ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ಪರವಾದ ನನ್ನ ಬದ್ಧತೆ ಎಂದಿಗೂ ಬದಲಾಗುವುದಿಲ್ಲ ಎಂದಿದ್ದಾರೆ.
1983ರಿಂದಲೂ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿರುವ ಬಿ.ಆರ್. ಪಾಟೀಲ್ ಅವರು ರಾಜ್ಯ ರಾಜಕಾರಣದ ಅತ್ಯಂತ ಹಿರಿಯ ಹಾಗೂ ನೇರನಿಷ್ಠುರ ನಾಯಕರಲ್ಲಿ ಒಬ್ಬರು.
ಈ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು, ನಂತರ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಆಳಂದ ಕ್ಷೇತ್ರಕ್ಕೆ ಸೂಕ್ತ ಅನುದಾನ ಸಿಗದಿರುವುದು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಮಗಿಂತ ಕಿರಿಯ ನಾಯಕರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಿ ತಮಗೆ ಸಚಿವ ಸ್ಥಾನ ತಪ್ಪಿಸಲಾಯಿತು ಎಂಬ ನೋವು ಬಿ.ಆರ್. ಪಾಟೀಲ್ ಅವರಿಗೆ ಇತ್ತು.
ಇತ್ತೀಚಿನ ರಾಜಕೀಯ ಮಂಥನದಲ್ಲಿ ಅವರು ಶಾಸಕ ಸ್ಥಾನವನ್ನೇ ತ್ಯಜಿಸಲಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಆದರೆ ಪ್ರಸ್ತುತ ಅದನ್ನು ಅವರೇ ಅಧಿಕೃತವಾಗಿ ನಿರಾಕರಿಸುವ ಮೂಲಕ ತಮ್ಮ ಆಳಂದ ಕ್ಷೇತ್ರದ ಮತದಾರರಲ್ಲಿ ಹಾಗೂ ಪಕ್ಷದ ವಲಯದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.


