ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ ಲೆಟರ್‌ಹೆಡ್ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ ಅವರ ಹೆಸರಿನಲ್ಲಿ ವಿವಿಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಗೆ ಪೂಜೆಗೆ ಬರುವಮತೆ ಅಧಿಕೃತ ಆಹ್ವಾನ ಹೊರಡಿಲಾಗಿದೆ. ಅದರಲ್ಲಿ ದಿನಾಂಕ 11-08-2026 (ಮಂಗಳವಾರ) ರಂದು ಬೆಳಿಗ್ಗೆ 10.30 ಕ್ಕೆ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ಕುಲಪತಿಗಳ ವಸತಿಗೃಹದಲ್ಲಿ ‘ಶ್ರೀ ಸತ್ಯನಾರಾಯಣ ಪೂಜೆ, ನವಗ್ರಹ ಶಾಂತಿ ಹೋಮ ಹಾಗೂ ಶ್ರೀ ಮಹಾಗಣಪತಿ ಪೂಜಾ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಲ್ಲಖಿಸಲಾಗಿದೆ. ಈ ಪೂಜಾ ಕಾರ್ಯಕ್ರಮ ಆಯೋಜನೆ ಮತ್ತು ಆಹ್ವಾನವು ಸಾರ್ವಜನಿಕ, ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಹ್ವಾನ ಪತ್ರಿಕೆಯ ‘ಲೆಟರ್ ಹೆಡ್’ ವೈರಲ್ ಆಗಿದ್ದು, ನೆಟ್ಟಿಗರು ಹಾಗೂ ಶಿಕ್ಷಣ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಕಾರ್ಮಿಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೈಯಕ್ತಿಕವಾಗಿ ಭಾಗವಹಿಸಿ ದೇವರ ಆಶೀರ್ವಾದ ಪಡೆಯಬೇಕೆಂದು ಉಲ್ಲೇಖಿಸಿದ್ದಾರೆ. ಕುಲಪತಿಗಳ ವಿಷ್ಣುವರ್ಧನ್ ಅವರ ಈ ಧೋರಣೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಸರ್ಕಾರಿ ಅನುದಾನದಲ್ಲಿ ನಡೆಯುವ ಹಾಗೂ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಉನ್ನತ ಶಿಕ್ಷಣ ಸಂಸ್ಥೆಯೊಂದರಲ್ಲಿ ಇಂತಹ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಮತ್ತು ಅದಕ್ಕೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅಧಿಕೃತವಾಗಿ ಆಹ್ವಾನಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವು ಆಕ್ರೋಶ ಹೊರಹಾಕಿದ್ದಾರೆ..
“ವಿಶ್ವವಿದ್ಯಾಲಯಗಳು ವೈಜ್ಞಾನಿಕ ಮನೋಭಾವನೆ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುವ ಕೇಂದ್ರಗಳಾಗಬೇಕು. ವಿಜ್ಞಾನವನ್ನು ಬೋಧಿಸುವ ಸಂಸ್ಥೆಯ ಉನ್ನತ ಹುದ್ದೆಯಲ್ಲಿದ್ದುಕೊಂಡು ಹೋಮ, ಹವನ ಮತ್ತು ನವಗ್ರಹ ಶಾಂತಿ ಪೂಜೆಗಳನ್ನು ಪ್ರಚುರಪಡಿಸುವುದು ವೈಜ್ಞಾನಿಕ ಆಲೋಚನೆಗಳಿಗೆ ಹಿನ್ನೆಡೆ ತರುತ್ತದೆ. ಶಿಕ್ಷಣ ಸಂಸ್ಥೆಗಳ ಅಧಿಕೃತ ವೇದಿಕೆಯಲ್ಲಿ ಇಂತಹ ಆಚರಣೆಗಳು ಸರಿಯಲ್ಲ” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
“ಸರ್ಕಾರಿ ಮತ್ತು ಶೈಕ್ಷಣಿಕ ಸಂಸ್ಥೆಗಳು ಎಲ್ಲ ಧರ್ಮ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಸಮಾನವಾದ ಜಾತ್ಯತೀತ ಸ್ಥಳಗಳಾಗಿವೆ. ಕುಲಪತಿಗಳು ತಮ್ಮ ವೈಯಕ್ತಿಕ ವೆಚ್ಚದಲ್ಲಿ ವಸತಿಗೃಹದಲ್ಲಿ ಪೂಜೆ ಮಾಡಿಕೊಳ್ಳುವುದಕ್ಕೆ ಅಭ್ಯಂತರವಿಲ್ಲ, ಆದರೆ ವಿಶ್ವವಿದ್ಯಾಲಯದ ಲೋಗೋ ಹಾಗೂ ಅಧಿಕೃತ ಪತ್ರವನ್ನು ಬಳಸಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಆಹ್ವಾನಿಸಿರುವುದು ಸಂವಿಧಾನದ ಜಾತ್ಯತೀತ ಆಶಯಗಳಿಗೆ ವಿರುದ್ಧವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವಿದ್ಯಾರ್ಥಿಗಳನ್ನು ಅಭ್ಯಾಸ ಮತ್ತು ಸಂಶೋಧನೆಗಳತ್ತ ಗಮನ ಹರಿಸುವಂತೆ ಪ್ರೇರೇಪಿಸಬೇಕಾದ ಆಡಳಿತ ಮಂಡಳಿಯೇ ಪೂಜೆ-ಪುನಸ್ಕಾರಗಳಲ್ಲಿ ಭಾಗವಹಿಸುವಂತೆ ಕರೆ ನೀಡುವುದು ಶೈಕ್ಷಣಿಕ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವವಿದ್ಯಾಲಯದ ಸಂಪನ್ಮೂಲಗಳು ವೈಜ್ಞಾನಿಕ ಬೆಳವಣಿಗೆಗೆ ಬಳಕೆಯಾಗಬೇಕೇ ಹೊರತು ಧಾರ್ಮಿಕ ಚಟುವಟಿಕೆಗಳಿಗಲ್ಲ” ಎಂಬ ಆಕ್ಷೇಪಗಳು ಇವೆ.


