ದೇಶಾದ್ಯಂತ ನಡೆಯುತ್ತಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿದ್ದು, ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಅವರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ. ಈ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ಕೇಂದ್ರ ಸರ್ಕಾರದ ಹಿತಾಸಕ್ತಿಗೆ ತಕ್ಕಂತೆ ನಡೆದುಕೊಳ್ಳುತ್ತಿರುವ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ ಸೇರಿದಂತೆ ವಿವಿಧ ಎಡಪಕ್ಷಗಳು ಹಾಗೂ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಜಂಟಿ ನೇತೃತ್ವದಲ್ಲಿ ನಡೆದ ಈ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ಪ್ರಸ್ತುತ ಜಾರಿಯಲ್ಲಿರುವ ಎಸ್‌ಐಆರ್ ವ್ಯವಸ್ಥೆಯು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ ಎಂದು ಖಂಡಿಸಿದರು. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಿ ಅವರಿಗೆ ಮತದಾನದ ಹಕ್ಕು ಖಾತರಿಪಡಿಸುವುದು ಚುನಾವಣಾ ಆಯೋಗದ ಪ್ರಾಥಮಿಕ ಕರ್ತವ್ಯವಾಗಬೇಕಿತ್ತು. ಆದರೆ ಆಯೋಗವು ಸಾರ್ವಜನಿಕರನ್ನು ಅನುಮಾನಾಸ್ಪದ ವರ್ಗಕ್ಕೆ ತಳ್ಳಿ, ಪಟ್ಟಿಯಿಂದ ಹೊರಹಾಕುವ ಕೆಲಸದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಒಂದರಲ್ಲೇ ಕರಡು ಮತದಾರರ ಪಟ್ಟಿಯಲ್ಲಿ ಬರೋಬ್ಬರಿ 1.08 ಕೋಟಿಗೂ ಹೆಚ್ಚು ಮತದಾರರನ್ನು ‘ಗೈರುಹಾಜರಿ, ಸ್ಥಳಾಂತರ, ಮೃತ, ನಕಲಿ ಮತ್ತು ಇತರರು’ (ASDDO – Absent, Shifted, Dead, Duplicate and Others) ಎಂಬ ವರ್ಗದಲ್ಲಿ ಸೇರಿಸಿ ಗುರುತಿಸಲಾಗಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜನರನ್ನು ಅನಿಶ್ಚಿತತೆಗೆ ತಳ್ಳಿರುವ ಈ ವರ್ಗೀಕರಣವು ಆಯೋಗದ ಉದ್ದೇಶ ಮತ್ತು ಪಾರದರ್ಶಕತೆಯ ಮೇಲೆಯೇ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಮತದಾರರ ಪಟ್ಟಿಯ ಶುದ್ಧೀಕರಣದ ನೆಪ ಹೇಳುತ್ತಿರುವ ಆಯೋಗವು, ASDDO ಪಟ್ಟಿಯಲ್ಲಿರುವ ಪ್ರತಿಯೊಂದು ಹೆಸರನ್ನೂ ಅಂತಿಮವಾಗಿ ತೆಗೆದುಹಾಕುವುದಿಲ್ಲ ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಈ ಜಟಿಲ ಪ್ರಕ್ರಿಯೆಯ ನೆಪದಲ್ಲಿ ಸಾಮಾನ್ಯ ಹಾಗೂ ಅರ್ಹ ಮತದಾರರ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಖಾತರಿಪಡಿಸುವುದು ಆಯೋಗದ ಹೊಣೆಗಾರಿಕೆಯಾಗಿದೆ ಎಂದು ನಾಯಕರು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗವು ತನ್ನ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇರ ನಿರ್ದೇಶನ ಹಾಗೂ ಒತ್ತಡಕ್ಕೆ ಮಣಿದು ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ. ಈ ಅಕ್ರಮಗಳಿಗೆ ನೇರ ಹೊಣೆಗಾರರಾಗಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು, ಇಲ್ಲವೇ ಕೇಂದ್ರ ಸರ್ಕಾರ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಇದರೊಂದಿಗೆ, ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ರಕ್ಷಿಸಬೇಕು. ‘Absent’ ಅಥವಾ ‘Shifted’ ಎಂದು ತಪ್ಪಾಗಿ ಗುರುತಿಸಲ್ಪಟ್ಟಿರುವ ಮತದಾರರ ಅರ್ಜಿಗಳನ್ನು ಮರುಪರಿಶೀಲಿಸಿ, ಯಾವುದೇ ಅರ್ಹ ಪ್ರಜೆಯ ಹೆಸರು ಪಟ್ಟಿಯಿಂದ ಬಿಟ್ಟುಹೋಗದಂತೆ ತಕ್ಷಣವೇ ಮರುಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಈ ಬೃಹತ್ ಪ್ರತಿಭಟನೆಯಲ್ಲಿ ಎಡಪಕ್ಷಗಳ ಪ್ರಮುಖ ನಾಯಕರಾದ ಸಾತಿ ಸುಂದರೇಶ್, ಎ. ಜ್ಯೋತಿ, ನೂರ್ ಶ್ರೀಧರ್, ಉಮಾದೇವಿ, ಶ್ರೀರಾಮ್, ಗೌರಮ್ಮ, ಬಿ.ಎನ್. ಮಂಜುನಾಥ್, ಕೆ.ಎಸ್ ವಿಮಲಾ, ಯಶ್ವಂತ್, ಕಲಿಂ ವಿನಯ್ ಶ್ರೀನಿವಾಸ್, ಮೈತ್ರೇಯಿ ಸೇರಿದಂತೆ ಪ್ರಮುಖ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.


