ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಸರ್ಕಾರವು ಸಾರ್ವಜನಿಕರ ಹಾಗೂ ವಿರೋಧ ಪಕ್ಷಗಳ ತೀವ್ರ ಆಕ್ರೋಶದ ಬೆನ್ನಲ್ಲೇ ತನ್ನ ವಿವಾದಾತ್ಮಕ ನಿರ್ಧಾರವೊಂದನ್ನು ಹಿಂಪಡೆದುಕೊಂಡಿದೆ. ಸಾರ್ವಜನಿಕ (ಕಾನೂನು ಮತ್ತು ಸುವ್ಯವಸ್ಥೆ) ಇಲಾಖೆಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ), 2005ರ ವ್ಯಾಪ್ತಿಯಿಂದ ವಿನಾಯಿತಿ ನೀಡಲು ಹೊರಡಿಸಲಾಗಿದ್ದ ಗೆಜೆಟ್ ಅಧಿಸೂಚನೆಯನ್ನು ವಿಜಯ್ ಸರ್ಕಾರವು ಅಧಿಕೃತವಾಗಿ ರದ್ದುಗೊಳಿಸಿದೆ.
ಆರ್ಟಿಐ ವ್ಯಾಪ್ತಿಯಿಂದ ವಿನಾಯಿತಿ ನೀಡಲು ಹೆಣೆದಿದ್ದ ತಂತ್ರ
ಇತ್ತೀಚೆಗೆ ತಮಿಳುನಾಡು ಸರ್ಕಾರವು ಆರ್ಟಿಐ ಕಾಯ್ದೆಯ ಸೆಕ್ಷನ್ 24(4) ಅನ್ನು ಬಳಸಿಕೊಂಡು, ರಾಜ್ಯದ ಸಾರ್ವಜನಿಕ (ಕಾನೂನು ಮತ್ತು ಸುವ್ಯವಸ್ಥೆ) ಇಲಾಖೆಯನ್ನು ‘ಖ್ಯಾತ ಗೂಢಚಾರಿ ಮತ್ತು ಭದ್ರತಾ ಸಂಸ್ಥೆ’ ಎಂದು ವರ್ಗೀಕರಿಸಿತ್ತು. ಈ ಕಾಯ್ದೆಯ ವರ್ಗೀಕರಣವನ್ನು ದುರ್ಬಳಕೆ ಮಾಡಿಕೊಂಡು ಇಲಾಖೆಯ ಆಂತರಿಕ ಕೆಲಸ ಕಾರ್ಯಗಳು, ಲಾಕ್ಅಪ್ ಸಾವುಗಳು, ಕೋಮು ಗಲಭೆಗಳು ಹಾಗೂ ಬಂಧನಗಳ ಕುರಿತಾದ ಯಾವುದೇ ಮಾಹಿತಿಯನ್ನು ಆರ್ಟಿಐ ಮೂಲಕ ನಾಗರಿಕರಿಗೆ ನೀಡದಂತೆ ಸಂಪೂರ್ಣ ವಿನಾಯಿತಿ ನೀಡಲು ತೀರ್ಮಾನಿಸಲಾಗಿತ್ತು.
‘ಪೊಲೀಸ್ ರಾಜ್ಯ’ ಎಂದಿದ್ದ ವಿಪಕ್ಷಗಳು ಹಾಗೂ ಜನಾಕ್ರೋಶಕ್ಕೆ ಮಣಿದ ಸರ್ಕಾರ
ಸರ್ಕಾರದ ಈ ಪಾರದರ್ಶಕತೆ ವಿರೋಧಿ ನಿರ್ಧಾರ ಹೊರಬೀಳುತ್ತಿದ್ದಂತೆಯೇ ನಾಗರಿಕ ಹಕ್ಕುಗಳ ಹೋರಾಟಗಾರರು, ಆರ್ಟಿಐ ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸರ್ಕಾರದ ಈ ಕ್ರಮವು ತಮಿಳುನಾಡನ್ನು ಪ್ರಜಾಪ್ರಭುತ್ವದ ಹಾದಿಯಿಂದ ತಪ್ಪಿಸಿ ‘ಪೊಲೀಸ್ ರಾಜ್ಯ’ವನ್ನಾಗಿ ಪರಿವರ್ತಿಸುವ ಅಪಾಯಕಾರಿ ಯತ್ನ ಎಂದು ಸಿಪಿಐ(ಎಂ) ಸಂಸದ ಸು. ವೆಂಕಟೇಶನ್ ಆರೋಪಿಸಿದ್ದರು.
ಮತ್ತೊಂದೆಡೆ, ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು, ಪಾರದರ್ಶಕ ಆಡಳಿತಕ್ಕೆ ಈ ನಿರ್ಧಾರ ಕೊಡಲಿಪೆಟ್ಟು ನೀಡುತ್ತದೆ ಹಾಗೂ ಕಸ್ಟಡಿ ಸಾವುಗಳಂತಹ ಗಂಭೀರ ಮಾನವಹಕ್ಕು ಉಲ್ಲಂಘನೆಗಳನ್ನು ಮುಚ್ಚಿಹಾಕಲು ದಾರಿಯಾಗುತ್ತದೆ ಎಂದು ಕಿಡಿಕಾರಿದ್ದರು.
ಎಲ್ಲಾ ವಲಯಗಳಿಂದ ಹರಿದುಬಂದ ತೀವ್ರ ಟೀಕೆಗಳು ಮತ್ತು ಸಾರ್ವಜನಿಕರ ಬೃಹತ್ ಒತ್ತಡಕ್ಕೆ ಮಣಿದ ವಿಜಯ್ ಸರ್ಕಾರ, ಮಾನವ ಸಂಪನ್ಮೂಲ ನಿರ್ವಹಣೆ ಇಲಾಖೆಯು ಸೆಪ್ಟೆಂಬರ್ 21ರಂದು ಹೊರಡಿಸಿದ್ದ ‘ಆದೇಶ ಸಂಖ್ಯೆ 57’ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.


