ಮಂಗಳೂರು: ‘ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಕೊಲ್ಲುವುದಕ್ಕಾಗಿ ಬಿಜೆಪಿ ಮಾಡಿರುವ ಬಹುದೊಡ್ಡ ಹುನ್ನಾರವೇ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. SIR ಪ್ರಕ್ರಿಯೆಯ ವಿರುದ್ಧ ದೇಶದ ನಾಗರಿಕರು ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘SIR ಸಮಾಲೋಚನಾ ಸಭೆ’ಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, SIR ಪ್ರಕ್ರಿಯೆಯಲ್ಲಿ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವಂತಹ ಹಲವು ಲೋಪಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಮಂಗಳೂರಿನ ಹೋರಾಟಗಾರರು SIR ಪ್ರಕ್ರಿಯೆ ಆರಂಭವಾಗುವ ಮುನ್ನವೇ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರಿಂದ ಇಲ್ಲಿ ಮತದಾರರ ಹೆಸರು ಡಿಲೀಟ್ ಆಗಿರುವ ಪ್ರಮಾಣ ಕಡಿಮೆಯಾಗಿದೆ. ಇದಕ್ಕಾಗಿ ಹೋರಾಟಗಾರರಿಗೆ ಧನ್ಯವಾದ ಸಲ್ಲಿಸುವುದಾಗಿ ಅವರು ಹೇಳಿದರು.
ಅಕ್ರಮ ನುಸುಳುಕೋರರನ್ನು ತಡೆಯಬೇಕು ಮತ್ತು ಮತದಾರರ ಪಟ್ಟಿಯನ್ನು ಶುದ್ಧೀಕರಿಸಬೇಕು ಎಂಬ ಚುನಾವಣಾ ಆಯೋಗದ ವಾದವನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಅದರ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಯ ಹಿಂದೆ ರಾಜಕೀಯ ಉದ್ದೇಶವಿದೆ ಎಂಬುದು ತಮ್ಮ ಆತಂಕ ಎಂದು ಪ್ರಕಾಶ್ ರಾಜ್ ಹೇಳಿದರು.

ಚುನಾವಣಾ ಆಯುಕ್ತರ ನೇಮಕಾತಿ ವ್ಯವಸ್ಥೆಯ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದರು. ಮುಖ್ಯ ನ್ಯಾಯಮೂರ್ತಿಗಳನ್ನು ಆಯ್ಕೆ ಸಮಿತಿಯಿಂದ ಹೊರಗಿಟ್ಟು, ಆಡಳಿತ ಪಕ್ಷಕ್ಕೆ ಹೆಚ್ಚಿನ ಪ್ರಾಬಲ್ಯ ಇರುವ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಆರೋಪಿಸಿದರು. ಹೀಗಾಗಿ ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತತೆಯ ಕುರಿತು ಪ್ರಶ್ನೆಗಳು ಉದ್ಭವಿಸುತ್ತವೆ ಎಂದರು.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನೂ ಪ್ರಕಾಶ್ ರಾಜ್ ತೀವ್ರವಾಗಿ ಟೀಕಿಸಿದರು. ಚುನಾವಣಾ ಆಯೋಗದೊಳಗಿನ ನಿರ್ಧಾರಗಳು ಹಾಗೂ SIRಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪಗಳನ್ನು ದಾಖಲಿಸಿರುವುದನ್ನು ಉಲ್ಲೇಖಿಸಿದ ಅವರು, ಆಯೋಗದೊಳಗಿನ ಬೆಳವಣಿಗೆಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಹೇಳಿದರು.
ಇತ್ತೀಚೆಗೆ SIRಗೆ ಸಂಬಂಧಿಸಿದ ಫಾರ್ಮ್-6 ಬದಲಾವಣೆಗಳ ಕುರಿತು ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಮತ್ತು ಸುಖ್ಬೀರ್ ಸಿಂಗ್ ಸಂಧು ಆಕ್ಷೇಪ ವ್ಯಕ್ತಪಡಿಸಿರುವುದನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿತ್ತು. ಕಾನೂನಿನಲ್ಲಿ ನಿಗದಿಪಡಿಸಿರುವ ಫಾರ್ಮ್‌ಗಳನ್ನು ನಿಯಮ ತಿದ್ದುಪಡಿ ಮಾಡದೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಇಬ್ಬರೂ ಅಧಿಕಾರಿಗಳು ಆಕ್ಷೇಪಿಸಿದ್ದರು. ಆದರೆ ಚುನಾವಣಾ ಆಯೋಗವು ಬಳಿಕ SIRಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಿಗೆ ಮೂವರು ಆಯುಕ್ತರ ಒಮ್ಮತದ ಅನುಮೋದನೆ ಇತ್ತು ಎಂದು ಸ್ಪಷ್ಟಪಡಿಸಿದೆ.
ಚುನಾವಣಾ ಆಯುಕ್ತರಿಗೆ ನೀಡಲಾಗಿರುವ ಕಾನೂನು ರಕ್ಷಣೆಯ ಬಗ್ಗೆಯೂ ಪ್ರಕಾಶ್ ರಾಜ್ ಪ್ರಶ್ನೆ ಎತ್ತಿದರು. ಆಯುಕ್ತರು ಅಧಿಕಾರಾವಧಿಯಲ್ಲಿ ಅಥವಾ ನಿವೃತ್ತಿಯ ಬಳಿಕ ಕೆಲವು ಕ್ರಮಗಳಿಗೆ ಹೊಣೆಗಾರರಾಗದಂತೆ ಕಾನೂನು ರಕ್ಷಣೆ ನೀಡಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದ ಅವರು, ಭವಿಷ್ಯದಲ್ಲಿ ಅಕ್ರಮಗಳಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ವ್ಯವಸ್ಥೆ ರೂಪಿಸಲಾಗಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದರು.
‘ಕರ್ನಾಟಕದಲ್ಲಿ ಮೂರು ತಿಂಗಳಲ್ಲಿ SIR ಅಸಾಧ್ಯ’
ಐದು ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ಕರ್ನಾಟಕದಲ್ಲಿ ತರಬೇತಿ ಪಡೆಯದ ಸಿಬ್ಬಂದಿಯನ್ನು ಬಳಸಿಕೊಂಡು ಕೇವಲ ಮೂರು ತಿಂಗಳಲ್ಲಿ SIR ಪೂರ್ಣಗೊಳಿಸುವುದು ಸಾಧ್ಯವೇ ಇಲ್ಲ ಎಂದು ಪ್ರಕಾಶ್ ರಾಜ್ ಹೇಳಿದರು. ನಾಗರಿಕ ಸಂಘಟನೆಗಳ ತೀವ್ರ ಒತ್ತಡದ ಬಳಿಕ 15 ದಿನಗಳ ಕಾಲಾವಕಾಶ ನೀಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಸುಮಾರು ಒಂದೂವರೆ ಕೋಟಿ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅವರು ಆರೋಪಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಹಿಂದೆ ಇದ್ದ ವಿಕೇಂದ್ರೀಕೃತ ವ್ಯವಸ್ಥೆಯ ಬದಲು ಹಲವು ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕ ಕೇಂದ್ರೀಕರಿಸಲಾಗುತ್ತಿದೆ ಎಂದೂ ಅವರು ಹೇಳಿದರು. ಹೊಸದಾಗಿ ತರಲಾಗಿರುವ ಫಾರ್ಮ್-6 ಅರ್ಜಿಗಳು ದೆಹಲಿಗೆ ತಲುಪುವ ವ್ಯವಸ್ಥೆ ರೂಪಿಸಲಾಗಿದೆ. ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಯಬೇಕಾದ ಅರ್ಜಿಗಳ ಕುರಿತು ದೆಹಲಿಯಲ್ಲಿ ಕುಳಿತು ತೀರ್ಮಾನಿಸುವ ವ್ಯವಸ್ಥೆ ಏಕೆ ಬೇಕು ಎಂದು ಪ್ರಶ್ನಿಸಿದರು.

SIRಗೆ ಸಂಬಂಧಿಸಿದ ಫಾರ್ಮ್-6 ಬದಲಾವಣೆಯ ಕುರಿತು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿರುವ ವಿಚಾರವನ್ನೂ ಅವರು ಉಲ್ಲೇಖಿಸಿದರು. ಈ ಬದಲಾವಣೆಗಳು ಕಾನೂನುಬದ್ಧ ನಿಯಮಗಳಿಗೆ ಅನುಗುಣವಾಗಿಲ್ಲ ಎಂಬ ಆಕ್ಷೇಪಗಳು ಚುನಾವಣಾ ಆಯೋಗದೊಳಗೇ ದಾಖಲಾಗಿವೆ ಎಂದು ಹೇಳಿದರು.
ತಮ್ಮ ತಂಡವು ರಾಜ್ಯದ 100 ಮತಗಟ್ಟೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಲೋಪಗಳು ಮತ್ತು ತಾಂತ್ರಿಕ ಸಮಸ್ಯೆಗಳು ಕಂಡುಬಂದಿವೆ ಎಂದು ಪ್ರಕಾಶ್ ರಾಜ್ ಹೇಳಿದರು. ಚುನಾವಣಾ ಆಯೋಗದ ಅಧಿಕಾರಿಗಳಿಂದಲೇ ಉಂಟಾದ ಕಾಗುಣಿತ ತಪ್ಪುಗಳನ್ನು ಸರಿಪಡಿಸಲು ಸಾಮಾನ್ಯ ನಾಗರಿಕರು ದಾಖಲೆಗಳನ್ನು ಹಿಡಿದು ಕಚೇರಿಗಳ ಮುಂದೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು. ಇಂತಹ ಸಮಸ್ಯೆಗಳ ಕುರಿತು ಉಳಿದ ರಾಜಕೀಯ ಪಕ್ಷಗಳು ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವ ಯತ್ನ ಆರೋಪ
ಬೆಳಗಾವಿಯಲ್ಲಿ ಸುಮಾರು 200 ಮುಸ್ಲಿಂ ಮತದಾರರ EPIC ಸಂಖ್ಯೆಯನ್ನು ಬಳಸಿಕೊಂಡು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಫಾರ್ಮ್-7 ಸಲ್ಲಿಸಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು. ಬಿಎಲ್‌ಒ ಮಟ್ಟದಲ್ಲಿ ಪರಿಶೀಲನೆ ನಡೆಸಿದಾಗ ಈ ಅರ್ಜಿಗಳ ಹಿಂದೆ ಬಿಜೆಪಿ ನಾಯಕರ ಒತ್ತಡವಿತ್ತು ಎಂಬುದು ಗೊತ್ತಾಗಿದೆ ಎಂದು ಅವರು ಹೇಳಿದರು. ತಮ್ಮ ತಂಡ ಪ್ರಶ್ನಿಸಿದಾಗ ಇದಕ್ಕೆ ಸಮರ್ಪಕ ಉತ್ತರ ನೀಡಲು ಯಾರಿಗೂ ಸಾಧ್ಯವಾಗಲಿಲ್ಲ ಎಂದರು.
ಇದೇ ರೀತಿಯಲ್ಲಿ ಸುಮಾರು 27 ಸಾವಿರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಯೋಜನೆ ರೂಪಿಸಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಈ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
SIR ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಬೇಕು, 2022ರ ಮತದಾರರ ಪಟ್ಟಿಯನ್ನು ಮರುಜಾರಿಗೆ ತರಬೇಕು, SIR ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಬರೆದಿರುವ ಪತ್ರಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬೇಕು ಹಾಗೂ ಮತದಾರರ ಹಕ್ಕು ಕಸಿದುಕೊಂಡು ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಭೆಯ ಪ್ರಮುಖ ಬೇಡಿಕೆಗಳಾಗಿವೆ.
SIR ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಲೋಪಗಳು ಮತ್ತು ಅಕ್ರಮಗಳನ್ನು ಪರಿಶೀಲಿಸಿ, ಸಂತ್ರಸ್ತ ಮತದಾರರನ್ನು ನೇರವಾಗಿ ಭೇಟಿಯಾಗಿ ಅವರ ಸಾಕ್ಷ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ ‘SIR ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ವನ್ನು ಹಮ್ಮಿಕೊಂಡಿದೆ. ಮಂಗಳೂರಿನಲ್ಲಿ ನಡೆದ ಸಮಾಲೋಚನಾ ಸಭೆ ಇದೇ ಪ್ರವಾಸದ ಭಾಗವಾಗಿತ್ತು.


