ಕರ್ನಾಟಕ ವಿಧಾನಮಂಡಲವು ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಕೆಲವು ಭಾಗಗಳನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಬಳಸಲು ಅನುಮತಿಸುವ ಕಾಯ್ದೆ ತಿದ್ದುಪಡಿಯನ್ನು ಅಂಗೀಕರಿಸಿದ ನಂತರ, ಬೆಂಗಳೂರಿನ ಉದ್ಯಾನವನಗಳು ಹೊಸ ರಾಜಕೀಯ ಮತ್ತು ಪರಿಸರ ವಿವಾದದ ಕೇಂದ್ರಬಿಂದುವಾಗಿವೆ.
ಆಗಸ್ಟ್ 27ರಂದು ಲಾಲ್‌ಬಾಗ್‌ನಲ್ಲಿ 200ಕ್ಕೂ ಹೆಚ್ಚು ನಾಗರಿಕರು, ನಿವಾಸಿಗಳ ಗುಂಪುಗಳು ಮತ್ತು ಪರಿಸರ ಸಂಸ್ಥೆಗಳು ಒಟ್ಟುಗೂಡಿ ಮಾನವ ಸರಪಳಿ ನಿರ್ಮಿಸುವ ಮೂಲಕ ಈ ತಿದ್ದುಪಡಿಯನ್ನು ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಇವರ ಕಳಕಳಿಯು ಕೇವಲ ಎಷ್ಟು ಪ್ರಮಾಣದ ಉದ್ಯಾನವನದ ಜಾಗವನ್ನು ಬಳಸಬಹುದು ಎಂಬುದರ ಬಗ್ಗೆ ಮಾತ್ರವಲ್ಲದೆ, ಈ ಬದಲಾವಣೆಯು ಬೆಂಗಳೂರಿನ ಹಸಿರು ಪ್ರದೇಶಗಳ ಕಾನೂನು ರಕ್ಷಣೆಯ ಮೇಲುಂಟು ಮಾಡಬಹುದಾದ ಪರಿಣಾಮಗಳ ಕುರಿತಾಗಿದೆ.
ಆಗಸ್ಟ್ 30ರಂದು ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿಸಿ ಮೋಹನ್ ಮತ್ತು ಡಾ.ಮಂಜುನಾಥ್ ನೇತೃತ್ವದಲ್ಲಿ ಸಾವಿರಾರು ಜನರು ಲಾಲ್‌ಬಾಗ್‌ನಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ನಂತರ ಲಾಲ್‌ಬಾಗ್‌ನ ಬೃಹತ್ ಪಾರಂಪರಿಕ ಬಂಡೆಯ ಮೇಲೆ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಪಟ್ಟಂತೆಯೂ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಟ್ವಿನ್ ಸುರಂಗ ಮಾರ್ಗ ಲಾಲ್‌ಬಾಗ್ ಮೂಲಕ ಹಾದು ಹೋಗುತ್ತದೆ. ಇದು ಸೂಕ್ಷ್ಮ ಪರಿಸರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ ಎಂಬುವುದು ಅವರ ವಾದವಾಗಿದೆ.
ಸುರಂಗ ಮಾರ್ಗ ಸಂಬಂಧ ಸೂರ್ಯ ಅವರು ಕಾನೂನು ಹೋರಾಟವನ್ನೂ ನಡೆಸುತ್ತಿದ್ದಾರೆ. ಈಗ ಉದ್ಯಾನವನಗಳ ಕಾಯ್ದೆಗೆ ತಿದ್ದುಪಡಿ ತಂದಿರುವುದೇ ಸುರಂಗ ಮಾರ್ಗ ಲಾಲ್‌ಬಾಗ್ ಮೂಲಕ ಹಾದು ಹೋಗುವುದಕ್ಕೆ ತಡೆಯಾಗಬಾರದು ಎನ್ನುವ ಕಾರಣಕ್ಕೆ ಎಂಬುವುದು ತೇಜಸ್ವಿ ಸೂರ್ಯ ಮತ್ತು ಇತರರ ಆರೋಪವಾಗಿದೆ.
ಗಮನಾರ್ಹ ಸಂಗತಿಯೆಂದರೆ, ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿದ್ದಾಗ ಸುರಂಗ ಮಾರ್ಗ ಯೋಜನೆ ರೂಪಿಸಿದ್ದರು. ಇದು ಒಂದು ರೀತಿ ಅವರ ಕನಸಿನ ಯೋಜನೆಯಾಗಿದೆ. ಈಗ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ, ಅವರು ಸುರಂಗ ಮಾರ್ಗ ಮಾಡಿಯೇ ಸಿದ್ದ ಎಂದು ಜಿದ್ದಿಗೆ ಬಿದ್ದಿದ್ದಾರೆ. ತೇಜಸ್ವಿ ಸೂರ್ಯ ಅವರು ನಾವು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಲ್ಲ ಎಂಬಂತೆ ಮಾತನಾಡುತ್ತಿದ್ದಾರೆ. ಹಾಗಾಗಿ, ಈ ಸುರಂಗ ಮಾರ್ಗ, ಕಾಯ್ದೆ ತಿದ್ದುಪಡಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ, ವಿಶೇಷವಾಗಿ ಡಿ.ಕೆ ಶಿವಕುಮಾರ್ ಮತ್ತು ತೇಜಸ್ವಿ ಸೂರ್ಯ ಅವರ ನಡುವೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.
ಅಸಲಿಗೆ ಏನಿದು ವಿವಾದ?
2026ರ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆಯು, ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳನ್ನು ರಕ್ಷಿಸುವ 1975ರ ಕಾನೂನನ್ನು ಬದಲಾಯಿಸುತ್ತದೆ. ಈ ತಿದ್ದುಪಡಿಯು ಸರ್ಕಾರಿ ಉದ್ಯಾನವನ ಅಥವಾ ತೋಟದ ಒಟ್ಟು ವಿಸ್ತೀರ್ಣದ ಶೇಕಡಾ 5ರಷ್ಟು ಭಾಗವನ್ನು ನಿರ್ದಿಷ್ಟ ಸಾರ್ವಜನಿಕ ಮೂಲಸೌಕರ್ಯ ಮತ್ತು ಜನೋಪಯೋಗಿ ಯೋಜನೆಗಳಿಗಾಗಿ ಬಳಸಲು ಅಥವಾ ಹಸ್ತಾಂತರಿಸಲು ಅನುಮತಿಸುತ್ತದೆ. ಇದು ಸರ್ಕಾರಿ ಇಲಾಖೆಗಳು, ಶಾಸನಬದ್ಧ ಸಂಸ್ಥೆಗಳು, ಸರ್ಕಾರಿ ಕಂಪನಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೈಗೊಳ್ಳುವ ಯೋಜನೆಗಳನ್ನು ಒಳಗೊಂಡಿರಬಹುದು.
ಈ ನಿಬಂಧನೆಯು ಕೇವಲ ತಾತ್ಕಾಲಿಕವಾಗಿ ಉದ್ಯಾನವನದ ಜಾಗವನ್ನು ಬಳಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ತಿದ್ದುಪಡಿಯು ಒಟ್ಟು ಶೇಕಡಾ 5ರ ಮಿತಿಗೆ ಒಳಪಟ್ಟು ಮತ್ತು ಉನ್ನತ ಮಟ್ಟದ ಸಮಿತಿಯ ಪರಿಶೀಲನೆಗೆ ಅನುಗುಣವಾಗಿ, ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ ಅಥವಾ ಅಡಮಾನ ಸೇರಿದಂತೆ ವಿವಿಧ ಪ್ರಕ್ರಿಯೆಗಳ ಮೂಲಕ ಭೂಮಿಯನ್ನು ವರ್ಗಾಯಿಸಲು ಅನುಮತಿಸುತ್ತದೆ.
ಸರಳವಾಗಿ ಹೇಳುವುದಾದರೆ, ಒಂದು ವೇಳೆ ಸರ್ಕಾರಿ ಉದ್ಯಾನವನವು 100 ಎಕರೆ ಇದ್ದರೆ, ಅರ್ಹ ಸಾರ್ವಜನಿಕ ಯೋಜನೆಗಾಗಿ ಅದರಲ್ಲಿ ಗರಿಷ್ಠ 5 ಎಕರೆಯವರೆಗೆ ಬಳಸಿಕೊಳ್ಳಲು ಈ ತಿದ್ದುಪಡಿಯು ಕಾನೂನುಬದ್ಧ ಮಾರ್ಗವನ್ನು ಕಲ್ಪಿಸುತ್ತದೆ. ಈ ಶೇಕಡಾ 5ರ ಮಿತಿಯು ಗರಿಷ್ಠ ಮಿತಿಯಾಗಿದ್ದು, ಈಗಾಗಲೇ ಯಾವುದಾದರೂ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಿದ್ದರೆ ಅದನ್ನು ಈ ಮಿತಿಯ ಒಳಗೇ ಪರಿಗಣಿಸಲಾಗುತ್ತದೆಯೇ ಹೊರತು, ಇದರ ಮೇಲಿಂದ ಹೆಚ್ಚುವರಿಯಾಗಿ ಸೇರಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಲಾಲ್‌ಬಾಗ್ ಏಕೆ ವಿವಾದದ ಕೇಂದ್ರ ಬಿಂದು?
ರಾಜ್ಯ ಸರ್ಕಾರ ಈಗಾಗಲೇ ಪ್ರಸ್ತಾಪಿಸಿರುವ ಹೆಬ್ಬಾಳ-ಸೆಂಟ್ರಲ್ ಸಿಲ್ಕ್ ಬೋರ್ಡ್ ಸುರಂಗ ಮಾರ್ಗ ಯೋಜನೆಯಿಂದಾಗಿ ಈ ಕಾಯ್ದೆ ತಿದ್ದುಪಡಿಯು ವಿಶೇಷ ಗಮನ ಸೆಳೆದಿದೆ. ಸುರಂಗ ಮಾರ್ಗ ಯೋಜನೆಗಾಗಿ ಲಾಲ್‌ಬಾಗ್ ಒಳಗಿನ ಭೂಮಿಯ ಅಗತ್ಯವಿರುತ್ತದೆ ಎಂದು ಹೇಳಲಾಗ್ತಿದೆ. ರಾಜ್ಯ ಸರ್ಕಾರವು ಈ ಹಿಂದೆ ಸುರಂಗ ನಿರ್ಮಾಣ ಕಾರ್ಯದ ಸಮಯದಲ್ಲಿ ಸುಮಾರು ಆರು ಎಕರೆ ಭೂಮಿಯನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಮತ್ತು ಯೋಜನೆಗಾಗಿ ಸುಮಾರು ಒಂದು ಎಕರೆ ಭೂಮಿಯನ್ನು ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಿತ್ತು.
ಹಾಗಾಗಿ, ಸುರಂಗ ರಸ್ತೆ ಯೋಜನೆಗೆ ಇರುವ ಕಾನೂನು ಅಡೆತಡೆಗಳನ್ನು ನಿವಾರಿಸುವ ಉದ್ದೇಶದಿಂದಲೇ ಉದ್ಯಾನವನಗಳ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದೆ ಎಂದು ಪರಿಸರವಾದಿಗಳು ಮತ್ತು ವಿರೋಧ ಪಕ್ಷದ ನಾಯಕರು ವಾದಿಸುತ್ತಿದ್ದಾರೆ.
ಆದರೆ, ಅತ್ಯಗತ್ಯ ಸಾರ್ವಜನಿಕ ಕಾಮಗಾರಿಗಳನ್ನು ಸುಗಮಗೊಳಿಸಲು ಈ ಬದಲಾವಣೆಯನ್ನು ಹೆಚ್ಚು ವಿಸ್ತಾರವಾದ ಉದ್ದೇಶದೊಂದಿಗೆ ತರಲಾಗಿದೆ ಎಂದು ಸರ್ಕಾರ ಹೇಳುತ್ತದೆ. ರಸ್ತೆ ಅಗಲೀಕರಣದಂತಹ ಕಾಮಗಾರಿಗಳಿಗಾಗಿ ಈ ನಿಬಂಧನೆಯನ್ನು ಉದ್ದೇಶಿಸಲಾಗಿದೆ ಮತ್ತು ಉದ್ಯಾನವನದ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಬಳಸಲು ಸರ್ಕಾರ ಅನುಮತಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಉದ್ಯಾನವನಗಳ ಕಾಯ್ದೆ ತಿದ್ದುಪಡಿ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ, ಆಗಸ್ಟ್ 24 ರಂದು ಶಾಸಕಾಂಗವೂ ಇದನ್ನು ಅಂಗೀಕರಿಸಿದ್ದರಿಂದ ವಿರೋಧಿಸುವವರಲ್ಲಿ ಅನುಮಾನಗಳು ಮತ್ತಷ್ಟು ಹೆಚ್ಚಾಗಿವೆ. ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ, ಯಾವುದೇ ಸುದೀರ್ಘ ಹಾಗೂ ಗಂಭೀರ ಚರ್ಚೆಗಳಿಲ್ಲದೆಯೇ ವಿಧಾನಸಭೆಯು ಈ ಮಸೂದೆಯನ್ನು ಅಂಗೀಕರಿಸಿದೆ.
5%ಗೆ ಪರಿಸರವಾದಿಗಳ ವಿರೋಧವೇಕೆ?
ಉದ್ಯಾನವನದ ಶೇಕಡಾ 5ರಷ್ಟು ಭಾಗವು ನಗಣ್ಯವಾದ ಅಥವಾ ಸಣ್ಣ ಪ್ರಮಾಣವೇನಲ್ಲ ಎಂಬುವುದು ಪರಿಸರ ಸಂಘಟನೆಗಳ ವಾದವಾಗಿದೆ. ಉದ್ಯಾನವನಗಳು ಕೇವಲ ವಿನೋದ ಮತ್ತು ವಿರಾಮದ ಸ್ಥಳಗಳಲ್ಲ. ದಿನೇದಿನೇ ಕಾಂಕ್ರೀಟ್ ಮಯವಾಗುತ್ತಿರುವ ನಗರದಲ್ಲಿ ಅವು ತಾಪಮಾನವನ್ನು ಕಡಿಮೆ ಮಾಡಲು, ಮಳೆನೀರನ್ನು ಇಂಗಿಸಲು, ಜೀವವೈವಿಧ್ಯತೆಯನ್ನು ಕಾಪಾಡಲು ಮತ್ತು ಜನರಿಗೆ ಮುಕ್ತ ಹಾಗೂ ಹಸಿರು ಜಾಗ ಸಿಗುವಂತೆ ಮಾಡಲು ಸಹಾಯ ಮಾಡುತ್ತವೆ.
ಬೆಂಗಳೂರಿನ 262 ನಗರ ಹಸಿರು ಪ್ರದೇಶಗಳನ್ನು ಪರಿಶೀಲಿಸಿದ ಪೀರ್-ರಿವ್ಯೂಡ್ ಅಧ್ಯಯನವೊಂದರ ಪ್ರಕಾರ, ಈ ಹಸಿರು ಜಾಗಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಸರಾಸರಿ 2.23°C ನಷ್ಟು ತಂಪಾಗಿರುತ್ತವೆ ಮತ್ತು ಇವುಗಳ ಈ ತಂಪುಗೊಳಿಸುವ ಪರಿಣಾಮವು ಅವುಗಳ ಗಡಿಯಿಂದ ಆಚೆಗೆ 347 ಮೀಟರ್‌ಗಳವರೆಗೆ ವಿಸ್ತರಿಸುತ್ತದೆ. ಇದರರ್ಥ ಉದ್ಯಾನವನದ ಒಂದು ಭಾಗವನ್ನು ಕತ್ತರಿಸುವುದರಿಂದ, ಕಳೆದುಹೋಗುವ ಆ ನಿರ್ದಿಷ್ಟ ಭೂಮಿಯ ವ್ಯಾಪ್ತಿಯನ್ನು ಮೀರಿ ಅದರ ದುಷ್ಪರಿಣಾಮಗಳು ಉಂಟಾಗಬಹುದು ಎಂದಾಗಿದೆ.
ಪರಿಸರವಾದಿಗಳು ಕಾಯ್ದೆ ತಿದ್ದುಪಡಿಯು ಸೃಷ್ಟಿಸಬಹುದಾದ ಪೂರ್ವನಿದರ್ಶನದ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಈ 5% ನಷ್ಟು ಪ್ರಮಾಣದ ಅಂಕಿ-ಅಂಶವನ್ನು ಯಾವ ಆಧಾರದ ಮೇಲೆ ನಿರ್ಧರಿಸಿದೆ ಮತ್ತು ಇದಕ್ಕೆ ಯಾವುದೇ ವೈಜ್ಞಾನಿಕ ಮೌಲ್ಯಮಾಪನದ ಬೆಂಬಲವಿದೆಯೇ ಎಂದು ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಮಾಜಿ ಕಾರ್ಯದರ್ಶಿ ಎ.ಎನ್. ಯಲ್ಲಪ್ಪ ರೆಡ್ಡಿ ಪ್ರಶ್ನಿಸಿದ್ದಾರೆ. ಈಗ 5% ವಿನಾಯಿತಿಯೊಂದಿಗೆ ಆರಂಭವಾಗುವ ಈ ಪ್ರಕ್ರಿಯೆಯು, ಮುಂದೆ ಸಂರಕ್ಷಿತ ಉದ್ಯಾನವನಗಳ ಇನ್ನೂ ಹೆಚ್ಚಿನ ಭಾಗವನ್ನು ನೀಡಬೇಕೆಂಬ ಬೇಡಿಕೆಗಳಿಗೆ ದಾರಿ ಮಾಡಿಕೊಡಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಆಗಸ್ಟ್ 27 ರಂದು ನಡೆದ ಪ್ರತಿಭಟನೆಯಲ್ಲಿ ನಾಗರಿಕರು ಸಹ ಇದೇ ರೀತಿಯ ವಾದವನ್ನು ಮಂಡಿಸಿದ್ದಾರೆ: “5% ಅಲ್ಲ, ಒಂದು ಇಂಚೂ ಕೊಡುವುದಿಲ್ಲ” ಎಂದಿದ್ದಾರೆ.
ನಾಗರಿಕ ಮನವಿ ಏನು?
ಪ್ರತಿಭಟನೆಯನ್ನು ಆಯೋಜಿಸಿದ್ದ ಸಂಘಟನೆಗಳು ತಿದ್ದುಪಡಿಯನ್ನು ಹಿಂಪಡೆಯುವಂತೆ ಕೋರಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿವೆ. ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೊದಲು, ಪ್ರಸ್ತುತ ಇರುವ ಉದ್ಯಾನವನಗಳು ಅಥವಾ ಹಸಿರು ಪ್ರದೇಶಗಳಿಗೆ ಧಕ್ಕೆ ತರದ ಪರ್ಯಾಯ ಮಾರ್ಗಗಳನ್ನು ಸರ್ಕಾರವು ಮೊದಲು ಪರಿಶೀಲಿಸಬೇಕು ಎಂದೂ ಅವರು ಒತ್ತಾಯಿಸುತ್ತಿದ್ದಾರೆ.
ಅವರ ಇತರ ಬೇಡಿಕೆಗಳಲ್ಲಿ ಪಾರದರ್ಶಕ ಸಾರ್ವಜನಿಕ ಸಮಾಲೋಚನೆ ಹಾಗೂ ಉದ್ಯಾನವನಗಳ ಮೇಲೆ ಪರಿಣಾಮ ಬೀರಬಹುದಾದ ಯೋಜನೆಗಳ ಪರಿಸರ, ಸಾಮಾಜಿಕ, ಆರೋಗ್ಯ ಮತ್ತು ಯೋಗಕ್ಷೇಮದ ಪರಿಣಾಮಗಳ ಸಮಗ್ರ ಮೌಲ್ಯಮಾಪನಗಳು ಸೇರಿವೆ. ಬೇರೆ ಯಾವುದೋ ಮೂಲಸೌಕರ್ಯ ಯೋಜನೆಗೆ ಜಾಗ ಬೇಕಾದಾಗ ಬಳಸಿಕೊಳ್ಳಬಹುದಾದ ಖಾಲಿ ಸರ್ಕಾರಿ ಭೂಮಿ ಎಂದು ಭಾವಿಸದೆ, ಉದ್ಯಾನವನಗಳನ್ನು ಅತ್ಯಗತ್ಯ ನಗರಾಭಿವೃದ್ಧಿ ಮೂಲಸೌಕರ್ಯಗಳೆಂದು ಪರಿಗಣಿಸಬೇಕು ಎಂಬುದು ಅವರ ಪ್ರಮುಖ ವಾದವಾಗಿದೆ.


