ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ ನೂರಾರು ಎಸ್‌ಐಆರ್ ಸಂತ್ರಸ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸುವಂತೆ ಚುನಾವಣಾ ಆಯೋಗದ ಪ್ರತಿನಿಧಿಗಳಿಗೆ ಒಕ್ಕೂಟದಿಂದ ಆಹ್ವಾನ ನೀಡಲಾಗಿತ್ತು. ಆದರೆ, ಆಯೋಗದಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಸಂತ್ರಸ್ತರು ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಈ ಮುತ್ತಿಗೆ ಹೋರಾಟದಲ್ಲಿ ನಟ ಕಿಶೋರ್ ಕುಮಾರ್, ಹಿರಿಯ ಸಾಹಿತಿ ಎಲ್. ಎನ್. ಮುಕುಂದರಾಜ್, ದಸಂಸ ಹಿರಿಯ ನಾಯಕ ಎನ್. ವೆಂಕಟೇಶ್, ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಸೇರಿದಂತೆ ರಾಜ್ಯದ ದಲಿತ, ರೈತ, ಮಹಿಳಾ ಮತ್ತು ಭಾಷಾ ಚಳವಳಿಯ ಪ್ರಮುಖ ಮುಖಂಡರು ಭಾಗವಹಿಸಿದ್ದರು.

ಒಕ್ಕೂಟದ ಪ್ರಮುಖ ಹಕ್ಕೊತ್ತಾಯಗಳು:
ಸಾಕಷ್ಟು ಸಮರ್ಥ ಕಾರಣವಿಲ್ಲದೆ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಹೊರದಬ್ಬಬಾರದು. ಡಿಲೀಟ್ ಆಗಿರುವವರಿಗೆ ಅಪೀಲ್ ಸಲ್ಲಿಸಲು ಅವಕಾಶ ನೀಡಬೇಕು ಹಾಗೂ ಅರ್ಹರನ್ನು ಸೇರಿಸಲು ಪ್ರತಿ ಬೂತಿನ ಪ್ರತಿ ಮನೆ ತಲುಪುವ ವಿಶೇಷ ಡ್ರೈವ್ ನಡೆಸಬೇಕು.
ಸ್ಥಳಾಂತರಗೊಂಡ ಮತದಾರರಿಗೆ ಫಾರಂ 8 ನೀಡಿ, ಪ್ರಸ್ತುತ ವಾಸಿಸುತ್ತಿರುವ ವಿಳಾಸಕ್ಕೇ ಮತ ವರ್ಗಾಯಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.
ನೋಟೀಸ್ ನೀಡುತ್ತಿರುವ 43 ಲಕ್ಷ ಮತದಾರರ ಹೆಸರುಗಳನ್ನು ಕಾರಣದ ಸಮೇತ ಪ್ರಕಟಿಸಬೇಕು. ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು ಮತ್ತು ಎರಡಕ್ಕಿಂತ ಹೆಚ್ಚು ದಾಖಲೆಗಳನ್ನು ಕೇಳಬಾರದು.
ಗ್ರಾಮ ಹಾಗೂ ವಾರ್ಡ್ ಸಭೆಗಳನ್ನು ಸೂಕ್ತ ಪ್ರಚಾರದೊಂದಿಗೆ ಕ್ರಮಬದ್ಧವಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಬೇಕು.
ಅಭ್ಯಂತರ ಮತ್ತು ಅಪೀಲ್ ಸಲ್ಲಿಸುವ ಅವಧಿಯನ್ನು ಕನಿಷ್ಠ ಆರು ತಿಂಗಳ ಕಾಲ ವಿಸ್ತರಿಸಬೇಕು, ಏಕೆಂದರೆ ಕರ್ನಾಟಕದ ಚುನಾವಣೆಗಳಿಗೆ ಇನ್ನು ಸಾಕಷ್ಟು ಸಮಯವಿದೆ.
ಅರ್ಹ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ಈ ಕೂಡಲೇ ಚುನಾವಣಾ ಆಯೋಗವು ಈ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.


