HomeಅಂಕಣಗಳುKarnataka against SIR‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

- Advertisement -
- Advertisement -

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ ಪಟ್ಟಿಯಲ್ಲಿ ಬರೋಬ್ಬರಿ 1.07 ಕೋಟಿಗೂ ಅಧಿಕ (ಸುಮಾರು 1.08 ಕೋಟಿ) ಮತದಾರರ ಹೆಸರುಗಳನ್ನು ಕೈಬಿಡಲಾಗಿರುವುದು ನಾಗರಿಕ ಸಮಾಜದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಸಂಖ್ಯೆಯು ಪ್ರಸ್ತುತ 4.46 ಕೋಟಿಗೆ ಕುಸಿದಿದ್ದು, ರಾಜ್ಯದ ಒಟ್ಟು ಮತದಾರರ ಪೈಕಿ ಶೇಕಡಾ 19.5 ರಷ್ಟು ನಾಗರಿಕರು ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ.

ಇಷ್ಟೇ ಅಲ್ಲದೆ, ಬೃಹತ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಂತೂ ಅಚ್ಚರಿಯ ಅಂಕಿಅಂಶಗಳು ಹೊರಬಿದ್ದಿವೆ. ಜಿಬಿಎ ವ್ಯಾಪ್ತಿಯಲ್ಲಿ ಬರೋಬ್ಬರಿ 32,74,535 ಮತದಾರರನ್ನು ‘ಶಾಶ್ವತ ಸ್ಥಳಾಂತರಗೊಂಡಿದ್ದಾರೆ’ ಎಂದು ವರ್ಗೀಕರಿಸಲಾಗಿದೆ. ಇದರೊಂದಿಗೆ 7,27,258 ಗೈರುಹಾಜರಿ, 3,19,113 ಮೃತ ಮತದಾರರು, 63,548 ನಕಲಿ ಅಥವಾ ಬೇರೆಡೆ ದಾಖಲಾದವರು ಹಾಗೂ 3,04,249 ಇತರೆ ಪ್ರಕರಣಗಳು ಸೇರಿದಂತೆ, ಕೇವಲ ಜಿಬಿಎ ವ್ಯಾಪ್ತಿಯೊಂದರಲ್ಲೇ ಮೃತಪಟ್ಟವರು ಮತ್ತು ಸ್ಥಳಾಂತರಗೊಂಡವರೆಂದು ವರ್ಗೀಕರಿಸಲಾದವರ ಒಟ್ಟು ಸಂಖ್ಯೆ 35,93,648 ತಲುಪಿದೆ.

ನೆಲದ ವಾಸ್ತವ ಅರಿಯದ ಚುನಾವಣಾ ಆಯೋಗ: ನೂರ್ ಶ್ರೀಧರ್ ತೀವ್ರ ಆಕ್ಷೇಪ

ಈ ಗಂಭೀರ ಪರಿಸ್ಥಿತಿಯ ವಿರುದ್ಧ ಬೀದಿಗಿಳಿದಿರುವ ಹೋರಾಟಗಾರರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಸಂಘರ್ಷಕ್ಕೆ ಧುಮುಕಿದ್ದಾರೆ. ಪ್ರಮುಖ ಹೋರಾಟಗಾರ ನೂರ್ ಶ್ರೀಧರ್ ಅವರು ಜಂಟಿ ಹೋರಾಟ ಸಮಿತಿಯ ಪರವಾಗಿ ಹಲವು ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ. 

ಚುನಾವಣಾ ಆಯೋಗದ ಧೋರಣೆಯನ್ನು ತೀವ್ರವಾಗಿ ವಿರೋಧಿಸಿದ ನೂರ್ ಶ್ರೀಧರ್, “ಅಧಿಕಾರಿಗಳು ವಾಸ್ತವ ನೆಲೆಗಟ್ಟನ್ನು (ಗ್ರೌಂಡ್ ರಿಯಾಲಿಟಿ) ಅರಿಯದೆ ಕೇವಲ ಲ್ಯಾಪ್‌ಟಾಪ್ ಮತ್ತು ಸಾಫ್ಟ್‌ವೇರ್‌ಗಳನ್ನು ನೆಚ್ಚಿಕೊಂಡು ಕುಳಿತಿದ್ದಾರೆ. ಇಂದು ನಾವು ಜನರನ್ನು ಸುಮ್ಮಸುಮ್ಮನೆ ಇಲ್ಲಿಗೆ ಸೇರಿಸಿಲ್ಲ. ರಾಜ್ಯದ 20 ಜಿಲ್ಲೆಗಳಿಂದ ಬಂದಿರುವ ಪ್ರತಿನಿಧಿಗಳು ಇಲ್ಲಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಜನರ ಮಾತುಗಳನ್ನು ನೇರವಾಗಿ ಆಲಿಸಬೇಕು” ಎಂದು ಆಗ್ರಹಿಸಿದರು.

ಚುನಾವಣಾ ಆಯೋಗವು ‘ಮೂವರಷ್ಟೇ ಬಂದು ಮಾತನಾಡಿ’ ಎಂದು ಹೇಳುವ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, “ಈ ಮುಚ್ಚಿದ ಬಾಗಿಲಿನ ಮಾತುಕತೆ, ಮೂರು ಜನರನ್ನು ಒಳಗೆ ಕರೆಸಿ ಮುಗಿಸುವ ಪ್ರಕ್ರಿಯೆಯಿಂದ ಜನರು ರೋಸಿಹೋಗಿದ್ದಾರೆ. ಈಗ ಎಲ್ಲವೂ ಪಾರದರ್ಶಕವಾಗಿ, ಸಾರ್ವಜನಿಕವಾಗಿ ಮತ್ತು ಮಾಧ್ಯಮ ಕ್ಯಾಮೆರಾಗಳ ಮುಂಭಾಗದಲ್ಲೇ ನಡೆಯಬೇಕು. ಆಯೋಗವು ತಾನು ಮಾಡುತ್ತಿರುವುದು ಸರಿ ಎಂದು ತರ್ಕಬದ್ಧವಾಗಿ ವಿವರಿಸಬೇಕು. ನಾವು ಹೇಳುತ್ತಿರುವುದು ತಪ್ಪು ಎಂದರೆ ಅದನ್ನು ಸಾರ್ವಜನಿಕವಾಗಿ ಸಾಬೀತುಪಡಿಸಬೇಕು. ಚುನಾವಣಾ ಆಯೋಗವೇ ಹೊರಗೆ ಬಂದು ಜನರ ಮಾತು ಕೇಳಲಿ, ಇಲ್ಲವೇ ನಾವು ಶಾಂತಿಯುತವಾಗಿ ಅವರ ಕಚೇರಿಯ ಮುಂದೆ ಬಂದು ಕುಳಿತುಕೊಳ್ಳುತ್ತೇವೆ. ಇದು ನಮ್ಮ ಮೊದಲ ಷರತ್ತು. ಇದಾಗದೇ ನಾವು ಇಲ್ಲಿಂದ ವಾಪಸ್ ಹೋಗುವುದಿಲ್ಲ” ಎಂದು ಕಠಿಣ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರಕ್ಕೂ ತರಾಟೆ: ‘ಸಮಗ್ರ ಯೋಜನೆ ರೂಪಿಸಲು ಒತ್ತಾಯ’

ಮತದಾರರ ಹಕ್ಕುಗಳ ರಕ್ಷಣೆಯಲ್ಲಿ ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡ ನೂರ್ ಶ್ರೀಧರ್, “ಆರಂಭದಿಂದಲೂ ನಾವು ರಾಜ್ಯ ಸರ್ಕಾರದ ಗಮನ ಸೆಳೆಯುತ್ತಲೇ ಬಂದಿದ್ದೇವೆ. ಆದರೆ ಸರ್ಕಾರವು ಅತ್ಯಲ್ಪ ಪ್ರಮಾಣದಲ್ಲಿ ಪ್ರತಿಕ್ರಿಯಿಸುತ್ತಿದೆಯೇ ವಿನಃ ಮತದಾರರ ಹಕ್ಕು ರಕ್ಷಣೆಗೆ ಅವರ ಬಳಿ ಯಾವುದೇ ಸಮಗ್ರ ಯೋಜನೆಯಿಲ್ಲ. ರಾಜ್ಯದ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ಕರ್ತವ್ಯ ಸರ್ಕಾರದ ಮೇಲಿದೆ. ಚುನಾವಣಾ ಆಯೋಗ ಕೇಳುತ್ತಿಲ್ಲ ಎಂದು ಸರ್ಕಾರ ಕೈಚೆಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ತನ್ನ ಸ್ಪಷ್ಟ ಯೋಜನೆಯನ್ನು ತಿಳಿಸಬೇಕು, ಇಲ್ಲವೇ ಸಿವಿಲ್ ಸೊಸೈಟಿ ನೀಡುವ ಸಲಹೆಗಳನ್ನಾದರೂ ಒಪ್ಪಿಕೊಂಡು ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.

ಜೈಲು ಭೇಟಿಗೂ ಸಿದ್ಧ: ಹೋರಾಟಗಾರರ ಗಟ್ಟಿ ತೀರ್ಮಾನ

ಪ್ರಸ್ತುತ ನಡೆಯುತ್ತಿರುವ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಹೋರಾಟಗಾರರು ನಿರ್ಧರಿಸಿದ್ದಾರೆ. ದೇವನಹಳ್ಳಿ ರೈತ ಹೋರಾಟದ ಮಾದರಿಯನ್ನೇ ಉದಾಹರಿಸಿದ ಶ್ರೀಧರ್, “ತೀರ್ಮಾನವಾಗುವವರೆಗೆ ನಾವು ಈ ಸ್ಥಳದಿಂದ ಜಾಗ ಖಾಲಿ ಮಾಡುವುದಿಲ್ಲ. ಸರ್ಕಾರ ಅಥವಾ ಪೊಲೀಸರು ನಮ್ಮನ್ನು ಬಂಧಿಸುವುದಾದರೆ ಬಂಧಿಸಲಿ. ವಿಜಯಮೋಹನ್ ಸರ್ ಅವರಂತಹ ಹಿರಿಯರು, ಚಿಂತಕರು ಸೇರಿದಂತೆ ನಾವೆಲ್ಲರೂ ಒಂದಾಗಿ ಗಟ್ಟಿ ತೀರ್ಮಾನ ತಳೆದಿದ್ದೇವೆ. ರಾಜ್ಯದ ಮತ್ತು ಪ್ರಜಾಪ್ರಭುತ್ವದ ಹಿತಕ್ಕಾಗಿ ಅಗತ್ಯಬಿದ್ದರೆ ನಾವು ಜಾಮೀನು ಪಡೆಯದೆ, ಪರಪ್ಪನ ಅಗ್ರಹಾರ ಜೈಲಿನಲ್ಲಾದರೂ ಕಾಲ ಕಳೆಯಲು ಸಿದ್ಧರಿದ್ದೇವೆ. ತೀರ್ಮಾನವಾಗದೇ ಈ ಹೋರಾಟ ಮುಗಿಯುವುದಿಲ್ಲ. ಈ ವಿಷಯವನ್ನು ನಾವು ಪೊಲೀಸರ ಹಾಗೂ ಸರ್ಕಾರದ ಗಮನಕ್ಕೂ ತಂದಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಹೋರಾಟ ಸಮಿತಿಯ ಪ್ರಮುಖ ಹಕ್ಕೊತ್ತಾಯಗಳು:

ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸಲು ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನಿಗೆ ಮತದಾನದ ಹಕ್ಕನ್ನು ಖಾತರಿಪಡಿಸಲು ಹೋರಾಟ ಸಮಿತಿಯು ಸರ್ಕಾರ ಮತ್ತು ಚುನಾವಣಾ ಆಯೋಗದ ಮುಂದೆ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿದೆ:

ಸಮರ್ಥ ಕಾರಣವಿಲ್ಲದೆ ಹೆಸರು ರದ್ದುಪಡಿಸದಿರುವುದು: ಯಾವೊಬ್ಬ ಅರ್ಹ ಮತದಾರನ ಹೆಸರನ್ನೂ ಸೂಕ್ತ ಮತ್ತು ಸಮರ್ಥ ಕಾರಣವಿಲ್ಲದೆ ಪಟ್ಟಿಯಿಂದ ಹೊರಹಾಕಬಾರದು. ಈಗಾಗಲೇ ಹೆಸರು ಡಿಲೀಟ್ ಆಗಿರುವ ಮತದಾರರಿಗೂ ಮೇಲ್ಮನವಿ (ಅಪೀಲ್) ಸಲ್ಲಿಸಲು ಮತ್ತು ಪಟ್ಟಿಗೆ ಮರುಸೇರ್ಪಡೆಗೊಳ್ಳಲು ಅವಕಾಶ ನೀಡಬೇಕು. ಅರ್ಹರನ್ನು ಸೇರಿಸಲು ಪ್ರತಿ ಬೂತ್‌ನ ಪ್ರತಿಯೊಂದು ಮನೆಗೂ ತೆರಳುವ ವಿಶೇಷ ಅಭಿಯಾನ (ಡ್ರೈವ್) ಹಮ್ಮಿಕೊಳ್ಳಬೇಕು.

ವರ್ಗಾವಣೆಗೆ ಫಾರಂ 8 ಅವಕಾಶ ನೀಡಿಕೆ: ಬೇರೆ ಸ್ಥಳಗಳಿಂದ ಶಿಫ್ಟ್ ಆಗಿ ಬಂದು ಪ್ರಸ್ತುತ ನೆಲೆಸಿರುವ ಮತದಾರರಿಗೆ ಪ್ರತಿ ಬೂತ್‌ನಲ್ಲೂ ‘ಫಾರಂ 8’ ನೀಡಿ, ತಮ್ಮ ಪ್ರಸ್ತುತ ವಾಸಸ್ಥಳದ ವಿಳಾಸಕ್ಕೆ ಮತವನ್ನು ಸುಲಭವಾಗಿ ವರ್ಗಾಯಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು.

43 ಲಕ್ಷ ಮತದಾರರ ವಿವರ ಸಾರ್ವಜನಿಕಗೊಳಿಸುವುದು: ನೋಟೀಸ್ ನೀಡಲಾಗುತ್ತಿರುವ 43 ಲಕ್ಷ ಮತದಾರರ ಹೆಸರುಗಳನ್ನು ಸೂಕ್ತ ಕಾರಣಗಳ ಸಮೇತ ಸಾರ್ವಜನಿಕವಾಗಿ ಪ್ರಕಟಿಸಬೇಕು. ಆ ಮತದಾರರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು ಹಾಗೂ ಅವರಿಂದ ಎರಡಕ್ಕಿಂತ ಹೆಚ್ಚು ದಾಖಲೆಗಳನ್ನು ಕೇಳಿ ಕಿರುಕುಳ ನೀಡಬಾರದು.

ಗ್ರಾಮ ಮತ್ತು ವಾರ್ಡ್ ಸಭೆಗಳ ಆಯೋಜನೆ: ಮತದಾರರ ಪಟ್ಟಿ ಪರಿಶೀಲನೆಗೆ ಸಂಬಂಧಿಸಿದಂತೆ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ಕ್ರಮಬದ್ಧವಾಗಿ, ವ್ಯಾಪಕ ಪ್ರಚಾರ ನೀಡುವ ಮೂಲಕ ಅರ್ಥಪೂರ್ಣವಾಗಿ ನಡೆಸಬೇಕು.

ಅವಕಾಶವನ್ನು ಆರು ತಿಂಗಳಿಗೆ ವಿಸ್ತರಿಸುವುದು: ಕರ್ನಾಟಕದ ಮುಂದಿನ ಚುನಾವಣೆಗಳಿಗೆ ಇನ್ನು ಸಾಕಷ್ಟು ಸಮಯಾವಕಾಶ ಇರುವುದರಿಂದ, ಯಾವುದೇ ಗಡಿಬಿಡಿ ಮಾಡದೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಮತ್ತು ಮೇಲ್ಮನವಿ (ಅಪೀಲ್) ಹಾಕಲು ನೀಡಲಾಗಿರುವ ಕಾಲಾವಕಾಶವನ್ನು ಕನಿಷ್ಠ ಆರು ತಿಂಗಳ ಕಾಲ ವಿಸ್ತರಿಸಬೇಕು.

ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು, ತಾಂತ್ರಿಕ ನೆಪಗಳನ್ನು ಪಕ್ಕಕ್ಕಿಟ್ಟು ನೆಲದ ವಾಸ್ತವಕ್ಕೆ ಅನುಗುಣವಾಗಿ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ‘ಮತದಾನದ ಹಕ್ಕನ್ನು’ ರಕ್ಷಿಸಬೇಕಿದೆ. ಇಂದಿನ ಹೋರಾಟದ ಮುಂದಿನ ನಡೆಗಳು ರಾಜ್ಯದ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಪ್ರಮುಖ ತಿರುವು ನೀಡುವ ಮುನ್ಸೂಚನೆ ನೀಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...