ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು ‘ಶುದ್ಧೀಕರಣ’ (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕೊನೆಗೂ ಎಫ್‌ಐಆರ್ ದಾಖಲಾಗಿದೆ. ಆದರೆ, ವಿಡಿಯೋ ಸಾಕ್ಷ್ಯಾಧಾರಗಳು ಲಭ್ಯವಿದ್ದರೂ ನಿರ್ದಿಷ್ಟ ವ್ಯಕ್ತಿಗಳ ಬದಲಿಗೆ ‘ಅಪರಿಚಿತ ವ್ಯಕ್ತಿಗಳ’ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಆಕ್ಷೇಪಿಸಿದ್ದು, ಇದನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಯತ್ನ ಎಂದು ಆರೋಪಿಸಿದ್ದಾರೆ.
ಆಗಸ್ಟ್ 8 ರಂದು ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಅದಾದ ಎರಡು ದಿನಗಳ ನಂತರ, ಅಂದರೆ ಆಗಸ್ಟ್ 10 ರಂದು ಕೆಲವು ಸಂಘಟನೆಗಳ ಸದಸ್ಯರು ಆ ಮೈದಾನವನ್ನು ಸ್ವಚ್ಛಗೊಳಿಸುವ ನೆಪದಲ್ಲಿ ‘ಶುದ್ಧೀಕರಣ ಯಜ್ಞ’ ನಡೆಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದ ಹಿರಿಯ ನಾಯಕರಾಗಿರುವುದರಿಂದ, ಈ ಕೃತ್ಯವು ಅಸ್ಪೃಶ್ಯತೆ ಮತ್ತು ತಾರತಮ್ಯದ ಪರಮಾವಧಿ ಎಂದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ 80ಕ್ಕೂ ಹೆಚ್ಚು ದೂರುಗಳು ಬಂದಿದ್ದರೂ, ಹಲ್ದ್ವಾನಿ ಮೂಲದ ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಂಜು ಅವರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಹಾಲ್ದ್ವಾನಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು BNS ಸೆಕ್ಷನ್ 196 ಮತ್ತು 299 ಹಾಗೂ SC/ST ಕಾಯ್ದೆಯ ಸೆಕ್ಷನ್ 3(1)(r) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಜವಾಬ್ದಾರಿಯನ್ನು ಎಸ್‌ಪಿ (ಕ್ರೈಂ) ಜಗದೀಶ್ ಚಂದ್ರ ಅವರಿಗೆ ವಹಿಸಲಾಗಿದೆ.
ರಾಜಕೀಯ ಸಂಘರ್ಷ ಮತ್ತು ತನಿಖೆಯ ಹಾದಿ:
ಘಟನೆ ನಡೆದ ಒಂದು ತಿಂಗಳ ನಂತರ ಹಾಗೂ ಕೃತ್ಯದಲ್ಲಿ ಭಾಗಿಯಾದವರ ಸ್ಪಷ್ಟ ವಿಡಿಯೋ ತುಣುಕುಗಳಿದ್ದರೂ ಪೊಲೀಸರು ‘ಅಪರಿಚಿತರ’ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಕಾಂಗ್ರೆಸ್ ಪಕ್ಷದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಎಐಸಿಸಿ ಉತ್ತರಾಖಂಡ ಉಸ್ತುವಾರಿ ಕುಮಾರಿ ಸೆಲ್ಜಾ ಅವರು, ಈ ನಡೆ ದೇಶದ ಸಂವಿಧಾನ ಮತ್ತು ಇಡೀ ದಲಿತ ಸಮುದಾಯಕ್ಕೆ ಮಾಡಿದ ಘೋರ ಅಪಮಾನವಾಗಿದ್ದು, ರಾಜ್ಯದ ಬಿಜೆಪಿ ಸರ್ಕಾರ ತಪ್ಪಿತಸ್ಥರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ಹರಿದಾಯ್ದಿದ್ದಾರೆ. ಅದೇ ರೀತಿ, ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ವಿಭಾಗದ ರಾಷ್ಟ್ರೀಯ ಸಂಯೋಜಕ ಕೆ. ರಾಜು ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಂಸದರು ದೆಹಲಿಯಲ್ಲಿ ದೂರು ನೀಡಲು ಶ್ರಮಿಸಿದ್ದು, ರಾಷ್ಟ್ರೀಯ ನಾಯಕನೊಬ್ಬನಿಗೆ ನಡೆದ ಅಸ್ಪೃಶ್ಯತೆ ಕೃತ್ಯಕ್ಕೂ ತಕ್ಷಣ ಕ್ರಮ ಕೈಗೊಳ್ಳದಿರುವುದು ದಲಿತರ ಸುರಕ್ಷತೆಯ ಮೇಲಿನ ಪ್ರಶ್ನೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಯು ರಾಜಕೀಯ ವಲಯದಲ್ಲಷ್ಟೇ ಅಲ್ಲದೆ, ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 21ನೇ ಶತಮಾನದಲ್ಲೂ ಇಂತಹ ಜಾತಿ ಆಧಾರಿತ ಮತ್ತು ಅಸ್ಪೃಶ್ಯತೆಯನ್ನು ಪ್ರಚೋದಿಸುವ ಕೃತ್ಯಗಳು ನಡೆಯುತ್ತಿರುವುದಕ್ಕೆ ದಲಿತ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ನಾಯಕನೊಬ್ಬನ ವಿರುದ್ಧವೇ ಇಂತಹ ತಾರತಮ್ಯ ನಡೆದಾಗ ಕಾನೂನು ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವುದು ಮತ್ತು ಕೊನೆಗೂ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿರುವುದು ಸಾರ್ವಜನಿಕರಲ್ಲಿ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಸಿಯುವಂತೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಭಾರಿ ಜನಾಭಿಪ್ರಾಯ ಮತ್ತು ಪ್ರತಿಭಟನಾ ಸ್ವರಗಳು ವ್ಯಕ್ತವಾಗುತ್ತಿವೆ.


