ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ ‘ಶುದ್ಧೀಕರಣ’ ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸಂಸದರು ಮತ್ತು ಇತರ ನಾಯಕರು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಧರಣಿ ಕುಳಿತ ನಂತರ ಎಫ್‌ಐಆರ್ ದಾಖಲಿಸಲಾಗಿದೆ.
‘ಶುದ್ಧೀಕರಣ’ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದ ಹಲ್ದ್ವಾನಿ ಪೊಲೀಸರು, ಶುದ್ದೀಕರಣ ನಡೆಸಿರುವುದು ‘ಕ್ರಿಮಿನಲ್ ಕೃತ್ಯ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕಳೆದ ತಿಂಗಳು ಪ್ರಕರಣ ದಾಖಲಿಸಿದ್ದರು.
ಆಗಸ್ಟ್ 8ರಂದು ಮಲ್ಲಿಕಾರ್ಜುನ ಖರ್ಗೆ ಅವರು ಹಲ್ದ್ವಾನಿಯಲ್ಲಿ ಭಾಷಣ ಮಾಡಿದ್ದರು. ಆಗಸ್ಟ್ 10ರಂದು ವೇದಿಕೆಯನ್ನು ‘ಶುದ್ಧೀಕರಣ’ ನಡೆಸಲಾಗಿತ್ತು. ಆಗಸ್ಟ್ 13ರಂದು ರಾಜ್ಯಸಭೆಯಲ್ಲಿ ಖರ್ಗೆ ಅವರೇ ಈ ವಿಷಯವನ್ನು ಪ್ರಸ್ತಾಪಿಸಿ, ಕ್ರಮಕ್ಕೆ ಆಗ್ರಹಿಸಿದ್ದರು. ಕೇಂದ್ರ ಸಚಿವ ಮತ್ತು ಸದನದ ನಾಯಕ ಜೆ.ಪಿ. ನಡ್ಡಾ ಅವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸದನದಲ್ಲಿ ತಿಳಿಸಿದ್ದರು.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 196 (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಮುಂತಾದವುಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯದ ನಿರ್ವಹಣೆಗೆ ಧಕ್ಕೆ ತರುವಂತಹ ಕೃತ್ಯಗಳನ್ನು ಎಸಗುವುದು) ಮತ್ತು ಸೆಕ್ಷನ್ 299 (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಅವರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r) – ಸಾರ್ವಜನಿಕವಾಗಿ ಕಾಣಿಸುವ ಯಾವುದೇ ಸ್ಥಳದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರನ್ನು ಅವಮಾನಿಸುವ ಅಥವಾ ಅವಮಾನಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ನಿಂದಿಸುವುದು ಅಥವಾ ಬೆದರಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್ ಅನ್ನು ಸಹ ಎಫ್‌ಐಆರ್‌ನಲ್ಲಿ ಅನ್ವಯಿಸಲಾಗಿದೆ.
“ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 10ರಂದು ನಡೆದಿದೆ ಎನ್ನಲಾದ ಘಟನೆಗಳು – ವಿಶೇಷವಾಗಿ ಸ್ವಚ್ಛಗೊಳಿಸುವಿಕೆ, ಧಾರ್ಮಿಕ ಆಚರಣೆಗಳು ಮತ್ತು ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ವಿವಿಧ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳಿಂದ ನಮಗೆ ಹಲವು ಅರ್ಜಿಗಳು ಹಾಗೂ ಮನವಿಗಳು ಬಂದಿದ್ದವು… ನಾವು ಈ ಎಲ್ಲಾ ಅರ್ಜಿಗಳ ಕಾನೂನು ಪರಿಶೀಲನೆ ನಡೆಸುತ್ತಿದ್ದೆವು” ಎಂದು ನೈನಿತಾಲ್ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಮಂಜುನಾಥ್ ಟಿ.ಸಿ. ತಿಳಿಸಿದ್ದಾಗಿ ವರದಿಯಾಗಿದೆ.
“ಈ ಕಾನೂನು ಪರಿಶೀಲನೆಯ ಸಂದರ್ಭದಲ್ಲಿ, ಹಲ್ದ್ವಾನಿಯ ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲರಾದ ಅಂಜು ಎಂಬುವವರು ಹಲ್ದ್ವಾನಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ಅಧಿಕೃತ ಲಿಖಿತ ದೂರನ್ನು ದಾಖಲಿಸಿದ್ದರು ಎಂಬುದು ನಮಗೆ ತಿಳಿದುಬಂದಿದೆ; ಅವರು ಠಾಣಾಧಿಕಾರಿ (ಎಸ್‌ಹೆಚ್‌ಒ) ಮತ್ತು ಇತರ ಅಧಿಕಾರಿಗಳಿಗೆ ಸಂಬಂಧಿತ ವೀಡಿಯೊಗಳನ್ನು ಸಹ ಒದಗಿಸಿದ್ದರು. ಪರಿಣಾಮವಾಗಿ, ಅವರ ಅಧಿಕೃತ ದೂರಿನ ಆಧಾರದ ಮೇಲೆ, ನಾವು ಇಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 196 ಮತ್ತು 299 ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3(1)(r) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಸಂಸದರು ಧರಣಿ ಕುಳಿತ ಬಳಿಕ, ಹಲ್ದ್ವಾನಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಸಂಸದರು ಮತ್ತು ಇತರ ನಾಯಕರು ಎಫ್‌ಐಆರ್ ದಾಖಲಿಸುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
“ನಾವು 37 ಸಂಸದರು ಪೊಲೀಸ್ ಠಾಣೆಯ ಒಳಗಡೆ ಕುಳಿತಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ” ಎಂದು ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಅವರು ಮಂಗಳವಾರ (ಸೆ.8) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
“ನಾವು 37 ಸಂಸದರು ಪ್ರಸ್ತುತ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಒಳಗಡೆ ಕುಳಿತಿದ್ದೇವೆ. ನಾವು ಲಿಖಿತ ದೂರನ್ನು ನೀಡಿದ್ದೇವೆ. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ. ಹಲ್ದ್ವಾನಿಯ ವೇದಿಕೆಯಲ್ಲಿ ಖರ್ಗೆ ಅವರು ಮಾತನಾಡಿದ ನಂತರ ಅದನ್ನು ‘ಶುದ್ಧೀಕರಣ’ ಮಾಡಲಾಗಿದೆ. ಇದು ಅಸ್ಪೃಶ್ಯತೆಯಾಗಿದೆ, ಕಾನೂನಿನ ಪ್ರಕಾರ ಅಪರಾಧವಾಗಿದೆ. ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲು ಒಂದು ದಿನ ತಗೊಂಡ ಪೊಲೀಸರು, ಶುದ್ದೀಕರಣ ಮಾಡಿದವರ ವಿರುದ್ಧ ಒಂದು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಫ್‌ಐಆರ್ ದಾಖಲಾಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ” ಎಂದು ಸೆಂಥಿಲ್ ಬರೆದುಕೊಂಡಿದ್ದರು.
ಕಾಂಗ್ರೆಸ್ ಸಂಸದರಾದ ಕೊಡಿಕ್ಕುನ್ನಿಲ್ ಸುರೇಶ್, ಮಲ್ಲು ರವಿ ಮತ್ತು ವರ್ಷಾ ಗಾಯಕ್ವಾಡ್, ಹಾಗೆಯೇ ಪಕ್ಷದ ಎಸ್‌ಸಿ, ಒಬಿಸಿ, ಅಲ್ಪಸಂಖ್ಯಾತ ಮತ್ತು ಆದಿವಾಸಿ ವಿಭಾಗಗಳ ಸಂಯೋಜಕ ಕೆ. ರಾಜು ಮತ್ತು ಎಸ್‌ಸಿ ವಿಭಾಗದ ಮುಖ್ಯಸ್ಥ ರಾಜೇಂದ್ರ ಪಾಲ್ ಗೌತಮ್ ಅವರು ಸೆಂಥಿಲ್ ಅವರೊಂದಿಗೆ ಸುಮಾರು ನಾಲ್ಕು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿದ್ದರು.
“ಸುದೀರ್ಘ ಪ್ರತಿಭಟನೆ ಮತ್ತು ಒತ್ತಡದ ನಂತರ ಸಂಸದರಿಗೆ ಪ್ರವೇಶ ನೀಡಲಾಯಿತು ಮತ್ತು ಮೂರು ಗಂಟೆಗಳ ನಂತರ ಎಫ್‌ಐಆರ್ ದಾಖಲಿಸಲಾಗಿದೆ” ಪ್ರಕರಣ ದಾಖಲಾದ ನಂತರ ವರ್ಷಾ ಗಾಯಕ್ವಾಡ್ ಅವರು ಹೇಳಿದ್ದಾರೆ.
“ದೇಶದ ಸಂಸದರನ್ನು ಪೊಲೀಸ್ ಠಾಣೆಯಲ್ಲಿ ಈ ರೀತಿ ನಡೆಸಿಕೊಳ್ಳುವುದಾದರೆ, ಇನ್ನು ಯಾವುದೇ ಸಾಮಾನ್ಯ ದಲಿತ, ಆದಿವಾಸಿ ಅಥವಾ ಹಿಂದುಳಿದ ವರ್ಗದ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆದಾಗ ಪೊಲೀಸರು ಅವರನ್ನು ಹೇಗೆ ನಡೆಸಿಕೊಳ್ಳಬಹುದು? ದೇಶದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕಾನೂನುಗಳಿದ್ದರೂ, ಎಫ್‌ಐಆರ್ ದಾಖಲಿಸಲು ಇಡೀ ಒಂದು ತಿಂಗಳು ಏಕೆ ಬೇಕಾಯಿತು? ಇದು ಕೇವಲ ಒಂದು ಎಫ್‌ಐಆರ್‌ನ ವಿಷಯವಲ್ಲ. ಇದು ದೇಶದ ಕಾನೂನಿನ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯ ಸ್ಥಿತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ” ಎಂದು ಗಾಯಕ್ವಾಡ್ ಬರೆದುಕೊಂಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಮಟ್ಟದ ಮಿತ್ರರಾದ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮತ್ತು ಚಿರಾಗ್ ಪಾಸ್ವಾನ್ ಅವರು ಈ ‘ಶುದ್ಧೀಕರಣ’ ಆಚರಣೆಯನ್ನು ತಪ್ಪು ಎಂದು ಕರೆದು ಖಂಡಿಸಿದ್ದಾರೆ. ಆದರೆ, ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಅವರು ಈ ಹಿಂದೆ ಈ ಆಚರಣೆಯನ್ನು ಸಮರ್ಥಿಸಿಕೊಂಡಿದ್ದರು ಮತ್ತು ಆ ಸ್ಥಳವು “ಕಲುಷಿತಗೊಂಡಿತ್ತು” ಎಂದು ಹೇಳಿದ್ದರು.


