ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ ರೂಪಾಯಿ ಪಾವತಿಸುವಂತೆ ಗುವಾಹಟಿ ಹೈಕೋರ್ಟ್ ಅಸ್ಸಾಂ ಸರ್ಕಾರಕ್ಕೆ ಆದೇಶಿಸಿದೆ.
ಮುಮ್ತಾಝ್ ಬೇಗಂ ಎಂಬ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ನಂತರ, ಅವರ ಪತಿ ಮುಝಮ್ಮಿಲ್ ಹಕ್ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಾಲಯ, ಮೇಲಿನ ಆದೇಶ ನೀಡಿದೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
ಸೆಪ್ಟೆಂಬರ್ 3ರಂದು ನ್ಯಾಯಮೂರ್ತಿಗಳಾದ ಕಲ್ಯಾಣ್ ರಾಯ್ ಸುರಾನಾ ಮತ್ತು ಸುಸ್ಮಿತಾ ಫುಕನ್ ಕೌಂಡ್ ಅವರಿದ್ದ ವಿಭಾಗೀಯ ಪೀಠವು ಹಕ್ ಪರವಾಗಿ ತೀರ್ಪು ನೀಡಿದೆ. ಗಡಿಪಾರಿಗೆ ಸಂಬಂಧಪಟ್ಟ ಸ್ಥಾಪಿತ ನಿಯಮಗಳನ್ನು ಉಲ್ಲಂಘಿಸಿ, ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಬಾಂಗ್ಲಾದೇಶಕ್ಕೆ ತಳ್ಳಿದ್ದಕ್ಕಾಗಿ ನ್ಯಾಯಾಲಯ ಸರ್ಕಾರಕ್ಕೆ ದಂಡ ವಿಧಿಸಿರುವುದು ಇದೇ ಮೊದಲ ಬಾರಿಯಾಗಿದೆ.
ಮುಮ್ತಾಜ್ ಬೇಗಂ ಅವರ ಪ್ರಕರಣದಲ್ಲಿ ನ್ಯಾಯಾಧೀಕರಣವು ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ಆಕೆಗೆ ನ್ಯಾಯ ಕೇಳಲು ಅವಕಾಶವನ್ನೇ ನೀಡದೆ ತರಾತುರಿಯಲ್ಲಿ ತೀರ್ಪು ನೀಡಿತ್ತು. ಇದನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ. ವಿದೇಶಿಯರ ನ್ಯಾಯಾಧೀಕರಣಗಳು (ಫಾರಿನರ್ಸ್ ಟ್ರಿಬ್ಯೂನಲ್ಸ್) ಎಂಬುದು ಅಕ್ರಮ ವಲಸಿಗರೆಂದು ಶಂಕಿಸಲ್ಪಟ್ಟ ವ್ಯಕ್ತಿಗಳು ಕಾನೂನುಬದ್ಧ ನಾಗರಿಕರೇ ಅಥವಾ ವಿದೇಶಿಯರೇ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಹೊಂದಿರುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ.
ಈ ಹಿಂದೆಯೂ ಮುಮ್ತಾಜ್ ಬೇಗಂ ಅವರು ಗುವಾಹಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಅವರು ಸಲ್ಲಿಸಿದ್ದ ಎಲ್ಲಾ ಸಾಕ್ಷ್ಯಗಳನ್ನು ವಿದೇಶಿಯರ ನ್ಯಾಯಾಧೀಕರಣವು (ಟ್ರಿಬ್ಯೂನಲ್) ಸರಿಯಾಗಿ ಪರಿಶೀಲಿಸಿಲ್ಲ ಎಂದು ಹೈಕೋರ್ಟ್ ಕಂಡುಕೊಂಡಿತ್ತು. ಹಾಗಾಗಿ, ಪ್ರಕರಣವನ್ನು ಮರುಪರಿಶೀಲಿಸುವಂತೆ ನ್ಯಾಯಾಧೀಕರಣಕ್ಕೆ ವಾಪಸ್ ಕಳುಹಿಸಿತ್ತು.
ಆದರೆ, ನ್ಯಾಯಾಧೀಕರಣವು ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಿದಾಗಲೂ ಮುಮ್ತಾಝ್ ಅವರ ಪರವಾಗಿ ದಾಖಲೆಗಳಿದ್ದರೂ ಸಹ, ಮೇ 30ರಂದು ಅವರ ವಿರುದ್ಧವೇ ತೀರ್ಪು ನೀಡಿತ್ತು. ಅವರನ್ನು ಭಾರತದ ನಾಗರಿಕಳಲ್ಲ, ವಿದೇಶಿ ಪ್ರಜೆ ಎಂದು ಘೋಷಿಸಿತ್ತು.
ಮೇ 30ರ ಆದೇಶದ ಬಗ್ಗೆ ಮುಮ್ತಾಝ್ ಬೇಗಂ ಅವರಿಗೆ ಮಾಹಿತಿ ನೀಡಿದ ತಕ್ಷಣವೇ, ಆಕೆಗೆ ಆ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ ತಕ್ಷಣವೇ ವಶಕ್ಕೆ ಪಡೆಯಲಾಗಿತ್ತು ಎಂಬುವುದನ್ನು ಪ್ರಸ್ತುತ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಪೀಠವು ಗಮನಿಸಿದೆ.
ಮುಮ್ತಾಝ್ ಅವರನ್ನು ಯಾವಾಗ ಮತ್ತು ಹೇಗೆ ಬಂಧಿಸಲಾಯಿತು ಎಂಬ ವಿಷಯದಲ್ಲಿ ನ್ಯಾಯಾಧೀಕರಣದ ಸದಸ್ಯರು ಮತ್ತು ಪೊಲೀಸರು ನೀಡಿದ ಹೇಳಿಕೆಗಳು ಪರಸ್ಪರ ಭಿನ್ನವಾಗಿದ್ದವು. ಈ ಗೊಂದಲದ ಮತ್ತು ವಿರೋಧಾಭಾಸದ ವರದಿಗಳ ಬಗ್ಗೆಯೂ ನ್ಯಾಯಾಧೀಶರು ತೀವ್ರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಘಟನೆಗಳು ನಡೆದ ಸರಣಿಯನ್ನು ಗಮನಿಸಿದ ಹೈಕೋರ್ಟ್ ಪೀಠವು, ಇದು ವಿದೇಶಿ ಪ್ರಜೆಗಳ ಗಡಿಪಾರು ಪ್ರಕ್ರಿಯೆಗೆ ಸಂಬಂಧಿಸಿದ ‘ಪ್ರಮಾಣಿತ ಕಾರ್ಯಾಚರಣೆ ವಿಧಾನದ’ (Standard Operating Procedure – SOP) ನೇರ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಈ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿಯನ್ನು ದೇಶದಿಂದ ಹೊರಹಾಕುವ ಮುನ್ನ ಅವರಿಗೆ ಲಭ್ಯವಿರುವ ಎಲ್ಲಾ ಕಾನೂನುಬದ್ಧ ಹೋರಾಟ ಮತ್ತು ಮೇಲ್ಮನವಿ ಅವಕಾಶಗಳನ್ನು ಬಳಸಿಕೊಳ್ಳಲು ನ್ಯಾಯಸಮ್ಮತವಾದ ಕಾಲಾವಕಾಶ ನೀಡಬೇಕಾಗುತ್ತದೆ. ಆದರೆ ಬೇಗಂ ಅವರ ಪ್ರಕರಣದಲ್ಲಿ ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು.
ಮುಮ್ತಾಝ್ ಬೇಗಂ ಅವರು ಹೈಕೋರ್ಟ್ ಮೆಟ್ಟಿಲೇರುವ ಮತ್ತು ನ್ಯಾಯ ಕೇಳುವ ತಮ್ಮ ಕಾನೂನುಬದ್ಧ ಹಕ್ಕನ್ನು ಚಲಾಯಿಸದಂತೆ ಅಸ್ಸಾಂ ಸರ್ಕಾರವು ಸಂಪೂರ್ಣವಾಗಿ ತಡೆದಿದೆ ಎಂದು ಹೈಕೋರ್ಟ್ ಪೀಠವು ತೀರ್ಪು ನೀಡಿದೆ. ಸರ್ಕಾರದ ಈ ಬೇಜವಾಬ್ದಾರಿ ನಡೆಗಾಗಿ, ಸಂತ್ರಸ್ತ ಮಹಿಳೆಯ ಪತಿಗೆ ಮಧ್ಯಂತರ ಪರಿಹಾರವಾಗಿ 2 ಲಕ್ಷ ರೂಪಾಯಿ ಹಣವನ್ನು ಪಾವತಿಸುವಂತೆ ಅಸ್ಸಾಂ ಸರ್ಕಾರಕ್ಕೆ ನ್ಯಾಯಾಲಯವು ಆದೇಶಿಸಿದೆ.
ನ್ಯಾಯಾಲಯವು ತನ್ನ ಆದೇಶದಲ್ಲಿ, “ಈಗ ನೀಡಲಾಗಿರುವ 2 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವು ಕೇವಲ ಒಂದು ತಾತ್ಕಾಲಿಕ ಸಮಾಧಾನಕರ ಹಣವಷ್ಟೇ ಆಗಿದೆ” ಎಂದು ಸ್ಪಷ್ಟಪಡಿಸಿದೆ.
ಈ ಆದೇಶದಿಂದಾಗಿ ಅರ್ಜಿದಾರರು (ಪತಿ) ಭವಿಷ್ಯದಲ್ಲಿ ತಮಗಾದ ಅನ್ಯಾಯ ಮತ್ತು ಮಾನಸಿಕ ತೊಂದರೆಗೆ ದೊಡ್ಡ ಮೊತ್ತದ ಸೂಕ್ತ ಪರಿಹಾರವನ್ನು ಕೇಳಿ ಸಿವಿಲ್ ನ್ಯಾಯಾಲಯದಲ್ಲಿ ಪ್ರತ್ಯೇಕ ಮೊಕದ್ದಮೆ ಹೂಡುವ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಸಿವಿಲ್ ನ್ಯಾಯಾಲಯಕ್ಕೆ ಹೋಗುವ ಅವರ ಕಾನೂನುಬದ್ಧ ಹಕ್ಕು ಹಾಗೇ ಇರುತ್ತದೆ.
ಮೇ 30ರ ನ್ಯಾಯಾಧೀಕರಣದ ಆದೇಶವನ್ನು ಅಸಲಿಗೆ ಯಾವ ದಿನ ಮತ್ತು ಯಾವ ಸಮಯದಲ್ಲಿ ಬರೆಯಲಾಗಿತ್ತು (ಡ್ರಾಫ್ಟ್ ಮಾಡಲಾಗಿತ್ತು) ಎಂಬುದರ ನಿಖರವಾದ ಟೈಮ್‌ಲೈನ್ ಪತ್ತೆಹಚ್ಚಲು ಹೈಕೋರ್ಟ್ ಆದೇಶಿಸಿದೆ. ಇದಕ್ಕಾಗಿ ಅಗತ್ಯ ಬಿದ್ದರೆ ನ್ಯಾಯಾಧೀಕರಣದ ಸದಸ್ಯರು ಬಳಸುತ್ತಿದ್ದ ಕಂಪ್ಯೂಟರ್ ಅನ್ನು ಜಪ್ತಿ ಮಾಡಿ, ವಿಧಿವಿಜ್ಞಾನ ತನಿಖೆಗೆ ಒಳಪಡಿಸಬೇಕಾಗಬಹುದು ಎಂದು ನ್ಯಾಯಾಲಯ ಹೇಳಿದೆ.
ಈ ಇಡೀ ಗೊಂದಲದ ಪ್ರಕ್ರಿಯೆಯ ಹಿಂದೆ ಅಸಲಿ ಸತ್ಯ ಏನೆಂಬುದನ್ನು ವಿವರವಾಗಿ ಪತ್ತೆಹಚ್ಚಲು ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಇಲಾಖೆಗೆ ಹೈಕೋರ್ಟ್ ಪೀಠವು ಕಟ್ಟುನಿಟ್ಟಿನ ತನಿಖೆ ನಡೆಸುವಂತೆ ಆದೇಶ ನೀಡಿದೆ.
ಯಾರನ್ನಾದರೂ ‘ವಿದೇಶಿ ಪ್ರಜೆ’ ಎಂದು ಘೋಷಿಸಿದರೆ, ಅವರನ್ನು ವಶಕ್ಕೆ ಪಡೆಯುವ (ಬಂಧಿಸುವ) ಮುನ್ನ ಅವರಿಗೆ ನ್ಯಾಯಾಧೀಕರಣದ ಆದೇಶದ ಪ್ರತಿಯನ್ನು ನೀಡಿ, ಆ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ಪೀಠವು ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಘೋಷಿತ ವಿದೇಶಿ ಪ್ರಜೆಯನ್ನು ಆಯಾ ಜಿಲ್ಲೆಯಿಂದ ಬೇರೆಡೆಗೆ ಅಥವಾ ಡಿಟೆನ್ಷನ್ ಸೆಂಟರ್‌ಗೆ ಸ್ಥಳಾಂತರಿಸುವ ಮುನ್ನ, ಅವರ ಕುಟುಂಬದ ಕನಿಷ್ಠ ಒಬ್ಬರು ವಯಸ್ಕ ಸದಸ್ಯರಿಗೆ ಕಡ್ಡಾಯವಾಗಿ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇದರಿಂದಾಗಿ ಪೊಲೀಸರು ತರಾತುರಿಯಲ್ಲಿ ಅಥವಾ ರಹಸ್ಯವಾಗಿ ಜನರನ್ನು ಗಡಿಪಾರು ಮಾಡುವುದಕ್ಕೆ ಬ್ರೇಕ್ ಬಿದ್ದಂತಾಗಿದೆ.
ಹೈಕೋರ್ಟ್ ಪೀಠವು ಈ ಪ್ರಕರಣದಲ್ಲಿ ಭಾರತ ಸರ್ಕಾರದ ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಒಂದು ಪಕ್ಷಗಾರನನ್ನಾಗಿ ಮಾಡಿದೆ.
ಬಾಂಗ್ಲಾದೇಶದಲ್ಲಿರುವ ಮುಮ್ತಾಝ್ ಬೇಗಂ ಅವರನ್ನು ಅಲ್ಲಿ ಹುಡುಕಲು ಅಗತ್ಯ ಪ್ರಯತ್ನಗಳನ್ನು ಮಾಡಬೇಕು ಮತ್ತು ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವು ವಿದೇಶಾಂಗ ಸಚಿವಾಲಯಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದೆ. ಆ ಮೂಲಕ ಮಹಿಳೆಗೆ ತನಗಾದ ಅನ್ಯಾಯದ ವಿರುದ್ಧ ಭಾರತದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ನ್ಯಾಯಸಮ್ಮತವಾದ ಅವಕಾಶ ಸಿಗುವಂತೆ ಮಾಡುವುದು ಹೈಕೋರ್ಟ್‌ನ ಉದ್ದೇಶವಾಗಿದೆ.


