ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಬಯಲಿಗೆಳೆದಿದೆ. ಬೆಂಗಳೂರಿನ ವಿವಿಧ ಆಹಾರ ಸಂಗ್ರಹ ಹಾಗೂ ಪೂರೈಕೆ ಘಟಕಗಳ (ಡಾರ್ಕ್ ಸ್ಟೋರ್ಸ್) ಮೇಲೆ ನಡೆಸಿದ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ, ಒಟ್ಟು 1.43 ಕೋಟಿ ರೂಪಾಯಿ ಮೌಲ್ಯದ ಅವಧಿ ಮೀರಿದ ಆಹಾರ ಹಾಗೂ ಅನಧಿಕೃತ ಔಷಧಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಮಾರ್ಗದರ್ಶನದಲ್ಲಿ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ’ ಹಾಗೂ ‘ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ’ಯಡಿ ಈ ದಾಳಿಗಳನ್ನು ನಡೆಸಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಪೆಪ್ಟೈಡ್ ಪಾರ್ಟಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ದೊರೆತ ಮಹತ್ವದ ದಾಖಲೆಗಳ ಲಿಂಕ್ ಆಧರಿಸಿ ಈ ವ್ಯಾಪಕ ತಪಾಸಣೆ ಕೈಗೊಳ್ಳಲಾಗಿತ್ತು. ವಿಶೇಷವಾಗಿ ಆನ್‌ಲೈನ್ ಆ್ಯಪ್‌ಗಳ ಮೂಲಕ ಮಾರಾಟವಾಗುವ ಆಹಾರ ಪದಾರ್ಥಗಳ ಲೇಬಲ್, ತಯಾರಿಕಾ ದಿನಾಂಕ, ಶೆಲ್ಫ್ ಲೈಫ್ ಮತ್ತು ಕಡ್ಡಾಯ ಮಾನದಂಡಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದ್ದಾರೆ.
ದೇವನಹಳ್ಳಿಯ ಸಂಗ್ರಹಣಾ ಘಟಕವೊಂದರಲ್ಲಿ ಪೂರ್ಣ ಲೇಬಲ್ ಹೊಂದಿರದ 14 ಲಕ್ಷ ರೂ. ಹಾಗೂ ಅವಧಿ ಮೀರಿದ 10 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಯಾವುದೇ ಪರವಾನಗಿ ಇಲ್ಲದೆ ದಾಸ್ತಾನು ಮಾಡಿದ್ದ 2.45 ಲಕ್ಷ ರೂ. ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ ಆನೇಕಲ್ ತಾಲ್ಲೂಕಿನ ಘಟಕವೊಂದರಲ್ಲಿ 19 ಲಕ್ಷ ರೂ. ಮೌಲ್ಯದ ತಪ್ಪು ಲೇಬಲ್‌ನ ಆಹಾರ, 13 ಲಕ್ಷ ರೂ. ಮೌಲ್ಯದ ಎಕ್ಸ್‌ಪೈರ್ಡ್ ಉತ್ಪನ್ನಗಳು ಹಾಗೂ 1.57 ಲಕ್ಷ ರೂ. ಮೌಲ್ಯದ ಅಕ್ರಮ ಔಷಧಗಳು ಪತ್ತೆಯಾಗಿವೆ.
ಇನ್ನು ಎಚ್‌ಬಿಆರ್ ಲೇಔಟ್‌ನ ಘಟಕವೊಂದರ ವಿರುದ್ಧ ಸಾರ್ವಜನಿಕರಿಂದ ಗಂಭೀರ ದೂರುಗಳು ಕೇಳಿಬಂದಿದ್ದವು. ಪ್ರಮುಖ ಆನ್‌ಲೈನ್ ಡೆಲಿವರಿ ಆ್ಯಪ್‌ಗಳಿಂದ ದಿನಸಿ, ಹಾಲು, ತರಕಾರಿ, ಮೊಸರು ಇತ್ಯಾದಿಗಳನ್ನು ಖರೀದಿಸಿ, ಅವುಗಳ ಕಾಲಾವಧಿ ಮುಗಿದ ಮೇಲೆಯೂ ಸಾರ್ವಜನಿಕರಿಗೆ ಮರುಮಾರಾಟ ಮಾಡಲಾಗುತ್ತಿತ್ತು. ಇಲ್ಲಿ ನಡೆಸಿದ ಪರಿಶೀಲನೆ ವೇಳೆ ಎಕ್ಸ್‌ಪೈರ್ಡ್ ಆಗಿದ್ದ ಗೋಡಂಬಿ ಬಿಸ್ಕತ್, ರಾಗಿ ಹಿಟ್ಟು, ಚಿಕನ್ ಪ್ಯಾಟಿ, ಪನೀರ್ ಮತ್ತು ಮೊಟ್ಟೆಗಳನ್ನು ವಶಕ್ಕೆ ಪಡೆದು ವಿಲೇವಾರಿ ಮಾಡಲಾಗಿದೆ.
ಲಿಂಗರಾಜಪುರಂನ ಘಟಕವೊಂದರಲ್ಲಿ ಸುಮಾರು 50 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಹಾಗೂ ಮುಕ್ತಾಯದ ಹಂತದಲ್ಲಿದ್ದ ಪೌಷ್ಟಿಕ ಉತ್ಪನ್ನಗಳು, ಚಾಕೊಲೇಟ್, ಸಿಹಿತಿಂಡಿ, ತುಪ್ಪ ಮತ್ತು ನಟ್ಸ್‌ಗಳನ್ನು ಜಪ್ತಿ ಮಾಡಿ ಘಟಕಕ್ಕೆ ಸೀಲ್ ಮಾಡಲಾಗಿದೆ. ಹೊಸಕೋಟೆಯ ಡಾರ್ಕ್ ಸ್ಟೋರ್ ಒಂದರಲ್ಲಿ ತೀವ್ರ ಅಸ್ವಚ್ಛತೆ ಹಾಗೂ ಕಾನೂನು ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ, ಅಲ್ಲಿದ್ದ 42 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರವನ್ನು ವಶಪಡಿಸಿಕೊಂಡು ಘಟಕವನ್ನು ಸಂಪೂರ್ಣವಾಗಿ ಮುಚ್ಚಿಸಲಾಗಿದೆ. ಹೊಸಕೋಟೆಯಲ್ಲೊಂದೇ ಸುಮಾರು 1 ಕೋಟಿ ರೂ. ಮೌಲ್ಯದ ಅಕ್ರಮ ಉತ್ಪನ್ನಗಳಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ.
ಈ ಸಮಗ್ರ ಕಾರ್ಯಾಚರಣೆಯಲ್ಲಿ ಒಟ್ಟು 33 ಲಕ್ಷ ರೂ. ಮೌಲ್ಯದ ಅಪೂರ್ಣ ಲೇಬಲ್‌ನ ಆಹಾರ, 1.05 ಕೋಟಿ ರೂ. ಮೌಲ್ಯದ ಎಕ್ಸ್‌ಪೈರ್ಡ್ ಆಹಾರ ಉತ್ಪನ್ನಗಳು (ಆಹಾರ ಉತ್ಪನ್ನಗಳ ಒಟ್ಟು ಮೌಲ್ಯ ₹1.38 ಕೋಟಿ) ಹಾಗೂ ₹4.02 ಲಕ್ಷ ಮೌಲ್ಯದ ಅನಧಿಕೃತ ಔಷಧಗಳು ಸೇರಿ ಒಟ್ಟು ₹1.43 ಕೋಟಿ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ಹಾಗೂ ಕಾನೂನು ಕ್ರಮ ತೀವ್ರಗೊಂಡಿದೆ.


