ರಾಷ್ಟ್ರೀಯ ಮಹಿಳಾ ಆಯೋಗ (NCW) ಮಂಗಳವಾರ (ಸೆ.8) ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ, ಬಹುಪಾಲು ಸೆಷನ್‌ಗಳನ್ನು ಹಿಂದಿ ಭಾಷೆಯಲ್ಲೇ ನಡೆಸಲಾಗುತ್ತಿದೆ ಮತ್ತು ಹಿಂದಿ ಮಾತನಾಡದ ರಾಜ್ಯಗಳ ಭಾಗವಹಿಸುವಿಕೆಗೆ ಕರಾರುವಕ್ಕಾಗಿ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಆರೋಪಿಸಿ, ಕೇರಳದ ಮಹಿಳಾ ಶಾಸಕರ ಗುಂಪೊಂದು ಕಾರ್ಯಾಗಾರದಿಂದ ಹೊರನಡೆದಿದೆ.
ಮಹಿಳಾ ಶಾಸಕರಿಗಾಗಿ ರಾಷ್ಟ್ರೀಯ ಮಹಿಳಾ ಆಯೋಗವು (NCW) ಫರಿದಾಬಾದ್‌ನ ಸೂರಜ್‌ಕುಂಡ್‌ನಲ್ಲಿ ಆಯೋಜಿಸಿದ್ದ ಈ ಎರಡು ದಿನಗಳ ಸಾಮರ್ಥ್ಯ ವೃದ್ಧಿ ಕಾರ್ಯಾಗಾರವನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರ (ಸೆ.7) ಉದ್ಘಾಟಿಸಿದ್ದರು.
ಕೇರಳದ ನಿಯೋಗದಲ್ಲಿ ಡೆಪ್ಯುಟಿ ಸ್ಪೀಕರ್ ಶನಿಮೋಲ್ ಉಸ್ಮಾನ್, ಸಚಿವರುಗಳಾದ ಬಿಂದು ಕೃಷ್ಣ ಮತ್ತು ಕೆ. ಎ. ತುಳಸಿ, ಹಾಗೂ ಶಾಸಕರುಗಳಾದ ಕೆ. ಕೆ. ರೇಮಾ, ಫಾತಿಮಾ ತಹ್ಲಿಯಾ, ವಿದ್ಯಾ ಬಾಲಕೃಷ್ಣನ್ ಮತ್ತು ಉಷಾ ವಿಜಯನ್ ಅವರು ಇದ್ದರು.
ಶಾಸಕರು ತಮ್ಮ ಆಕ್ಷೇಪಣೆಯು ಹಿಂದಿ ಭಾಷೆಯ ವಿರುದ್ಧವಾಗಿರದೆ, ಹಿಂದಿ ಮಾತನಾಡದ ರಾಜ್ಯಗಳ ಭಾಗವಹಿಸುವವರನ್ನು ಒಳಗೊಳ್ಳಲು ಸೂಕ್ತ ವ್ಯವಸ್ಥೆಗಳನ್ನು ಮಾಡದಿರುವುದರ ವಿರುದ್ಧವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
“ನಾವು ದಕ್ಷಿಣ ಭಾರತದವರು. ನಮಗೆ ಆ ಮಟ್ಟಿಗೆ ಹಿಂದಿ ಅರ್ಥವಾಗುವುದಿಲ್ಲ, ಆದ್ದರಿಂದ ನಮಗೆ ಅರ್ಥವಾಗುವಂತೆ ಇಂಗ್ಲಿಷ್ ಅನ್ನು ಸಹ ಬಳಸಬೇಕೆಂದು ನಾವು ವಿನಂತಿಸಿದೆವು. ಆದರೆ ಯಾರೂ ನಮ್ಮ ಮಾತನ್ನು ಕೇಳಲಿಲ್ಲ” ಎಂದು ಸಚಿವೆ ಬಿಂದು ಕೃಷ್ಣ ಹೇಳಿದ್ದಾರೆ.

ಶಾಸನ ರಚನೆ ಮತ್ತು ಶಾಸಕಾಂಗ ನಡವಳಿಕೆಗಳ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನ ಹಾಗೂ ಆಲೋಚನೆಗಳನ್ನು ನಿರೀಕ್ಷಿಸಿ ತಾವು ಈ ಕಾರ್ಯಾಗಾರಕ್ಕೆ ಹಾಜರಾಗಿದ್ದಾಗಿದ್ದೆವು. ಆದರೆ, ಎಲ್ಲಾ ಸೆಷನ್‌ಗಳನ್ನು ಹಿಂದಿಯಲ್ಲೇ ನಡೆಸಲಾಯಿತು ಮತ್ತು ಅಲ್ಲಿ ಪರಸ್ಪರ ಸಂವಾದ ಅಥವಾ ಚರ್ಚೆಗೆ ಯಾವುದೇ ಅವಕಾಶವಿರಲಿಲ್ಲ ಎಂದು ಕೃಷ್ಣ ಆರೋಪಿಸಿದ್ದಾರೆ.
“ನಾವು ಶಾಸನ ರಚನೆಯ ಬಗ್ಗೆ — ಅಂದರೆ ನಾವು ಹೇಗೆ ಕಾನೂನುಗಳನ್ನು ರೂಪಿಸುತ್ತೇವೆ ಮತ್ತು ಅವುಗಳನ್ನು ಹೇಗೆ ಜಾರಿಗೊಳಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ, ಆಲೋಚನೆಗಳು ಹಾಗೂ ಮಾರ್ಗಸೂಚಿಗಳನ್ನು ನಿರೀಕ್ಷಿಸಿದ್ದೆವು” ಎಂದು ಕೃಷ್ಣ ಹೇಳಿದ್ದಾರೆ.
ಪೋಸ್ಟರ್‌ಗಳು ಮತ್ತು ಇತರ ಸಾಮಗ್ರಿಗಳು ಇಂಗ್ಲಿಷ್‌ನಲ್ಲಿದ್ದರೂ ಸಹ, ಸೆಷನ್‌ಗಳನ್ನು ಮಾತ್ರ ಹಿಂದಿಯಲ್ಲೇ ನಡೆಸಲಾಯಿತು. “ಚರ್ಚೆಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಇಂಗ್ಲಿಷ್ ಅನ್ನು ಸಹ ಬಳಸಬೇಕು ಎಂದು ನಾವು ವಿನಂತಿಸಿದೆವು, ಆದರೆ ನಮ್ಮ ವಿನಂತಿಯನ್ನು ಅವರು ಸ್ವೀಕರಿಸಲಿಲ್ಲ” ಎಂದು ಕೃಷ್ಣ ಹೇಳಿಕೊಂಡಿದ್ದಾರೆ.
“ಈ ಎರಡು ದಿನಗಳ ಕಾರ್ಯಾಗಾರದಿಂದ ತಮಗೆ ಹೆಚ್ಚಿನ ಲಾಭ ಸಿಗಬಹುದು ಎಂದು ಮಹಿಳಾ ಶಾಸಕರು ನಿರೀಕ್ಷಿಸಿದ್ದರು. ಆದರೆ, ಅಲ್ಲಿನ ಚರ್ಚೆಗಳು ಹೆಚ್ಚಾಗಿ ಪೊಲೀಸ್ ದೂರುಗಳನ್ನು ದಾಖಲಿಸುವುದು ಮತ್ತು ಆಂಬ್ಯುಲೆನ್ಸ್‌ಗಳನ್ನು ಕರೆಯುವ ಬಗ್ಗೆ ಮಾತ್ರ ಆಗಿದ್ದವು” ಎಂದು ಕೃಷ್ಣ ತಿಳಿಸಿದ್ದಾರೆ.
ಕಾರ್ಯಾಗಾರದ ಕಾರ್ಯಸೂಚಿಯಲ್ಲಿ ಪಟ್ಟಿ ಮಾಡಲಾಗಿದ್ದ ಮುಕ್ತ ಚರ್ಚೆಯನ್ನು (ಓಪನ್-ಹೌಸ್ ಡಿಸ್ಕಷನ್) ನಡೆಸಲಾಗಿಲ್ಲ ಎಂದು ಇತರ ಶಾಸಕರು ಆರೋಪಿಸಿದ್ದಾರೆ. ಶಾಸಕಿ ತಹ್ಲಿಯಾ ಅವರು ಮಾತನಾಡಿ, ಇಡೀ ಕಾರ್ಯಕ್ರಮವು ಹೆಚ್ಚಾಗಿ ಸರಣಿ ತರಗತಿಗಳ ಮೂಲಕವೇ ಸಾಗಿತು ಮತ್ತು ಅಲ್ಲಿ ಪರಸ್ಪರ ಸಂವಾದಕ್ಕೆ (ಇಂಟರಾಕ್ಷನ್) ಬಹಳ ಕಡಿಮೆ ಅವಕಾಶವಿತ್ತು ಎಂದು ತಿಳಿಸಿದ್ದಾರೆ.
ರಾಷ್ಟ್ರ ಮಟ್ಟದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರ ಮಹಿಳಾ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲು ಅಥವಾ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು ಸಹ ತಮಗೆ ಅವಕಾಶ ನೀಡಲಿಲ್ಲ ಎಂದು ಶಾಸಕರು ಆರೋಪ ಮಾಡಿದ್ದಾರೆ.
“ಸಮಸ್ಯೆ ಇರುವುದು ಹಿಂದಿ ಭಾಷೆಯಲ್ಲಲ್ಲ. ಬದಲಾಗಿ, ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಶಾಸಕರನ್ನು ಒಳಗೊಳ್ಳಲು ಆಯೋಗವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ” ಎಂದು ಶಾಸಕಿಯೊಬ್ಬರು ಹೇಳಿದ್ದಾರೆ.
ಹಿಂದಿ ಭಾಷೆ ಬಾರದಿದ್ದರೆ ತಾವೇ ಕಲಿಸಿಕೊಡುವುದಾಗಿ ಹಿಂದಿ ಮಾತನಾಡುವ ರಾಜ್ಯವೊಂದರ ಶಾಸಕಿಯೊಬ್ಬರು ತಮಗೆ ಹೇಳಿದರು. ಅಷ್ಟೇ ಅಲ್ಲದೆ, ಹಿಂದಿಯೇ ರಾಷ್ಟ್ರಭಾಷೆಯಾಗಿದ್ದು, ಚರ್ಚೆಗಳು ಕೇವಲ ಹಿಂದಿಯಲ್ಲೇ ನಡೆಯುತ್ತವೆ ಎಂದು ಕಾರ್ಯಾಗಾರದಲ್ಲಿದ್ದ ಕೆಲವರು ಕೂಗಾಡಿದರು ಎಂದು ಮಹಿಳಾ ಶಾಸಕರು ದೂರಿದ್ದಾರೆ.
ಇದರ ಬೆನ್ನಲ್ಲೇ ಸಭಾಂಗಣದಲ್ಲಿ ‘ಜೈ ಶ್ರೀ ರಾಮ್’ ಮತ್ತು ‘ಭಾರತ್ ಮಾತಾ ಕಿ ಜೈ’ ಸೇರಿದಂತೆ ಹಲವು ಘೋಷಣೆಗಳನ್ನು ಕೂಗಲಾಯಿತು ಎಂದು ಅವರು ಆರೋಪಿಸಿದ್ದಾರೆ. ಆ ಸೆಷನ್ ಮತ್ತು ಸಮಾರೋಪ ಸಮಾರಂಭಕ್ಕೂ ಕೆಲವೇ ಕ್ಷಣಗಳ ಮೊದಲು ಮಹಿಳಾ ಶಾಸಕರು ಕಾರ್ಯಾಗಾರದಿಂದ ಹೊರನಡೆದರು ಎಂದಿದ್ದಾರೆ.
ಶಾಸಕಿಯರ ಆರೋಪಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದಿಂದ (NCW) ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಹಾಗೂ ತಿರುವನಂತಪುರಂ ಸಂಸದ ಶಶಿತರೂರ್, “ನವ ದೆಹಲಿಯು ‘ಸಹಕಾರಿ ಒಕ್ಕೂಟ ವ್ಯವಸ್ಥೆ’ಯನ್ನು (ಕೋ-ಆಪರೇಟಿವ್ ಫೆಡರಲಿಸಂ) ಹೇಗೆ ತಪ್ಪಾಗಿ ಅರ್ಥೈಸುತ್ತದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ. ಅವರು ಇನ್ಯಾವಾ ಕಲಿಯುತ್ತಾರೆ?” ಎಂದು ಎಕ್ಸ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.



