ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ತರಹುಣಸೆ ನಿವಾಸಿ ಅನ್ನಪೂರ್ಣ ಎಂ (EPIC ಸಂಖ್ಯೆ: ZBG8817611) ಎಂಬ ಮತದಾರರಿಗೆ ಚುನಾವಣಾ ಆಯೋಗ ನೀಡಿರುವ ನೋಟಿಸ್, ಆಡಳಿತಶಾಹಿಯ ತಾರ್ಕಿಕಹೀನ ಧೋರಣೆಗೆ ಸ್ಪಷ್ಟ ಸಾಕ್ಷಿಯಾಗಿದೆ.
ಅನ್ನಪೂರ್ಣ ಎಂ ಅವರು ಬೆಂಗಳೂರು ಉತ್ತರ ತಾಲೂಕಿನ ತರಹುಣಸೆಯ ವಾಸಿಯಾಗಿದ್ದು, ಭಾಗ ಸಂಖ್ಯೆ 3ರ (ಸ್ಟೋನ್ ಹಿಲ್ ಸರ್ಕಾರಿ ಶಾಲೆ) ಕ್ರಮಸಂಖ್ಯೆ 603 ರಲ್ಲಿ ನೋಂದಾಯಿತ ಮತದಾರರಾಗಿದ್ದಾರೆ. ಆಯೋಗದ ಮಾರ್ಗದರ್ಶನದಂತೆ ಅವರು ತಮ್ಮ ತಂದೆ ಮುನಿ ಚೆನ್ನಪ್ಪ ಅವರ ವಿವರಗಳೊಂದಿಗೆ ಸರಿಯಾದ ಮ್ಯಾಪಿಂಗ್ ಮಾಡಿ, ಎನ್ಯುಮರೇಷನ್ ನಮೂನೆಯನ್ನು ಪೂರ್ಣಗೊಳಿಸಿ ಬಿಎಲ್‌ಒ ಅವರಿಗೆ ನಿಯಮಾನುಸಾರ ತಲುಪಿಸಿದ್ದರು. ಕರಡು ಪಟ್ಟಿಯಲ್ಲೂ ಅವರ ಹೆಸರು ಬಂದಿತ್ತು. ಆದರೆ, ನಂತರದಲ್ಲಿ ಆಯೋಗವು ಸಿದ್ಧಪಡಿಸಿರುವ ಆನ್‌ಲೈನ್ ಆಲ್ಗರಿದಮ್ ಮತ್ತು ತಾಂತ್ರಿಕ ವ್ಯವಸ್ಥೆಯು ಇದೀಗ ಅವರಿಗೆ ಅನಿರೀಕ್ಷಿತ ನೋಟಿಸ್ ಒಂದನ್ನು ನೀಡಿದೆ.
ಚುನಾವಣಾ ಆಯೋಗ ನೀಡಿರುವ ನೋಟಿಸ್‌ನ ಪ್ರಕಾರ, ಹಿಂದಿನ SIR ಸಮಯದಲ್ಲಿ ಬಳಕೆಯಾದ ನಿಮ್ಮ ಅಜ್ಜಿ/ಅಜ್ಜಿಯ ವಿವರಗಳು ಮತ್ತು ನಿಮ್ಮ ನಡುವಿನ ವಯಸ್ಸಿನ ವ್ಯತ್ಯಾಸವು 40 ವರ್ಷಗಳಿಗಿಂತ ಕಡಿಮೆಯಿದೆ, ಇದು ತಪ್ಪಾದ ಜೋಡಣೆ ಎಂಬ ವಿಚಿತ್ರ ಕಾರಣವನ್ನು ನೀಡಲಾಗಿದೆ. ಸೆಪ್ಟೆಂಬರ್ 11 ರಂದು ಮೂಲ ದಾಖಲೆಗಳೊಂದಿಗೆ ವಿಚಾರಣಾಧಿಕಾರಿಗಳ ಮುಂದೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.
ಇಲ್ಲಿ ಏಳುವ ಪ್ರಮುಖ ಪ್ರಶ್ನೆಯೆಂದರೆ, ಮತದಾರರು ತಮ್ಮ ತಂದೆಯ ವಿವರ ಹಾಗೂ ಅಗತ್ಯ ಮೂಲ ದಾಖಲೆಗಳನ್ನು (ಎಸ್‌ಎಸ್‌ಎಲ್‌ಸಿ, ಆಧಾರ್ ಹಾಗೂ ಕರಾರುವಕ್ಕಾದ ಎನ್ಯುಮರೇಷನ್ ಫಾರಂ) ಸರಿಯಾಗಿ ನೀಡಿದ್ದರೂ, ಹಿನ್ನೆಲೆಯಲ್ಲಿ ಸಿಸ್ಟಮ್‌ನಲ್ಲಾಗುವ ತಾಂತ್ರಿಕ ಮ್ಯಾಪಿಂಗ್ ದೋಷಗಳಿಗೆ ಸಾರ್ವಜನಿಕರನ್ನು ಹೊಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಅಜ್ಜ-ಮೊಮ್ಮಗಳ ನಡುವಿನ ವಯಸ್ಸಿನ ಅಂತರದ ತಾಂತ್ರಿಕ ಕಾರಣವೊಡ್ಡಿ, ದಶಕಗಳಿಂದ ಅದೇ ಕ್ಷೇತ್ರದಲ್ಲಿ ವಾಸಿಸುತ್ತಿರುವ ನೈಜ ಮತದಾರರಿಗೆ ನೋಟಿಸ್ ಜಾರಿ ಮಾಡುವುದು ಚುನಾವಣಾ ಆಯೋಗದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಚುನಾವಣಾ ಆಯೋಗದ ನಡೆಗೆ ಬೇಸರ:
ಈ ಬಗ್ಗೆ ನಾನು ಗೌರಿ.ಕಾಂನೊಂದಿಗೆ ಮಾತನಾಡಿರು ‘ಅನ್ನಪೂರ್ಣ ಎಂ’ ನನ್ನ ಬಳಿ ಎಲ್ಲಾ ರೀತಿಯ ಸರಿಯಾದ ದಾಖಲೆಗಳಿದ್ದವು. ನಿಯಮದಂತೆಯೇ ನನ್ನ ತಂದೆಯ ಹೆಸರಿನೊಂದಿಗೆ ಸರಿಯಾಗಿ ಮ್ಯಾಪಿಂಗ್ ಮಾಡಿ ಎನ್ಯುಮರೇಷನ್ ಫಾರಂ ಅನ್ನು ಬಿಎಲ್‌ಒಗೆ ಹಸ್ತಾಂತರಿಸಿದ್ದೆ. ಆದರೆ ಚುನಾವಣಾ ಆಯೋಗ ನೀಡಿದ ನೋಟಿಸ್‌ನಲ್ಲಿ ‘ನಿಮ್ಮ ಮತ್ತು ನಿಮ್ಮ ಅಜ್ಜನ ನಡುವಿನ ವಯಸ್ಸಿನ ಅಂತರ ತಾಳೆಯಾಗುತ್ತಿಲ್ಲ’ ಎನ್ನುವ ವಿಚಿತ್ರ ಕಾರಣ ನೀಡಲಾಗಿದೆ. ವಾಸ್ತವವಾಗಿ ನನ್ನ ಮತ್ತು ನನ್ನ ಅಜ್ಜನ ವಯಸ್ಸಿನ ಅಂತರ 40 ವರ್ಷಕ್ಕಿಂತಲೂ ಹೆಚ್ಚಿದೆ. ಒಂದು ವೇಳೆ ಆಯೋಗ ಸ್ವಯಂಪ್ರೇರಿತವಾಗಿ ನನ್ನ ಹೆಸರನ್ನು ಅಜ್ಜನ ಹೆಸರಿಗೆ ಮ್ಯಾಪಿಂಗ್ ಮಾಡಿಕೊಂಡಿದೆ ಎಂದರೂ, ಅವರು ನೀಡಿರುವ ಈ ವಯಸ್ಸಿನ ವ್ಯತ್ಯಾಸದ ನೆಪ ತೀರಾ ದೋಷಪೂರಿತವಾಗಿದೆ. ಸರಿ ಇರುವ ದಾಖಲೆಗಳನ್ನು ಪರಿಶೀಲಿಸದೆ, ತಾಂತ್ರಿಕ ತಪ್ಪುಗಳನ್ನು ನಮ್ಮ ಮೇಲೆ ಹೇರಿ ವಿಚಾರಣೆಗೆ ಹಾಜರಾಗಬೇಕೆಂದು ಕಿರುಕುಳ ನೀಡುತ್ತಿರುವುದು ಬೇಸರ ತಂದಿದೆ ಎಂದಿದ್ದಾರೆ.
ಇಂತಹ ಸಾಲು ಸಾಲು ನೋಟಿಸ್‌ಗಳು ಬಡ ಮತ್ತು ಶ್ರಮಿಕ ವರ್ಗದ ಮತದಾರರನ್ನು ತಾಲೂಕು ಕಚೇರಿಗಳು ಹಾಗೂ ವಿಚಾರಣಾ ಕೇಂದ್ರಗಳಿಗೆ ಅಲೆಯುವಂತೆ ಮಾಡುತ್ತಿವೆ. ಬ್ಯಾಟರಾಯನಪುರ ಮಾತ್ರವಲ್ಲದೆ ರಾಜ್ಯಾದ್ಯಂತ ಆಯೋಗದ ಇಂತಹ ಯಾಂತ್ರಿಕ ಪರಿಶೀಲನಾ ವಿಧಾನದಿಂದಾಗಿ ಸಾವಿರಾರು ಮತದಾರರು ಅಂತಿಮ ಪಟ್ಟಿಯಿಂದ ಹೊರಬೀಳುವ ಭೀತಿಯಲ್ಲಿದ್ದಾರೆ.


