ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು ನಿಂದನೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ತಾವು ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದರೂ, ಅವರು ಮಂದಹಾಸ ಬೀರುತ್ತಾ ಯಾವುದೇ ಉತ್ತರವಿಲ್ಲದೆ ಹೊರಟುಹೋದರು ಎಂದು ಪತ್ರಕರ್ತೆ ತಿಳಿಸಿದ್ದಾರೆ. ವಿಶೇಷವಾಗಿ ಸುದ್ದಿಗೋಷ್ಠಿಗಾಗಿ ಕರೆಯಲಾಗಿದ್ದ ಪತ್ರಕರ್ತರಿಂದ ಯಾವುದೇ ಪ್ರಶ್ನೆಗಳನ್ನು ಸ್ವೀಕರಿಸದೆ ಮುಖ್ಯಮಂತ್ರಿಯವರು ತಮ್ಮ ಭಾಷಣವನ್ನು ಮುಗಿಸಿ ತಕ್ಷಣವೇ ಹೊರಟುಹೋದರು ಎಂದು ಹಲವು ಮಾಧ್ಯಮ ಪ್ರತಿನಿಧಿಗಳು ತಿಳಿಸಿದ್ದಾರೆ.
ಆದಿತ್ಯನಾಥ್ ಹೊರಟುಹೋದ ಬಳಿಕ ಸಭಾಂಗಣದ ಹಿಂಭಾಗದಿಂದ ಕೂಗಿದ ಶ್ರೀವಾಸ್ತವ ಅವರು, “ಮುಖ್ಯಮಂತ್ರಿಗಳೇ, ದಯವಿಟ್ಟು ಉತ್ತರಿಸಿ. ಇದೊಂದು ಸುದ್ದಿಗೋಷ್ಠಿ. ನಿಮಗೆ ಮಾಧ್ಯಮಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲವೇ, ಹೇಳಿ! ನಮ್ಮನ್ನು ಪ್ರೆಸ್ ಕಾನ್ಫರೆನ್ಸ್‌ಗೆ ಕರೆದದ್ದು ಯಾಕೆ? ನಿಮ್ಮ ಧ್ವನಿಯನ್ನು ಎತ್ತಲು ಮತ್ತು ನಿಮ್ಮ ಮಾತನ್ನು ಮಾತ್ರ ಕೇಳಿಸಿಕೊಳ್ಳಲಿಕ್ಕಾ” ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿ ಬಳಿಕ ಬಿಜೆಪಿ ಬೆಂಬಲಿಗರ ಜೊತೆಗೆ ವಾಗ್ವಾದ
ನಾನು ಹೊರಡುವಾಗ, ಸ್ವಯಂಘೋಷಿತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಬಲಿಗರು ತಾವು ಯಾವ ಚಾನೆಲ್ ಅನ್ನು ಪ್ರತಿನಿಧಿಸುತ್ತೀರಿ ಎಂದು ಕೇಳಿ ತಮ್ಮ ಮೇಲೆ ಕಿರುಚಾಡಲು ಪ್ರಾರಂಭಿಸಿದರು ಎಂದು ಶ್ರೀವಾಸ್ತವ ತಿಳಿಸಿದರು. ವಿರೋಧ ಪಕ್ಷವಾದ ಸಮಾಜವಾದಿ ಪಕ್ಷ ಅಥವಾ ಕಾಂಗ್ರೆಸ್‌ನಿಂದ ಕಳುಹಿಸಲ್ಪಟ್ಟ ವ್ಯಕ್ತಿ ಎಂಬಂತೆ ಆನ್‌ಲೈನ್‌ನಲ್ಲಿ ಮತ್ತೊಂದು ತಪ್ಪು ಕಥೆಯನ್ನು ಬಿತ್ತರಿಸಲಾಗುತ್ತಿದೆ ಎಂದು ವರದಿಗಾರ್ತಿ ಹೇಳಿದರು.
ನಾನು ಓರ್ವ ಸ್ವತಂತ್ರ ಪತ್ರಕರ್ತೆಯಾಗಿದ್ದು, ಈವೆಂಟ್‌ನಲ್ಲಿನ ತಮ್ಮ ಪ್ರಶ್ನೆಗಳ ಕುರಿತು ವಿಕೃತ ನಿರೂಪಣೆಯನ್ನು ಸೃಷ್ಟಿಸಲು ಈ ಊಹಾಪೋಹಗಳನ್ನು ಹುಟ್ಟುಹಾಕಲಾಗಿದೆ ಎಂದು ಅವರು ಈ ಆರೋಪಗಳನ್ನು ತಳ್ಳಿಹಾಕಿದರು.
ಸಿಜೆಪಿ, ಕಾಂಗ್ರೆಸ್ ಮತ್ತು ಎಸ್‌ಪಿಯಿಂದ ಯೋಗಿ ವಿರುದ್ಧ ವಾಗ್ದಾಳಿ
ವೀಡಿಯೊ ವೈರಲ್ ಆದ ನಂತರ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಕಾಂಗ್ರೆಸ್ ಮತ್ತು ಎಸ್‌ಪಿ ಪಕ್ಷಗಳು ಸೆಪ್ಟೆಂಬರ್ 12, ಶನಿವಾರದಂದು ಮಾಧ್ಯಮಗಳೊಂದಿಗೆ ಸಂವಾದ ನಡೆಸದೆ ತೆರಳಿದ ಮುಖ್ಯಮಂತ್ರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು.
ವೀಡಿಯೊ ಹಂಚಿಕೊಂಡಿರುವ ಸಿಜೆಪಿ, “ಪ್ರತಿಷ್ಠಿತ ಪತ್ರಕರ್ತೆಯೊಬ್ಬರು ಪ್ರಶ್ನೆಗಳನ್ನು ಕೇಳುತ್ತಲೇ ಇರಲು, ಯುಪಿ ಮುಖ್ಯಮಂತ್ರಿಗಳು ಸುದ್ದಿಗೋಷ್ಠಿಯಿಂದ ಹೊರಟುಹೋದರು. ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾವು 180 ದೇಶಗಳಲ್ಲಿ 157 ನೇ ಸ್ಥಾನದಲ್ಲಿದ್ದೇವೆ ಎಂಬುದಕ್ಕೆ ಇದುವೇ ಅಚ್ಚುಕಟ್ಟಾದ ಉದಾಹರಣೆಯಾಗಿದೆ” ಎಂದು ಬರೆದುಕೊಂಡಿದೆ.
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಾತನಾಡಿ, “ಉತ್ತರ ಪ್ರದೇಶದಲ್ಲಿ ಪ್ರಶ್ನೆಗಳು ತುಳುಕುತ್ತಿವೆ, ಆದರೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಬಳಿ ಯಾವ ಉತ್ತರವಿಲ್ಲ” ಎಂದು ಹೇಳಿದರು.
“ಹೆಸರುಗಳನ್ನು ಬದಲಿಸುತ್ತಲೇ ಇರುತ್ತಿರುವವರು ಈಗ ‘ಸುದ್ದಿಗೋಷ್ಠಿ’ ಹೆಸರನ್ನು ‘ಪ್ರೆಸ್ ಏಕಪಾತ್ರಾಭಿನಯ’ ಎಂದು ಬದಲಾಯಿಸಬೇಕು. ಏಕೆಂದರೆ ಕೇವಲ ಹೇಳಿಕೆಯನ್ನು ಮಾತ್ರ ನೀಡಬೇಕಾದಾಗ ಮತ್ತು ಪತ್ರಿಕೆಗೆ ಪ್ರಶ್ನೆಗಳನ್ನು ಕೇಳುವ ಹಕ್ಕಿಲ್ಲದಂದಾಗ, ಸಂಭಾಷಣೆಯಿಲ್ಲದೆ ಆ ‘ಕಾನ್ಫರೆನ್ಸ್’ ಪದಕ್ಕೆ ಏನು ಅರ್ಥವಿರುತ್ತದೆ” ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.
“ಸತ್ಯವೆಂದರೆ ಯುಪಿಯಲ್ಲಿ ಪ್ರಶ್ನೆಗಳು ತುಂಬಿ ತುಳುಕುತ್ತಿವೆ, ಆದರೆ ಅವರ ಬಳಿ ಯಾವುದೇ ಉತ್ತರವಿಲ್ಲ. ತಿರುಗಿ ನಡೆಯುವುದು ಅಥವಾ ಮೈದಾನದಿಂದ ಓಡಿಹೋಗುವುದು ಎಂದೂ ಕೂಡ ಇದನ್ನೇ ಕರೆಯುತ್ತಾರೆ. ಅವರು ಆಡಳಿತದಲ್ಲಿ ತಾರತಮ್ಯವನ್ನು ಮತ್ತು ಸುದ್ದಿಗೋಷ್ಠಿಗಳಲ್ಲಿ ಏಕಪಕ್ಷೀಯ ಆರ್ಭಟವನ್ನು ತೋರಿಸುತ್ತಾರೆ. ಈಗ ಅವರು ‘ಪ್ರಶ್ನೆಗಳನ್ನು ಕೇಳುವ ಮೂಡ್‌ನಲ್ಲಿಲ್ಲ’ ಎಂದೂ ಹೇಳುತ್ತಾರೆಯೇ” ಎಂದು ಟೀಕಿಸಿದರು.


