ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರು ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಆಯೋಜಕರು ಹಾಗೂ ಹಿಂದುತ್ವವಾದಿ ಗುಂಪುಗಳ ಶಾಂತಿ ಸಭೆ ನಡೆಸಿ ಸೌಹಾರ್ದತೆಯ ಮಾರ್ಗದರ್ಶನ ನೀಡಿದ್ದರು. ಧಾರ್ಮಿಕ ಹಬ್ಬದ ಹೆಸರಿನಲ್ಲಿ ರಂಪಾಟ ನಡೆಸದಂತೆ ಅವರು ನೀಡಿದ್ದ ಖಡಕ್ ಎಚ್ಚರಿಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು.
ಟಿ. ನರಸೀಪುರ ಠಾಣೆ ವ್ಯಾಪ್ತಿಯಲ್ಲಿ ಮೂರ್ತಿ ವಿಸರ್ಜನಾ ಮೆರವಣಿಗೆಯನ್ನು ಪೊಲೀಸರು ನಿಗದಿಪಡಿಸಿದ ನಿರ್ದಿಷ್ಟ ಮಾರ್ಗದಲ್ಲೇ ನಡೆಸಬೇಕು, ಲಿಂಕ್ ರಸ್ತೆಯಲ್ಲಿ ಅವಕಾಶವಿಲ್ಲ, ಮಸೀದಿಗಳ ಮುಂಭಾಗದಲ್ಲಿ ಅನಗತ್ಯವಾಗಿ ಮೆರವಣಿಗೆ ತಡೆದು ನಿಲ್ಲಿಸುವುದು ಅಥವಾ ಪಟಾಕಿ ಸಿಡಿಸಿ ಪ್ರಚೋದನಕಾರಿ ಘೋಷಣೆ ಕೂಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಧನಂಜಯ್ ಕಟ್ಟುನಿಟ್ಟಾಗಿ ಹೇಳಿದ್ದರು. “ನಿಯಮ ಉಲ್ಲಂಘಿಸಿ ವಾತಾವರಣ ಕೆಡಿಸಿದರೆ ಗ್ರಹಚಾರ ಬಿಡಿಸುತ್ತೇನೆ” ಎಂದು ಅವರು ನೀಡಿರುವ ಸ್ಪಷ್ಟ ಮತ್ತು ಕರ್ತವ್ಯನಿಷ್ಠ ಎಚ್ಚರಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಯಾವುದೇ ಕೋಮು ಗಲಭೆಗೆ ಆಸ್ಪದ ನೀಡಬಾರದೆಂಬ ಉದ್ದೇಶದಿಂದ ಭದ್ರತಾ ಅಧಿಕಾರಿ ಕೈಗೊಂಡ ಈ ಕ್ರಮವು, ಧಾರ್ಮಿಕ ಸೂಕ್ಷ್ಮತೆಯನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಯುತ್ತಿದ್ದ ಹಿಂದುತ್ವವಾದಿ ಗುಂಪುಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಧಿಕಾರಿಯ ಈ ಸೌಹಾರ್ದತೆಯ ನಡೆಯಿಂದ ಕಂಗಾಲಾದ ಬಿಜೆಪಿ ನಾಯಕರು, ತಕ್ಷಣವೇ ವಿಷಯವನ್ನು ‘ಹಿಂದು ವಿರೋಧಿ’ ಎಂದು ಬಿಂಬಿಸಿ ಆಡಳಿತ ಯಂತ್ರಕ್ಕೇ ಬೆದರಿಕೆಯೊಡ್ಡಲು ರಂಗಕ್ಕಿಳಿದಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್, ಮೈಸೂರು ಸಂಸದ ಯದುವೀರ್ ಒಡೆಯರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ಬೆಂಬಲಿಗರೊಂದಿಗೆ ಟಿ. ನರಸೀಪುರ ಪೊಲೀಸ್ ಠಾಣೆಗೆ ಧಾವಿಸಿ ದಾಂಧಲೆ ನಡೆಸಿದ್ದು, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಇನ್ಸ್‌ಪೆಕ್ಟರ್ ಧನಂಜಯ್ ಹೀಗೆ ಮಾತನಾಡಿದ್ದಾರೆಂದರೆ ಇದರ ಹಿಂದೆ ಸರ್ಕಾರದ ಷಡ್ಯಂತ್ರವಿದೆ. ಮೆರವಣಿಗೆ ಮಾಡುವವರು ರೌಡಿಗಳಾ” ಎಂದು ಅಶೋಕ್ ಬೆದರಿಕೆ ಒಡ್ಡಿದ್ದರೆ, ಇತ್ತ ಸಂಸದ ಯದುವೀರ್ ಒಡೆಯರ್ ಅವರು “ಜಾತ್ಯತೀತತೆಯ ನೆಪದಲ್ಲಿ ಧಾರ್ಮಿಕ ಆಚರಣೆಗಳಿಗೆ ಅಡೆತಡೆ ಉಂಟುಮಾಡಲಾಗುತ್ತಿದೆ” ಎಂದು ವಾದಿಸಿ ಭದ್ರತಾ ನಿಯಮಗಳನ್ನು ತೆಗಳಿದ್ದಾರೆ.
ಗಲಭೆ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕೈಗೊಳ್ಳುವ ಕಾನೂನುಬದ್ಧ ಭದ್ರತಾ ನಿಯಮಗಳನ್ನೇ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಹಾಗೂ ಕರ್ತವ್ಯ ನಿರತ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುತ್ತಿರುವ ಬಿಜೆಪಿ ನಾಯಕರ ಈ ಪ್ರಚೋದನಕಾರಿ ನಡೆಗೆ ಪ್ರಜಾಸತ್ತಾತ್ಮಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.


