ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ ಧಕ್ಕೆ ತರಲು ಯತ್ನಿಸಿದ ಪುಂಡರ ವಿರುದ್ಧ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಇಲಾಖೆ ತಕ್ಷಣವೇ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗಿದೆ.
ಸೆಪ್ಟೆಂಬರ್ 12ರ ಶನಿವಾರ ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ನಗರದ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ತೆರಳುವ ಪ್ರಮುಖ ರಸ್ತೆಯ ಬಳಿ ಮೇದಾರ್ ಓಣಿಯ ಗಣಪತಿ ಮತ್ತು ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾಗಿದ್ದವು. ಈ ವೇಳೆ ಕಲಾಲ್ ಓಣಿ ಗಣಪತಿ ಮೆರವಣಿಗೆಯಲ್ಲಿದ್ದ ಉಚ್ಚ ಸ್ವರದ ಡಿಜೆ ಧ್ವನಿವರ್ಧಕಗಳ ಮುಂದೆ ಕುಣಿಯುತ್ತಿದ್ದ ಕೆಲವು ಅಪರಿಚಿತ ಯುವಕರು, ಸ್ಥಳದಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಲು ಯತ್ನಿಸಿದ್ದಾರೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಮಹಿಳೆಯರ ಸುರಕ್ಷತೆಯನ್ನು ಕಾಯುವ ನಿಟ್ಟಿನಲ್ಲಿ ಕೇವಲ 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ ಬಲಪ್ರಯೋಗ (ಲಘು ಲಾಠಿ ಪ್ರಹಾರ) ನಡೆಸಿ, ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೋರಸೆ ಅವರು ಮಾಹಿತಿ ನೀಡಿದ್ದಾರೆ.
ಈ ಅಸಭ್ಯ ವರ್ತನೆ ಹಾಗೂ ಪುಂಡಾಟಿಕೆಯಲ್ಲಿ ಭಾಗಿಯಾದ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಕಮಿಷನರ್ ತಮ್ಮ ಅಧಿಕೃತ ವಾಟ್ಸಾಪ್ ಖಾತೆಯ ಮೂಲಕ ಸ್ಪಷ್ಟಪಡಿಸಿದ್ದಾರೆ. ಧಾರ್ಮಿಕ ಆಚರಣೆಗಳು ಮತ್ತು ಹಬ್ಬಗಳ ಮರೆಯಲ್ಲಿ ಸಾರ್ವಜನಿಕರಿಗೆ, ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಕಿರುಕುಳ ನೀಡುವ ಅಥವಾ ಕಾನೂನು ಕೈಗೆತ್ತಿಕೊಳ್ಳುವ ಯತ್ನಗಳಿಗೆ ಪೋಲಿಸ್ ಇಲಾಖೆ ಯಾವುದೇ ಆಸ್ಪದ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.


