ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ 100 ಸಂಸ್ಥೆಗಳಿಗೆ ಶೋಕಾಸ್ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ಅಲ್ಪಸಂಖ್ಯಾತರ ವ್ಯವಹಾರಗಳು ಮತ್ತು ಮದ್ರಸಾ ಶಿಕ್ಷಣ ಸಚಿವ ಕ್ಷುದಿರಾಮ್ ತುಡು ಅವರು, ಈ ಸಂಸ್ಥೆಗಳಿಗೆ ಪ್ರತಿಕ್ರಿಯಿಸಲು ಅವಕಾಶ ನೀಡಲಾಗುವುದು, ಆದರೆ ಅವರ ವಿವರಣೆಗಳು ತೃಪ್ತಿಕರವಾಗಿಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು maktoobmedia.com ವರದಿ ಮಾಡಿದೆ.
ಅಧಿಕಾರಿಗಳ ಪ್ರಕಾರ, ಈ ಸಮೀಕ್ಷೆಯು ಎಲ್ಲಾ 22 ಜಿಲ್ಲೆಗಳನ್ನು ಒಳಗೊಂಡಿದ್ದು, ಮದ್ರಸಾ ಶಿಕ್ಷಣಕ್ಕೆ ಸಂಬಂಧಿಸಿದ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು, ಮೂಲಸೌಕರ್ಯಗಳು, ನಿಧಿಯ ಮೂಲಗಳು (ಫಂಡಿಂಗ್) ಮತ್ತು ಇತರ ವಿವರಗಳನ್ನು ಪರಿಶೀಲಿಸಿದೆ.
ಸಮೀಕ್ಷೆಯ ಪ್ರಕಾರ, 2,132 ಮದ್ರಸಾಗಳು ಸೂಕ್ತ ಅನುಮೋದನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ, ಆದರೆ 2,396 ಮದ್ರಸಾಗಳು ಯಾವುದೇ ಸರ್ಕಾರಿ ಮಂಡಳಿ ಅಥವಾ ಅಗತ್ಯ ಅಧಿಕೃತ ಸಂಸ್ಥೆಯ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದವು.
ಮಾಲ್ಡಾ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 45 ಮದ್ರಸಾಗಳನ್ನು ಮುಚ್ಚಲಾಗಿದ್ದು, ಅದರ ನಂತರದ ಸ್ಥಾನದಲ್ಲಿ ಉತ್ತರ ದಿನಾಜ್ಪುರ 37 ಸಂಸ್ಥೆಗಳೊಂದಿಗೆ ಇದೆ. ಹಾಗೆಯೇ ದಕ್ಷಿಣ 24 ಪರಗಣ, ಮುರ್ಷಿದಾಬಾದ್ ಮತ್ತು ನದಿಯಾ ಜಿಲ್ಲೆಗಳಲ್ಲಿ ತಲಾ 25 ಮದ್ರಸಾಗಳನ್ನು ಮುಚ್ಚಲಾಗಿದೆ.
“ಇದಲ್ಲದೆ, ಗಂಭೀರ ಅಕ್ರಮಗಳು ಕಂಡುಬಂದಿರುವ ಇನ್ನೂ 100 ಮದ್ರಸಾಗಳಿಗೆ ಶೋಕಾಸ್ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಲಾಗಿದೆ…” ಎಂದು ಕ್ಷುದಿರಾಮ್ ಹೇಳಿದ್ದಾರೆ.
ಸರ್ಕಾರವು ಈ ಹಿಂದೆ, ಜಿಲ್ಲಾವಾರು ನಿಖರವಾದ ದತ್ತಾಂಶವನ್ನು (ಡೇಟಾ) ಸಂಗ್ರಹಿಸಲು, ಶೈಕ್ಷಣಿಕ ಯೋಜನೆ ಮತ್ತು ಮಕ್ಕಳ ಕಲ್ಯಾಣ ಕ್ರಮಗಳಿಗೆ ಬೆಂಬಲ ನೀಡಲು ಹಾಗೂ ಸಂಭವನೀಯ ಅಕ್ರಮಗಳು ಅಥವಾ ಕಾನೂನುಬಾಹಿರ ಚಟುವಟಿಕೆಗಳನ್ನು ಗುರುತಿಸಲು ಈ ಸಮೀಕ್ಷೆಯನ್ನು ಉದ್ದೇಶಿಸಲಾಗಿದೆ ಎಂದು ತಿಳಿಸಿತ್ತು.
ಮದ್ರಸಾಗಳ ಮುಚ್ಚುವಿಕೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ, ಈ ಕ್ರಮವು ಬಹಳ ದಿನಗಳಿಂದ ಬಾಕಿಯಿತ್ತು ಎಂದು ಹೇಳಿದ್ದಾರೆ. ಅವರು ಈ ಸಮಸ್ಯೆಯನ್ನು ‘ಖಲಿಜಿ ಅಥವಾ ಖಾರಿಜಿ (ಖಾಸಗಿ) ಮದ್ರಸಾಗಳ’ ಚಟುವಟಿಕೆಗಳ ಮೇಲಿನ ಕಳಕಳಿಗಳಿಗೆ ಲಿಂಕ್ ಮಾಡಿದ್ದು, ಮತ್ತು ಹಿಂದಿನ ಎಡರಂಗ (ಲೆಫ್ಟ್) ಸರ್ಕಾರವು ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಬಿಜೆಪಿ ಶಾಸಕ ಹಾಗೂ ಪಂಚಾಯತ್ ರಾಜ್ ಸಚಿವ ದಿಲೀಪ್ ಘೋಷ್ ಅವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಮದ್ರಸಾಗಳಲ್ಲಿ ಭಯೋತ್ಪಾದಕರು ತಂಗಿರುವುದು ಮತ್ತು ‘ದೇಶವಿರೋಧಿ ಚಟುವಟಿಕೆಗಳಲ್ಲಿ’ ತೊಡಗಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ. ನಿಯಮಗಳನ್ನು ಪಾಲಿಸುವ ಸಂಸ್ಥೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ, ಆದರೆ ಮದ್ರಸಾಗಳು ಎಲ್ಲೆಂದರಲ್ಲಿ ಮನಬಂದಂತೆ (ಅನಿಯಂತ್ರಿತವಾಗಿ) ತೆರೆಯಲು ಸರ್ಕಾರ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮುಸ್ಲಿಮರ ವಿರುದ್ಧದ ಅಭಿಯಾನಗಳಿಗೆ ಹೆಸರಾಗಿರುವ ಹಿಂದೂ ಬಲಪಂಥೀಯ ಸಂಘಟನೆಯಾದ ವಿಎಚ್ಪಿ (ವಿಶ್ವ ಹಿಂದೂ ಪರಿಷತ್) ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಮತ್ತೊಂದು ದ್ವೇಷದ ಭಾಷಣದಲ್ಲಿ, ಪಶ್ಚಿಮ ಬಂಗಾಳದಲ್ಲಿ ಮದ್ರಸಾಗಳು ಮತ್ತು ಮಸೀದಿಗಳು ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಹಿಂಸಾಚಾರದ ‘ಕೇಂದ್ರಬಿಂದುಗಳಾಗಿವೆ’ (Epicientres) ಎಂದು ಹೇಳಿದ್ದಾರೆ ಮತ್ತು ಇಂತಹ ‘ದೇಶವಿರೋಧಿ ಅಡ್ಡಾಗಳನ್ನು’ ಸಂಪೂರ್ಣವಾಗಿ ಮುಚ್ಚಬೇಕೆಂದು ಕರೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಕುನಾಲ್ ಘೋಷ್ ಅವರು ಬಿಜೆಪಿಯ ನಿಲುವನ್ನು ಟೀಕಿಸಿದ್ದು, ಎಲ್ಲಾ ಮದ್ರಸಾಗಳನ್ನು ‘ಒಂದೇ ದೃಷ್ಟಿಕೋನದಿಂದ ನೋಡಬಾರದು’ ಎಂದು ಹೇಳಿದ್ದಾರೆ. ಸರ್ಕಾರವು ಮದ್ರಸಾ ಶಿಕ್ಷಣ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದೆ ಮತ್ತು ಅದರ ಸುತ್ತ ದಾರಿ ತಪ್ಪಿಸುವ ನಿರೂಪಣೆಯನ್ನು ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ, ಟಿಎಂಸಿ ವಕ್ತಾರ ರಿಜು ದತ್ತಾ ಅವರು, ಕಾನೂನುಬಾಹಿರ ಚಟುವಟಿಕೆಗಳು ಅಥವಾ ಸರ್ಕಾರಿ ಹಣದ ದುರುಪಯೋಗದಲ್ಲಿ ಭಾಗಿಯಾಗಿರುವ ನಕಲಿ ಮದ್ರಸಾಗಳ ವಿರುದ್ಧದ ಕ್ರಮವನ್ನು ಪಕ್ಷವು ಬೆಂಬಲಿಸುತ್ತದೆ. ಆದರೆ, ‘ಕೇವಲ ಧರ್ಮದ ಹೆಸರಿನಲ್ಲಿ ಅಸಲಿ ಮದ್ರಸಾಗಳಿಗೆ ನೋಟಿಸ್ ನೀಡುತ್ತಿದ್ದರೆ ಅಥವಾ ಅವುಗಳನ್ನು ಮುಚ್ಚುತ್ತಿದ್ದರೆ, ತೃಣಮೂಲ ಕಾಂಗ್ರೆಸ್ ಅದನ್ನು ಬಲವಾಗಿ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ.
ಇದೇ ರೀತಿ, ಉತ್ತರಾಖಂಡ ಕೂಡ ಮಾನ್ಯತೆಯ ಅಗತ್ಯತೆಗಳನ್ನು ಪೂರೈಸಲು ವಿಫಲವಾಗಿರುವ ಆರೋಪದ ಮೇಲೆ ರಾಜ್ಯದಾದ್ಯಂತ 20 ಮದ್ರಸಾಗಳನ್ನು ಮುಚ್ಚಿದೆ ಅಥವಾ ಸೀಲ್ ಮಾಡಿದೆ. ಇವುಗಳಲ್ಲಿ 17 ಮದ್ರಸಾಗಳನ್ನು ಸೀಲ್ ಮಾಡಲಾಗಿದ್ದು, ಇನ್ನುಳಿದ 3 ಮದ್ರಸಾಗಳ ಆಡಳಿತ ಮಂಡಳಿಗಳು ತಾವು ಕಾರ್ಯಾಚರಣೆಯನ್ನು ನಿಲ್ಲಿಸಿರುವುದಾಗಿ ಮುಚ್ಚಳಿಕೆ ಪತ್ರವನ್ನು ಸಲ್ಲಿಸಿವೆ. ಮದ್ರಸಾ ಮಂಡಳಿಯನ್ನು ರದ್ದುಗೊಳಿಸುವ ಮುನ್ನ, 452 ಮದ್ರಸಾಗಳು ಅದರ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದವು ಮತ್ತು ಮಾನ್ಯತೆ ಪಡೆದಿದ್ದವು. ಆದರೆ ಸರ್ಕಾರವು ಈ ಹಿಂದೆ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಮಾನ್ಯತೆ ಪಡೆಯದ ಮದ್ರಸಾಗಳನ್ನು ಸೀಲ್ ಮಾಡಿತ್ತು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಚುನಾವಣಾ ವಿಜಯದ ನಂತರ, ಮುಸ್ಲಿಮರು ಮತ್ತು ಆಪಾದಿತ ‘ನುಸುಳುಕೋರರನ್ನು’ ಗುರಿಯಾಗಿಸಿಕೊಂಡು ಮಾಡಿದ ಭಾಷಣಗಳು ಸೇರಿದಂತೆ, ಟೀಕಾಕಾರರು ಮುಸ್ಲಿಂ ವಿರೋಧಿ ಎಂದು ಬಣ್ಣಿಸಿರುವ ಸರಣಿ ಕ್ರಮಗಳು ಮತ್ತು ಹೇಳಿಕೆಗಳಿಗಾಗಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಟೀಕೆಗೆ ಗುರಿಯಾಗಿದ್ದಾರೆ. ಇದರೊಂದಿಗೆ ರಾಜ್ಯದ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದಿಂದ ಕೂಡಿದೆ ಎಂದು ಪರಿಗಣಿಸಲಾದ ನೀತಿಗಳಿಗೆ ಅವರು ಬೆಂಬಲ ನೀಡುತ್ತಿರುವುದೂ ಸಹ ಟೀಕೆಗೆ ಕಾರಣವಾಗಿದೆ.
Courtesy : maktoobmedia.com


