ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ ಅಪಘಾತದಲ್ಲಿ ಸಿಯಾ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಡೀ ಘಟನೆಯ ದೃಶ್ಯಗಳು ಬೈಕ್‌ನಲ್ಲಿದ್ದ ಆ್ಯಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಗುರುಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಭಾನುವಾರ ಸಿಯಾ ಅವರು ತಮ್ಮ ಸಹ ಬೈಕ್ ಸವಾರರೊಂದಿಗೆ ರೈಡ್ ಗೆ ತೆರಳಿದ್ದಾಗ ಬಿಳಿ ಬಣ್ಣದ ಸೆಡಾನ್ ಕಾರಿನಲ್ಲಿದ್ದವರು ತಮ್ಮನ್ನು ಹಿಂಬಾಲಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಕಾರು ಚಾಲಕ ಅಜಾಗರೂಕತೆಯಿಂದ ಮತ್ತು ಅಪಾಯಕಾರಿಯಾಗಿ ವಾಹನ ಚಲಾಯಿಸುತ್ತಿದ್ದುದನ್ನು ಗಮನಿಸಿದ ಸಿಯಾ, ಆರಂಭದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದರು. ಆದರೆ, ಕಾರು ನಿಲ್ಲಿಸುವ ಬದಲು ಚಾಲಕನೇ ಆಕೆಗೆ ಬೈಕ್ ನಿಲ್ಲಿಸುವಂತೆ ಹೇಳಿದ್ದು, ಕಾರಿನಲ್ಲಿದ್ದವರು ಮದ್ಯದ ಅಮಲಿನಲ್ಲಿದ್ದಂತೆ ಕಾಣುತ್ತಿದ್ದರು ಎಂದು ಸಿಯಾ ದೂರಿನಲ್ಲಿ ತಿಳಿಸಿದ್ದಾರೆ.
ಕಾರಿನಿಂದ ಪಾರಾಗಲು ಸಿಯಾ ಮುಂದೆ ಸಾಗಲು ಯತ್ನಿಸಿದಾಗ, ಅವರನ್ನು ರಕ್ಷಿಸಲು ಮತ್ತೊಬ್ಬ ಸಹ ಸವಾರ ಹಿಂದಿನಿಂದ ಬಂದಿದ್ದಾರೆ. ಆದಾಗ್ಯೂ, ಕಾರು ಹಠಾತ್ತನೆ ತಿರುಗಿ ಸಿಯಾ ಅವರ ಬೈಕ್ ಗೆ ಬದಿಯಿಂದ ರಭಸವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸಿಯಾ ರಸ್ತೆಗೆ ಎಸೆಯಲ್ಪಟ್ಟರೆ, ಬೈಕ್ ಬೆಂಕಿಯ ಕಿಡಿಗಳನ್ನು ಹೊರಸೂಸುತ್ತಾ ರಸ್ತೆಯುದ್ದಕ್ಕೂ ಉಜ್ಜಿಕೊಂಡು ಹೋಗಿದೆ.
ಅಪಘಾತದ ನಂತರ ಕಾರು ಪರಾರಿಯಾಗಲು ಯತ್ನಿಸಿದಾಗ, ಜೊತೆಯಲ್ಲಿದ್ದ ಮತ್ತೊಬ್ಬ ಬೈಕ್ ಸವಾರ ಆ ಕಾರನ್ನು ಬೆನ್ನಟ್ಟಿ ಟ್ರಾಫಿಕ್ ಸಿಗ್ನಲ್‌ನಲ್ಲಿ ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಆದರೆ, ಚಾಲಕ ತಕ್ಷಣವೇ ಕಾರನ್ನು ವೇಗವಾಗಿ ಚಲಾಯಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯವೂ ಹೆಲ್ಮೆಟ್ ಕ್ಯಾಮೆರಾದಲ್ಲಿ ದಾಖಲಾಗಿದೆ. ಪ್ರಸ್ತುತ ಗುರುಗ್ರಾಮ ಪೊಲೀಸರು ವೈರಲ್ ವಿಡಿಯೋ ಆಧರಿಸಿ ಕಾರು ಮತ್ತು ಅದರಲ್ಲಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


